logo
ಕನ್ನಡ ಸುದ್ದಿ  /  ಕರ್ನಾಟಕ  /  ಯಕ್ಷಪ್ರೇಮಿಗಳಿಗೆ ಖುಷಿ ಸುದ್ದಿ; ಕಾಲಮಿತಿಯಿಂದ ಸಂಪೂರ್ಣ ರಾತ್ರಿ ಯಕ್ಷಗಾನ ಪ್ರದರ್ಶನಕ್ಕೆ ಕಟೀಲು ಮೇಳಗಳ ಸಿದ್ಧತೆ

ಯಕ್ಷಪ್ರೇಮಿಗಳಿಗೆ ಖುಷಿ ಸುದ್ದಿ; ಕಾಲಮಿತಿಯಿಂದ ಸಂಪೂರ್ಣ ರಾತ್ರಿ ಯಕ್ಷಗಾನ ಪ್ರದರ್ಶನಕ್ಕೆ ಕಟೀಲು ಮೇಳಗಳ ಸಿದ್ಧತೆ

HT Kannada Desk HT Kannada

Jan 11, 2024 05:57 PM IST

google News

ಕಟೀಲು ಮೇಳದ ಯಕ್ಷಗಾನ

    • ಕಾಲಮಿತಿ ಯಕ್ಷಗಾನ ಇತ್ತೀಚಿಗೆ ಟ್ರೆಂಡ್‌ ಆಗಿದೆ. ಸಂಪೂರ್ಣ ರಾತ್ರಿ ಯಕ್ಷಗಾನಕ್ಕೆ ಬಹುತೇಕ ಮೇಳಗಳು ತೆರೆ ಎಳೆದಿವೆ. ಇದಕ್ಕೆ ಕಟೀಲು ಮೇಳವು ಹೊರತಾಗಿರಲಿಲ್ಲ. ಆದರೆ ಇದೀಗ ಪುನಃ ಕಟೀಲು ಮೇಳ ಸಂಪೂರ್ಣ ರಾತ್ರಿ ಯಕ್ಷಗಾನ ಮಾಡಲು ಸಿದ್ಧವಾಗುತ್ತಿದೆ. ಮಕರ ಸಂಕ್ರಾಂತಿಯಿಂದ ಕಟೀಲು ಮೇಳಗಳು ಸಂಪೂರ್ಣ ರಾತ್ರಿ ಯಕ್ಷಗಾನ ನಡೆಸಲಿವೆ. (ವರದಿ: ಹರೀಶ್‌ ಮಾಂಬಾಡಿ)
ಕಟೀಲು ಮೇಳದ ಯಕ್ಷಗಾನ
ಕಟೀಲು ಮೇಳದ ಯಕ್ಷಗಾನ

ಮಂಗಳೂರು: ಕರಾವಳಿಯ ಗಂಡುಕಲೆ ಯಕ್ಷಗಾನ ಇತ್ತೀಚಿನ ದಿನಗಳಲ್ಲಿ ತನ್ನ ಸ್ವರೂಪವನ್ನು ಬದಲಿಸಿಕೊಂಡಿದೆ. ಮೊದಲೆಲ್ಲಾ ರಾತ್ರಿಯಿಡಿ ನಡೆಯುತ್ತಿದ್ದ ಯಕ್ಷಗಾನಗಳು ಈಗ ಕಾಲಮಿತಿಗೆ ಸೀಮಿತವಾಗಿಸಿಕೊಂಡು ಅರ್ಧರಾತ್ರಿಗೆ ಪ್ರದರ್ಶನ ಮುಗಿಸುತ್ತಿವೆ. ಇದಕ್ಕೆ ಖ್ಯಾತ ಯಕ್ಷಗಾನ ಮೇಳವಾದ ಕಟೀಲು ಕೂಡ ಹೊರತಾಗಿರಲಿಲ್ಲ.

