logo
ಕನ್ನಡ ಸುದ್ದಿ  /  ಕರ್ನಾಟಕ  /  ಉತ್ತರ ಗೋವಾದ ಬ್ರಾಹ್ಮಿ ಶಾಸನ ಮರುಅಧ್ಯಯನ; ಯೂಪಸ್ತಂಭದಲ್ಲಿರುವ ಹೈಹಯ ರಾಜಮನೆತನದ ವಿಚಾರ ಬೆಳಕಿಗೆ

ಉತ್ತರ ಗೋವಾದ ಬ್ರಾಹ್ಮಿ ಶಾಸನ ಮರುಅಧ್ಯಯನ; ಯೂಪಸ್ತಂಭದಲ್ಲಿರುವ ಹೈಹಯ ರಾಜಮನೆತನದ ವಿಚಾರ ಬೆಳಕಿಗೆ

Umesh Kumar S HT Kannada

Jul 02, 2024 09:39 AM IST

google News

ಉತ್ತರ ಗೋವಾದ ಬ್ರಾಹ್ಮಿ ಶಾಸನ ಮರುಅಧ್ಯಯನ; ಯೂಪಸ್ತಂಭದಲ್ಲಿರುವ ಹೈಹಯ ರಾಜಮನೆತನದ ವಿಚಾರ ಬೆಳಕಿಗೆ

  • ಉತ್ತರ ಗೋವಾದ ಬ್ರಾಹ್ಮಿ ಶಾಸನ ಮರುಅಧ್ಯಯನ ನಡೆಸಿದ ಇತಿಹಾಸ ಸಂಶೋಧಕರಿಗೆ ಮಹತ್ವದ ವಿಚಾರ ಗಮನಸೆಳೆದಿದೆ. ಪರ್ಯೆಯ ಭೂಮಿಕಾದೇವಿ ದೇವಾಲಯದ ಎದುರು ಇರುವಂತಹ ಯೂಪಸ್ತಂಭದಲ್ಲಿರುವ ಹೈಹಯ ರಾಜಮನೆತನದ ವಿಚಾರ ಬೆಳಕಿಗೆ ಬಂದಿದೆ. ಇದು ಈಗ ಇತಿಹಾಸ ವಲಯದಲ್ಲಿ ಚರ್ಚೆಯ ವಿಷಯವಾಗಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಉತ್ತರ ಗೋವಾದ ಬ್ರಾಹ್ಮಿ ಶಾಸನ ಮರುಅಧ್ಯಯನ; ಯೂಪಸ್ತಂಭದಲ್ಲಿರುವ ಹೈಹಯ ರಾಜಮನೆತನದ ವಿಚಾರ ಬೆಳಕಿಗೆ
ಉತ್ತರ ಗೋವಾದ ಬ್ರಾಹ್ಮಿ ಶಾಸನ ಮರುಅಧ್ಯಯನ; ಯೂಪಸ್ತಂಭದಲ್ಲಿರುವ ಹೈಹಯ ರಾಜಮನೆತನದ ವಿಚಾರ ಬೆಳಕಿಗೆ

ಉಡುಪಿ: ಗೋವಾ ರಾಜ್ಯದ ಬ್ರಾಹ್ಮಿ ಶಾಸನದಲ್ಲಿ ಹೊಸ ರಾಜಮನೆತನದ ವಿಷಯವೊಂದು ಬೆಳಕಿಗೆ ಬಂದಿದೆ ಎಂದು ಉಡುಪಿಯ ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವ ಇತಿಹಾಸ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕ ಪ್ರೊ. ಟಿ. ಮುರುಗೇಶಿ ಹೇಳಿದ್ದಾರೆ.

