Navaratri: ಶ್ರೀರಂಗಪಟ್ಟಣ ದಸರಾ ಉದ್ಘಾಟನೆ: ಪ್ರಮೋದಾದೇವಿ ಒಡೆಯರ್‌ಗೆ ಆಹ್ವಾನ, ಲಾಂಛನ ಬಿಡುಗಡೆ
Oct 05, 2023 02:57 PM IST
ಶ್ರೀರಂಗಪಟ್ಟಣ ದಸರಾ ಲಾಂಛನವನ್ನು ಮಂಡ್ಯದಲ್ಲಿ ಬಿಡುಗಡೆ ಮಾಡಲಾಯಿತು.
- Srirangapatna Dasara ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣಲ್ಲಿ ಅಕ್ಟೋಬರ್ 16ರಿಂದ ಮೂರು ದಿನ ದಸರಾ ನಡೆಯಲಿದೆ. ದಸರಾ ಉದ್ಘಾಟನೆಗಾಗಿ ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರನ್ನು ಆಹ್ವಾನಿಸಲಾಗಿದೆ.
ಮಂಡ್ಯ; ಐತಿಹಾಸಿಕ ಪಟ್ಟಣ ಶ್ರೀರಂಗಪಟ್ಟಣದಲ್ಲಿ ಈ ಬಾರಿ ದಸರಾ ಅಕ್ಟೋಬರ್ 16 ರಿಂದ 18 ವರೆಗೆ ನಡೆಯಲಿದ್ದು, ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಉದ್ಘಾಟಿಸಲಿದ್ಧಾರೆ. ಶ್ರೀರಂಗಪಟ್ಟಣ ದಸರಾಕ್ಕಾಗಿಯೇ ರೂಪಿಸಿರುವ ಲಾಂಛನವನ್ನು ಬಿಡುಗಡೆ ಮಾಡಲಾಗಿದೆ.
ಶ್ರೀರಂಗಪಟ್ಟಣ ದಸರಾದಲ್ಲೂ ಮಕ್ಕಳ ಚಲನಚಿತ್ರೋತ್ಸವ, ಯೋಗ ನಡಿಗೆ, ವಸ್ತು ಪ್ರದರ್ಶನ ಸಹಿತ ಹಲವು ಚಟುವಟಿಕೆ ಇರಲಿವೆ. ಮೈಸೂರು ಮಾದರಿಯಲ್ಲಿಯೇ ಜಂಬೂ ಸವಾರಿ ಇರಲಿದೆ.
ಮಂಡ್ಯ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಗುರುವಾರ ಶ್ರೀರಂಗಪಟ್ಟಣ ದಸರಾ-2023 ರ ಲೋಗೋ ಬಿಡುಗಡೆ ಮಾಡಿದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಶ್ರೀರಂಗಪಟ್ಟಣ ದಸರಾ ಕಾರ್ಯಕ್ರಮವನ್ನು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಅಕ್ಟೋಬರ್ 16 ರಂದು ಮಧ್ಯಾಹ್ನ 3 ಗಂಟೆಗೆ ಉದ್ಘಾಟನೆ ಮಾಡಲಿದ್ದಾರೆ. ಮೂರು ದಿನಗಳ ಕಾರ್ಯಕ್ರಮ ನಡೆಯಲಿದ್ದು, ನಾಡಿನ ಪರಂಪರೆ ಸಾರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ಕುಮಾರ, ಮೂರು ದಿನದ ದಸರಾಗೆ ಸಿದ್ದತೆ ನಡೆದಿದೆ. ಅಕ್ಟೋಬರ್ 17 ರಂದು ಬೆಳಿಗ್ಗೆ 6-9 ಗಂಟೆವರೆಗೆ ಕರಿಘಟ್ಟ ಬೆಟ್ಟದ ಪಾದದಿಂದ ದೇವಸ್ಥಾನದವರೆಗೆ ಯೋಗ ನಡಿಗೆ ಹಾಗೂ ದೇವಸ್ಥಾನದ ಆವರಣದಲ್ಲಿ ವೈವಿದ್ಯಮಯ ಯೋಗಾಭ್ಯಾಸ ನಡೆಯಲಿದೆ. ಅದೇ ದಿನ ವೇದಿಕೆಯಲ್ಲಿ ಯೋಗ ನೃತ್ಯರೂಪಕ ನಡೆಯಲಿದೆ ಎಂದು ತಿಳಿಸಿದರು.
ದಸರಾ ಮೆರವಣೆಗೆಯಲ್ಲಿ ಆನೆಗಳು ಸಂಚರಿಸಲಿವೆ. ಅಶ್ವದಳ, ಪೊಲೀಸ್ ಬ್ಯಾಂಡ್, ವಿವಿಧ ಕಲಾತಂಡಗಳು, ಸ್ಥಬ್ದ ಚಿತ್ರಗಳು ಸಾಗಲಿದೆ. ಕಿರಂಗೂರು ಬನ್ನಿಮಂಟಪದ ಬಳಿ ಹೂವಿನ ಅಲಂಕಾರದ ವ್ಯವಸ್ಥೆಯಾಗಬೇಕು. ವಸ್ತು ಪ್ರದರ್ಶನ ಮಳಿಗೆ ಹೆಚ್ಚು ಜನರನ್ನು ಆಕರ್ಷಿಸುವ ರೀತಿ 50 ವಸ್ತುಪ್ರದರ್ಶನ ಮಳಿಗೆಗಳನ್ನು ತೆರೆಯಿರಿ. ನಿರ್ವಹಣೆಗಾಗಿ ಶುಲ್ಕ ನಿಗದಿಮಾಡಿ. ಮಹಿಳಾ ಸಂಘಗಳು, ರೈತ ಎಫ್.ಪಿ.ಓ ಗಳು , ಆಹಾರ ತಯಾರಕರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ನೀಡಿ. ವಿವಿಧ ರೀತಿಯ ವಸ್ತುಗಳು ಹಾಗೂ ಆಹಾರ ಗ್ರಾಹಕರಿಗೆ ದೊರಕುವಂತೆ ವೈವಿಧ್ಯಮಯವಾಗಿರಲಿ. ಮಾಹಿತಿ ನೀಡುವ ವಸ್ತು ಪ್ರದರ್ಶನ ಮಳಿಗೆಗಳನ್ನು ಇಲಾಖೆ ವತಿಯಿಂದ ತೆರೆಯಲು ವ್ಯವಸ್ಥೆ ಮಾಡಿಕೊಳ್ಳಿ ಎಂದರು.