ಮಂಗಳೂರಿಗರ ಗಮನಕ್ಕೆ, ತುಂಬೆ ಡ್ಯಾಂಗೆ ಒಳಹರಿವು ಬಹುತೇಕ ಸ್ಥಗಿತ, ನೀರು ಮಿತವಾಗಿ ಬಳಸಿ; ಸ್ಥಳೀಯಾಡಳಿತದ ಮನವಿ
Feb 27, 2024 09:01 AM IST
ಮಂಗಳೂರಿಗರ ಗಮನಕ್ಕೆ, ತುಂಬೆ ಡ್ಯಾಂಗೆ ಒಳಹರಿವು ಬಹುತೇಕ ಸ್ಥಗಿತ ವಾಗಿದ್ದು ನೀರು ಮಿತವಾಗಿ ಬಳಸಿ ಎಂದು ಸ್ಥಳೀಯಾಡಳಿತ ಮನವಿ ಮಾಡಿದೆ. ಚಿತ್ರದಲ್ಲಿ- ಮಂಗಳೂರು ನಗರಕ್ಕೆ ಈ ವರ್ಷದ ಬೇಸಿಗೆಯಲ್ಲಿ ಕುಡಿಯುವ ನೀರಿನ ಸರಬರಾಜಿನಲ್ಲಿ ತೊಂದರೆಯಾಗುವುದನ್ನು ತಡೆಯುವ ಉದ್ದೇಶದಿಂದ ಆಯುಕ್ತರ ಸೂಚನೆಯಂತೆ ಮುಂಜಾಗೃತ ಕ್ರಮವಾಗಿ ತುಂಬೆ ಅಣೆಕಟ್ಟಿನ ಕೆಳಭಾಗದಿಂದ ನೀರನ್ನು ಡ್ಯಾಮ್ ಗೆ ಪಂಪ್ ಮಾಡಲು ಹೆಚ್ಚುವರಿಯಾಗಿ ಪಂಪ್ ಗಳನ್ನು ಅಳವಡಿಸುತ್ತಿರುವುದನ್ನು ಆಯುಕ್ತರು ಪರಿವೀಕ್ಷಿಸಿದರು, ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ತುರ್ತು ಕಾಮಗಾರಿಯನ್ನು ಬೇಗ ಪೂರ್ಣಗೊಳಿಸಲು ಸೂಚಿಸಿದರು
ಮಂಗಳೂರಿಗರ ಗಮನಕ್ಕೆ, ತುಂಬೆ ಡ್ಯಾಂಗೆ ಒಳಹರಿವು ಬಹುತೇಕ ಸ್ಥಗಿತವಾಗಿದೆ. ಆದ್ದರಿಂದ ನೀರು ಮಿತವಾಗಿ ಬಳಸಿ ಎಂದು ಸ್ಥಳೀಯಾಡಳಿತ ಮನವಿ ಮಾಡಿದೆ. ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಈ ಸಂದೇಶ ನೀಡಿದ್ದು, ಮುಂಜಾಗರೂಕತೆ ವಹಿಸಬೇಕಾದ ಸನ್ನಿವೇಶ ಎಂಬ ಎಚ್ಚರಿಕೆ ಘಂಟೆಯಂತೆ ಇದೆ.
(ವರದಿ: ಹರೀಶ ಮಾಂಬಾಡಿ, ಮಂಗಳೂರು)
ಮಂಗಳೂರು: “ಮುಂಗಾರು-ಹಿಂಗಾರು ಈ ಬಾರಿ ಕಡಿಮೆಯಾದ ಕಾರಣ, ನೀರಿನ ಒಳಹರಿವು ಈಗ ಬಹುತೇಕ ನಿಂತಿದೆ. ಕುಡಿಯುವ ನೀರು ವ್ಯರ್ಥ ಪೋಲಾಗದಂತೆ ಪ್ರತಿಯೊಬ್ಬರೂ ಜಾಗೃತಿ ವಹಿಸಬೇಕು. ನಗರಕ್ಕೆ ನೀರು ನಿರ್ವಹಣೆಯನ್ನು ಸಮರ್ಪಕಗೊಳಿಸುವುದರೊಂದಿಗೆ ಮುಂಜಾಗರೂಕತ ಕ್ರಮವಾಗಿ ಈ ಬಾರಿಯೂ ತುಂಬೆ ಡ್ಯಾಂ ಕೆಳಭಾಗದಲ್ಲಿರುವ ನೀರನ್ನು ಪಂಪಿಂಗ್ ಮೂಲಕ ಮೇಲೆತ್ತುವ ಚಿಂತನೆ ನಡೆದಿದೆ.”
ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೀಗೊಂದು ಸಂದೇಶ ನೀಡುವುದರೊಂದಿಗೆ ಸುಮಾರು 7 ಲಕ್ಷದಷ್ಟಿರುವ ಮಂಗಳೂರಿನ ಜನತೆ ನೀರನ್ನು ಮಿತವಾಗಿ ಬಳಸಬೇಕು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.
ಮಂಗಳೂರು ನಗರಕ್ಕೆ ನೀರು ಪೂರೈಸುವ ತುಂಬೆ ಡ್ಯಾಂ ಎಲ್ಲಿದೆ
ಮಂಗಳೂರಿನಿಂದ ಇಪ್ಪತ್ತು ಕಿ.ಮೀ. ದೂರದಲ್ಲಿ ತುಂಬೆ ಡ್ಯಾಂ ಇದೆ. ಇಲ್ಲಿಂದ ಪೈಪ್ ಲೈನ್ ಮೂಲಕ ನೀರನ್ನು ಶುದ್ಧೀಕರಿಸಿ ಮಂಗಳೂರಿಗೆ ಕಳುಹಿಸಲಾಗುತ್ತದೆ. ನೇತ್ರಾವತಿ ನದಿಗೆ ಅಲ್ಲಲ್ಲಿ ಡ್ಯಾಂ ಹಾಕಲಾಗಿದೆ. ಕುಡಿಯುವ ನೀರಿಗೆಂದು ತುಂಬೆಯಲ್ಲಿ ಕಟ್ಟಲಾದ ಡ್ಯಾಂನಲ್ಲಿ ಏಳು ಮೀಟರ್ ಎತ್ತರಕ್ಕೆ ನೀರು ಸಂಗ್ರಹಿಸಬಹುದು. ಸದ್ಯಕ್ಕೆ 6 ಮೀಟರ್ ಎತ್ತರದಲ್ಲಿ ನೀರು ಸಂಗ್ರಹವಾಗಿದೆ. ಮೇಲ್ನೋಟಕ್ಕೆ ನೀರಿನ ಕೊರತೆ ಇಲ್ಲ ಎಂಬಂತೆ ಕಂಡುಬಂದರೂ ನೀರಿನ ಒಳಹರಿವು ಕಡಿಮೆಯಾಗುತ್ತಿದೆ. ಹೀಗಾಗಿ ಈ ನೀರು ಕಡಿಮೆಯಾಗಲು ಹೆಚ್ಚು ದಿನ ಬೇಕಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಪರ್ಯಾಯ ವ್ಯವಸ್ಥೆಗೆ ಮಂಗಳೂರು ಮಹಾನಗರಪಾಲಿಕೆ (ಮನಪಾ) ಮುಂದಾಗಿದೆ.
ಹರೇಕಳ ಡ್ಯಾಂ ಶೇಖರಣೆ ನೀರು ಆಶ್ರಯ
ಮಂಗಳೂರು ನಗರ ಸೇರಿದಂತೆ ಗ್ರಾಮಾಂತರ ಭಾಗಕ್ಕೆ ನೀರು ಪೂರೈಸುವ ತುಂಬೆ ವೆಂಟೆಡ್ ಡ್ಯಾಂ ಒಳಹರಿವು ಸ್ಥಗಿತಗೊಂಡ ಕಾರಣ, ಹರೇಕಳ ಎಂಬಲ್ಲಿ ನಿರ್ಮಿಸಲಾದ ಡ್ಯಾಂನಲ್ಲಿ ನೀರು ಸಂಗ್ರಹಿದ್ದನ್ನು ತುಂಬೆ ಡ್ಯಾಂಗೆ ಪಂಪಿಂಗ್ ಮಾಡಲು ತೀರ್ಮಾನಿಸಲಾಗಿದೆ.
