Mangalore News: ಬದುಕಿನ ಪಾಠ ಹೇಳಿಕೊಟ್ಟು ನಿವೃತ್ತಿಯಾದಾಗ ವಿದ್ಯಾರ್ಥಿಗಳ ಉಡುಗೊರೆ ಕಂಡ ಶಿಕ್ಷಕಿಗೆ ಅಚ್ಚರಿ
Jan 19, 2024 07:30 AM IST
ತಮಗೆ ಪಾಠ ಹೇಳಿಕೊಟ್ಟ ಶಿಕ್ಷಕರಿಗೆ ವಿದ್ಯಾರ್ಥಿನಿಯರು ಪ್ರೀತಿಯಿಂದ ಗೌರವಿಸಿದ್ದು ಹೀಗೆ.
- Student Teacher bond ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಪಾಣೆ ಮಂಗಳೂರಿನಲ್ಲಿ ನಡೆದ ಈ ಸನ್ಮಾನ ಕಾರ್ಯಕ್ರಮ ಅಪರೂಪದ್ದು. ತಮ್ಮ ಪ್ರೀತಿಯ ಶಿಕ್ಷಕಿಗೆ ಭಿನ್ನವಾಗಿ ಬೀಳ್ಕೊಟ್ಟ ಸನ್ನಿವೇಶ. (ವರದಿ: ಹರೀಶ್ ಮಾಂಬಾಡಿ, ಮಂಗಳೂರು)
ಮಂಗಳೂರು: ಮೂರು ದಶಕಗಳಿಂದ ಶಿಕ್ಷಕಿಯಾಗಿ ಸಾರ್ಥಕ ಸೇವೆ ಸಲ್ಲಿಕೆ. ಕಡೆಗೂ ಆ ಶಿಕ್ಷಕಿಗೆ ಸೇವೆಯಿಂದ ನಿವೃತ್ತಿಯಾಗುವ ದಿನ ಬಂದೇ ಬಿಟ್ಟಿತು. ಅದಕ್ಕಾಗಿ ವಿದಾಯ ಕೂಟವೂ ಏರ್ಪಟ್ಟಿತ್ತು. ಈ ವೇಳೆ ಹಳೆ ವಿದ್ಯಾರ್ಥಿಗಳಿಂದ ದೊರಕಿದ ಉಡುಗೊರೆಯನ್ನು ಕಂಡು ಶಿಕ್ಷಕಿಯೇ ಬೆರಗಾದ ಅಪೂರ್ವ ಘಟನೆಯೊಂದು ಬಂಟ್ವಾಳದ ಪಾಣೆಮಂಗಳೂರಿನ ಅಕ್ಕರಂಗಡಿಯ ದಾರುಲ್ ಇಸ್ಲಾಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಜಯಲಕ್ಷ್ಮೀ ಆರ್. ಭಟ್, ದಾರುಲ್ ಇಸ್ಲಾಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 28 ವರ್ಷಗಳಿಂದ ಶಿಕ್ಷಕಿಯಾಗಿ ಕರ್ತವ್ಯ ಸಲ್ಲಿಸುತ್ತಿದ್ದರು. 2020ರಲ್ಲಿ ಅವರು ನಿವೃತ್ತಿಗೊಂಡಿದ್ದರೂ ಶಿಕ್ಷಕರ ಕೊರತೆಯಿಂದ ಅದೇ ಶಾಲೆಯಲ್ಲಿ ವೇತನ ಪಡೆಯದೆ ತಮ್ಮ ಸೇವೆಯನ್ನು ಮುಂದುವರಿಸಿದ್ದರು. ಈ ಮೂಲಕ ಒಟ್ಟು 31 ವರ್ಷಗಳ ಕಾಲ ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದರು. ವಿದ್ಯಾರ್ಥಿಗಳ ಪಾಲಿಗೆ ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದ ಜಯಲಕ್ಷ್ಮೀ ಆರ್. ಭಟ್ ಈ ಅವಧಿಯಲ್ಲಿ ಸುಮಾರು 2000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶಿಕ್ಷಕರಾಗಿ ಮಾರ್ಗದರ್ಶನ ಮಾಡಿದ್ದರು.
ಅವರು ನಿವೃತ್ತಿ ಪಡೆಯುವ ಸಮಯ ಬಂದೇ ಬಿಟ್ಟಿತ್ತು. ಈ ಹಿನ್ನೆಲೆಯಲ್ಲಿ ಹಳೆಯ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕಿಗೆ ವಿದಾಯಕೂಟವೊಂದನ್ನು ಏರ್ಪಡಿಸಿದ್ದರು. ಜೊತೆಗೆ ಅವರಿಗೊಂದು ಸ್ಮರಣೀಯವಾದ ಉಡುಗೊರೆ ನೀಡಬೇಕೆಂದು ಉದ್ದೇಶಿಸಿದ್ದರು. ಆದ್ದರಿಂದ ಹಳೆ ವಿದ್ಯಾರ್ಥಿಗಳು ವಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ಚರ್ಚಿಸಿ ಚಿನ್ನದ ಸರ ನೀಡಲು ನಿರ್ಧರಿಸಿದ್ದರು. ಅದಕ್ಕಾಗಿ ತಮ್ಮೊಳಗೆ ಹಣ ಸಂಗ್ರಹಿಸಿ ಸುಮಾರು 2.10 ಲಕ್ಷ ರೂ. ಮೌಲ್ಯದ 33 ಗ್ರಾಂನ ಬೆಂಡೋಲೆ ಸಹಿತ ಚಿನ್ನದ ನೆಕ್ಲೇಸ್ ಅನ್ನು ಖರೀದಿಸಿ ವಿದಾಯ ಕೂಟದಲ್ಲಿ ಶಿಕ್ಷಕಿಗೆ ಉಡುಗೊರೆಯಾಗಿ ನೀಡಿದ್ದಾರೆ.
