Mangaluru: ವೃದ್ಧ ದಂಪತಿಗೆ ಹಲ್ಲೆ ವಿಡಿಯೋ ವೈರಲ್, ಹುದ್ದೆಯಿಂದ ಧರ್ಮಗುರು ತೆರವು
Mar 02, 2024 07:50 PM IST
ಮಂಗಳೂರು ಕ್ರೈಂ ಸುದ್ದಿ (ಪ್ರಾತಿನಿಧಿಕ ಚಿತ್ರ)
- ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಗೊಳಪಡುವ ಪರಿಯಲ್ತಡ್ಕದ ಮಣಿಲ ಎಂಬಲ್ಲಿ ವೃದ್ಧ ದಂಪತಿಗೆ ಪಾದ್ರಿಯೊಬ್ಬರು ಹಲ್ಲೆ ನಡೆಸುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದ್ದು, ಪಾದ್ರಿಯನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ. (ವರದಿ: ಹರೀಶ ಮಾಂಬಾಡಿ)
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಗೊಳಪಡುವ ಪರಿಯಲ್ತಡ್ಕದ ಮಣಿಲ ಎಂಬಲ್ಲಿ ವೃದ್ಧ ದಂಪತಿಗೆ ಪಾದ್ರಿಯೊಬ್ಬರು ಹಲ್ಲೆ ನಡೆಸುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದ್ದು, ಈ ಘಟನೆಯ ತರುವಾಯ ಪ್ರಕರಣ ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಪರಿಯಾಲ್ತಡ್ಕದ ಕ್ರೈಸ್ಟ್ ದಿ ಕಿಂಗ್ ಪ್ಯಾರಿಷ್ ಚರ್ಚ್ನ ಪಾದ್ರಿ ನೆಲ್ಸನ್ ಒಲಿವೆರಾ ಹಾಗೂ ವೃದ್ಧ ದಂಪತಿ ಮಧ್ಯೆ ಯಾವ ವಿಚಾರದಲ್ಲಿ ಗಲಾಟೆ ನಡೆದಿದೆ ಎಂಬುದು ತಿಳಿದುಬಂದಿಲ್ಲ. ಫೆ.29ರಂದು ಈ ಘಟನೆ ನಡೆದಿರುವುದು ವೈರಲ್ ಆಗಿರುವ ಸಿಸಿಟಿವಿ ಕ್ಯಾಮರಾದ ವೀಡಿಯೊದಿಂದ ತಿಳಿದುಬರುತ್ತದೆ.
ಮನೆಯ ಹೊರಗೆ ವೃದ್ಧ ದಂಪತಿ ಜೊತೆ ವಾಗ್ವಾದ ನಡೆಸಿದ ಬಳಿಕ ಹಲ್ಲೆ ನಡೆಸುತ್ತಿರುವುದು ವೀಡಿಯೊದಲ್ಲಿ ಸೆರೆಯಾಗಿದೆ. ಹಲ್ಲೆ ನಡೆಸಿ, ಕುತ್ತಿಗೆ ಪಟ್ಟಿ ಹಿಡಿದು ಎಳೆದೊಯ್ದ ದೃಶ್ಯ ಕಂಡುಬಂದಿದ್ದು, ಪತಿಯ ರಕ್ಷಣೆಗೆ ಮುಂದಾದ ಮಹಿಳೆಗೂ ಹಲ್ಲೆ ನಡೆಸಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಸೆರೆಯಾಗಿದೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಮಂಗಳೂರು ಕೆಥೋಲಿಕ್ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಪರಿಯಲ್ತಡ್ಕದ ಮನೇಲ ಎಂಬಲ್ಲಿ ಕ್ರೈಸ್ಟ್ ದಿ ಕಿಂಗ್ ಪ್ಯಾರಿಷ್ ವ್ಯಾಪ್ತಿಯಲ್ಲಿ ನಡೆದ ಘಟನೆಗೆ ಮಂಗಳೂರು ಕೆಥೊಲಿಕ್ ಧರ್ಮಪ್ರಾಂತ್ಯ ವಿಷಾದ ವ್ಯಕ್ತಪಡಿಸಿದ್ದು, ಇದರಿಂದ ನೋವಾದವರಿಗೆ ಕ್ಷಮೆಯನ್ನು ಯಾಚಿಸಿದೆ. ಇದು ಕಾನೂನು ವ್ಯಾಪ್ತಿಗೆ ಬರುವ ಕಾರಣ, ಧರ್ಮಪ್ರಾಂತ್ಯ ಕಾನೂನಿಗೆ ತಲೆಬಾಗಿ ಎಲ್ಲ ಪ್ರಕ್ರಿಯೆಗಳಿಗೂ ಸಹಕಾರ ನೀಡಲಿದೆ ಎಂದು ತಿಳಿಸಿದ್ದು, ಆಂತರಿಕ ವಿಚಾರಣೆಯನ್ನೂ ಸತ್ಯಾಸತ್ಯತೆಯನ್ನು ಕಂಡುಹಿಡಿಯಲು ನಡೆಸುವುದಾಗಿ ಹೇಳಿದೆ. ತತಕ್ಷಣದ ಕ್ರಮವಾಗಿ ಸಂಬಂಧಪಟ್ಟ ಪಾದ್ರಿಯನ್ನು ತೆಗೆದುಹಾಕಲಾಗುವುದು ಮತ್ತು ಬೇರೆಯವರನ್ನು ನಿಯೋಜಿಸಲಾಗುವುದು ಎಂದು ಹೇಳಿದೆ.
ಎಸ್ಪಿ ಹೇಳಿಕೆ:
ಘಟನೆ ಕುರಿತು ಮಂಗಳೂರು ಪೊಲೀಸ್ ವರಿಷ್ಠಾಧಿಕಾರಿ ಪ್ರಕಟಣೆಯನ್ನು ಹೊರಡಿಸಿದ್ದು, ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪರಿಯಾಲ್ತಡ್ಕ ಎಂಬಲ್ಲಿ, ಧಾರ್ಮಿಕ ವ್ಯಕ್ತಿಯೊಬ್ಬರು ಹಲ್ಲೆ ನಡೆಸುತ್ತಿರುವ ವಿಡಿಯೋ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದ್ದು, ವಿಡಿಯೋ ದಲ್ಲಿ ಹಲ್ಲೆ ನಡೆಸುತ್ತಿರುವ ವ್ಯಕ್ತಿ ಹಾಗೂ ಹಲ್ಲೆಗೊಳಗಾದವರು ಒಂದೇ ಕೋಮಿಗೆ ಸೇರಿದವರಾಗಿದ್ದು, ಈ ಬಗ್ಗೆ ಈಗಾಗಲೇ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಲಾಗುತ್ತಿದೆ. ಸಾರ್ವಜನಿಕರು ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡದಂತೆ ಹಾಗು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಬಾರದಾಗಿ ವಿನಂತಿಸಿದ್ದಾರೆ.
ವರದಿ: ಹರೀಶ ಮಾಂಬಾಡಿ, ಮಂಗಳೂರು