Mangalore Crime: ಮಂಗಳೂರಿನಲ್ಲಿ ಸಮೀರ್ ಹತ್ಯೆ, ಐವರ ಕೃತ್ಯ, ನಾಲ್ಕು ಮಂದಿ ವಶಕ್ಕೆ; ಪೊಲೀಸರ ತನಿಖೆ ಚುರುಕು
Aug 14, 2024 08:16 AM IST
ಮಂಗಳೂರಿನ ಉಲ್ಲಾಳ ಸಮೀರ್ ಕೊಲೆ ಪ್ರಕರಣದ ತನಿಖೇ ಚುರುಕುಗೊಂಡಿದೆ.
- Mangalore News ಮಂಗಳೂರಿನ ಉಲ್ಲಾಳದಲ್ಲಿ ನಡೆದಿದ್ದ ಸಮೀರ್ ಕೊಲೆ ಪ್ರಕರಣದಲ್ಲಿ ನಾಲ್ವರನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರಿದಿದೆ.
- ವರದಿ: ಹರೀಶ ಮಾಂಬಾಡಿ. ಮಂಗಳೂರು
ಮಂಗಳೂರು: ಮಂಗಳೂರಿನಲ್ಲಿ ಮತ್ತೆ ರೌಡಿ ಚಟುವಟಿಕೆಗಳು ಗರಿಗೆದರಿವೆ. ಎರಡು ದಿನದ ಹಿಂದೆ ಯುವಕನೊಬ್ಬನನ್ನು ಹೊಟೇಲ್ ಬಳಿಯೇ ಕೊಲೆ ಮಾಡಿದ ಪ್ರಕರಣದ ತನಿಖೆ ಚುರುಕುಗೊಂಡಿದೆ. ಕಲ್ಲಾಪಿನಲ್ಲಿ ಭಾನುವಾರ ರಾತ್ರಿ ನಡೆದ ಸಮೀರ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಶಯಾಸ್ಪದ ವ್ಯಕ್ತಿಗಳಾಗಿ ಗುರುತಿಸಿಕೊಂಡ ಟಾರ್ಗೆಟ್ ಇಲ್ಯಾಸ್ ತಂಡದ ಒಟ್ಟು ನಾಲ್ಕು ಮಂದಿಯನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ಸೋಮವಾರ ಟಾರ್ಗೆಟ್ ಇಲ್ಯಾಸ್ ಸಂಬಂಧಿ ಹಾಗೂ ಆತನ ಮಿತ್ರನನ್ನು ವಶಕ್ಕೆ ಪಡೆದಿದ್ದ ಎಸಿಪಿ ಧನ್ಯಾ ನಾಯಕ್ ನೇತೃತ್ವದ ಉಳ್ಳಾಲ ಪೊಲೀಸರ ತಂಡ ವಿಚಾರಣೆ ನಡೆಸಿದ್ದು ಆ ಹಿನ್ನೆಯಲ್ಲಿ ಮಂಗಳವಾರ ಮತ್ತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ನಡೆಸುತ್ತಿದ್ದಾರೆ.
ತೊಕ್ಕೊಟ್ಟು ಕಲ್ಲಾಪಿನ ಫಾಸ್ಟ್ ಫುಡ್ ಸೆಂಟರ್ ಗೆ ಉಪಾಹಾರಕ್ಕೆ ಬಂದಿದ್ದಾಗ ಚಾಲಕ ಸೇರಿದಂತೆ ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ಆರೋಪಿಗಳು ಸಮೀರ್ ಕೊಲೆ ಯತ್ನದಲ್ಲಿ ಆರೋಪಿಗಳ ಪೈಕಿ ಒಬ್ಬಾತನಿಗೆ ಹಲ್ಲೆಯಾಗಿದ್ದು ಆತನ ಪತ್ತೆ ಕಾರ್ಯದಲ್ಲಿ ಪೊಲೀಸರು ತೊಡಗಿಸಿಕೊಂಡಿದ್ದಾರೆ. ಟಾರ್ಗೆಟ್ ತಂಡವನ್ನೇ ಗುರಿಯಾಗಿ ತನಿಖೆ ನಡೆಸಿದಾಗ ಸಾಕಷ್ಟು ಪುರಾವೆ ಸಿಕ್ಕಿದೆ ಎನ್ನಲಾಗಿದ್ದು ಒಬ್ಬಾತನ ಬಂಧನ ಆಗಬೇಕಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಾಲೇಜು ತರಗತಿಯೊಳಗೆ ನುಗ್ಗಿ ವಿದ್ಯಾರ್ಥಿನಿಗೆ ಕತ್ತರಿಯಿಂದ ಚುಚ್ಚಿ ಹಲ್ಲೆ - ಆರೋಪಿ ಅರೆಸ್ಟ್
ಮೂಡುಬಿದಿರೆ ಖಾಸಗಿ ಕಾಲೇಜಿನ ತರಗತಿಗೆ ನುಗ್ಗಿದ ದುಷ್ಕರ್ಮಿಯೊಬ್ಬ ವಿದ್ಯಾರ್ಥಿನಿಯೊಬ್ಬಳ ಮುಖಕ್ಕೆ ಕತ್ತರಿಯಿಂದ ಚುಚ್ಚಿ ಹಲ್ಲೆಗೈದ ಘಟನೆ ಸೋಮವಾರ ನಡೆದಿದ್ದು, ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಮೂಲದ ಮಂಜುನಾಥ ಬಂಧಿತ ಆರೋಪಿ. ಆರೋಪಿ ಹಾಗೂ ಕತ್ತರಿಯಿಂದ ಇರಿತಕ್ಕೊಳಗಾದ ವಿದ್ಯಾರ್ಥಿನಿ ತುಮಕೂರು ಮೂಲದವರಾಗಿದ್ದಾರೆ. ಇಬ್ಬರೂ ಈ ಹಿಂದೆ ಆತ್ಮೀಯರಾಗಿದ್ದರು. ಇತ್ತೀಚೆಗೆ ವಿದ್ಯಾರ್ಥಿನಿಯು ಆರೋಪಿ ಮಂಜುನಾಥನ ಮೊಬೈಲ್ ಕರೆಗಳನ್ನು ನಿರ್ಲಕ್ಷಿಸುತ್ತಾ ಬಂದಿದ್ದಳು ಎಂದು ಹೇಳಲಾಗುತ್ತಿದೆ. ಇದರಿಂದ ಹತಾಶೆಗೊಂಡ ಆರೋಪಿ ಮಂಜುನಾಥ ವಿದ್ಯಾರ್ಥಿನಿಯನ್ನು ಹುಡುಕಿಕೊಂಡು ಬಂದಿದ್ದ. ಅದರಂತೆ ಸೋಮವಾರ ಕಾಲೇಜಿಗೆ ಬಂದಿದ್ದ ಆತ ತರಗತಿಯೊಳಗೆ ಅಕ್ರಮವಾಗಿ ಪ್ರವೇಶಿಸಿ ಕತ್ತರಿಯಿಂದ ಚುಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂಡುಬಿದಿರೆ ಠಾಣೆಯಲ್ಲಿ ಆರೋಪಿ ಮಂಜುನಾಥನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಇನ್‌ಸ್ಪೆಕ್ಟರ್ ಸಂದೇಶ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಕೊಣಾಜೆಯ ಯುವಕ ವಿದೇಶದಲ್ಲಿ ಕಟ್ಟಡದಿಂದ ಬಿದ್ದು ಮೃತ್ಯು
ವಿದೇಶದಲ್ಲಿ ಕೆಲಸಕ್ಕಿದ್ದ ಕೊಣಾಜೆ ಗ್ರಾಮದ ನಡುಪದವಿನ ಯುವಕ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ. ನಡುಪದವಿನ ಉಮ್ಮರ್ ಅವರ ಪುತ್ರ ನೌಫಲ್(25) ಮೃತ ಯುವಕ.
ಅಬುಧಾಬಿಯಲ್ಲಿ ಎ.ಸಿ ಮೆಕ್ಯಾನಿಕ್ ಆಗಿ ಉದ್ಯೋಗದಲ್ಲಿದ್ದ ನೌಫಲ್ ಕಟ್ಟಡವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅವಿವಾಹಿತನಾಗಿರುವ ನೌಫಲ್ ಅವರ ಮೃತದೇಹವನ್ನು ಊರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕೊಣಾಜೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ನಝರ್ ಷಾ ಪಟ್ಟೋರಿ ತಿಳಿಸಿದ್ದಾರೆ.
ಬಾಲಕಿಗೆ ಲೈಂಗಿಕ ಕಿರುಕುಳ ; ಆರೋಪಿ ಬಂಧನ
ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ನೇತ್ರತ್ವದಲ್ಲಿ ಬಂಧಿಸಿ,ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಅಪ್ರಾಪ್ತ ಬಾಲಕಿಗೆ ಆಮಿಷ ತೋರಿಸಿ ಪಾರ್ಕ್ ಒಂದಕ್ಕೆ ಬರುವಂತೆ ಮಾಡಿ ಅಲ್ಲಿ ಮೂವರು ಆರೋಪಿಗಳು ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಈ ಪೈಕಿ ಇಬ್ಬರು ಆರೋಪಿಗಳ ಬಂಧನವಾಗಿದ್ದು ಇನ್ನೋರ್ವ ಪ್ರಮುಖ ಆರೋಪಿ ನಾಪತ್ತೆಯಾಗಿದ್ದ.
ಇದೀಗ ನಾಪತ್ತೆಯಾಗಿದ್ದ ಪ್ರಮುಖ ಆರೋಪಿಯಾಗಿದ್ದ ಅಫೀಕ್ ಯಾನೆ ಮಹಮ್ಮದ್ ಅಫೀಕ್ ( 19)ಎಂಬಾತನ ಬಂಧನವಾಗಿದೆ.
ಈ ಪ್ರಕರಣದ ಇನ್ನೆರಡು ಆರೋಪಿಗಳಾದ ಮಹಮ್ಮದ್ ಫೈಝಲ್ ಹಾಗು ಲಿಖೇಶ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ,ಅವರು ಜಾಮೀನು ಮೇಲೆ ಬಿಡುಗಡೆಗೊಂಡಿದ್ದಾರೆ.
ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಮಹಮ್ಮದ್ ಅಫೀಕ್ ನ ಬಂಧನಕ್ಕೆ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು.
(ವರದಿ: ಹರೀಶ ಮಾಂಬಾಡಿ.ಮಂಗಳೂರು)