Praveen Nettaru: ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳ ಶರಣಾಗತಿಗೆ ಡೆಡ್ಲೈನ್ ಅಂತ್ಯ: ಕಾರ್ಯಾಚರಣೆಗಿಳಿದ ಎನ್ಐಎ
Jul 02, 2023 05:48 PM IST
ಹತ್ಯೆಯಾಗಿದ್ದ ಪ್ರವೀಣ್ ನೆಟ್ಟಾರು
- Praveen Nettaru murder case: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳು ಜೂನ್ 30ರೊಳಗೆ ಶರಣಾಗಬೇಕು, ಇಲ್ಲವೇ ಆರೋಪಿಗಳ ಮನೆ, ಆಸ್ತಿ ಮುಟ್ಟುಗೋಲು ಹಾಕುವುದಾಗಿ ಸೂಚನೆ ನೀಡಲಾಗಿತ್ತು. ಧ್ವನಿವರ್ಧಕದ ಮೂಲಕ ಉದ್ಘೋಷಣೆ ಮಾಡಲಾಗಿತ್ತು. ಆದರೆ ಆರೋಪಿಗಳು ಶರಣಾಗಿಲ್ಲ.
ಮಂಗಳೂರು: ಕಳೆದ ವರ್ಷ ದುಷ್ಕರ್ಮಿಗಳಿಂದ ಭೀಕರವಾಗಿ ಹತ್ಯೆಗೊಳಗಾಗಿದ್ದ ಪ್ರವೀಣ್ ನೆಟ್ಟಾರು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎನ್.ಐ.ಎ. ಆರೋಪಿಗಳ ಶರಣಾಗತಿಗೆ ನೀಡಿದ ಗಡುವು ಜೂನ್ 30ರಂದು ಅಂತ್ಯಗೊಂಡಿದೆ. ಮನೆ ಮನೆಗೆ ಪೋಸ್ಟರ್, ಮೈಕ್ ನಲ್ಲಿ ಅನೌನ್ಸ್ ಮಾಡಿದರೂ ಆರೋಪಿಗಳು ಕೋರ್ಟಿಗೆ ಹಾಜರಾಗದ ಕಾರಣ ನೇರವಾಗಿ ಎನ್.ಐ.ಎ. ಅಧಿಕಾರಿಗಳು ಫೀಲ್ಡಿಗಿಳಿದಿದ್ದು, ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳು ಜೂನ್ 30ರೊಳಗೆ ಶರಣಾಗಬೇಕು, ಇಲ್ಲವೇ ಆರೋಪಿಗಳ ಮನೆ, ಆಸ್ತಿ ಮುಟ್ಟುಗೋಲು ಹಾಕುವುದಾಗಿ ಸೂಚನೆ ನೀಡಲಾಗಿತ್ತು. ಜತೆಗೆ ಧ್ವನಿವರ್ಧಕದ ಮೂಲಕ ಉದ್ಘೋಷಣೆ ಮಾಡಿದ್ದಲ್ಲದೆ, ಆರೋಪಿಗಳ ಮನೆಗಳಲ್ಲೂ ಭಿತ್ತಿಪತ್ರ ಹಚ್ಚುವ ಮೂಲಕ ಮಾಹಿತಿ ನೀಡಲಾಗಿತ್ತು. ಆದರೆ ಆರೋಪಿಗಳು ಶರಣಾಗಿಲ್ಲ.
ತಲೆಮರೆಸಿಕೊಂಡಿಕೊಂಡುವ ಆರೋಪಿಗಳ ಆಸ್ತಿ ಜಪ್ತಿ ಮಾಡಬಹುದು ಎನ್ನಲಾಗಿದ್ದರೂ ಇದಕ್ಕೂ ಸಮಯ ತಗಲುತ್ತದೆ. ಆರೋಪಿಯ ಹೆಸರಿನಲ್ಲಿರುವ ಚರಾಸ್ತಿ ಹಾಗೂ ಸ್ಥಿರಾಸ್ತಿಗಳ ಮಾಹಿತಿಯನ್ನು ಎನ್‌ಐಎ ಅಧಿಕಾರಿಗಳು ಕಂದಾಯ ಇಲಾಖೆ, ಬ್ಯಾಂಕ್‌ಗಳು ಮತ್ತಿತರ ಮೂಲಗಳಿಂದ ಸಂಗ್ರಹಿಸಿ, ಆರೋಪಿಗಳ ಹೆಸರಿನಲ್ಲಿರುವ ಆಸ್ತಿಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಬಳಿಕ ಆರೋಪಿಯದ್ದೇ ಆಸ್ತಿ ಎಂದು ದೃಢೀಕರಣಗೊಂಡಲ್ಲಿ ಮುಟ್ಟುಗೋಲು ಹಾಕಿಕೊಂಡು ಸರಕಾರದ ವಶಕ್ಕೆ ಪಡೆಯಯಬಹುದಾಗಿದೆ.
ಗಡುವು ಯಾವ ರೀತಿ ವಿಧಿಸಲಾಗಿತ್ತು?