ಗೋವಾ ರಾಜ್ಯದ ಉತ್ತರ ಗೋವಾದ ಸತ್ತಾರಿ ತಾಲೂಕಿನ ಸತ್ತಾರಿ ಸಮೀಪ ಇರುವ ಪರ್ಯೆಯ ಪಾಳು ಬಿದ್ದಿರುವ ಭೂಮಿಕಾದೇವಿ ದೇವಾಲಯದ ಎದುರು ಒಂದು ಕಲ್ಲಿನ ಸ್ತಂಭವೊಂದನ್ನು ನಿಲ್ಲಿಸಲಾಗಿದ್ದು ಆ ಸ್ತಂಭದ ಮೇಲೆ ಬ್ರಾಹ್ಮಿಲಿಪಿಯ ಶಾಸನವೊಂದು ಇತ್ತೀಚಿಗೆ ಪುರಾತತ್ತ್ವ ಅನ್ಷೇಷಣೆಯನ್ನು ಕೈಗೊಂಡ ಸಂದರ್ಭ ಕಂಡುಬಂದಿತ್ತು. ಈ ಶಾಸನವನ್ನು ಬ್ರಾಹ್ಮಿಲಿಪಿ ಮತ್ತು ಸಂಸ್ಕೃತ ಬಾಷೆಯಲ್ಲಿ ಬರೆಯಲಾಗಿದೆ. ಕೇವಲ ಎರಡು ಸಾಲಿನ ಈ ಶಾಸನ ಗೋವಾದ ಇತಿಹಾಸ ಮತ್ತು ಸಂಸ್ಕೃತಿಯ ಅಧ್ಯಯನದಲ್ಲಿ ಬಹಳ ಮಹತ್ವದ್ದಾಗಿದೆ ಎಂದು ಅವರು ತಿಳಿಸಿದ್ದಾರೆ.

ಶಾಸನ ಅಧ್ಯಯನದ ಹಿನ್ನೋಟ ಮತ್ತು ಮಹತ್ವ

ಈ ಶಾಸನವನ್ನು ಅಧ್ಯಯನ ಮಾಡುವ ಸಂದರ್ಭದಲ್ಲಿ, ಗೋವಾದ ಮಾಜಿ ಮುಖ್ಯಮಂತ್ರಿ ಪ್ರತಾಪ್‌ಸಿಂಗ್ ರಾವ್ ರಾಣೆಯವರು 1993ರಲ್ಲಿ ಈ ಶಾಸನವನ್ನು ಗುರುತಿಸಿ, ಗೋವಾ ರಾಜ್ಯದ ಪುರಾತತ್ತ್ವ ಇಲಾಖೆಯ ನಿರ್ದೇಶಕರಾಗಿದ್ದ ಡಾ. ಪಿ.ಪಿ. ಶಿರೋಡ್ಕರ್ ರವರ ಗಮನಕ್ಕೆ ತಂದಿದ್ದರು. ಆ ಶಾಸನವನ್ನು ಅಧ್ಯಯನ ಮಾಡಿದ ಶಿರೋಡ್ಕರ್‌ರವರು ಶಾಸನ ಪಡಿಯಚ್ಚಿನಿಂದಾಗಿ ಆ ಸ್ತಂಭದ ಮೇಲೆ ಕೊರೆಯಲಾಗಿದ್ದ ಎಲ್ಲಾ ಅಕ್ಷರಗಳನ್ನು ಗುರುತಿಸಲು ಸಾದ್ಯವಾಗದೆ ಅಪೂರ್ಣ ಪಠ್ಯವೊಂದನ್ನು ಗೋವಾದ ಸ್ಥಳೀಯ ನವೆ ಪರ್ವ ಎಂಬ ಪತ್ರಿಕೆಯಲ್ಲಿ ಒಂದು ಕಿರು ಬರಹವನ್ನು ಪ್ರಕಟಿಸಿದ್ದರು. ಅವರ ಓದಿನ ಪಠ್ಯವನ್ನು ಶಾಸನದೊಂದಿಗೆ ಮರು ಪರಿಶೀಲಿಸಿದಾಗ ಅದು ಸಂಪೂರ್ಣ ದೋಷಪೂರಿತವಾಗಿದೆ ಎಂದು ಕಂಡುಬಂದಿತ್ತು.

