logo
ಕನ್ನಡ ಸುದ್ದಿ  /  ಕರ್ನಾಟಕ  /  Mangaluru News: ಪೆರುವಾಯಿ ನಾರಾಯಣ ಶೆಟ್ಟಿ ನಿಧನ; ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ, ರಾಜವೇಷ ನಿಪುಣ

Mangaluru News: ಪೆರುವಾಯಿ ನಾರಾಯಣ ಶೆಟ್ಟಿ ನಿಧನ; ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ, ರಾಜವೇಷ ನಿಪುಣ

HT Kannada Desk HT Kannada

Jan 24, 2024 11:49 AM IST

google News

ಪೆರುವಾಯಿ ನಾರಾಯಣ ಶೆಟ್ಟಿ

    • ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ, ಯಕ್ಷರಂಗದ ರಾಜ ಎಂದೇ ಖ್ಯಾತಿ ಪಡೆದ ಪೆರುವಾಯಿ ನಾರಾಯಣ ಶೆಟ್ಟಿ ಇಂದು ನಿಧನರಾಗಿದ್ದಾರೆ. ಇವರಿಗೆ 82 ವರ್ಷ ವಯಸ್ಸಾಗಿತ್ತು. ಧರ್ಮಸ್ಥಳ ಮೇಳ ಸೇರಿದಂತೆ ತೆಂಕುತಿಟ್ಟಿನ ವಿವಿಧ ಮೇಳಗಳಲ್ಲಿ ಇವರು ಮುಖ್ಯಪಾತ್ರಧಾರಿಯಾಗಿದ್ದರು.
ಪೆರುವಾಯಿ ನಾರಾಯಣ ಶೆಟ್ಟಿ
ಪೆರುವಾಯಿ ನಾರಾಯಣ ಶೆಟ್ಟಿ

ಮಂಗಳೂರು: ತೆಂಕುತಿಟ್ಟು ಯಕ್ಷಗಾನದ ಕಿರೀಟವೇಷಗಳಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ, ವೈಶಿಷ್ಟ್ಯಪೂರ್ಣ ನಾಟಕೀಯ ವೇಷಗಳಿಂದ ಯಕ್ಷಲೋಕದಲ್ಲಿ ಮೆರೆದ ಪೆರುವಾಯಿ ನಾರಾಯಣ ಶೆಟ್ಟಿಯವರು ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 82 ವರ್ಷಗಳಾಗಿತ್ತು.

ಮೃತರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಹೊಂದಿದ್ದಾರೆ. ಬಾಕ್ರಬೈಲು ಪಾತೂರಿನಲ್ಲಿ ನೆಲೆಸಿದ್ದ, ನಾರಾಯಣ ಶೆಟ್ಟರು ಕೃಷಿಯೊಂದಿಗೆ ಯಥಾಸಾಧ್ಯ ಕಲಾಸೇವೆ ಮಾಡಿದ್ದಾರೆ.

ಶಿಸ್ತುಬದ್ಧ ನಾಟ್ಯ, ಅಭಿನಯ, ಅರ್ಥಗಾರಿಕೆ, ಯಕ್ಷಗಾನ ರಾಜವೇಷದ ಬಹುಮುಖಗಳನ್ನು ಪ್ರಕಟಿಸಬಲ್ಲ ಗೌರವಾರ್ಹ ನಾರಾಯಣ ಶೆಟ್ಟರನ್ನು ಅನೇಕ ಸಂಘಸಂಸ್ಥೆಗಳು ಅಭಿನಂದಿಸಿವೆ. ಉಡುಪಿಯ ತುಳುಕೂಟ ಈ ವರ್ಷದ ರಾಮದಾಸ ಸಾಮಗ ನೆಂಪುದ ಪ್ರಶಸ್ತಿಯೂ ಸೇರಿದಂತೆ ಕರ್ನಾಟಕ ಯಕ್ಷಗಾನ ಅಕಾಡೆಮಿ, ಬಂಟರ ಸಂಘ ಬೆಂಗಳೂರು, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮಾನ, ಕಲಾರಂಗ ಉಡುಪಿಯ ಗೌರವ, ಅಖೀಲ ಭಾರತ ತುಳು ಕೂಟ, ಕಾವೂರು ವತಿಯಿಂದ ಸಮ್ಮಾನ, ಯಕ್ಷಸಿಂಧೂರ ವಿಟ್ಲ ಇವರಿಂದ ಸಮ್ಮಾನ ನಡೆದಿದೆ

