Mandya Crime: ಹೊರಗೆ ಬೆಲ್ಲ ತಯಾರಿ, ಒಳಗೆ ಲಿಂಗ ಪತ್ತೆ : ಇದು ಮಂಡ್ಯದ ಆಲೆಮನೆಯಲ್ಲಿ ಬಯಲಾದ ಕರಾಳ ದಂಧೆ
Nov 28, 2023 02:59 PM IST
ಮಂಡ್ಯದ ಆಲೆಮನೆಯಲ್ಲಿ ಲಿಂಗ ಪತ್ತೆ ಪರೀಕ್ಷೆ ನಡೆಯುತ್ತಿದ್ದುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.
- Mandya crime ಮಂಡ್ಯ ಜಿಲ್ಲೆಯ(Mandya District) ಆಲೆಮನೆಯೊಂದರಲ್ಲಿ ಲಿಂಗ ಪತ್ತೆ ತಪಾಸಣೆ ನಡೆಯುತ್ತಿರುವುದು ಈಗ ಬೆಂಗಳೂರು ಪೊಲೀಸರು( Bangalore Police) ಬಯಲು ಮಾಡಿರುವ ಪ್ರಕರಣದಿಂದ ಬಯಲಾಗಿದೆ.
ಮಂಡ್ಯ: ಅದು ಹೊರ ನೋಟಕ್ಕೆ ಅಪ್ಪಟ ಆಲೆಮನೆ. ಅಲ್ಲಿ ಹೊರಗಡೆ ಬೆಲ್ಲ ಬೇಯುತ್ತಿತ್ತು. ಒಳಗಡೆ ಮಾತ್ರ ಯಾರಿಗೂ ಗೊತ್ತಾಗದ ರೀತಿ ಲಿಂಗ ಪತ್ತೆ ದಂದೆ ನಡೆಯುತ್ತಿತ್ತು.
ಬೆಂಗಳೂರು ಪೊಲೀಸರು ತಿಂಗಳ ಕಾಲ ಶ್ರಮ ಹಾಕಿ ಪತ್ತೆ ಮಾಡಿರುವ ಲಿಂಗ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ನಂಟು ಇರುವುದು ಮೈಸೂರು ಹಾಗೂ ಮಂಡ್ಯದಲ್ಲಿ, ಮೈಸೂರಿನ ಉದಯಗಿರಿಯಲ್ಲಿರುವ ಮಾತಾ ಆಸ್ಪತ್ರೆ ಹಾಗೂ ಆಯುರ್ವೇದ ಕೇಂದ್ರದಲ್ಲಿ ಲಿಂಗ ಪತ್ತೆ ಜತೆಗೆ ಭ್ರೂಣ ಹತ್ಯೆಯೂ ನಡೆಯುತ್ತಿತ್ತು. ಆದರೆ ಮೊದಲುತಪಾಸಣೆ ಆಗುತ್ತಿದ್ದುದು ಮಂಡ್ಯ ಜಿಲ್ಲೆಯಲ್ಲಿ.
ಮಂಡ್ಯ ತಾಲ್ಲೂಕಿನ ಹಾಡ್ಯ ಹಾಗೂ ಹುಲ್ಲೇನಹಳ್ಳಿ ನಡುವೆ ಇರುವಂತ ಪುಟ್ಟ ಆಲದ ಮನೆಯಿದು. ಇಲ್ಲಿ ಆಲದ ಮನೆ ಚಟುವಟಿಕೆ ನಡೆಯುತ್ತಿದೆ ಎನ್ನುವುದು ಬಿಟ್ಟರೆ ಬೇರೆನೂ ತಿಳಿಯದ ರೀತಿ ಇದೆ. ಪಾಂಡವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಈ ಆಲದಮನೆ ಮಂಡ್ಯದಿಂದ ಹದಿನೈದು ಕಿ.ಮಿ. ದೂರದಲ್ಲಿದೆ.
