Mangaluru News: ಓದುವ ಕಾಳಜಿ, ಜಾಗೃತಿಯ ಕೊರತೆ ಮಧ್ಯೆ ಶಿಥಿಲವಾಯಿತು ಪುಸ್ತಕದ ಗೂಡು
Jul 22, 2024 12:30 PM IST
Mangaluru News: ಓದುವ ಕಾಳಜಿ, ಜಾಗೃತಿಯ ಕೊರತೆ ಮಧ್ಯೆ ಶಿಥಿಲವಾಯಿತು ಪುಸ್ತಕದ ಗೂಡು
- Pustaka Goodu Project : ಡಿಜಿಟಲ್ ಯುಗದಲ್ಲೂ ಪುಸ್ತಕ ಓದುವ ಪ್ರೀತಿ ಮೂಡಿಸುವ ಸಲುವಾಗಿ ಸಾರ್ವಜನಿಕ ಸ್ಥಳದಲ್ಲಿ ಪುಸ್ತಕದ ಗೂಡು ಕಟ್ಟಿದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯ ಕನಸು ಸಂಪೂರ್ಣವಾಗಿ ನನಸಾದಂತಿಲ್ಲ. (ವಿಶೇಷ ವರದಿ: ಹರೀಶ ಮಾಂಬಾಡಿ, ಮಂಗಳೂರು)
ಮಂಗಳೂರು: ಕೈಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವಿರುವ ಮೊಬೈಲ್ ಇರುವಾಗ ಮುದ್ರಿತ ಪತ್ರಿಕೆ, ಪುಸ್ತಕಗಳು ಯಾರಿಗೂ ಬೇಡ ಎನ್ನುವ ಆತಂಕ ಈಗ ಶಾಲೆ, ಕಾಲೇಜುಗಳ ಗ್ರಂಥಾಲಯಗಳನ್ನಷ್ಟೇ ಅಲ್ಲ, ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿರುವ ಸಾರ್ವಜನಿಕ ಗ್ರಂಥಾಲಯಗಳಲ್ಲೂ ಕಾಡುತ್ತಿದೆ. ಆದರೆ ಜನರಲ್ಲಿ ಮತ್ತೆ ಪುಸ್ತಕ ಓದುವ ಪ್ರೀತಿ ಮೂಡಿಸುವ ಸಲುವಾಗಿ ಸಾರ್ವಜನಿಕ ಸ್ಥಳದಲ್ಲಿ ಪುಸ್ತಕದ ಗೂಡು ಕಟ್ಟಿದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯ ಕನಸು ಸಂಪೂರ್ಣವಾಗಿ ಈಡೇರಿಲ್ಲ ಎಂಬುದು ಈ ಜಾಗಗಳನ್ನು ನೋಡಿದಾಗ ಗೊತ್ತಾಗುತ್ತದೆ. ತಂತ್ರಜ್ಞಾನ ಯುಗದಲ್ಲೂ ಓದುವ ಜಾಗೃತಿ ಮೂಡಿಸುವ ಪ್ರಯತ್ನಗಳೂ ಕಡಿಮೆಯಾದದ್ದೂ ಇದಕ್ಕೆ ಕಾರಣ.
ಯಾವುದೆಲ್ಲಾ ಗ್ರಾಮಗಳಲ್ಲಿ ಇದೆ?