ಯಕ್ಷಗಾನದ ಆಕರ್ಷಕ್ಕೊಳಗಾಗಿ ತೆಂಕುತಿಟ್ಟು ಯಕ್ಷಗಾನವನ್ನು ಅಭ್ಯಾಸ ಮಾಡಿದ ಪೆರುವಾಯಿ ನಾರಾಯಣ ಶೆಟ್ಟರು ತಮ್ಮ 12ನೇ ವಯಸ್ಸಿನಲ್ಲಿಯೇ ರಂಗಸ್ಥಳ ಪ್ರವೇಶ ಮಾಡಿದವರು.

ಶುದ್ಧ ತೆಂಕುತಿಟ್ಟು ಶೈಲಿಯ ನಾಟ್ಯ, ಅಭಿನಯ, ಮಾತುಗಾರಿಕೆಯಿಂದ ಯಕ್ಷರಂಗದ ರಾಜ ಎಂದೇ ಮೆರೆದವರು‌. ಇವರ ರಕ್ತಬೀಜ, ಋತುಪರ್ಣ, ಹಿರಣ್ಯಾಕ್ಷ, ಶಿಶುಪಾಲ, ಕೌರವ, ಕರ್ಣ, ಅರ್ಜುನ, ಅತಿಕಾಯ, ಇಂದ್ರಜಿತು ಮುಂತಾದ ಕಿರೀಟ ವೇಷಗಳು, ಕಂಸ, ಹಿರಣ್ಯಕಶ್ಯಪ, ಸುಂದರ ರಾವಣ, ಅರುಣಾಸುರ ಮುಂತಾದ ನಾಟಕೀಯ ವೇಷ ಸೇರಿದಂತೆ ಜಾಬಾಲಿ, ಹನೂಮಂತ ಪಾತ್ರಗಳನ್ನು ರಂಗದಲ್ಲಿ ಮೆರೆಯಿಸಿದವರು‌. ತುಳು ಪ್ರಸಂಗಗಳ ಪಾತ್ರನಿರ್ವಹಣೆಯಲ್ಲೂ ವೈಶಿಷ್ಟ್ಯತೆ ಮೆರೆದ ಇವರ ಕೋಟಿ, ದೇವುಪೂಂಜ ಮುಂತಾದ ಪಾತ್ರಗಳು ಬಹಳ ಪ್ರಸಿದ್ಧವೆನಿಸಿತ್ತು.

ಕುಂಡಾವು, ಧರ್ಮಸ್ಥಳ, ಕರ್ನಾಟಕ, ಪೊಳಲಿ ರಾಜರಾಜೇಶ್ವರಿ ಮೇಳ, ಕದ್ರಿ, ಕುಂಬಳೆ, ಕುಂಟಾರು, ಕಟೀಲು ತೆಂಕುತಿಟ್ಟಿ ವಿವಿಧ ಯಕ್ಷಗಾನ ಮೇಳಗಳಲ್ಲಿ ತಿರುಗಾಟ ಮಾಡಿದವರು. ಬಂಟ್ವಾಳ ತಾಲೂಕು ಪೆರುವಾಯಿಯಲ್ಲಿ ಜನಿಸಿದ್ದ ಇವರು ಕಟೀಲು ಮೇಳವೊಂದರಲ್ಲಿಯೇ 23 ವರ್ಷ ತಿರುಗಾಟ ಮಾಡಿದ್ದರು. ಸದ್ಯ ಬಾಕ್ರಬೈಲು ಪಾತೂರಿನಲ್ಲಿ ನೆಲೆಸಿದ್ದ ಇವರು ಮಂಗಳವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.

(This copy first appeared in Hindustan Times Kannada website. To read more like this please logon to kannada.hindustantime.com )

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