logo
ಕನ್ನಡ ಸುದ್ದಿ  /  ಕರ್ನಾಟಕ  /  Mangalore News: ಪಣಂಬೂರು ಬೀಚ್‌ನಲ್ಲಿ ಈಜಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ಸಮುದ್ರಪಾಲು; ಇಬ್ಬರ ಮೃತದೇಹಗಳು ಪತ್ತೆ

Mangalore News: ಪಣಂಬೂರು ಬೀಚ್‌ನಲ್ಲಿ ಈಜಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ಸಮುದ್ರಪಾಲು; ಇಬ್ಬರ ಮೃತದೇಹಗಳು ಪತ್ತೆ

Raghavendra M Y HT Kannada

Mar 05, 2024 07:53 AM IST

google News

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿರುವ ಪಣಂಬೂರು ಸಮುದ್ರ

    • ಪಣಂಬೂರು ಬೀಚ್‌ನಲ್ಲಿ ಈಜಲು ಹೋಗಿದ್ದ ಮೂವರು ವಿದ್ಯಾರ್ಥಿಗಳ ಪೈಕಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಮತ್ತೊರ್ವ ವಿದ್ಯಾರ್ಥಿಯೂ ಸಮುದ್ರಪಾಲಾಗಿರುವ ಮಾಹಿತಿ ಇದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿರುವ ಪಣಂಬೂರು ಸಮುದ್ರ
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿರುವ ಪಣಂಬೂರು ಸಮುದ್ರ

ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರಿನ ಪಣಂಬೂರು ಸಮುದ್ರದಲ್ಲಿ ಈಜಾಡುತ್ತಿದ್ದ ವೇಳೆ ಮೂವರು ಸ್ನೇಹಿತರು ಸಮುದ್ರಪಾಲಾಗಿದ್ದು, ಇಬ್ಬರ ಮೃತದೇಹ ಪತ್ತೆಯಾಗಿದೆ. ಭಾರಿ ಗಾಳಿ ಬೀಸಿದ ಪರಿಣಾಮ, ಬೃಹತ್ ಅಲೆಗಳಿಗೆ ಸಿಲುಕಿದ ನಾಗರಾಜ್ ಮತ್ತು ಮಿಲನ್ ಮೃತದೇಹ ಪತ್ತೆಯಾಗಿದೆ. ಲಿಖಿತ್ ಎಂಬಾತನಿಗಾಗಿ ಹುಡುಕಾಟ ಮುಂದುವರಿದಿದೆ. ಪೋರ್ಕೋಡಿ ಅಂಬೇಡ್ಕರ್ ನಗರ ಕಾಲೊನಿ ನಿವಾಸಿಗಳಾದ ಪ್ರಥಮ ಪಿಯುಸಿ ವಿದ್ಯಾರ್ಥಿ ಲಿಖಿತ್ (18) ಮತ್ತು ಮಿಲನ್ (20) ಹಾಗೂ ದ್ವಿತೀಯ ಪದವಿ ವಿದ್ಯಾರ್ಥಿ ನಾಗರಾಜ್ (24) ಸ್ನೇಹಿತರು. ಇವರೊಂದಿಗೆ ಮನೋಜ್ ಮತ್ತು ಪುನೀತ್ ಸೇರಿ ಒಟ್ಟು ಐವರು ಬೈಕ್‌ನಲ್ಲಿ ಪಣಂಬೂರು ಬೀಚ್‌ಗೆ ಭಾನುವಾರ ಮಧ್ಯಾಹ್ನ 4ರ ಬಳಿಕ ತೆರಳಿದ್ದರು. ಲಿಖಿತ್ ಮೊದಲು ಸಮುದ್ರ ಅಲೆಗೆ ಸಿಲುಕಿದ್ದು, ಅವರನ್ನು ಬದುಕಿಸಲು ಮಿಲನ್ ಹೋಗಿದ್ದು, ಇಬ್ಬರನ್ನೂ ರಕ್ಷಿಸಲು ನಾಗರಾಜ್ ಸಮುದ್ರದಾಳಕ್ಕೆ ಇಳಿದಿದ್ದರು. ಬಳಿಕ ಮೂವರೂ ಸಮುದ್ರದಲೆಗೆ ಸಿಲುಕಿ ನಾಪತ್ತೆಯಾಗಿದ್ದರು.

