logo
ಕನ್ನಡ ಸುದ್ದಿ  /  ಕರ್ನಾಟಕ  /  Elephant In Dakshin Kannada: ಬೆಳ್ತಂಗಡಿ ಸುತ್ತಮುತ್ತ ಒಂಟಿಸಲಗದ ಪುಂಡಾಟ, ಜನರಿಗೆ ಪ್ರಾಣಸಂಕಟ

Elephant in Dakshin Kannada: ಬೆಳ್ತಂಗಡಿ ಸುತ್ತಮುತ್ತ ಒಂಟಿಸಲಗದ ಪುಂಡಾಟ, ಜನರಿಗೆ ಪ್ರಾಣಸಂಕಟ

HT Kannada Desk HT Kannada

Nov 29, 2023 01:10 PM IST

google News

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಾಡಾನೆ ಉಪಟಳದಿಂದ ಜನ ರೋಸಿ ಹೋಗಿದ್ದಾರೆ.

    • Elephant trouble in DK ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದೆ. ಬೆಳ್ತಂಗಡಿ ತಾಲ್ಲೂಕಿನಲ್ಲಿ ಕಾಡಾನೆಯೊಂದು ಮೂರು ದಿನದಿಂದ ತೊಂದರೆ ನೀಡುತ್ತಿದೆ. ಆನೆ ಓಡಿಸಲು ಇಲ್ಲವೇ ಸೆರೆಗೆ ಕರ್ನಾಟಕ ಅರಣ್ಯ ಇಲಾಖೆ( Karnataka Forest Department)  ಮುಂದಾಗಿದೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಾಡಾನೆ ಉಪಟಳದಿಂದ ಜನ ರೋಸಿ ಹೋಗಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಾಡಾನೆ ಉಪಟಳದಿಂದ ಜನ ರೋಸಿ ಹೋಗಿದ್ದಾರೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಡಾನೆ ಉಪಟಳಕ್ಕೆ ಜನ ರೋಸಿ ಹೋಗಿದ್ದಾರೆ. ಸತತ ಎರಡು ದಿನದಿಂದ ದಕ್ಷಿಣ ಕನ್ನಡದ ಬೆಳ್ತಂಗಡಿ ಭಾಗದಲ್ಲಿ ಕಾಡಾನೆ ಸಂಚಾರ ಜನರನ್ನು ಭಯಭೀತರನ್ನಾಗಿಸಿದೆ.

ಬೆಳ್ತಂಗಡಿ ಸಮೀಪ ಕಾಡಾನೆಯೊಂದು ಕಾರನ್ನು ಪಲ್ಟಿ ಮಾಡಿದ ಘಟನೆ ಹಸಿರಾಗಿರುವಂತೆಯೇ ಮರುದಿನ ಬೆಳಗ್ಗೆ ತೋಟತ್ತಾಡಿ ಪರಿಸರದಲ್ಲಿ ಸುಮಾರು 7 ಗಂಟೆಗೆ ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಯಿತು. ಬಳಿಕ ಅದರಷ್ಟಕೆ ಕಾಡಲ್ಲಿ ಮರೆಯಾಗಿದ್ದು, ಇದೀಗ ಕಾಡಾನೆ ಜನರ ಮನೆಬಾಗಿಲಿಗೆ ಬಂದಿರುವುದು ಸಮಸ್ಯೆಗೆ ಕಾರಣವಾಗುತ್ತಿದೆ.

ಬೆಳ್ತಂಗಡಿ ತಾಲೂಕಿನ ನೆರಿಯ,ಚಾರ್ಮಾಡಿ, ತೋಟತ್ತಾಡಿ,ಚಿಬಿದ್ರೆ, ಮುಂಡಾಜೆ, ಕಲ್ಮಂಜ, ಮಿತ್ತಬಾಗಿಲು, ಮಲವಂತಿಗೆ, ಕಡಿರುದ್ಯಾವರ, ಚಿಬಿದ್ರೆ, ಶಿಶಿಲ, ಶಿಬಾಜೆ, ಹತ್ಯಡ್ಕ ಮೊದಲಾದ ಗ್ರಾಮಗಳಲ್ಲಿ ನಿರಂತರ ಕೃಷಿ ಹಾನಿ ಮಾಡುತ್ತಿರುವ ಕಾಡಾನೆಗಳು ಇದೀಗ ಜನ-ವಾಹನಗಳ ಮೇಲು ದಾಳಿ ಮುಂದಾಗಿರುವುದು, ಮನೆ ಪರಿಸರ ಸುತ್ತ ಸುಳಿದಾಡುತ್ತಿರುವುದು ಆತಂಕಕ್ಕೆ ಎಡೆ ಮಾಡಿದೆ.

