Mumbai Mangaluru flight: ಮುಂಬೈ - ಮಂಗಳೂರಿಗೆ ಮತ್ತೊಂದು ಏರ್ ಇಂಡಿಯಾ ವಿಮಾನ; ಇವೆರಡು ನಗರಗಳಿಗೆ ನಂಟು ಹೆಚ್ಚು, ಯಾಕೆ ಗೊತ್ತಾ?
Jun 12, 2023 08:00 AM IST
ಏರ್ ಇಂಡಿಯಾ ವಿಮಾನ
- Mumbai -Mangaluru flight: ಏರ್ ಇಂಡಿಯಾ ವಿಮಾನ 1679 ಮುಂಬೈನಿಂದ ಮಧ್ಯಾಹ್ನ 12.40ಕ್ಕೆ ಹೊರಟು ಮಧ್ಯಾಹ್ನ 2.10ಕ್ಕೆ ಮಂಗಳೂರು ತಲುಪಲಿದೆ. ಏರ್ ಇಂಡಿಯಾ 1680 ಮಂಗಳೂರಿನಿಂದ ಮಧ್ಯಾಹ್ನ 2.50ಕ್ಕೆ ಹೊರಟು ಸಂಜೆ 4.35ಕ್ಕೆ ಮುಂಬೈ ತಲುಪಲಿದೆ.
ಮಂಗಳೂರು: ಭಾರತದ ಆರ್ಥಿಕ ರಾಜಧಾನಿ ಮುಂಬೈಗೆ ಜೂನ್ 10ರಿಂದ ಏರ್ ಇಂಡಿಯಾ (Air India) ತನ್ನ ಎರಡನೇ ದೈನಂದಿನ ವಿಮಾನಯಾನ ಸೇವೆಯನ್ನು ಮಂಗಳೂರಿನಿಂದ ಆರಂಭಿಸಿದೆ.
ಮೇ 22 ರಂದು ಇಂಡಿಗೊ ಮುಂಬೈ-ಮಂಗಳೂರು (Mumbai-Mangaluru) ವಲಯದಲ್ಲಿ ಮೂರನೇ ದೈನಂದಿನ ವಿಮಾನವನ್ನು ಪ್ರಾರಂಭಿಸಿದ ನಂತರ ಈ ಸೇವೆ ಆರಂಭಗೊಂಡಿದೆ. ಇದರೊಂದಿಗೆ, ಎರಡು ವಿಮಾನಯಾನ ಸಂಸ್ಥೆಗಳು ಈಗ ಈ ಪ್ರಯಾಣಿಸುವ ವಲಯದಲ್ಲಿ ಐದು ದೈನಂದಿನ ವಿಮಾನಗಳನ್ನು ನಿರ್ವಹಿಸಿದಂತಾಗುತ್ತದೆ.
ಏರ್ ಇಂಡಿಯಾ ವಿಮಾನ 1679 ಮುಂಬೈನಿಂದ ಮಧ್ಯಾಹ್ನ 12.40ಕ್ಕೆ ಹೊರಟು ಮಧ್ಯಾಹ್ನ 2.10ಕ್ಕೆ ಮಂಗಳೂರು ತಲುಪಲಿದೆ. ಏರ್ ಇಂಡಿಯಾ 1680 ಮಂಗಳೂರಿನಿಂದ ಮಧ್ಯಾಹ್ನ 2.50ಕ್ಕೆ ಹೊರಟು ಸಂಜೆ 4.35ಕ್ಕೆ ಮುಂಬೈ ತಲುಪಲಿದೆ. ಈ ವಿಮಾನದ ಆರಂಭಿಕ ಪ್ರಯಾಣದಲ್ಲಿ ಏರ್ ಇಂಡಿಯಾ 1679 ನಲ್ಲಿ 182 ಪ್ರಯಾಣಿಕರು ಮತ್ತು ಏರ್ ಇಂಡಿಯಾ 1690 ನಲ್ಲಿ 113 ಪ್ರಯಾಣಿಕರು ಮುಂಬೈಗೆ ತೆರಳಿದರು. ಮತ್ತೊಂದು ಏರ್ ಇಂಡಿಯಾ ವಿಮಾನ ಏರ್ ಇಂಡಿಯಾ 679 ಮುಂಬೈನಿಂದ ಬೆಳಿಗ್ಗೆ 5.45 ಕ್ಕೆ ಹೊರಟು ಬೆಳಿಗ್ಗೆ 7.20 ಕ್ಕೆ ಮಂಗಳೂರು ತಲುಪಲಿದೆ. ಏರ್ ಇಂಡಿಯಾ 680 ವಿಮಾನವು ಮಂಗಳೂರಿನಿಂದ ಬೆಳಿಗ್ಗೆ 7.55 ಕ್ಕೆ ಹೊರಟು ಮುಂಬೈಗೆ ಬೆಳಿಗ್ಗೆ 9.35 ಕ್ಕೆ ತಲುಪುತ್ತದೆ.