ರಾಜ್ಯದಲ್ಲೇ ಮೊದಲ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುಸ್ತಕದ ಗೂಡು ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಲಾಗಿತ್ತು. ಗ್ರಾಮೀ ಣ ಪರಿಸರದಲ್ಲಿ ಜನರಿಗೆ ಪುಸ್ತಕ ಪ್ರೀತಿ ಬೆಳೆಸುವ ಸದುದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿತ್ತು. ಮಂಗಳೂರಿನ ಉಳಾಯಿಬೆಟ್ಟು ಗ್ರಾಮ ಪಂಚಾಯಿತಿಯಲ್ಲಿ ಈ ಕಲ್ಪನೆ ಪೈಲಟ್ ಯೋಜನೆಯಡಿ ಆರಂಭಗೊಂಡಿತ್ತು. ಎಲ್ಲ ಪುಸ್ತಕಗೂಡುಗಳಿಗೆ ತಗಲುವ ವೆಚ್ಚವನ್ನು ಆಯಾ ಗ್ರಾಪಂಗಳು ಮಾಡಬೇಕು, ಪ್ರತಿ ಗೂಡಿನಲ್ಲಿ ಕನಿಷ್ಠ 30 ಪುಸ್ತಕಗಳನ್ನು ಇಡಬೇಕು ಎಂಬ ಗುರಿ ಇಡಲಾಗಿತ್ತು.
ಮಂಗಳೂರು ತಾಲೂಕಿನ ಉಳಾಯಿಬೆಟ್ಟು, ಕೊಣಾಜೆ, ಬೆಳ್ಮ, ಬೆಳ್ತಂಗಡಿ ತಾಲೂಕಿನ ಅಳದಂಗಡಿ, ಬಂಟ್ವಾಳ ತಾಲೂಕಿನ ಕೊಳ್ನಾಡು, ಚೆನ್ನೈತೋಡಿ, ಅರಳ, ಪುತ್ತೂರು ತಾಲೂಕಿನ ಉಪ್ಪಿನಂಗಡಿ, ಕಬಕ, ಆರ್ಯಾಪು, ಕಡಬ ತಾಲೂಕಿನ ಸುಬ್ರಹ್ಮಣ್ಯ, ಆಲಂಕಾರು, ರಾಮಕುಂಜ, ಸುಳ್ಯ ತಾಲೂಕಿನ ಬೆಳ್ಳಾರೆ, ಮೂಡುಬಿದಿರೆ ತಾಲೂಕಿನ ಶಿರ್ತಾಡಿ, ತೆಂಕಮಿಜಾರು, ಪುತ್ತಿಗೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಪುಸ್ತಕದ ಗೂಡನ್ನು ಇಡಲಾಗಿತ್ತು.
ಪುಸ್ತಕ ಗ್ರಾಮಗಳನ್ನಾಗಿ ಬದಲಾಯಿಸಲು ಈ ಯೋಜನೆ
ಗ್ರಾಮೀಣ ಜನರಲ್ಲಿ ಅಕ್ಷರ ಪ್ರೀತಿ ಬೆಳೆಸಿ, ಪುಸ್ತಕದ ಗೂಡುಗಳ ಮೂಲಕ ಗ್ರಾಮವನ್ನೇ ಪುಸ್ತಕ ಗ್ರಾಮವನ್ನಾಗಿ ಬದಲಾಯಿಸುವ ಮಹತ್ವಾಕಾಂಕ್ಷೆಯ ಯೋಜನೆ ಇದು. ಬಸ್ ನಿಲ್ದಾಣ, ಅಂಚೆ ಕಚೇರಿ, ಗ್ರಾಮ ಪಂಚಾಯಿತಿ ಕಚೇರಿ, ಸಾರ್ವಜನಿಕ ಉದ್ಯಾನವನ, ಮಾರುಕಟ್ಟೆ ಪ್ರದೇಶಗಳಲ್ಲಿ ಗೂಡು ನಿರ್ಮಿಸಿ, ಪುಸ್ತಕಗಳನ್ನು ಇಟ್ಟು ಜನರಿಗೆ ಸುಲಭವಾಗಿ ಓದಲು ನೆರವಾಗುವ ಪರಿಕಲ್ಪನೆ ಇದರೊಳಗೆ ಅಡಗಿತ್ತು.
ಈಗ ಯಾವ ಸ್ಥಿತಿಯಲ್ಲಿದೆ ಗೂಡು?