ಬೇರ್ಪಟ್ಟ ಗುಂಪು

ತೋಟತ್ತಾಡಿ,ನೆರಿಯ ಪ್ರದೇಶದಲ್ಲಿ ತಿರುಗಾಟ ನಡೆಸುತ್ತಿರುವ ಹೆಣ್ಣು ಆನೆಯ ಹುಡುಕಾಟದ ವೇಳೆ ದಾರಿ ತಪ್ಪಿ ಅಲೆಯುತ್ತಿದೆಯೋ ಎಂಬ ಶಂಕೆ ವ್ಯಕ್ತವಾಗಿದೆ. ನೆರಿಯ ಕಾಡಿನ ಕಡೆಯಿಂದ ಆನೆಗಳ ಇನ್ನೊಂದು ಗುಂಪು ಕಳೆದ ಎರಡು ದಿನಗಳಿಂದ ಘೀಳಿಡುವ ಸದ್ದು ಕೇಳಿ ಬರುತ್ತಿದ್ದು,ಈ ಗುಂಪಿನಲ್ಲಿರುವ ಹೆಣ್ಣು ಆನೆಯನ್ನು ಹುಡುಕುತ್ತಿರುವ ಸಾಧ್ಯತೆ ಇದೆ. ಕಾಡಿನ ಕಡೆ ತೆರಳುವ ವೇಳೆ ಜನನಿಬಿಡ ಪ್ರದೇಶದಲ್ಲಿ ತಿರುಗಾಟ ನಡೆಸಿ ದಿಕ್ಕು ತಪ್ಪಿರುವ ಕಾಡಾನೆಯನ್ನು ಸೋಮವಾರ ರಾತ್ರಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ನೆರಿಯ ಕಾಡಿನ ಕಡೆ ಅಟ್ಟಿದ್ದಾರೆ.

ಮತ್ತೆ ಕಾಣಿಸಿಕೊಂಡ ಆನೆ

ಸೋಮವಾರ ಬೆಳಗ್ಗೆ ಒಂಟಿ ಸಲಗ ತೋಟತ್ತಾಡಿ ಪರಿಸರದಲ್ಲಿ ಬೆಳಿಗ್ಗೆ ಏಳರ ಹೊತ್ತಿಗೆ ಕಂಡುಬಂದಿದ್ದು ರಾತ್ರಿ 8ರ ಸುಮಾರಿಗೆ ಸಮೀಪದ ಕಕ್ಕಿಂಜೆ- ನೆರಿಯ ರಸ್ತೆಯ ಬಸ್ತಿ ಎಂಬಲ್ಲಿ ಓಡಾಟ ನಡೆಸಿ ಮನೆಗಳ ಅಂಗಳಕ್ಕೂ ಬಂದಿತ್ತು. ಬಳಿಕ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರೊಂದರ ಮೇಲು ದಾಳಿ ಮಾಡಿ ಓರ್ವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಿನಲ್ಲಿದ್ದ ಮಗು ಸಹಿತ ಇತರ ಐದು ಮಂದಿ ಹೆಚ್ಚಿನ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.

ಕೃಷಿ ಹಾನಿಯ ಜತೆ ಜನ-ವಾಹನಗಳ ಮೇಲು ದಾಳಿಗೆ ಕಾಡಾನೆಗಳು ಮುಂದಾಗಿರುವುದು ಭೀತಿಗೆ ಕಾರಣವಾಗಿದೆ. ಬಸ್ತಿ ಪರಿಸರ ಭಾರಿ ಅರಣ್ಯ ಪ್ರದೇಶವಲ್ಲ. ಇಲ್ಲಿ ರಸ್ತೆ ಬದಿಯಲ್ಲಿ ಹೆಚ್ಚಿನ ಮನೆಗಳು ಇವೆ. ಇಂತಹ ಪರಿಸರದಲ್ಲಿ ಒಂಟಿ ಸಲಗ ನಿರ್ಭೀತಿಯಿಂದ ತಿರುಗಾಟ ನಡೆಸಿದ್ದು ಮನೆಯ ಗೇಟುಗಳನ್ನು ಮುರಿಯಲು ಯತ್ನಿಸಿದೆ.

ಈ ಘಟನೆ ತಡರಾತ್ರಿ ನಡೆಯುತ್ತಿದ್ದರೆ ಹೆಚ್ಚಿನ ಅಪಾಯ ಉಂಟಾಗುವ ಸಾಧ್ಯತೆಯು ಇತ್ತು. ರಾತ್ರಿ 8ರ ಸುಮಾರಿಗೆ ಘಟನೆ ನಡೆದ ಕಾರಣ ಇಲ್ಲಿನ ಅಂಗಡಿಗಳು ಕಾರ್ಯನಿರ್ವಹಿಸುತ್ತಿದ್ದು ಜನರ ಓಡಾಟವು ಇದ್ದ ಕಾರಣ ಕೂಡಲೇ ಗಮನಕ್ಕೆ ಬಂದಿದೆ ಸ್ಥಳೀಯರು ತಕ್ಷಣ ಕಾರ್ಯಕ್ರಮ ಪ್ರವೃತ್ತರಾದುದರಿಂದ ಹೆಚ್ಚಿನ ಹಾನಿಯು ಸಂಭವಿಸಿಲ್ಲ.