ಆದರೆ ಇದೀಗ ಕಟೀಲು ಮೇಳವು ಕಾಲಮಿತಿಗೆ ಹೊರತಾಗಿ ಮೊದಲಿನಂತೆಯೇ ರಾತ್ರಿಯಿಡೀ ಪ್ರದರ್ಶನ ನೀಡಲು ಅಣಿಯಾಗಿದೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳ ಯಕ್ಷಗಾನ ಕಳೆದ ವರ್ಷ ಕಾಲಮಿತಿಗೆ ಒಳಪಟ್ಟಿತ್ತು. ಈ ಬಾರಿ ಮೇಳ ತಿರುಗಾಟ ನಡೆಸಿ ಸುಮಾರು ಒಂದೂವರೆ ತಿಂಗಳ ನಂತರ ಅಂದರೆ, ಜನವರಿ 14ರಿಂದ ಮತ್ತೆ ಸಂಪೂರ್ಣ ರಾತ್ರಿ ಯಕ್ಷಗಾನ ಪ್ರದರ್ಶನ ನೀಡಲಿವೆ ಎಂದು ಕಟೀಲು ದೇವಸ್ಥಾನದ ಆಡಳಿತ ಸಮಿತಿ ಪತ್ರಿಕಾ ಪ್ರಕಟಣೆ ತಿಳಿಸಿದೆ.

ʼಹೈಕೋರ್ಟ್‌ ಆದೇಶ ಮತ್ತು ಶ್ರೀ ಕ್ಷೇತ್ರದ ಭಕ್ತರ ಅಪೇಕ್ಷೆಯ ಮೇರೆಗೆ ಜನವರಿ 14 ಮಕರ ಸಂಕ್ರಮಣದಿಂದ ನಮ್ಮ ಮೇಳದಿಂದ ಸಂಪೂರ್ಣ ರಾತ್ರಿ ಯಕ್ಷಗಾನ ನಡೆಯಲಿದೆ. ಬೆಳಗ್ಗೆ 6 ಗಂಟೆಗೆ, ಮಧ್ಯಾಹ್ನ 12.30ರಿಂದ 1.30 ಮತ್ತು ರಾತ್ರಿ 8.30ಕ್ಕೆ ಚೌಕಿ ಪೂಜೆ ನಡೆಯಲಿದೆ ಎಂದು ದೇವಳದ ಆಡಳಿತ ಸಮಿತಿಯ ಅಧ್ಯಕ್ಷ ಹಾಗೂ ಆನುವಂಶಿಕ ಮುಕ್ತೇಸರ ಕೊಡೆತ್ತೂರುಗುತ್ತು ಸನತ್ ಕುಮಾರ್ ಶೆಟ್ಟಿ ʼಹಿಂದೂಸ್ಥಾನ್ ಟೈಮ್ಸ್ ಕನ್ನಡ’ಕ್ಕೆ ತಿಳಿಸಿದ್ದಾರೆ.

ಇಡೀ ರಾತ್ರಿ ಯಕ್ಷಗಾನ ನೋಡುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಅವರು, ಕಟೀಲು ಮೇಳದ ಯಕ್ಷಗಾನ ಪ್ರದರ್ಶನಗಳು ಹರಕೆ ಬಯಲಾಟಗಳಾಗಿರುತ್ತವೆ. ಇಲ್ಲಿ ದೇವರ ಹರಕೆಯನ್ನು ಈಡೇರಿಸಲು ಇಡೀ ರಾತ್ರಿ ಯಕ್ಷಗಾನ ಪ್ರದರ್ಶನ ನೀಡುವ ಕುರಿತ ಭಾವನಾತ್ಮಕ ವಿಚಾರವಾದ ಕಾರಣ, ಭಕ್ತರು ರಾತ್ರಿಯಿಡೀ ಪ್ರದರ್ಶನವನ್ನು ಬಯಸುತ್ತಾರೆ. ಹೀಗಾಗಿ ಭಕ್ತರ ಮನವಿಯನ್ನು ಪುರಸ್ಕರಿಸಿ, ಕಾಲಮಿತಿಗೆ ಸೀಮಿತಗೊಳಿಸಿದ ಪ್ರದರ್ಶನವನ್ನು ಜನವರಿ 14ರ ಸಂಕ್ರಾಂತಿಯ ದಿನದಿಂದ ಇಡೀ ರಾತ್ರಿಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಈ ಕುರಿತು ಸೇವಾಕರ್ತರಿಗೂ ಮಾಹಿತಿಯನ್ನು ನೀಡಲಾಗಿದೆʼ ಎಂದು ಅವರು ಹೇಳಿದರು.

