logo
ಕನ್ನಡ ಸುದ್ದಿ  /  ಕರ್ನಾಟಕ  /  Mangalore Plane Crash: ಮಂಗಳೂರು ವಿಮಾನ ದುರಂತಕ್ಕೆ 13 ವರ್ಷ, ನಿದ್ದೆಗೆ ಜಾರಿದ ಪೈಲಟ್‌ನಿಂದ ಆಗಿತ್ತು ಅನಾಹುತ

Mangalore Plane Crash: ಮಂಗಳೂರು ವಿಮಾನ ದುರಂತಕ್ಕೆ 13 ವರ್ಷ, ನಿದ್ದೆಗೆ ಜಾರಿದ ಪೈಲಟ್‌ನಿಂದ ಆಗಿತ್ತು ಅನಾಹುತ

HT Kannada Desk HT Kannada

May 22, 2023 07:18 AM IST

google News

ಮಂಗಳೂರು ವಿಮಾನ ದುರಂತಕ್ಕೆ 13 ವರ್ಷ

    • Mangalore Air Accident: 2010 ಮೇ.22ರಂದು ಮಂಗಳೂರಿನ ಕೆಂಜಾರು ಎಂಬಲ್ಲಿ ಟೇಬಲ್ ಟಾಪ್ ಲ್ಯಾಂಡಿಂಗ್ ನಲ್ಲಿ ಇಳಿಯಬೇಕಾಗಿದ್ದ ದುಬೈನಿಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಪ್ರಪಾತಕ್ಕೆ ಬಿದ್ದಿತ್ತು. ಪೈಲಟ್ ನಿದ್ದೆಗೆ ಜಾರಿದ್ದು ಇದಕ್ಕೆ ಕಾರಣ ಎಂಬುದು ತನಿಖೆಯಿಂದ ತಿಳಿದುಬಂದಿತ್ತು. ದುರಂತ ನಡೆದು ಇಂದಿಗೆ 13 ವರ್ಷ.
ಮಂಗಳೂರು ವಿಮಾನ ದುರಂತಕ್ಕೆ 13 ವರ್ಷ
ಮಂಗಳೂರು ವಿಮಾನ ದುರಂತಕ್ಕೆ 13 ವರ್ಷ ( ಚಿತ್ರ: ಹರೀಶ ಮಾಂಬಾಡಿ)

ಮಂಗಳೂರು: ಪ್ರಯಾಣಿಕರನ್ನು ಹೊತ್ತೊಯ್ಯುವ ವಾಹನ ಯಾವುದೇ ಇರಲಿ, ಚಾಲಕ ಜಾಗರೂಕನಾಗಿರದೇ ಇದ್ದರೆ ಏನಾಗುತ್ತದೆ ಎಂಬುದಕ್ಕೆ ಕ್ರೂರ ಸಾಕ್ಷಿಯಾಗಿ ಮಂಗಳೂರು ವಿಮಾನ ದುರಂತ ನಿಲ್ಲುತ್ತದೆ.

ಇಂದಿಗೆ ಸರಿಯಾಗಿ 13 ವರ್ಷಗಳ ಹಿಂದೆ ಮಂಗಳೂರು ಬಜಪೆ ಸಮೀಪ ಕೆಂಜಾರು ಎಂಬಲ್ಲಿ ನಡೆದ ದುರ್ಘಟನೆಯ ವಿಚಾರವಿದು. 158 ಮಂದಿ ಸುಟ್ಟು ಕರಕಲಾಗಿ ಬಾರದ ಲೋಕಕ್ಕೆ ಹೋಗಲು ಕಾರಣವಾದದ್ದು ಪೈಲಟ್ ಅಜಾಗರೂಕತೆ ಎಂಬುದು ಬಳಿಕ ತನಿಖೆಯಿಂದ ಸಾಬೀತಾಯಿತು.

