logo
ಕನ್ನಡ ಸುದ್ದಿ  /  ಕರ್ನಾಟಕ  /  Mangalore Kite Festival: ಮಂಗಳೂರು ಅಂತರಾಷ್ಟ್ರೀಯ ಉತ್ಸವ, ಬಾನಂಗಳದಲ್ಲಿ ದೇಶ ವಿದೇಶದ ಬಗೆಬಗೆಯ ಗಾಳಿಪಟಗಳ ವೈಯ್ಯಾರ

Mangalore Kite Festival: ಮಂಗಳೂರು ಅಂತರಾಷ್ಟ್ರೀಯ ಉತ್ಸವ, ಬಾನಂಗಳದಲ್ಲಿ ದೇಶ ವಿದೇಶದ ಬಗೆಬಗೆಯ ಗಾಳಿಪಟಗಳ ವೈಯ್ಯಾರ

Umesha Bhatta P H HT Kannada

Feb 12, 2024 02:13 PM IST

google News

ಮಂಗಳೂರಿನಲ್ಲಿ ಗಮನ ಸೆಳೆದ ಅಂತರಾಷ್ಟ್ರೀಯ ಗಾಳಿಪಟ ಉತ್ಸವ

    • ಎಂಆರ್ ಪಿಎಲ್‌- ಒಎನ್‌ಜಿಸಿ ಸಂಸ್ಥೆಯ ಪ್ರಾಯೋಜಕತ್ವ ಹಾಗೂ ದ.ಕ. ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಕಾರದಲ್ಲಿ ಅಂತರಾಷ್ಟ್ರೀಯ ಗಾಳಿಪಟ  ಉತ್ಸವ ಈ ಬಾರಿ ಯಶಸ್ವಿಯಾಗಿ ನಡೆದಿದೆ.
    • ವರದಿ: ಹರೀಶ್‌ ಮಾಂಬಾಡಿ, ಮಂಗಳೂರು
ಮಂಗಳೂರಿನಲ್ಲಿ ಗಮನ ಸೆಳೆದ ಅಂತರಾಷ್ಟ್ರೀಯ ಗಾಳಿಪಟ ಉತ್ಸವ
ಮಂಗಳೂರಿನಲ್ಲಿ ಗಮನ ಸೆಳೆದ ಅಂತರಾಷ್ಟ್ರೀಯ ಗಾಳಿಪಟ ಉತ್ಸವ

ಮಂಗಳೂರು: ಮಂಗಳೂರಿನ ಕಡಲ ಕಿನಾರೆಯಲ್ಲಿ ಎರಡು ದಿನ ಬಗೆಬಗೆಯ ಗಾಳಿಪಟಗಳ ವೈಯ್ಯಾರ. ಬಾನಂಗಳದಲ್ಲಿ ಬಳಕುತ್ತಾ ಹಾರಾಡುತ್ತಿದ್ದರೆ,. ಅದನ್ನು ಕೈಯಲ್ಲಿ ಹಿಡಿದವರಿಗೆ ಖುಷಿಯೋ ಖುಷಿ. ಈ ಗಾಳಿಪಟಗಳನ್ನು ಕಣ್ತುಂಬಿಕೊಳ್ಳಲು ಬಂದವರಿಗೂ ಏನೋ ಸಂತಸ. ಎಲ್ಲರ ಮುಖದಲ್ಲಿ ನಮ್ಮೂರ ಉತ್ಸವ ಎನ್ನುವ ಅಭಿಮಾನ. ಗಾಳಿಪಟ ಉತ್ಸವದಲ್ಲಿ ಟೀಮ್ ಮಂಗಳೂರು ತಂಡದ ಸಾಂಪ್ರದಾಯಿಕ ಗಾಳಿಪಟಗಳಾದ ಕಥಕ್ಕಲಿ, ಯಕ್ಷಗಾನ, ಭೂತಕೋಲಗಳ ಜತೆಗೆ ದೇಶ ವಿದೇಶಗಳ ಅಧುನಿಕ ಶೈಲಿ ಹಾಗೂ ವಿನ್ಯಾಸದಿಂದ ಕೂಡಿದ ಅಮೀಬಾ, ಬೆಕ್ಕು, ಹಲ್ಲಿ, ಚಿರತೆ, ಹುಲಿ, ಕಥಕ್ಕಲಿ, ಬಟರ್ ಪ್ಲೈ ಟ್ರೈನ್ ಏರೋಪಾಯಿಲ್‌ ಗಾಳಿಪಟಗಳು ಕೂಡಾ ಹಾರಾಡಿವೆ.