ಬೆಂಗಳೂರು ಸೇರಿದಂತೆ ಮಂಡ್ಯ ಭಾಗದಲ್ಲಿ ಹೆಣ್ಣು ಭ್ರೂಣ ತೆಗೆಸುವವರು ಸಿಕ್ಕರೆ ಅವರನ್ನು ಇಲ್ಲಿಗೆ ಕರೆ ತರಲಾಗುತ್ತಿತ್ತು. ವಾರದಲ್ಲಿ ಶನಿವಾರ ಹಾಗೂ ಭಾನುವಾರ ಇಲ್ಲಿ ಹೆಚ್ಚಿನ ತಪಾಸಣೆ ಮಾಡಲಾಗುತ್ತಿತ್ತು. ಬೇಡಿಕೆ ಬಂದರೆ ಇತರೆ ದಿನವೂ ಸಿಬ್ಬಂದಿ ಬಂದು ಕೆಲಸ ಮುಗಿಸಿ ಹೋಗೋದು ನಡೆಯುತ್ತಿತ್ತು.
ಆಲದ ಮನೆ ಆಸ್ಪತ್ರೆ ನಂಟು
ಆಲದ ಮನೆಯ ಶಿವಲಿಂಗೇಗೌಡ ಅವರು ಶಿವಲಿಂಗೇಗೌಡ ಅವರು ಪ್ರಯೋಗಾಲಯಗಳಲ್ಲಿ ಕೆಲಸ ಮಾಡಿದ್ದರು. ಇಡೀ ಪ್ರಕರಣದಲ್ಲಿ ಪ್ರಮುಖ ಆರೋಪಿಯಲ್ಲಿ ಒಬ್ಬರಾದ ವೀರೇಶ್ ಅವರ ಚಿಕ್ಕಪ್ಪ ಡಾ.ಮಲ್ಲಿಕಾರ್ಜುನ್ ಅವರೊಂದಿಗೆ ಶಿವಲಿಂಗೇಗೌಡ ಪ್ರಯೋಗಾಲಯ ತಾಂತ್ರಿಕ ಸಿಬ್ಬಂದಿಯಾಗಿ ಕೆಲಸ ಮಾಡಿದರು. ಹಣದ ಆಸೆಯಿಂದ ಶಿವಲಿಂಗೇಗೌಡ ತಮ್ಮದೇ ಕಬ್ಬಿನ ಗದ್ದೆಯಲ್ಲಿ ಸ್ಕ್ಯಾನಿಂಗ್ ಮೆಷಿನ್ ಇಟ್ಟುಕೊಂಡಿದ್ದರು. ಅವರೇ ಇಲ್ಲಿ ತಪಾಸಣೆ ಮಾಡುತ್ತಿದ್ದುದು ತನಿಖೆಯಿಂದ ಬಯಲಾಗಿದೆ ಎಂದು ಪೊಲೀಸರು ಹೇಳುತ್ತಾರೆ.
ಊರಿನವರನ್ನು ಕೇಳಿದರೆ, ಅವರಿಗೆ ಯಾವುದೇ ಮಾಹಿತಿ ಇಲ್ಲ. ಇದು ಸಾಮಾನ್ಯ ಆಲೆಮನೆ, ಇಲ್ಲಿಗೆ ಅವರು ಜನರನ್ನು ಕರೆದುಕೊಂಡು ಬರುತ್ತಿದ್ದುದು ಗೊತ್ತಿಲ್ಲ. ಈಗ ಮಾಧ್ಯಮಗಳಲ್ಲಿ ಗಮನಿಸಿದ್ದೇವೆಯಷ್ಟೇ ಎಂದು ಪ್ರತಿಕ್ರಿಯಿಸುತ್ತಾರೆ. ಕೆಲವರಿಗೆ ಮಾಹಿತಿ ತಿಳಿದಿದ್ದರೂ ಬಾಯಿ ಬಿಡಲು ಹಿಂಜರಿಯುತ್ತಾರೆ.