ದುರಂತದಲ್ಲಿ ಸುಟ್ಟು ಕರಕಲಾದ ದೇಹಗಳು, ಹೆಣಗಳ ರಾಶಿಯ ನಡುವೆ ನಮ್ಮವರು ಯಾರು ಎಂದು ಅಳುತ್ತಲೇ ಧಾವಿಸುತ್ತಿದ್ದ ಸಂಬಂಧಿಕರು, ಅವುಗಳನ್ನು ಎತ್ತಿ ಶವಾಗಾರಕ್ಕೆ ಕೊಂಡೊಯ್ಯಲು ಸಹಕರಿಸುತ್ತಿದ್ದ ಸಾರ್ವಜನಿಕರು, ಇಂಥ ಘಟನೆ ಮರುಕಳಿಸಲೇಬಾರದು ಎಂದು ಅಲ್ಲಿ ನಿಂತು ನೋಡಿದವರಿಗೆ ಅನಿಸುತ್ತಿತ್ತು.

ಏನಾಗಿತ್ತು

135 ಮಂದಿ ವಯಸ್ಕರು, 19 ಮಕ್ಕಳು, 4 ಶಿಶುಗಳು, 6 ಮಂದಿ ವಿಮಾನ ಸಿಬ್ಬಂದಿ ಸೇರಿ 166 ಮಂದಿ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್, ಮಂಗಳೂರಿನಲ್ಲಿ ಮೇ 22, 2010ರಂದು ಸುರಕ್ಷಿತವಾಗಿ ಇಳಿಯಲು ತಯಾರಾಗಿತ್ತು. ಅಂದು ಬೆಳಗ್ಗೆ 6.15ಕ್ಕೆ ವಿಮಾನ ಅಪಘಾತಕ್ಕೀಡಾಯಿತು. ದುರಂತದಲ್ಲಿ ಪೈಲಟ್, ಸಿಬಂದಿ ಸೇರಿ 158 ಮಂದಿ ಸಾವನ್ನಪ್ಪಿದ್ದರು. ಮೃತಪಟ್ಟವರಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯವರಲ್ಲದೆ, ಕೇರಳದವರೂ ಸಾಕಷ್ಟು ಸಂಖ್ಯೆಯಲ್ಲಿದ್ದರು.

ದುಬೈನಿಂದ ರಾತ್ರಿ 1.20ಕ್ಕೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಹೊರಟಿತ್ತು. ಬೆಳಗ್ಗೆ ಸುರಕ್ಷಿತವಾಗಿ ಮಂಗಳೂರು ತಲುಪಬೇಕಿತ್ತು. ಆದರೆ ಆದದ್ದೇ ಬೇರೆ. ಉಳ್ಳಾಲದ ಉಮ್ಮರ್ ಫಾರೂಕ್ (ಅಂದಿನ ವಯಸ್ಸು 26), ಪುತ್ತೂರಿನ ಅಬ್ದುಲ್ಲಾ (37), ಮಂಗಳೂರಿನಲ್ಲಿ ಕಲಿಯುತ್ತಿದ್ದ ಬಾಂಗ್ಲಾ ವಿದ್ಯಾರ್ಥಿನಿ ಸಬ್ರೀನಾ (23), ಕಾಸರಗೋಡಿನ ಕೃಷ್ಣನ್ (37), ಕೇರಳದ ಕಣ್ಣೂರಿನ ಮಾಹಿನ್ ಕುಟ್ಟಿ (49), ವಾಮಂಜೂರಿನ ಜುಯೆಲ್ ಡಿಸೋಜ (24) ಮಂಗಳೂರಿನ ಮಹಮದ್ ಉಸ್ಮಾನ್ (49), ತಣ್ಣೀರುಬಾವಿಯ ಪ್ರದೀಪ್ (28) ಬದುಕಿ ಉಳಿದಿದ್ದರು. ಉಳಿದವರೆಲ್ಲಾ ಮೃತಪಟ್ಟಿದ್ದರು.