ಟೀಮ್ ಮಂಗಳೂರು ತಂಡದ ಆಶ್ರಯದಲ್ಲಿ ಮಂಗಳೂರಿನ ತಣ್ಣೀರು ಬಾವಿ ಕಡಲ ಕಿನಾರೆಯಲ್ಲಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯುತ್ತಿದ್ದು, ಸಾವಿರಾರು ಗಾಳಿಪಟಗಳು ಬಾನಂಗಳದಲ್ಲಿ ಹಾರಾಟ ನಡೆಸಿದವು.

ಈ ಬಾರಿ ವಿಶೇಷ

ಫೆ.10 ಮತ್ತು 11ರಂದು ಎರಡು ದಿನಗಳ ಕಾಲ ಅಪರಾಹ್ನ 3ರಿಂದ ರಾತ್ರಿ 7ರವರೆಗೆ ಗಾಳಿಪಟ ಹಾರಾಟ ಮತ್ತು ಪ್ರದರ್ಶನ ನಡೆಯಿತು. ವಿದ್ಯುತ್ ದೀಪಗಳ ಬಣ್ಣಗಳ ಬೆಳಕಿನಲ್ಲಿಯೂ ಗಾಳಿಪಟ ಹಾರಾಟಕ್ಕೆ ವಿಶೇಷ ವ್ಯವಸ್ಥೆ ಮಾಡಲಾಯಿತು.

'ಒಂದೇ ಆಕಾಶ, ಒಂದೇ ಭೂಮಿ, ಒಂದೇ ಕುಟುಂಬ' ಎಂಬ ಧ್ಯೇಯ ವಾಕ್ಯದಲ್ಲಿ ಸಾಮರಸ್ಯ, ಐಕ್ಯ ಭಾವಗಳಿಂದ ಗಾಳಿಪಟ ಹಾರಾಟ ನಡೆಸಲಾಯಿತು.1000ಕ್ಕೂ ಅಧಿಕ ವಿವಿಧ ವಿನ್ಯಾಸ, ಗಾತ್ರಗಳಿಂದ ಕೂಡಿದ ಗಾಳಿಪಟಗಳು ತಣ್ಣೀರುಬಾವಿ ಕಡಲ ಕಿನಾರೆಯ ಬಾನಂಗಳದಲ್ಲಿ ಹಾರಾಡಿವೆ.

ಗಾಳಿಪಟ ಉತ್ಸವ ವೀಕ್ಷಿಸಲು ಬರುವವರಿಗೆ ಕೆಐಒಸಿಎಲ್ ಬಳಿಯಿಂದ ತಣ್ಣೀರುಬಾವಿ ಬೀಚ್‌ರೆಗೆ ಆರು ಬಸ್ ಸೌಲಭ್ಯಗಳನ್ನು , ಸುಲ್ತಾನ್ ಬತ್ತೇರಿಯಿಂದ ದೋಣಿಯಲ್ಲಿ ಬರುವವರಿಗೂ ರಾತ್ರಿ 10ರವರೆಗೆ ದೋಣಿ ವ್ಯವಸ್ಥೆ ಮಾಡಲಾಗಿತ್ತು. ಗಾಳಿಪಟ ಖರೀದಿಸುವರಿಗೆ ಕೈಟ್ ಮಳಿಗೆಗಳ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ತಪ್ಪಿಸದ ಮಲೇಶ್ಯಾ ಅತಿಥಿ