ಪ್ರಥಮ ಪಿಯುಸಿ ಪರೀಕ್ಷೆ ಮುಗಿಸಿದ್ದ ಲಿಖಿತ್

ಈಜಲು ಹೋಗಿ ಸಮುದ್ರಪಾಲಾಗಿರುವ ಲಿಖಿತ್ ಪ್ರಥಮ ಪಿಯುಸಿ ಪರೀಕ್ಷೆಯನ್ನು ಬರೆದಿದ್ದ, ಮಾರ್ಚ್ 30ಕ್ಕೆ ಫಲಿತಾಂಶ ಪ್ರಕಟವಾಗಲಿತ್ತು. ರಜೆಯಲ್ಲಿ ಅಂಚೆ ಇಲಾಖೆಯಲ್ಲಿ ತಾತ್ಕಾಲಿಕ ಪೋಸ್ಟ್ ಮ್ಯಾನ್ ಆಗಿ ಕೆಲಸ ಮಾಡುವುದಾಗಿ ಲಿಖಿತ್ ಹೇಳಿಕೊಂಡಿದ್ದ. ರಾಣಿ ಮತ್ತು ಮಣಿಕಂಠ ದಂಪತಿಯ ಏಕೈಕ ಪುತ್ರ ಲಿಖಿತ್ ಓದಿನಲ್ಲೂ ಮುಂದಿದ್ದ.

ಮಿಲನ್ ಅಣ್ಣ ಮೋಹನ್ ಜೊತೆ ವಾಸವಾಗಿದ್ದರು. ದ್ವಿತೀಯ ಪಿಯುಸಿಯನ್ನು ರೋಸಾ ಮಿಸ್ರಿಕಾ ಪದವಿಪೂರ್ವ ಕಾಲೇಜಿನಲ್ಲಿ ಮುಗಿಸಿದ್ದ. ನಾಗರಾಜ್ ಮಂಗಳೂರಿನ ಮಾತಾ ಕಾಲೇಜಿನ ವಿದ್ಯಾರ್ಥಿಯಾಗಿದ್ದ. ಫಕೀರ ಮತ್ತು ಅನುಮ್ಮ ದಂಪತಿಯ ಒಂಭತ್ತು ಮಕ್ಕಳಲ್ಲಿ ಈತ ಕೊನೇಯವ. ಈತನಿಗೆ ಈಜು ಗೊತ್ತಿತ್ತು.

ಕಡಲು ಪ್ರಕ್ಷುಬ್ದ ಹಿನ್ನೆಲೆ ವಾಟರ್ ಸ್ಪೋರ್ಟ್ಸ್ ಸ್ಥಗಿತ

ಮಂಗಳೂರಿನ ಪಣಂಬೂರು ಬೀಚ್ ನಲ್ಲಿ ಸಮುದ್ರ ಪ್ರಕ್ಷುಬ್ದತೆ ಮುಂದುವರಿದಿರುವ ಕಾರಣ ವಾಟರ್ ಸ್ಪೋರ್ಟ್ಸ್ ಅನ್ನು ಬೀಚ್ ಟೂರಿಸಂ ಸಂಸ್ಥೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಸೋಮವಾರ ಬೆಳಗ್ಗಿನಿಂದ ಬರುವ ಪ್ರವಾಸಿಗರನ್ನು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗುತ್ತಿತ್ತು. ದೂರದ ಊರುಗಳಿಂದ ಬೀಚ್ ನೋಡಲು ಬಂದವರು ನಿರಾಸೆಗೆ ಒಳಗಾದರೆ, ಕೆಲವರು ರಕ್ಷಣಾ ತಂಡದ ಕಣ್ಣು ತ ಪ್ಪಿಸಿ, ನೀರಾಟಕ್ಕೆ ಇಳಿಯುತ್ತಿದ್ದರು. ಕೆಲವರು ಕಣ್ಗಾವಲು ಇದ್ದ ಪ್ರದೇಶದಿಂದ ಮುಂದಕ್ಕೆ ಹೋಗುವುದು ತಲೆನೋವು ತಂದೊಡ್ಡಿದೆ. ಪದೇ ಪದೇ ಎಚ್ಚರಿಕೆ ನೀಡಿದರೂ ಯುವಕರು ಅದನ್ನು ಪಾಲಿಸದ ಕಾರಣ ದುರ್ಘಟನೆಗಳು ಸಂಭವಿಸುತ್ತಿವೆ ಎಂದು ಜೀವರಕ್ಷಕರು ತಿಳಿಸಿದ್ದಾರೆ. ಬೇಸಗೆ ರಜೆಯಲ್ಲಿ ಕರಾವಳಿಗೆ ಪ್ರವಾಸಿಗರು ಏರಿಕೆಯಾಗುವುದು ಸಹಜ. ಈ ಸಂದರ್ಭ ಬೀಚ್‌ಗೆ ಲಗ್ಗೆ ಇಡುತ್ತಾರೆ. ಈ ಹಿನ್ನೆಲೆಯಲ್ಲಿ ಜೀವರಕ್ಷಕರ ತಂಡ ಹೆಚ್ಚಳದ ಜೊತೆಗೆ ಪ್ರಥಮ ಚಿಕಿತ್ಸಾ ಕೊಠಡಿ, ತುರ್ತು ಸಾಗಾಟ ವಾಹನ ಸಹಿತ ಅಗತ್ಯ ಕ್ರಮಗಳ ಹೆಚ್ಚಳವೂ ಆಗಬೇಕಾಗಿದೆ.

(This copy first appeared in Hindustan Times Kannada website. To read more like this please logon to kannada.hindustantimes.com )

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