ಮಂಗಳೂರು ವಿಮಾನ ದುರಂತ

ಶವಾಗಾರದಲ್ಲಿ ಮುಗಿಲು ಮುಟ್ಟಿತ್ತು ರೋದನ

ಮಂಗಳೂರಿನ ಹೊರವಲಯದ ಕೆಂಜಾರು ವಿಮಾನ ನಿಲ್ದಾಣ ಲ್ಯಾಂಡ್ ಆಗುವ ಸಂದರ್ಭ ಟೇಬಲ್ ಟಾಪ್ ಲ್ಯಾಂಡಿಂಗ್ ನಲ್ಲಿ ಲೆಕ್ಕಾಚಾರ ತಪ್ಪಿ, ರನ್ ವೇಯಿಂದ ಜಾರಿ ಕಣಿವೆಗೆ ವಿಮಾನ ಭಾರೀ ಸದ್ದಿನೊಂದಿಗೆ ಬಿದ್ದಿತ್ತು. ಆ ಸಂದರ್ಭ ಭಗ್ಗನೆ ಬೆಂಕಿ ಹತ್ತಿಕೊಂಡಿತ್ತು. ಬೀಳುವಾಗ ಇಬ್ಬಾಗಗೊಂಡ ವಿಮಾನದಿಂದ ಎಂಟು ಮಂದಿ ಜಿಗಿದು ಪಾರಾಗಿದ್ದರು. ದುರಂತ ನಡೆದ ಕೂಡಲೇ ಊರವರು ಒಟ್ಟಾಗಿ ಸೇರಿದರು. ಪರವೂರಿನಿಂದಲೂ ಜನರು ಬಂದರು. ವಿಮಾನ ಬಿದ್ದ ಜಾಗಕ್ಕೆ ಹೋಗುವುದೇ ದೊಡ್ಡ ಸವಾಲಾಗಿತ್ತು. ಸಣ್ಣಗೆ ಮಳೆಯೂ ಆಗುತ್ತಿತ್ತು. ಅದನ್ನು ಲೆಕ್ಕಿಸದೆ ಅಲ್ಲಿದ್ದ ಶವಗಳನ್ನು ಸ್ಥಳೀಯರು ಹೊರತೆಗೆದರು. ಸುಟ್ಟು ಕರಕಲಾದ ವಿಮಾನ, ಅರೆಸುಟ್ಟ ಶವಗಳ ಮಧ್ಯೆ ಮಕ್ಕಳ ಆಟಿಕೆಗಳು, ವಸ್ತುಗಳು ಎಂಥ ಕಲ್ಲು ಹೃದಯವನ್ನೂ ಕರಗಿಸುವಂತಿತ್ತು. ಶವಗಳನ್ನು ವೆನ್ಲಾಕ್ ಗೆ ಸಾಗಿಸಲಾಗುತ್ತಿತ್ತು. ಅದಾಗಲೇ ಸುದ್ದಿ ತಿಳಿದ ಮನೆಯವರು, ಸಂಬಂಧಿಕರು ಮಂಗಳೂರಿಗೆ ಧಾವಿಸಿದ್ದರು. ಆ ಸಂದರ್ಭ ಶವದ ಗುರುತುಪತ್ತೆಗೆ ನೂಕುನುಗ್ಗಲು, ಅವರ ಕಣ್ಣೀರು, ರೋದನ ಮುಗಿಲು ಮುಟ್ಟಿತ್ತು. ದುರಂತದಲ್ಲಿ ಸಾವನ್ನಪ್ಪಿದ 22 ಮಂದಿಯ ಗುರುತೂ ಸಿಗದಂಥ ಪರಿಸ್ಥಿತಿ ಇತ್ತು. ಬಳಿಕ ಡಿ.ಎನ್.ಎ. ಪರೀಕ್ಷೆ ಮಾಡಿಸಲಾಯಿತು.