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಮತ್ತು ಪುತ್ತೂರು ತಾಲೂಕಿನ ಗಡಿಭಾಗದ ಕಬಕ ಪೇಟೆಯ ಬಸ್ ನಿಲ್ದಾಣದಲ್ಲಿ ಇರುವ ಪುಸ್ತಕಗೂಡು ಸಂಪೂರ್ಣ ಅನಾಥವಾಗಿದೆ. ಸುಳ್ಯ ತಾಲೂಕಿನ ಬೆಳ್ಳಾರೆ ಮುಖ್ಯ ಪೇಟೆಯ ಬಸ್ ನಿಲ್ದಾಣ ದಲ್ಲಿರುವ ಪುಸ್ತಕ ಗೂಡು ಸಹಿತ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕೂಡ ಇದಕ್ಕಿಂತ ಪರಿಸ್ಥಿತಿ ಭಿನ್ನವಾಗಿಲ್ಲ ಗ್ರಾಮ ಪಂಚಾಯತಿ ಆಡಳಿತ ಮಂಡಳಿ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಪ್ರೋತ್ಸಾಹಿಸದೆ, ಕಾಳಜಿವಹಿಸದೆ ಇದ್ದರೆ ಗೂಡು ಸಮೃದ್ಧವಾಗುವುದು ಹೇಗೆ?
ಇದನ್ನೂ ಓದಿ: ಗೋಕರ್ಣದ ಅಶೋಕೆಯಲ್ಲಿ ಶ್ರೀ ರಾಘವೇಶ್ವರ ಸ್ವಾಮೀಜಿ ಅವರ 31ನೇ ಚಾತುರ್ಮಾಸ್ಯ ವ್ರತಾರಂಭ; ಅನಾವರಣ ಚಾತುರ್ಮಾಸ್ಯ ವಿಶೇಷ
ಓದುಗರು ಏನಂತಾರೆ?
ಬಸ್ಸು ತಂಗುದಾಣಗಳಲ್ಲಿ ಪ್ರಾರಂಭವಾದ "ಪುಸ್ತಕದ ಗೂಡು"ಎನ್ನುವುದು ಒಂದು ಸುಂದರ ಮತ್ತು ಉಪಯುಕ್ತ ಪರಿಕಲ್ಪನೆಯಾಗಿದೆ. ನಿಜಕ್ಕೂ ಆಸಕ್ತರಲ್ಲಿ ಓದುವ ಅಭಿರುಚಿಯನ್ನು ಹೆಚ್ಚಿಸಲು ಹಾಗೂ ಓದುವ ಆಸಕ್ತಿ ಮೂಡಿಸಲು ಈ ಕ್ರಿಯಾತ್ಮಕ ಪರಿಕಲ್ಪನೆ ಸಹಾಯಕ ಎನ್ನುವುದರಲ್ಲಿ ಅನುಮಾನವಿಲ್ಲ. ಇದನ್ನು ಇನ್ನಷ್ಟು ಸಕ್ರಿಯವಾಗಿಸಲು ಪುಸ್ತಕದ ಗೂಡು ಪ್ರಾರಂಭಿಸಿರುವ ಪ್ರತೀ ತಂಗುದಾಣದ ಸನಿಹ ಸಾಹಿತ್ಯಾಸಕ್ತ ಓದುಗರಿಗೆ ಉಸ್ತುವಾರಿ ವಹಿಸಿಕೊಡುವುದು ಸೂಕ್ತ ಎನಿಸುತ್ತದೆ ಎನ್ನುತ್ತಾರೆ ಗ್ರಾಮಸ್ಥರಾದ ವಿಷ್ಣು ಕನ್ನಡಗುಳಿ.