ಆದರೆ ಅತ್ಯಾಚಾರಿ ವಿರೋಧಿ ಸಮಿತಿಗೆ ಸ್ಥಳೀಯ ಕೆಲ ಹೆಣ್ಣು ಮಕ್ಕಳು ನೀಡಿದ ಮಾಹಿತಿಯಂತೆ ಇಲ್ಲಿ ಭ್ರೂಣ ಪತ್ತೆ ಚಟುವಟಿಕೆ ನಡೆಯುವುದು ತಿಳಿದಿತ್ತು. ಅದನ್ನು ಸ್ಥಳೀಯ ಪೊಲೀಸರ ಗಮನಕ್ಕೂ ತಂದಿದ್ದರು. ಆದರೆ ಪೊಲೀಸರು ಸುಮ್ಮನಾಗಿದ್ದರು. ಇದನ್ನು ಸಂಘಟನೆಯ ಜಿಲ್ಲಾ ಸಂಚಾಲಕಿ ಪೂರ್ಣಿಮಾ ಹೇಳುತ್ತಾರೆ.
ಬೆಂಗಳೂರು ಪೊಲೀಸ್ ಆಯುಕ್ತರ ಹೇಳಿಕೆ
ಇದೇ ವಿಚಾರವಾಗಿ ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಟಿ ನಡೆಸಿದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಒಂದೂವರೆ ತಿಂಗಳ ಹಿಂದೆಯೇ ಬೆಂಗಳೂರು ಬೈಯ್ಯಪ್ಪನಹಳ್ಳಿ ಪೊಲೀಸರಿಗೆ ಬಂದ ಮಾಹಿತಿ ಆಧರಿಸಿ ವಿಚಾರಣೆ ನಡೆಸಿದ್ದರು. ಅನುಮಾನಾಸ್ಪದವಾಗಿ ಹೆಣ್ಣು ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವುದು ಕಂಡು ಬಂದಾಗ ತನಿಖೆ ನಡೆಸಿದ್ದರು. ಆಗ ಇದು ಬಯಲಾಗಿತ್ತು. ಮೈಸೂರು, ಮಂಡ್ಯ, ಬೆಂಗಳೂರು ಸಹಿತ ಹಲವು ಕಡೆ ಹೀಗೆ ಭ್ರೂಣ ಪತ್ತೆ ನಡೆಯುತ್ತಿತ್ತು.ಮಂಡ್ಯದಲ್ಲೂ ನಡೆದಿದೆ. ಒಂದು ತಪಾಸಣೆಗೆ 5 ಸಾವಿರ ರೂ. ಹಾಗೂ ಹೆಣ್ಣು ಭ್ರೂಣ ತೆಗೆಯಲು 25 ಸಾವಿರ ರೂ. ಪಡೆದಿರುವ ಮಾಹಿತಿಯಿದೆ. 1500 ಕ್ಕೂ ಅಧಿಕ ಪ್ರಕರಣಗಳು ಇರಬಹುದು ಎನ್ನುವ ಅನುಮಾನಗಳಿವೆ. ಇನ್ನೂ ತನಿಖೆ ನಡೆದಿದೆ. ಈವರೆಗೂ ಒಂಬತ್ತು ಮಂದಿ ಬಂಧಿಸಲಾಗಿದೆ. ಅದರಲ್ಲಿ ವೈದ್ಯರು, ಪ್ರಯೋಗಾಲಯ ತಂತ್ರಜ್ಞರು, ಕಚೇರಿ ಸಹಾಯಕರು ಸೇರಿದ್ದಾರೆ ಎಂದು ವಿವರಿಸಿದರು.
ಸಿಎಂ ಸೂಚನೆ
ಘಟನೆ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಲಿರುವ ಸಿಎಂ ಸಿದ್ದರಾಮಯ್ಯ, ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುವಂತೆಯೂ ಈಗಾಗಲೇ ಸೂಚನೆ ಕೂಡ ನೀಡಿದ್ದಾರೆ.
========