Mangalore crime: 42 ಅಕ್ರಮ ಸಿಮ್ ಹೊಂದಿದ್ದ ಐವರ ಬಂಧನ, ಬೆಂಗಳೂರಿಗೆ ಹೊರಟಿದ್ದ ಆರೋಪಿಗಳ ಉದ್ದೇಶದ ತನಿಖೆ ತೀವ್ರ
Feb 04, 2024 06:45 PM IST
ಅಕ್ರಮವಾಗಿ ಸಿಮ್ ಇಟ್ಟುಕೊಂಡಿದ್ದ ಐವರನ್ನು ದಕ್ಷಿಣ ಕನ್ನಡ ಪೊಲೀಸರು ಬಂಧಿಸಿದ್ದಾರೆ.
- Sim Racket ಧರ್ಮಸ್ಥಳ ಬಳಿ ಹೋಗುವಾಗ ಅನುಮಾನಾಸ್ಪದವಾಗಿ ಸಿಕ್ಕ ಐವರು ಯುವಕರು ತಮ್ಮೊಂದಿಗೆ 42 ಸಿಮ್‌ಗಳನ್ನು ಇಟ್ಟುಕೊಂಡಿದ್ದು ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ
- ವರದಿ: ಹರೀಶ್ ಮಾಂಬಾಡಿ, ಮಂಗಳೂರು
ಮಂಗಳೂರು: ಬೆಂಗಳೂರು ಕಡೆಗೆ ಹೊರಟಿದ್ದ ಐವರು ಯುವಕರು ಸುಮಾರು 42 ಮೊಬೈಲ್ ಸಿಮ್ ಕಾರ್ಡ್ ಗಳನ್ನು ಹೊಂದಿರುವುದನ್ನು ಧರ್ಮಸ್ಥಳ ಪೊಲೀಸರು ಪತ್ತೆಹಚ್ಚಿದ್ದು, ಸದ್ಯ ಇವರ ತೀವ್ರ ತನಿಖೆ ನಡೆಯುತ್ತಿದೆ. ಆನ್ ಲೈನ್ ಮೂಲಕ ವ್ಯವಹಾರಕ್ಕಾಗಿ ಹಾಗೂ ಆನ್ ಲೈನ್ ಮೋಸದ ಕೃತ್ಯಗಳನ್ನು ಎಸಗುವ ಉದ್ದೇಶಕ್ಕಾಗಿ ಅಪರಿಮಿತ ಮೊಬೈಲ್ ಸಿಮ್ ಕಾರ್ಡ್ ಗಳನ್ನು ಇವರು ಹೊಂದಿದ್ದರೇ, ಅಥವಾ ಅನ್ಯ ಉದ್ದೇಶಗಳಿಗೆ ಇವುಗಳನ್ನು ದುರ್ಬಳಕೆ ಮಾಡುತ್ತಿದ್ದರೇ ಎಂಬ ಕುರಿತು ವಿಚಾರಣೆ ನಡೆಯುತ್ತಿದೆ. ಐವರು ದುಬೈ ನಂಟು ಹೊಂದಿರುವ ಮಾಹಿತಿಯೂ ತನಿಖೆ ವೇಳೆ ಪೊಲೀಸರಿಗೆ ದೊರೆತಿದ್ದು ಎಲ್ಲಾ ಆಯಾಮದಲ್ಲೂ ತನಿಖೆ ಚುರುಕುಗೊಂಡಿದೆ.
ಫೆಬ್ರವರಿ 1ರಂದು ಸಂಜೆ ಧರ್ಮಸ್ಥಳ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಬಳಿ ಸಂಶಯಾಸ್ಪದವಾಗಿ ವರ್ತಿಸುತ್ತಿದ್ದ ಐವರನ್ನು ಹಿಡಿದ ಪೊಲೀಸರು ವಿಚಾರಣೆ ನಡೆಸುತ್ತಿದ್ದ ವೇಳೆ ಮೇಲ್ನೋಟಕ್ಕೆ ಇವರ ಬಳಿ 42 ಮೊಬೈಲ್ ಸಿಮ್ ಕಾರ್ಡ್ ಗಳು ಕಂಡುಬಂದವು. ಈ ಹಿನ್ನೆಲೆಯಲ್ಲಿ ಕೂಡಲೇ ಎಲ್ಲರನ್ನೂ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕಲಂ: 420 120 ಬಿ ಜೊತೆಗೆ 34 ಐ ಪಿ ಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ತನಿಖೆಯ ಪ್ರಗತಿಯ ಬಗ್ಗೆ ಶೀಘ್ರ ಮಾಹಿತಿ ನೀಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ತಿಳಿಸಿದ್ದಾರೆ.