ಶಾಸನದ ಮರುಪರಿಶೀಲನೆಯಿಂದ, ಪ್ರಾಚೀನ ಕಾಲದಲ್ಲಿ ಗೋವಾವನ್ನು ಆಳ್ವಿಕೆ ಮಾಡಿದ ಹೈಹಯ ಎಂಬ ಒಂದು ಹೊಸ ರಾಜಮನೆತನ ಬೆಳಕಿಗೆ ಬಂದಿತು. ಶಾಸನದ ಪ್ರಕಾರ ಧರ್ಮಯಜ್ಞೋ ಎಂಬ ಹೆಸರಿನ ಹೈಹಯ ದೊರೆ ತನ್ನ ಸೈನ್ಯದೊಂದಿಗೆ ಒಂದು ಯಜ್ಞವನ್ನು ನಡೆಸಿದ ಅಪೂರ್ವ ಮಾಹಿತಿಯನ್ನು ಶಾಸನ ಒಳಗೊಂಡಿದೆ ಹಾಗೂ ಶಾಸನೋಕ್ತ ಈ ಸ್ತಂಭವೇ ಯೂಪಸ್ತಂಭವಾಗಿದೆ. ಲಿಪಿ ಲಕ್ಷಣದ ಆಧಾರದ ಮೇಲೆ ಶಾಸನದ ಕಾಲವನ್ನು 4 ಅಥವಾ 5 ನೇ ಶತಮಾನದ ಶಾಸನವೆಂದು ಗುರುತಿಸಲಾಗಿದೆ. ಪರ್ಯೆ ಭೂಮಿಕಾ ದೇವಾಲಯದ ಪ್ರಾಚೀನತೆಯ ಅಧ್ಯಯನ ದೃಷ್ಠಿಯಿಂದ ಈ ಶಾಸನ ಬಹಳ ಮುಖ್ಯ ದಾಖಲೆಯಾಗಿದೆ ಎಂದು ಪ್ರೊ.ಟಿ.ಮುರುಗೇಶಿಯವರು ತಿಳಿಸಿರುತ್ತಾರೆ.

ಹೈಹಯರು ಯಾರು?

ಹೈಹಯರು, ಭಾರತದ ಪುರಾಣಗಳು ಹಾಗೂ ಮಹಾಕಾವ್ಯಗಳಾದ ಮಹಾಭಾರತ ಮತ್ತು ರಾಮಾಯಣಗಳಲ್ಲಿ ಉಲ್ಲೇಖಿತವಾಗಿರುವ ಐದು ಕುಲಗಳನ್ನು ಒಳಗೊಂಡಿರುವ ಪ್ರಾಚೀನವಾದ ಒಂದು ಒಕ್ಕೂಟ. ವಿತಿಹೋತ್ರ, ಶರ್ಯತ, ಭೋಜ, ಆವಂತಿ ತುಂಡಿಕೇರ ಎಂಬ ಐದು ಹೈಹಯ ಕುಲಗಳನ್ನು ಪುರಾಣಗಳಲ್ಲಿ ಹೆಸರಿಸಲಾಗಿದೆ. ಭೋಜರು ಗೋವಾದಲ್ಲಿ ಆಳ್ವಿಕೆ ನಡೆಸುತ್ತಿದ್ದರು ಎಂಬುದಕ್ಕೆ ಇತರೆ ಐತಿಹಾಸಿಕ ದಾಖಲೆಗಳಿವೆ.

ಈ ಶಾಸನಾಧ್ಯಯನದಲ್ಲಿ ನೆರವಿತ್ತ ಭಾರತೀಯ ಪುರಾತತ್ತ್ವ ಸರ್ವೇಕ್ಷಣಾ ಇಲಾಖೆಯ ಶಾಸನಶಾಸ್ತ್ರ ವಿಭಾಗದ ನಿರ್ದೇಶಕರಾದ ಡಾ.ಮುನಿರತ್ನಂ ರೆಡ್ಡಿ ಅವರಿಗೂ, ಗೋವಾದಲ್ಲಿನ ಪುರಾತತ್ತ್ವ ಸರ್ವೇಕ್ಷಣೆಯಲ್ಲಿ ನನಗೆ ಸಹಕರಿಸಿದ ಡಾ.ರಾಜೇಂದ್ರ ಕೇರ್ಕರ್, ವಿಠೋಭ ಗಾವಡೆ, ಚಂದ್ರಕಾಂತ್ ಔಖಲೆ, ಅಮೈ ಕಿಂಜ್‌ವಾಡೇಕರ್ ರವರಿಗೆ ನಾನು ಋಣಿಯಾಗಿರುತ್ತೇನೆ ಎಂದವರು ಹೇಳಿದ್ದಾರೆ.

(ವರದಿ - ಹರೀಶ ಮಾಂಬಾಡಿ, ಮಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