ಮಂಗಳೂರು: ಸಿಂಗಲ್ ಸೈಟ್ ನಕ್ಷೆ, ಪ್ರಾಪರ್ಟಿ ಕಾರ್ಡ್ ಮಾಡಿಸಲು ಲಂಚ ಸ್ವೀಕರಿಸಿದ ಯುಪಿಓಆರ್ ಸರ್ವೆಯರ್ ಮತ್ತು ಮಧ್ಯವರ್ತಿ ಲೋಕಾಯುಕ್ತ ಬಲೆಗೆ
Published Jun 19, 2025 11:11 AM IST
ಮಂಗಳೂರಿನಲ್ಲಿ ಸಿಂಗಲ್ ಸೈಟ್ ನಕ್ಷೆ, ಪ್ರಾಪರ್ಟಿ ಕಾರ್ಡ್ ಮಾಡಿಸಲು ಲಂಚ ಸ್ವೀಕರಿಸಿದ ಯುಪಿಓಆರ್ ಸರ್ವೆಯರ್ ನಂದೀಶ್ ಮತ್ತು ಮಧ್ಯವರ್ತಿ ದಿವಾಕರ್ ಬಿಜೈ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
- ಸಿಂಗಲ್ ಸೈಟ್ ನಕ್ಷೆ ಹಾಗೂ ಪ್ರಾಪರ್ಟಿ ಕಾರ್ಡ್ ಮಾಡಿಸಲು 43,500 ರೂಪಾಯಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ಮಂಗಳೂರಿನ ಅರ್ಬನ್ ಪ್ರಾಪರ್ಟಿ ಓನರ್‌ಶಿಪ್ ರೆಕಾರ್ಡ್ ಕಚೇರಿಯ ಸರ್ವೆಯರ್ ನಂದೀಶ್ ಮತ್ತು ಮಧ್ಯವರ್ತಿ ದಿವಾಕರ್ ಬಿಜೈ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದರು. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಮಂಗಳೂರು: ಕಂಕನಾಡಿ ಮತ್ತು ಬಜಾಲ್ ಗ್ರಾಮಗಳ ಜಮೀನಿನ ಸಿಂಗಲ್ ಸೈಟ್ ನಕ್ಷೆ ಹಾಗೂ ಪ್ರಾಪರ್ಟಿ ಕಾರ್ಡ್ ಮಾಡಿಸಲು 43,500 ರೂಪಾಯಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ಮಂಗಳೂರಿನ ಯು.ಪಿ.ಓ.ಆರ್ (ಅರ್ಬನ್ ಪ್ರಾಪರ್ಟಿ ಓನರ್‌ಶಿಪ್ ರೆಕಾರ್ಡ್) ಕಚೇರಿಯ ಸರ್ವೆಯರ್ ನಂದೀಶ್ ಮತ್ತು ಮಧ್ಯವರ್ತಿ ದಿವಾಕರ್ ಬಿಜೈ ಅವರನ್ನು ಕರ್ನಾಟಕ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಪಿರ್ಯಾದಿದಾರರ ತಾಯಿ ಫೆಬ್ರವರಿ 2025 ರಲ್ಲಿ ತಮ್ಮ ಹೆಸರಿನಲ್ಲಿರುವ ಜಮೀನಿನ ಸಿಂಗಲ್ ಸೈಟ್ ನಕ್ಷೆ ಮತ್ತು ಪ್ರಾಪರ್ಟಿ ಕಾರ್ಡ್‌ಗಾಗಿ ಮಂಗಳೂರು ಯು.ಪಿ.ಓ.ಆರ್ ಕಛೇರಿಗೆ ಅರ್ಜಿ ಸಲ್ಲಿಸಿದ್ದರು. ವಯಸ್ಸಾದ ಕಾರಣ ಪಿರ್ಯಾದಿದಾರರು ಸ್ವತಃ ಕಛೇರಿಗೆ ಭೇಟಿ ನೀಡಿ ಕಡತದ ಪ್ರಗತಿಯ ಬಗ್ಗೆ ವಿಚಾರಿಸಿದ್ದರು. ಏಪ್ರಿಲ್ 2025 ರಲ್ಲಿ ಸರ್ವೆಯರ್ ನಂದೀಶ್ ಸರ್ವೆ ನಡೆಸಿದ ಬಳಿಕ 6,500 ರೂಪಾಯಿ ಲಂಚವನ್ನು ತಾವೇ ಸ್ವೀಕರಿಸಿದ್ದು, ಜೊತೆಗೆ 20,000 ರೂಪಾಯಿ ಲಂಚವನ್ನು ದಿವಾಕರ್ ಬಿಜೈ ಎಂಬ ಮಧ್ಯವರ್ತಿಯ ಮೂಲಕ ಪಡೆದಿದ್ದಾರೆ.