ವಿಮಾನಯಾನ ಉದ್ಯಮದ ಮೂಲಗಳ ಪ್ರಕಾರ, ಇಂಡಿಗೊ ಅಕ್ಟೋಬರ್ 28 ರಂದು ಕೊನೆಗೊಳ್ಳುವ ಪ್ರಸ್ತುತ ಬೇಸಿಗೆ ವಿಮಾನಯಾನ ವೇಳಾಪಟ್ಟಿಯ ಅಂತ್ಯದವರೆಗೆ ಮುಂಬೈಗೆ ತನ್ನ ಮೂರನೇ ದೈನಂದಿನ ವಿಮಾನವನ್ನು ನಿರ್ವಹಿಸಲಿದೆ. ಆರಂಭದಲ್ಲಿ ಜೂನ್ 15 ರವರೆಗೆ ಈ ಮೂರನೇ ದೈನಂದಿನ ಹಾರಾಟವನ್ನು ಯೋಜಿಸಿತ್ತು. ನಂತರ ಅದನ್ನು ಜುಲೈ 31 ರವರೆಗೆ ವಿಸ್ತರಿಸಿದೆ. ಇದರೊಂದಿಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಎಂಐಎ) ದೈನಂದಿನ ವಿಮಾನ ಸಂಚಾರ ಚಲನೆ (ಎಟಿಎಂ) 38 ಆಗಿದ್ದು, ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ 5000ದ ಆಸುಪಾಸಿನಲ್ಲಿದೆ.
ಯಾಕೆ ಈ ಮಾರ್ಗಕ್ಕೆ ಬೇಡಿಕೆ?
2022 ರಲ್ಲಿ, ಮುಂಬೈ-ಎಂಐಎ ಅತ್ಯಂತ ಜನನಿಬಿಡ ಮಾರ್ಗವಾಗಿ ಹೊರಹೊಮ್ಮಿತು, 4.9 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದರು ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ. ಹಲವು ದಶಕಗಳಿಂದಲೂ ಮಂಗಳೂರು ಮತ್ತು ಮುಂಬೈ ಮಧ್ಯೆ ಭಾವನಾತ್ಮಕ, ಔದ್ಯೋಗಿಕ ಬಾಂಧವ್ಯ ವೃದ್ಧಿಸಿದೆ. ಮುಂಬೈನಲ್ಲಿ ಕರ್ನಾಟಕ ಕರಾವಳಿಯ ಸಹಸ್ರಾರು ಜನರು ಬದುಕು ಕಟ್ಟಿಕೊಂಡಿದ್ದಾರೆ. ಹೆಚ್ಚೇಕೆ, ಅಲ್ಲಿ ತುಳು ಭಾಷೆಗೂ ತನ್ನದೇ ಆದ ಸ್ಥಾನಮಾನವಿದೆ. ತುಳುನಾಡು ಎಂದೇ ಹೇಳಲಾಗುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯವರು ಹೋಟೆಲ್ ಉದ್ಯಮಗಳ ಮೂಲಕ ಮುಂಬೈನಲ್ಲಿ ಪ್ರಸಿದ್ಧರಾಗಿದ್ದಾರೆ. ಖ್ಯಾತ ಚಲನಚಿತ್ರ ನಟ, ನಟಿಯರು ಕರಾವಳಿ ಭಾಗದವರೇ ಆಗಿದ್ದಾರೆ. ಅಲ್ಲದೆ, ಮುಂಬೈ ಮೂಲಕ ವಿದೇಶಗಳಿಗೆ ತೆರಳುವವರೂ ಇದ್ದಾರೆ. ಹಿಂದೆಲ್ಲಾ ಮುಂಬೈನಲ್ಲಿ ಹೊಸ ಉಡುಗೆ, ತೊಡುಗೆಗಳು, ವಿನ್ಯಾಸಗಳು ಬಂತೆಂದರೆ, ಕರಾವಳಿಯಲ್ಲೂ ಅದು ಟ್ರೆಂಡ್ ಆಗುತ್ತಿತ್ತು. ಗ್ರೋಬಲೈಸೇಶನ್ ಆದ ಬಳಿಕ ಕಾಲ ಬದಲಾಗಿದೆ. ಆದರೆ ಮುಂಬೈ, ಮಂಗಳೂರು ನಂಟು ಮತ್ತಷ್ಟು ಬೆಸೆದಿದೆ. ಈಗಲೂ ಮುಂಬೈ ಮಂಗಳೂರು ರೈಲು ಹಾಗೂ ಬಸ್ಸುಗಳಿಗೆ ಭಾರೀ ಬೇಡಿಕೆ ಇದೆ. ಜತೆಗೆ ವಿಮಾನಯಾನ ಹೆಚ್ಚಳವಾಗಿರುವುದು ಮತ್ತಷ್ಟು ಹತ್ತಿರ ತಂದಿದೆ.
ವರದಿ: ಹರೀಶ ಮಾಂಬಾಡಿ, ಮಂಗಳೂರು