ಗ್ರಾಮೀಣ ಜನರಲ್ಲಿ ಅಕ್ಷರ ಪ್ರೀತಿ ಮೂಡಿಸುವ ಸಲುವಾಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆರಂಭಿಸಲಾದ 'ಪುಸ್ತಕಗೂಡು' ಎಂಬ ಪರಿಕಲ್ಪನೆ ಶ್ಲಾಘನೀಯ ಕಾರ್ಯ. ಬಸ್ ನಿಲ್ದಾಣಗಳಲ್ಲಿ, ಸಾರ್ವಜನಿಕ ಉದ್ಯಾನಗಳು, ಅಂಚೆ ಕಛೇರಿ, ಗ್ರಾಮ ಪಂಚಾಯತ್ ಕಛೇರಿಗಳಲ್ಲಿ ಸಣ್ಣದಾಗಿ ಪುಸ್ತಕಗಳು ಇಡಲು ಸಾಧ್ಯವಾಗುವಂತೆ ಗೂಡು ನಿರ್ಮಿಸಿ, ಕಥೆ, ಕವನ, ಕಾದಂಬರಿ ಮುಂತಾದ ಸಾಹಿತ್ಯಿಕ ಪುಸ್ತಕಗಳನ್ನು ಗೂಡಲ್ಲಿರಿಸಿ ಜನರಿಗೆ ಸುಲಭವಾಗಿ ಓದಲು ಸಿಗುವಂತಾಗಬೇಕು ಎಂಬ ಧ್ಯೇಯದಲ್ಲಿ ಇದು ಶುರುವಾಗಿತ್ತು. ಪುಸ್ತಕ ಓದಿನ ಬಗ್ಗೆ ಪ್ರೀತಿ ಗೌರವ ಇರುವ ಬಸ್ ಸ್ಟಾಂಡ್ ಸನಿಹದ ಅಂಗಡಿ ಹೋಟೆಲ್ ಮಾಲಕ/ಕೆಲಸಗಾರರಿಗೆ ಅಥವಾ ನಿತ್ಯ ತಂಗುದಾಣಕ್ಕೆ ಬಂದು ಪ್ರಯಾಣಿಸುವ ನಿರ್ದಿಷ್ಟ ಪುಸ್ತಕ ಪ್ರೇಮಿಗೆ ಜವಾಬ್ದಾರಿ ಕೊಟ್ಟರೆ ಕುಮಾರ್ ಅವರ ಕನಸಿನ ಪರಿಕಲ್ಪನೆ ಜೀವಂತಿಯಕೆಲ್ಲಿರುತ್ತದೆ ಎನ್ನುತ್ತಾರೆ ಸಾಹಿತಿ ವಿ. ಸುಬ್ರಹ್ಮಣ್ಯ ಭಟ್
ಓದುವ ಅಭಿಯಾನ ಶುರುವಾಗಲಿ
ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡಪರ ಸಂಘಟನೆಗಳು ಭಾಷೆಯನ್ನು ಜೀವಂತವಾಗಿ ಉಳಿಸಬೇಕು, ಜನರಲ್ಲಿ ಸಾಹಿತ್ಯಾಭಿರುಚಿ, ಓದುವ ಹವ್ಯಾಸವನ್ನು ಉದ್ದೀಪನಗೊಳಿಸಬೇಕು ಎಂಬ ಕಾಳಜಿ ಹೊಂದಿದ್ದರೆ, ತಮ್ಮ ವ್ಯಾಪ್ತಿಯಲ್ಲಿ ಇರುವ ಪುಸ್ತಕದ ಗೂಡುಗಳಲ್ಲಿ ಪುಸ್ತಕಗಳನ್ನು ಸಮೃದ್ಧವಾಗಿಸಬೇಕಲ್ಲದೆ, ವಾರಕ್ಕೊಮ್ಮೆ ಓದುವ ಕಾರ್ಯವನ್ನು ಮಾಡಬೇಕು. ಜನರಲ್ಲಿ ಓದುವ ಪರಿಪಾಠವನ್ನು ಬೆಳೆಸಲು ಕನ್ನಡಪರ ಕಾಳಜಿ ಇರುವವರೇ ಮುಂದೆ ಬಂದು ಅಭಿಯಾನದಂಥದ್ದನ್ನು ಮಾಡಿದರೆ, ಗೂಡು ಮಿನುಗಲು ಸಾಧ್ಯ.
(ವರದಿ: ಹರೀಶ ಮಾಂಬಾಡಿ, ಮಂಗಳೂರು)