ಬಂಟ್ವಾಳ, ಸರಪಾಡಿ ಭಾಗದಿಂದ ತುಂಬೆ ಡ್ಯಾಂಗೆ ಒಳಹರಿವು ಸ್ಥಗಿತಗೊಂಡ ಕಾರಣ, ಡ್ಯಾಂನ ಗೇಟ್ ಗಳನ್ನು ಹಾಕಲಾಗಿದೆ. ಇನ್ನೊಂದೆಡೆ ಬಿಸಿಲ ಕಾವು ಏರುತ್ತಿದ್ದು, ನದಿಯಲ್ಲೂ ನೀರಿನ ಪ್ರಮಾಣ ಕುಸಿತವಾಗುತ್ತಿದೆ. ಮುಂದಿನ ದಿನಗಳಲ್ಲಿ ನಗರಕ್ಕೆ ನೀರು ಸಮರ್ಪಕವಾಗಿ ನಿರ್ವಹಣೆ ಮಾಡುವ ಉದ್ದೇಶದಿಂದ ಮುಂದಿನ ವಾರದಿಂದಲೇ ಹರೇಕಳ ಡ್ಯಾಂ ಕಡೆಯಿಂದ ಪಂಪ್ ಮೂಲಕ ನೀರೆತ್ತುವ ಚಿಂತನೆ ಮಾಡಲಾಗುತ್ತಿದ್ದು, ಇದಕ್ಕಾಗಿ ಪಂಪ್ ಅಳವಡಿಕೆ ಕಾರ್ಯ ನಡೆಯುತ್ತಿದೆ.
ಕಳೆದ ವರ್ಷ (2023 ರಲ್ಲಿ) ನೀರಿನ ಅಭಾವ ಎದುರಾಗಿದ್ದ ಸಂದರ್ಭ 13 ಪಂಪ್ ಬಳಕೆ ಮಾಡಿ, ತುಂಬೆ ಡ್ಯಾಂನ ಕೆಳಭಾಗದ ಹರೇಕಳ ಡ್ಯಾಂನಲ್ಲಿ ಸಂಗ್ರಹವಾದ ನೀರನ್ನು ಮೇಲೆತ್ತಲಾಗುತ್ತಿತ್ತು. ಈ ಮಧ್ಯೆ ಎರಡು ದಿನಕ್ಕೊಮ್ಮೆ ರೇಶನಿಂಗ್ ಮಾಡಿ ಮಂಗಳೂರಿನ ನೀರಿನ ಬವಣೆ ನೀಗಿಸುವ ಪ್ರಯತ್ನ ಮಾಡಲಾಗಿತ್ತು. ಅದೇ ಮಾದರಿಯನ್ನು ಈ ಬಾರಿಯೂ ಮಾಡುವ ಕುರಿತು ಅಧಿಕಾರಿಗಳ ಮಟ್ಟದಲ್ಲಿ ಚಿಂತನೆ ನಡೆಯುತ್ತಿದ್ದು, ಯಾವಾಗ ರೇಶನಿಂಗ್ ಆರಂಭಗೊಳ್ಳುತ್ತದೆ ಎಂಬುದು ಕಾದು ನೋಡಬೇಕಾಗಿದೆ. ಸದ್ಯಕ್ಕಂತೂ ಮಂಗಳೂರಿನಲ್ಲಿ ಬೇಸಗೆಯ ಧಗೆ ಏರುತ್ತಿರುವುದರ ಜೊತೆಗೆ ನೀರಿಲ್ಲದಿರುವ ‘ಬಿಸಿ’ಯೂ ಕಾಡುತ್ತಿದೆ.
(ವರದಿ: ಹರೀಶ ಮಾಂಬಾಡಿ, ಮಂಗಳೂರು)
(This copy first appeared in Hindustan Times Kannada website. To read more like this please logon to kannada.hindustantimes.com)