30 ವರ್ಷಗಳಿಂದ ಅಂತರ್‌ರಾಷ್ಟ್ರೀಯ ಮಟ್ಟದ ಗಾಳಿಪಟ ಉತ್ಸವಗಳಲ್ಲಿ ಭಾಗವಹಿಸುತ್ತಿರುವ ಮಲೇಶ್ಯದ 65 ವರ್ಷ ವಯಸ್ಸಿನ ಲಿಯನ್ನವತಿ ಲೆ ಮಂಗಳೂರಿಗೆ ಎರಡನೇ ಬಾರಿಗೆ ಆಗಮಿಸಿದ್ದಾರೆ. ಈ ಹಿಂದೆ ಮಂಗಳೂರಿನಲ್ಲಿ ನಡೆದ ಗಾಳಿಪಟ ಉತ್ಸವದಲ್ಲಿ ಇವರು ಬೃಹತ್ ಹನುಮಂತ ಗಾಳಿಪಟಗಳನ್ನು ಹಾರಿಸಿದ ಇವರು, ಈ ಬಾರಿ ಫೆರ್ರಿ ಥಿಂಕರ್ ಬೆಲ್ ಗಾಳಿಪಟವನ್ನು ತಂದಿದ್ದರು. ಲಿಯನ್ನವತಿ, ಬೃಹತ್ ಗಾಳಿಪಟಗಳ ರಫ್ತುದಾರರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ಜೋಡಿಯನ್ನು ಒಂದಾಗಿಸಿದ ಗಾಳಿಪಟ ಉತ್ಸವ!

ಉಕ್ರೇನ್‌ ಯುವಕ ಒಲೆ ಶ್ರಮ್ಮೊ ಹಾಗೂ ಥಾಯ್ಲೆಂಡ್‌ನ ಯುವತಿ ನೀ ಎಂಬ ಜೋಡಿಯನ್ನು ನಾಲ್ಕು ವರ್ಷಗಳ ಹಿಂದೆ ನಡೆದ ಗಾಳಿಪಟ ಉತ್ಸವ ಜೋಡಿಯನ್ನಾಗಿಸಿದೆ. ಇವರು 8 ವರ್ಷಗಳಿಂದ ಪರಿಚಯ ಹೊಂದಿದ್ದು, 4 ವರ್ಷಗಳ ಹಿಂದೆ ಥಾಯ್ಲೆಂಡ್‌ನಲ್ಲಿ ನಡೆದ ಗಾಳಿಪಟ ಉತ್ಸವ ಇವರನ್ನು ಜೋಡಿಯನ್ನಾಗಿಸಿತು. ಇದೀಗ ಅಂತರ್‌ರಾಷ್ಟ್ರೀಯ ಗಾಳಿಪಟ ಉತ್ಸವಗಳು ಎಲ್ಲೇ ನಡೆದರೂ ಇವರು ಅಲ್ಲಿ ಜೋಡಿಯಾಗಿ ಭಾಗವಹಿಸುತ್ತಾರೆ.

ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಥೈಯಾಂಡ್‌ನ ಪಲವಾನ್ ಸುಕನ್‌ಲಯ, ಗ್ರೀಸ್‌ನ ಕೊನ್‌ಸ್ಟಂಟಿನ್ ರಾಟ್‌ಸ್, ಎಸ್ಟೋನಿಯಾದ ಆ್ಯಂಡ್ರಿಸ್ ಸೊಕ್, ಲಿಯಾ ರಿಡಲಿ, ಸ್ವೀಡನ್‌ ಆ್ಯಂಡ್ರೆಸ್ ಅಗ್ರೆನ್, ಇಂಡೋನೇಶ್ಯಾದ ಸರಿ ಸಬ್ಬಾ ಭಕ್ತಿ ಮದ್‌ಝಿದ್, ಟಿಂಟಾನ್ ಪ್ರಿಯಾಂಗೊರೊ, ವೆನಾಸ್ ಒಂಗೊವಿನೊಟೊ, ಮಲೇಶ್ಯಾದ ಮುಹಮ್ಮದ್ ಫಸ್ಟೀಲ್ ಬಿನ್ ಅಲಿ, ವಾನ್ ಅಹ್ಮದ್ ಅಳ್ಳವಿ ಬಿನ್ ವನ್ ಹುಸೇನ್ ಅವರನ್ನೊಳಗೊಂಡ ತಂಡಗಳು ಭಾಗವಹಿಸಿದೆ.