ಇದನ್ನೂ ಓದಿ: Yakshagana Hotel: ಆಗುಂಬೆಯಲ್ಲೊಂದು ಯಕ್ಷಗಾನ ಹೊಟೇಲ್‌: ಇಲ್ಲಿ ಕಲಾವಿದರ ಪಕ್ಕದಲ್ಲೇ ಕುಳಿತು ಉಪಾಹಾರ ಸೇವಿಸಬಹುದು

ಏನಿದು ದೂರು?

ಯಕ್ಷಗಾನ ಪ್ರದರ್ಶನದ ಅವಧಿಯನ್ನು ಸಂಜೆ 5 ಗಂಟೆಯಿಂದ ಮಧ್ಯರಾತ್ರಿ 12.30ಕ್ಕೆ ಸೀಮಿತಗೊಳಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ 2022ರ ನವೆಂಬರ್ 15ರಂದು ಆದೇಶ ಮಾಡಿದ್ದರು. ಪ್ರದರ್ಶನದ ಸಂದರ್ಭ, ಧ್ವನಿ ಶಬ್ದಮಾಲಿನ್ಯ ನಿಯಂತ್ರಣ ನಿಯಮಗಳ ನಿಗದಿತ ಮಿತಿಗಿಂತ ಹೆಚ್ಚು ಇರುತ್ತವೆ ಎಂಬ ಕಾರಣಕ್ಕೆ ರಾತ್ರಿ 12.30ರ ಬಳಿಕ ಯಕ್ಷಗಾನ ಪ್ರದರ್ಶನಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಇದನ್ನು ಪ್ರಶ್ನಿಸಿ ಕಟೀಲು ದೇವಸ್ಥಾನದ ಭಕ್ತರೊಬ್ಬರು ಹೈಕೋರ್ಟಿನ ಮೊರೆ ಹೋಗಿದ್ದರು.

ಶಬ್ದಮಾಲಿನ್ಯ ನಿಯಂತ್ರಣ ನಿಯಮಗಳ ಪ್ರಕಾರ, ವಿಧಿಸಿರುವ ಮಿತಿಗಳನ್ನು ಅನುಸರಿಸಿ ರಾತ್ರಿ ಪೂರ್ತಿ ಯಕ್ಷಗಾನ ಪ್ರದರ್ಶನ ಏರ್ಪಡಿಸುವುದಕ್ಕೆ ಅಭ್ಯಂತರವಿಲ್ಲ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ಅವರು ಅರ್ಜಿ ವಿಚಾರಣೆ ವೇಳೆ ಹೈಕೋರ್ಟಿಗೆ ತಿಳಿಸಿದ್ದರು. ಈ ನಿಯಮಗಳಿಗೆ ಅನುಸಾರವಾಗಿ ಯಕ್ಷಗಾನ ಪ್ರದರ್ಶನ ಮಾಡಲು ಕಕ್ಷಿದಾರರು ಬದ್ಧರಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಕಟೀಲು ಮೇಳದ ಪ್ರದರ್ಶನಕ್ಕೆ ಏಕೆ ಒತ್ತಾಯ?

ಕರಾವಳಿಯ ಗಂಡುಕಲೆ ಯಕ್ಷಗಾನವನ್ನು ಕಾಲಮಿತಿಯಲ್ಲಿ ನೋಡಿದರೆ ಪೂರ್ಣ ಆಸ್ವಾದನೆಯಾಗುತ್ತದೆಯೇ ಅಥವಾ ಇಡೀ ರಾತ್ರಿ ನೋಡಿದರೇ ಸಂಪೂರ್ಣ ಆಟ ನೋಡಿದಂತಾಗುತ್ತದೆಯೇ ಎಂಬುದು ಇನ್ನೂ ಚರ್ಚೆಯಲ್ಲಿರುವಾಗಲೇ ಧರ್ಮಸ್ಥಳ ಸೇರಿ ಬಹುತೇಕ ಮೇಳ (ತಂಡ)ಗಳು ಇಡೀ ರಾತ್ರಿ ಪ್ರದರ್ಶನದ ಬದಲು ಕಾಲಮಿತಿಯನ್ನೇ ನೆಚ್ಚಿಕೊಂಡವು. ವೇಗದ ಬದುಕಿನ ಇಂದಿನ ಜನಾಂಗಕ್ಕೆ ತಕ್ಕುದಾಗಿ ಕ್ರಿಕೆಟ್ ಪಂದ್ಯಾಟ ಒನ್ – ಡೇಯಿಂದ ಟಿ-ಟ್ವೆಂಟಿಗೆ ಹೇಗೆ ಬದಲಾಯಿತೋ ಹಾಗೆಯೇ ಒನ್ – ನೈಟ್‌ನಿಂದ ಮುಸ್ಸಂಜೆಯಿಂದ ಮಧ್ಯರಾತ್ರಿಯೊಳಗೆ ಮಂಗಳಪದ್ಯ ಹಾಡುವಲ್ಲಿಗೆ ಯಕ್ಷಗಾನ ಪ್ರದರ್ಶನಗಳು ಸೀಮಿತವಾಗತೊಡಗಿದವು. ಇದು ಸುಮಾರು ಆರೇಳು ವರ್ಷಗಳ ಹಿಂದಿನಿಂದಲೇ ನಡೆದುಕೊಂಡು ಬರುತ್ತಿರುವ ವಿಚಾರ.