ಇದನ್ನು ಗಮನಿಸಿದ ಶಿಕ್ಷಕಿಗೂ ಅಚ್ಚರಿ ಹಾಗೂ ಕಣ್ಣಂಚಿನಲ್ಲಿ ನೀರು. ಹೀಗೂ ನನ್ನ ಮಕ್ಕಳು ಗೌರವಿಸುತ್ತಾರ ಎನ್ನುವ ಖುಷಿಯೂ ಅವರ ಮುಖದಲ್ಲಿ ಕಾಣಿಸಿತು. ವಿದ್ಯಾರ್ಥಿಗಳಿಗೆ ಅದು ಹೆಮ್ಮೆಯ ಕ್ಷಣ, ಆಡಳಿತ ಮಂಡಳಿಗೂ ಸಾರ್ಥಕ ಭಾವವೇ. ಇಡೀ ಕಾರ್ಯಕ್ರಮ ನಿಜಕ್ಕೂ ಗುರುಶಿಷ್ಯ ಬಾಂಧವ್ಯದ ದ್ಯೋತಕದಂತೆಯೇ ಇತ್ತು.
ಶಿಕ್ಷಕಿಗೆ ತಿಳಿಸಿರಲಿಲ್ಲ
ಈ ಉಡುಗೊರೆ ನೀಡುವ ವಿಚಾರವನ್ನು ಶಿಕ್ಷಕಿಗೆ ತಿಳಿಯದಂತೆ ಅತ್ಯಂತ ಗೌಪ್ಯವಾಗಿರಿಸಲಾಗಿತ್ತು. ಬುಧವಾರ ನಡೆದ ಶಾಲಾ ವಾರ್ಷಿಕೋತ್ಸವದಂದು ಶಿಕ್ಷಕಿಗೆ ಸನ್ಮಾನಿಸಿ ಈ ಉಡುಗೊರೆಯನ್ನು ನೀಡಿದ್ದಾರೆ. ಈ ವೇಳೆ ವಿದ್ಯಾರ್ಥಿಗಳಿಂದ ಚಿನ್ನದೊಡವೆ ಉಡುಗೊರೆಯಾಗಿ ದೊರಕಿದ್ದನ್ನು ಕಂಡು ಶಿಕ್ಷಕಿ ಅವಾಕ್ಕಾಗಿದ್ದಾರೆ. ಈ ಸಂದರ್ಭ ಶಿಕ್ಷಕಿ ಭಾವುಕರಾದರು. ಸಣ್ಣ ಮಕ್ಕಳೂ ಶಿಕ್ಷಕಿಯ ಜೊತೆ ನಿಂತು ಫೊಟೋ ತೆಗೆಸಿಕೊಳ್ಳುತ್ತಿರುವುದು ಮತ್ತಷ್ಟು ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು.
ದಾರುಲ್ ಇಸ್ಲಾಂ ಶಾಲೆಯ ವಿದ್ಯಾರ್ಥಿಗಳು ಮುಸ್ಲಿಂ ಸಮುದಾಯದವರಾದರೆ, ಶಿಕ್ಷಕಿ ಹಿಂದು, ಬ್ರಾಹ್ಮಣ ಸಮುದಾಯದವರು. ಆದರೆ ಇದ್ಯಾವುದೂ ಗುರು ಶಿಷ್ಯರ ಬಾಂಧವ್ಯಕ್ಕೆ ಅಡ್ಡಿ ಬರಲಿಲ್ಲ. ಶಿಕ್ಷಕಿಯ ಪಾಠ ಹೇಳಿಸಿಕೊಂಡ ವಿದ್ಯಾರ್ಥಿಗಳು ದೇಶ, ವಿದೇಶಗಳಲ್ಲಿ ಉತ್ತಮ ಉದ್ಯೋಗದಲ್ಲಿರುವುದು ಗಮನಾರ್ಹ.
ಶಾಲಾ ವಾರ್ಷಿಕೋತ್ಸವ, ಮಕ್ಕಳ ಪ್ರತಿಭಾ ಪುರಸ್ಕಾರ
ಇದೇ ವೇಳೆ ಶಾಲಾ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರವೂ ನಡೆಯಿತು. ಶಾಲಾ ಸಂಚಾಲಕ ಹಾಗೂ ಅಕ್ಕರಂಗಡಿ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ಹಮೀದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ ಜಿ, ನಾರ್ಶಮೈದಾನ ಶಾಲಾ ಮುಖ್ಯ ಶಿಕ್ಷಕರಾಗಿದ್ದ ರಾಮಕೃಷ್ಣ ರಾವ್, ಪಾಣೆಮಂಗಳೂರು ಎಸ್ ಎಲ್ ಎನ್ ಪಿ ಶಾಲಾ ಮುಖ್ಯ ಶಿಕ್ಷಕಿ ಶ್ವೇತಾ ಕಾಮತ್, ಮುಖ್ಯ ಅತಿಥಿಗಳಾಗಿ ದೈಹಿಕ ಶಿಕ್ಷಣ ಶಿಕ್ಷಕರ ಸಹಿತ ಹಲವರು ಹಾಜರಿದ್ದರು.
( ವರದಿ: ಹರೀಶ್ ಮಾಂಬಾಡಿ, ಮಂಗಳೂರು)