ದೊಡ್ಡ ಮೊತ್ತದ ಪರಿಹಾರ

ಈ ಮಧ್ಯೆ ದುರಂತ ಸಂಭವಿಸಿದ ಬಳಿಕ ಸಂತ್ರಸ್ತ ಕುಟುಂಬದವರು ಸಭೆ ಸೇರಿ ಪರಿಹಾರಕ್ಕಾಗಿ ಸಮಿತಿಯೊಂದನ್ನು ರಚಿಸಿಕೊಂಡರು. ಮುಂಬೈನ ಕಾನೂನು ತಜ್ಞ ಎಚ್.ಡಿ.ನಾನಾವತಿ ನೇತೃತ್ವದಲ್ಲಿ ಮುಲ್ಲಾ ಆಂಡ್ ಮುಲ್ಲಾ ಸಂಸ್ಥೆ ಸಂಪರ್ಕಿಸಿದ್ದರು. ಈ ಸಂಸ್ಥೆ ಬಹುತೇಕ ಕುಟುಂಬಗಳಿಗೆ ಪರಿಹಾರ ಒದಗಿಸಿತ್ತು. ಆ ಸಂಸ್ಥೆ ಸುಮಾರು 147ರಷ್ಟು ಕುಟುಂಬಗಳಿಗೆ ಪರಿಹಾರ ನೀಡಿದ್ದಾಗಿ ಹೇಳಿಕೊಂಡಿತು. ಮೃತಪಟ್ಟವರ ಆರ್ಥಿಕ ಆದಾಯ, ಅವರ ವಯಸ್ಸು ಎಲ್ಲವನ್ನೂ ಪರಿಗಣಿಸಿ ನೀಡಲಾಗಿತ್ತು. ಪರಿಹಾರ ತೃಪ್ತಿಕರವಾಗಿಲ್ಲ ಎಂದು ಕೆಲವರು ವಾಯು ಅಪಘಾತ ಪರಿಹಾರ ಕುರಿತು ಅಂತಾರಾಷ್ಟ್ರೀಯ ಒಪ್ಪಂದ ಮೋಂಟ್ರಿಯಲ್ ಕನ್ವೆನ್ಶನ್ ಅನ್ವಯ ಪರಿಹಾರ ಸಿಗಬೇಕು ಎಂದು ಒತ್ತಾಯಿಸಿ ಕೇರಳ ಹೈಕೋರ್ಟ್, ಬಳಿಕ ಸುಪ್ರೀಂ ಮೊರೆ ಹೋಗಿದ್ದರು.

ದುರಂತಕ್ಕೇನು ಕಾರಣ

ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ಅಪಘಾತದ ತನಿಖೆ ನಡೆಸಿತು.ಕ್ಯಾಪ್ಟನ್ ಅವರ ಲೋಪ ಇದರಲ್ಲಿ ಗೊತ್ತಾಗಿದೆ. ಕಾಕ್‌ಪಿಟ್ ಧ್ವನಿ ರೆಕಾರ್ಡರ್ ಅನ್ನು ಮತ್ತು ಫ್ಲೈಟ್ ಡೇಟಾ ರೆಕಾರ್ಡರ್ ದತ್ತಾಂಶ ಸಂಗ್ರಹಣೆ ನಡೆಸಿದ ಸಂದರ್ಭ ಕ್ಯಾಪ್ಟನ್ ಮಲಗಿದ್ದರು ಎಂದು ಗೊತ್ತಾಯಿತು. ಆ ವ್ಯಕ್ತಿಯ ತಪ್ಪು ನಿರ್ಧಾರ ನೂರಾರು ಮಂದಿಯನ್ನು ಬಲಿ ಪಡೆಯಿತು.

ಶ್ರದ್ಧಾಂಜಲಿ, ಸರ್ವಧರ್ಮ ಪ್ರಾರ್ಥನೆ

ವಿಮಾನ ದುರಂತದಿಂದ ಕೆಲವರ ಮೃತದೇಹ ಗುರುತುಪತ್ತೆಯಾಗದೆ ಉಳಿದ ಸಂದರ್ಭ ಕುಳೂರಿನ ಫಲ್ಗುಣಿ ನದಿ ಕಿನಾರೆಯಲ್ಲಿ ದಫನ ಮಾಡಲಾಗಿತ್ತು. ಆ ಜಾಗದಲ್ಲಿ ಸಂತ್ರಸ್ತರ ನೆನಪಿನ ಪಾರ್ಕ್ ಅನ್ನು ನಿರ್ಮಿಸಲಾಘಿದೆ. ಅಲ್ಲಿ ಪ್ರತಿ ವರ್ಷ ಜಿಲ್ಲಾಡಳಿತ ವತಿಯಿಂದ ಶ್ರದ್ಧಾಂಜಲಿಯನ್ನು ಮೇ.22ರಂದು ಬೆಳಗ್ಗೆ ಸಲ್ಲಿಸಲಾಗುತ್ತದೆ.

ಚಿತ್ರ-ವರದಿ: ಹರೀಶ ಮಾಂಬಾಡಿ, ಮಂಗಳೂರು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