ಗುಂಪು ಗುಂಪಾಗಿಯೂ ಬರುತ್ತಿವೆ

ಮರಿಯಾನೆ ಸಹಿತ ಮೂರು ಆನೆಗಳಿರುವ ಎರಡು ಹಿಂಡು, ನಾಲ್ಕರಿಂದ ಐದು ಕಾಡಾನೆಗಳು ಹಿಂಡು ಒಂಟಿ ಸಲಗಗಳು ಸೇರಿ ಸುಮಾರು 10 ರಿಂದ 15 ಆನೆಗಳು ಇರುವ ಸಾಧ್ಯತೆ ಇದೆ ಈ ಆನೆಗಳ ಹಿಂಡು ತಾಲೂಕಿನ ಹಲವು ಗ್ರಾಮಗಳಲ್ಲಿ ಇಲ್ಲಿನ ಅರಣ್ಯದ ಮೂಲಕ ಸಂಚರಿಸುತ್ತ,ಜನ ವಸತಿ ಪ್ರದೇಶ, ಕೃಷಿ ತೋಟಗಳಿಗೆ ದಾಳಿ ಇಡುತ್ತ ಹಾನಿ ಉಂಟು ಮಾಡುವುದು,ಹೆದ್ದಾರಿ ಸಹಿತ ರಸ್ತೆಗಳಲ್ಲಿ ನಡೆಸುವುದು ಮಾಮೂಲಾಗಿದೆ.

ಹಗಲು ಹೊತ್ತು ಕೆಲವೊಮ್ಮೆ ಇಲ್ಲಿನ ಕಾಡಿನ ಪರಿಸರ ಗಳಲ್ಲಿರುವ ರಸ್ತೆಗಳಲ್ಲೂ ಕಾಡಾನೆಗಳು ಕಂಡುಬರುತ್ತಿದ್ದು ಜನಸಾಮಾನ್ಯರು ಸಂಚರಿಸಲು ಭಯಪಡುವಂತಾಗಿದೆ ಎನ್ನುವುದು ಸ್ಥಳೀಯರ ನುಡಿ.

ಫಲ ನೀಡದ ಕಾರ್ಯಾಚರಣೆ

ಆನೆ ಹಾವಳಿ ತಪ್ಪಿಸಲು ಆನೆ ಕಂದಕ ರಚನೆ, ಗಸ್ತು ಕಾರ್ಯಾಚರಣೆ, ಪ್ರಾತ್ಯಕ್ಷಿಕೆ,ಆನೆ ಅಟ್ಟುವ ಕಾರ್ಯಾಚರಣೆಗಳು ನಡೆದರು ಅವುಗಳು ಬೆರಳೆಣಿಕೆಯ ದಿನಗಳಿಗೆ ಮಾತ್ರ ಪರಿಣಾಮ ಬೀರುತ್ತವೆ‌. ಆದರೆ ಬಳಿಕ ಕಾಡಾನೆಗಳು ಮತ್ತೆ ದಾಳಿ ಇಡುತ್ತಿವೆ. ಇಲಾಖೆ ನಡೆಸುವ ಕಾರ್ಯಾಚರಣೆಗಳು ಸೀಮಿತ ಅವಧಿಗೆ ಮಾತ್ರ ಪರಿಣಾಮ ಬೀರುತ್ತಿದ್ದು ಇದಕ್ಕೊಂದು ಸೂಕ್ತ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ.

"ಆನೆದಾಳಿ ನಡೆಸಿದ ನೆರಿಯ, ತೋಟತ್ತಾಡಿ ಪ್ರದೇಶಕ್ಕೆ ತಕ್ಷಣ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಸ್ಥಳೀಯರ ಸಹಕಾರದಲ್ಲಿ ಕಾಡಾ ನೆಯನ್ನು ರಾತ್ರಿಯೇ ಕಾಡಿಗೆ ಅಟ್ಟಲಾಗಿದೆ. ಮಂಗಳವಾರ ಇಲಾಖೆಯ ಸಿಬ್ಬಂದಿ ಕಾಡಿನ ಪ್ರದೇಶಕ್ಕೆ ತೆರಳಿ ಮತ್ತೊಮ್ಮೆ ಪರಿಶೀಲನೆ ನಡೆಸಿದ್ದಾರೆ.ಈ ವೇಳೆ ಕಾಡಾನೆ ಕಂಡು ಬಂದಿಲ್ಲ. ಅಗತ್ಯ ಬಿದ್ದಲ್ಲಿ ಈ ಪರಿಸರದಲ್ಲಿ ಸ್ಥಳೀಯರ ಸಹಕಾರದೊಂದಿಗೆ ರಾತ್ರಿ ಗಸ್ತು ಕಾರ್ಯಾಚರಣೆ ನಡೆಸಲಾಗುವುದು" ಎನ್ನುತ್ತಾರೆ ಬೆಳ್ತಂಗಡಿ ಅರಣ್ಯ ಇಲಾಖೆ ಆರ್.ಎಫ್.ಒ. ಬಿ.ಜಿ.ಮೋಹನ್ ಕುಮಾರ್. ಈಗಾಗಲೇ ಸ್ಥಳಕ್ಕೆ ಎಸಿಎಫ್ ಸಿ.ಶ್ರೀಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

(ವರದಿ: ಹರೀಶ ಮಾಂಬಾಡಿ, ಮಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