ಏಕದಾರದಲ್ಲಿ ಹಾರಿದ 101 ಬಟರ್ ಪ್ಲೈಗಳು

ಮುಂಬೈನ ಗೋಲ್ಡನ್ ಕೈಟ್ ಕ್ಲಬ್‌ ಸದಸ್ಯ, ಅಂತರ್‌ರಾಷ್ಟ್ರೀಯವಾಗಿ ಗಾಳಿಪಟ ಹಾರಾಟಗಾರ ಮಾತ್ರವಲ್ಲದೆ ವಿಶೇಷವಾಗಿ ಫೈಟರ್ ಕೈಟ್ ನಿಪುಣ ಎಂದೇ ಖ್ಯಾತಿ ಪಡೆದಿರುವ ಅಬ್ದುಲ್ ರವೂಫ್ ಈ ಬಾರಿ ಮಂಗಳೂರಿನ ಅಂತರ್‌ರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಭಾಗವಹಿಸಿದ್ದಾರೆ.

74ರ ಹರೆಯದ ಅಬ್ದುಲ್ ರವೂಫ್ ಟ್ರೇನ್ ಕೈಟ್ (ಒಂದೇ ದಾರದಲ್ಲಿ ಪೋಣಿಸಲ್ಪಟ್ಟ ಹಲವು ಗಾಳಿಪಟಗಳು) ಹಾರಾಟದಲ್ಲಿ ಚಾಣಾಕ್ಷ. ರೈಲು ಬೋಗಿಯಂತೆ ಒಂದರ ಹಿಂದೆ ಒಂದು ಗಾಳಿಪಟಗಳು ಬಾನಂಗಳದಲ್ಲಿ ಹಾರಾಡುವ ಈ ಟ್ರೇನ್ ಕೈಟ್ ನೋಡುವುದಕ್ಕೆ ಅತ್ಯಾಕರ್ಷಕ. ಇಂತಹ ಟ್ರೇನ್ ಗಾಳಿಪಟಗಳ ತಯಾರಕರೂ ಆಗಿರುವ ಅಬ್ದುಲ್ ರವೂಫ್ ಕಳೆದ ಸುಮಾರು 28 ವರ್ಷಗಳಿಂದ ಯುರೋಪ್ ನಾದ್ಯಂತ ನಡೆಯುವ ಗಾಳಿಪಟ ಉತ್ಸವಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಇವರು ಮಂಗಳೂರಿನಲ್ಲಿ ನಡೆದ ಗಾಳಿಪಟ ಉತ್ಸವದಲ್ಲಿ 101 ಚಿಟ್ಟೆ (ಬಟರ್‌ಪ್ಲೈ) ಗಳನ್ನು ಒಳಗೊಂಡ ಟ್ರೇನ್ ಕೈಟ್‌ನ ಜತೆಗೆ, 70 ಬ್ಯಾಟ್‌ ಮ್ಯಾನ್‌ಗಳು ಹಾಗೂ 35 ಸ್ಟಾರ್‌ಗಳಿಂದ ಕೂಡಿದ ಟ್ರೇನ್ ಕೈಟ್‌ಗಳು ಹಾರಾಡಿದೆ.

ಮಂಗಳೂರಿನಲ್ಲಿ ಏಳನೇ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಲಾಗಿದೆ. ತಣ್ಣೀರುಬಾವಿ ಬೀಚ್ ನಲ್ಲಿ ಗಾಳಿಯ ಒತ್ತಡ ಒಂದೇ ರೀತಿ ಇರುವುದರಿಂದ ಎಲ್ಲಾ ರೀತಿಯ ಗಾಳಿಪಟಗಳು ಇಲ್ಲಿ ಹಾರಾಡುತ್ತದೆ. 8 ದೇಶಗಳ 13 ಗಾಳಿಪಟ ತಂಡಗಳು ಮತ್ತು ನಮ್ಮ ದೇಶದ 5 ರಾಜ್ಯದ ತಂಡಗಳು ಗಾಳಿಪಟ ಉತ್ಸವದಲ್ಲಿ‌ ಭಾಗವಹಿಸಿದ್ದವು ಎನ್ನುವುದು ಟೀಮ್ ಮಂಗಳೂರಿನ ಸರ್ವೇಶ್‌ ಅಭಿಪ್ರಾಯ.

ವರದಿ: ಹರೀಶ ಮಾಂಬಾಡಿ, ಮಂಗಳೂರು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