"ರಾಷ್ಟ್ರೀಯ ತನಿಖಾ ಸಂಸ್ಥೆ ಎನ್.ಐ.ಎ., ಬೆಂಗಳೂರು ಇವರ ಪ್ರಕಟಣೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಮುಸ್ತಫಾ ಪೈಚಾರ್ ಮತ್ತು ಅಬುಬಕ್ಕರ್ ಸಿದ್ಧೀಕ್ ಅವರು ತಲೆಮರೆಸಿಕೊಂಡಿದ್ದು, ಇವರು ಬೆಳ್ಳಾರೆ ಗ್ರಾಮದವರಾಗಿರುತ್ತಾರೆ. ಇವರನ್ನು ಹುಡುಕಿಕೊಟ್ಟಲ್ಲಿ ತಲಾ 5 ಲಕ್ಷ ಮತ್ತು 2 ಲಕ್ಷ ರೂ ಬಹುಮಾನವನ್ನು ಎನ್.ಐ.ಎ.ವಿಶೇಷ ನ್ಯಾಯಾಲಯ ಘೋಷಣೆ ಮಾಡಿರುತ್ತದೆ. ಮುಸ್ತಫಾ ಪೈಚಾರ್ ಮತ್ತು ಅಬುಬಕ್ಕರ್ ಸಿದ್ಧೀಕ್ ರವರಿಗೆ ಇದೇ ತಿಂಗಳ 30ರಂದು ಬೆಂಗಳೂರಿನ ಎನ್.ಐ.ಎ. ವಿಶೇಷ ನ್ಯಾಯಾಲಯಕ್ಕೆ ಹಾಜರಾಗಲು ಸೂಚನೆ ನೀಡಲಾಗಿರುತ್ತದೆ. ತಪ್ಪಿದಲ್ಲಿ ಮುಂದಿನ ದಿನಮಾನಗಳಲ್ಲಿ ಆಸ್ತಿಗಳನ್ನು ಮುಟ್ಟುಗೋಲು ಹಾಕಲು ಆದೇಶಿಸಲಾಗಿರುತ್ತದೆ" ಎಂಬ ಸೂಚನೆಯನ್ನು ಸುಳ್ಯದಲ್ಲಿ ಎನ್.ಐ.ಎ. ಅಧಿಕಾರಿಗಳು ಆಟೋದಲ್ಲಿ ಧ್ವನಿವರ್ಧಕ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದರು. ಪ್ರವೀಣ್ ನೆಟ್ಟಾರು ಕೊಲೆ ಕೇಸ್ ಆರೋಪಿಗಳಾದ ಮುಸ್ತಫಾ ಪೈಚಾರ್ ಮತ್ತು ಅಬುಬಕ್ಕರ್ ಸಿದ್ಧೀಕ್ ಅವರು ಶರಣಾಗಿ, ಇಲ್ಲವೇ ಆಸ್ತಿ ಮುಟ್ಟುಗೋಲು ಸಹಿತ ಕಠಿಣ ಕ್ರಮಕ್ಕೆ ಸಜ್ಜಾಗಿ ಎಂಬ ಸೂಚನೆ ನೀಡಲಾಗಿತ್ತು.
ಆರೋಪಿಗಳ ಪತ್ತೆಗಾಗಿ ಬಹುಮಾನ ಘೋಷಿಸಿರುವ ಎನ್ಐಎ ತಲೆ ಮರೆಸಿಕೊಂಡಿರುವ ಆರೋಪಿಗಳ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಮುಸ್ತಫಾ ಪೈಚಾರ್, ಅಬುಬಕ್ಕರ್ ಸಿದ್ದಿಕ್, ಉಮ್ಮರ್ ಫಾರುಕ್, ತುಫೇಲ್, ಮಸೂದ್ ಅಗ್ನಾಡಿ ಸೇರಿದಂತೆ ಇನ್ನಿತರ ಪ್ರಮುಖ ಆರೋಪಿಗಳಿಗಾಗಿ ಎನ್.ಐ.ಎ. ತಲಾಶ್ ನಡೆಸುತ್ತಿದೆ.
ಕಳೆದ ವರ್ಷ ನಡೆದಿದ್ದ ಹತ್ಯೆ:
2022ರ ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆಯಾಗಿತ್ತು. ಬೆಳ್ಳಾರೆಯಿಂದ ಪೆರುವಾಜೆಗೆ ಹೋಗುವ ಕ್ರಾಸ್ ಬಳಿ ಕೋಳಿ ಮಾಂಸದಂಗಡಿ ಹೊಂದಿರುವ ಪ್ರವೀಣ್ ನೆಟ್ಟಾರು ಅವರು ಜುಲೈ 26ರ ರಾತ್ರಿ ಅಂಗಡಿಗೆ ಬಾಗಿಲು ಹಾಕುತ್ತಿರುವಾಗ ಬೈಕೊಂದರಲ್ಲಿ ಮೂವರು ದುಷ್ಕರ್ಮಿಗಳು ಬಂದು ಮಾರಾಕಾಸ್ತ್ರಗಳಿಂದ ಏಕಾಏಕೆ ದಾಳಿ ಮಾಡಿ ಹತ್ಯೆ ಮಾಡಿದ್ದರು.
ಪ್ರಕರಣ ಸಂಬಂಧ ಈವರೆಗೆ 15 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಇನ್ನೂ ಕೆಲವರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಬಲೆ ಬೀಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 20 ಆರೋಪಿಗಳ ವಿರುದ್ಧ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ 1,500 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ಆರೋಪಿಗಳಿಗೆ ಪಿಎಫ್‌ಐ ಜತೆ ನಂಟು ಇರುವ ಕುರಿತು ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಆ ದೃಷ್ಟಿಯಲ್ಲಿ ತನಿಖೆ ಸಾಗಿತ್ತು.
ವರದಿ: ಹರೀಶ ಮಾಂಬಾಡಿ, ಮಂಗಳೂರು