ಕೇರಳ ರಾಜ್ಯ ಲಾಟರಿಯಲ್ಲಿ 70 ಲಕ್ಷ ರೂಪಾಯಿ ಗೆದ್ದ ಯುವಕ ನೇಣಿಗೆ ಶರಣು
ನಾಲ್ಕು ತಿಂಗಳ ಹಿಂದೆ ಕೇರಳ ರಾಜ್ಯ ಲಾಟರಿಯಲ್ಲಿ ಪ್ರಥಮ ಬಹುಮಾನವಾಗಿ 70 ಲಕ್ಷ ರೂ.ಗಳನ್ನು ಗೆದ್ದಿದ್ದ ಯುವಕನೊಬ್ಬ ನೆಲ್ಲಿಕುಂಜೆಯ ಬೇಕರಿಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ. ಮೃತರು, ಬಂಗ್ರಗುಡ್ಡೆ ನಿವಾಸಿ ವಿವೇಕ್ ಶೆಟ್ಟಿ (38) ಎಂದು ತಿಳಿದು ಬಂದಿದೆ. ಶನಿವಾರ ಬೆಳಿಗ್ಗೆ ನೆಲ್ಲಿಕುಂಜೆ ರಸ್ತೆಯಲ್ಲಿರುವ ಬೇಕರಿಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು. ಬೆಳಿಗ್ಗೆ 10 ಗಂಟೆಯಾದರೂ ಅಂಗಡಿಯ ಶಟರ್ ಮುಚ್ಚಿದ್ದ ಕಾರಣ ಸಹೋದರ ಅನುಮಾನಾಸ್ಪದವಾಗಿ ತೆರೆದು ನೋಡಿದಾಗ ವಿವೇಕ್ ಶೆಟ್ಟಿ ನೇಣು ಬಿಗಿದು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸದ್ಯ ತನಿಖೆ ನಡೆಸುತ್ತಿದ್ದಾರೆ.
ಕಲ್ಲಡ್ಕದಲ್ಲಿ ಗೋಮಾಂಸ ಮಾರಾಟ, ಇಬ್ಬರು ವಶಕ್ಕೆ
ಕಲ್ಲಡ್ಕದಲ್ಲಿ ಗೋಮಾಂಸವನ್ನು ಅಕ್ರಮವಾಗಿ ಮಾರುತ್ತಿದ್ದ ಪ್ರಕರಣವನ್ನು ಬಂಟ್ವಾಳ ನಗರ ಪೊಲೀಸರು ಪತ್ತೆಹಚ್ಚಿದ್ದು, ಈ ಸಂಬಂಧ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಕಲ್ಲಡ್ಕದಲ್ಲಿ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂದರ್ಭ ಅಂದಾಜು ಎರಡು ಕ್ವಿಂಟಲ್ ಗೋಮಾಂಸ, ಒಂದು ಆಟೊ, ಆಲ್ಟೊ ಕಾರು ಮತ್ತು ಬೈಕುಗಳನ್ನು ವಶಪಡಿಸಿಕೊಂಡು, ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಶಿವಲಿಂಗದ ಮೇಲೆ ಚಾಕ್ ಪೀಸ್ ನಿಂದ ಬರೆದು ವಿಕೃತಿ
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನರಬೈಲ್ ಗ್ರಾಮದ ಪ್ರಸಿದ್ಧ ಸೋಮೇಶ್ವರ ದೇವಾಲಯದ ಗರ್ಭಗುಡಿಯಲ್ಲಿದ್ದ ಶಿವಲಿಂಗದ ಮೇಲೆ ಕಿಡಿಗೇಡಿಗಳು ಚಾಕ್ ಪೀಸ್ ನಿಂದ ಬರೆದು ವಿಕೃತಿ ಮೆರೆದಿರುವ ಘಟನೆ ವರದಿಯಾಗಿದೆ.
ಬೆಳಿಗ್ಗೆ ಪೂಜೆಯ ಕಾರ್ಯಕ್ಕೆ ತಯಾರುಮಾಡಲು ಬರುವ ಸಮಯದಲ್ಲಿ ಗರ್ಭಗುಡಿ ಬಾಗಿಲು ತೆರೆದಾಗ ಅರ್ಚಕರು ಶಾಕ್ ಆಗಿದ್ದಾರೆ. ದೇವಸ್ಥಾನದ ಗರ್ಭಗುಡಿಯಲ್ಲಿರುವ ಸೋಮೇಶ್ವರ ಶಿವಲಿಂಗದ ಮೇಲೆ ಚಾಕ್ ಪೀಸ್ ನಿಂದ ಇಂಗ್ಲೀಷ್ ಅಕ್ಷರಗಳಲ್ಲಿ ಬರೆಯಲಾಗಿದೆ.ಕಿಡಿಗೇಡಿಗಳು ದೇವಾಲಯದ ಒಳಗೆ ಹೇಗೆ ಅಕ್ರಮ ಪ್ರವೇಶಿಸಿದ್ದಾರೆ ಎಂಬುದು ಅಚ್ಚರಿಯ ಸಂಗತಿಯಾಗಿದೆ. ದೇವಾಲಯದ ಶಿವಲಿಂಗದ ಮೇಲೆ ಜೆಇಎಸ್ 2024, 2026 ಎಂದು ಬರೆಯಲಾದ್ದು ಶಿವಲಿಂಗದ ಮೇಲಿನ ಅಕ್ಷರಗಳು ಹಲವು ಅನುಮಾನಕ್ಕೆ ಕಾರಣವಾಗಿದೆ. ಸ್ಥಳಕ್ಕೆ ಶಿರಸಿ ಗ್ರಾಮೀಣ ಠಾಣೆ ಪೊಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸಿದ್ದಾರೆ.
ವರದಿ: ಹರೀಶ ಮಾಂಬಾಡಿ, ಮಂಗಳೂರು