ಹನುಮಗಿರಿ, ಹಿಂದಿನ ಹೊಸನಗರ, ಪಾವಂಜೆ ಸಹಿತ ಪ್ರಸಿದ್ಧರು ಎನಿಸಿಕೊಂಡ ಕಲಾವಿದರು ಇರುವ ಮೇಳಗಳೆಲ್ಲವೂ ಮಧ್ಯರಾತ್ರಿಯೊಳಗೆ ಯಕ್ಷಗಾನ ಮುಗಿಸಿದರೆ, ಆ ಮೇಳಗಳ ಪ್ರದರ್ಶನಗಳನ್ನು ಪ್ರೇಕ್ಷಕರು ಉತ್ತಮವಾಗಿ ಆಸ್ವಾದಿಸತೊಡಗುತ್ತಿರುವ ಮಧ್ಯೆಯೇ ಧರ್ಮಸ್ಥಳ ಮೇಳವೂ ಕಾಲಮಿತಿ ಪ್ರದರ್ಶನಕ್ಕೆ ಹೊಂದಿಕೊಂಡುಬಿಟ್ಟಿತು. ಆದರೆ ಕಟೀಲು ದೇವಸ್ಥಾನದಿಂದ ಹೊರಡುವ ಆರೂ ಮೇಳಗಳ ಪ್ರದರ್ಶನವನ್ನು ಕಾಲಮಿತಿಗೆ ಒಳಪಡಿಸಿದ ಸಂದರ್ಭ ಇಡೀ ರಾತ್ರಿ ಈ ಮೇಳದ ಪ್ರದರ್ಶನ ನಡೆಯಬೇಕು ಎಂದು ಭಕ್ತರ, ಅಭಿಮಾನಿಗಳು ಒತ್ತಾಯಪಡಿಸಿದ್ದು ಗಮನಾರ್ಹ.

ಅದ್ಯಾಕೆ ಕಟೀಲು ಮೇಳದ ಪ್ರದರ್ಶನವನ್ನು ಇಡೀ ರಾತ್ರಿ ನೋಡಬೇಕು ಎಂದು ಜನರು ಬಯಸುತ್ತಾರೆ ಎಂದು ಕೇಳಿದರೆ, ಇದು ಹರಕೆ ಬಯಲಾಟವಾದ ಕಾರಣ ಇಲ್ಲಿ ಭಾವನಾತ್ಮಕ ಅಂಶಗಳಿರುತ್ತವೆ. ಹೀಗಾಗಿ ಕಟೀಲು ಮೇಳದ ಪ್ರದರ್ಶನ ಸಂದರ್ಭ ಪ್ರೇಕ್ಷಕರ ಯಕ್ಷಗಾನ ಕಲಾ ಪ್ರದರ್ಶನದಂತೆ ಹರಿಕೆ ಸಮರ್ಪಣೆಯೂ ಪ್ರಧಾನವಾಗಿರುತ್ತವೆ, ಆ ಕಾರಣದಿಂದ ಭಕ್ತರು ಇಡೀ ರಾತ್ರಿ ಪ್ರದರ್ಶನಕ್ಕೆ ಒತ್ತಾಯಿಸುತ್ತಾರೆ ಎಂದು ಸನತ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ವರದಿ: ಹರೀಶ್‌ ಮಾಂಬಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