ನಂತರ, ಕಂಕನಾಡಿ ಮತ್ತು ಬಜಾಲ್ ಗ್ರಾಮಗಳ ಎರಡೂ ಸ್ಥಳಗಳ ಸಿಂಗಲ್ ಸೈಟ್ ನಕ್ಷೆ ಹಾಗೂ ಪ್ರಾಪರ್ಟಿ ಕಾರ್ಡ್ ನೀಡಲು ಹೆಚ್ಚುವರಿಯಾಗಿ 18,000 ರೂಪಾಯಿ ಲಂಚಕ್ಕೆ ಒತ್ತಾಯಿಸಿದ್ದಾರೆ. ಈ ಒತ್ತಾಯದ ವಿರುದ್ಧ ಪಿರ್ಯಾದಿದಾರರು ಸಾಕ್ಷಿಗಳೊಂದಿಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ನಂದೀಶ್ ಮತ್ತು ದಿವಾಕರ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಜೂನ್ 2025 ರಲ್ಲಿ ನಂದೀಶ್, ದಿವಾಕರ್ ಮೂಲಕ 15,000 ರೂಪಾಯಿ ಲಂಚವನ್ನು ಮತ್ತೊಮ್ಮೆ ಸ್ವೀಕರಿಸಿದ್ದರು. ಒಟ್ಟಾರೆ 41,500 ರೂಪಾಯಿ ಲಂಚವನ್ನು ಪಡೆದಿದ್ದ ನಂದೀಶ್, ಜೂನ್ 18 ರಂದು ಹೆಚ್ಚುವರಿಯಾಗಿ 2,000 ರೂಪಾಯಿ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಇದರೊಂದಿಗೆ ಒಟ್ಟು 43,500 ರೂಪಾಯಿ ಲಂಚವನ್ನು ಪಿರ್ಯಾದಿದಾರರಿಂದ ಸ್ವೀಕರಿಸಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಈ ಕಾರ್ಯಾಚರಣೆಯನ್ನು ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕ (ಪ್ರಭಾರ) ಕುಮಾರಚಂದ್ರ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕರಾದ ಡಾ. ಗಾನ ಪಿ ಕುಮಾರ್, ಸುರೇಶ್ ಕುಮಾರ್ ಪಿ, ಪೊಲೀಸ್ ನಿರೀಕ್ಷಕರಾದ ಭಾರತಿ ಜಿ, ಮತ್ತು ಚಂದ್ರಶೇಖರ್ ಕೆ.ಎನ್. ಅವರ ನೇತೃತ್ವದಲ್ಲಿ ಮಂಗಳೂರು ಲೋಕಾಯುಕ್ತ ಸಿಬ್ಬಂದಿ ಯಶಸ್ವಿಯಾಗಿ ನಡೆಸಿದರು. ಆರೋಪಿಗಳಾದ ನಂದೀಶ್ ಮತ್ತು ದಿವಾಕರ್ ಬಿಜೈ ಅವರನ್ನು ವಶಕ್ಕೆ ಪಡೆದು ತನಿಖೆ ಮುಂದುವರಿದಿದೆ.
(ವರದಿ- ಹರೀಶ್ ಮಾಂಬಾಡಿ, ಮಂಗಳೂರು)