Raghunandan S Kamath Death: ಐಸ್ ಕ್ರೀಮ್ ಮ್ಯಾನ್ ಆಫ್ ಇಂಡಿಯಾ ಖ್ಯಾತಿಯ ನ್ಯಾಚುರಲ್ ಐಸ್ ಕ್ರೀಂನ ರಘುನಂದನ್ ಕಾಮತ್ ಇನ್ನಿಲ್ಲ
May 18, 2024 12:05 PM IST
ಐಸ್ ಕ್ರೀಮ್ ಮ್ಯಾನ್ ಆಫ್ ಇಂಡಿಯಾ ಖ್ಯಾತಿಯ ನ್ಯಾಚುರಲ್ ಐಸ್ ಕ್ರೀಂನ ರಘುನಂದನ್ ಕಾಮತ್ ಇನ್ನಿಲ್ಲ
Raghunandan S Kamath Death: ‘ಐಸ್ ಕ್ರೀಮ್ ಮ್ಯಾನ್ ಆಫ್ ಇಂಡಿಯಾ’ ಎಂದೇ ಪ್ರಸಿದ್ಧರಾಗಿದ್ದ ನ್ಯಾಚುರಲ್ ಐಸ್ ಕ್ರೀಂನ ರಘುನಂದನ್ ಕಾಮತ್ ಇನ್ನಿಲ್ಲ. ಜುಹುವಿನಿಂದ ಕಾರ್ಯಾಚರಣೆ ಆರಂಭಿಸಿದ ನ್ಯಾಚುರಲ್ಸ್ ಈಗ ದೇಶದಾದ್ಯಂತ ವಿಸ್ತರಿಸಲ್ಪಟ್ಟಿದೆ. ರಘುನಂದನ್ ಕಾಮತ್ ಅವರಿಗೆ ಅಕ್ಷರ ನಮನದ ಗೌರವ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
ಮಂಗಳೂರು: ನ್ಯಾಚುರಲ್ ಐಸ್ ಕ್ರೀಮ್ ಮೂಲಕ ಭಾರತದಾದ್ಯಂತ ಹೆಸರುವಾಸಿಯಾಗಿ, ಐಸ್ ಕ್ರೀಮ್ ಮ್ಯಾನ್ ಆಫ್ ಇಂಡಿಯಾ ಎಂದೇ ಪ್ರಸಿದ್ಧಿಯಾಗಿದ್ದ ಮಂಗಳೂರು ಮೂಲದ ಉದ್ಯಮಿ ನ್ಯಾಚುರಲ್ ಐಸ್ ಕ್ರೀಮ್ ಸ್ಥಾಪಕ ರಘುನಂದನ್ ಕಾಮತ್ (70) (Raghunandan S Kamath) ಮುಂಬಯಿಯಲ್ಲಿ ನಿಧನ ಹೊಂದಿದರು. ಪತ್ನಿ, ಇಬ್ಬರು ಪುತ್ರರನ್ನು ಅವರು ಹೊಂದಿದ್ದರು.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯವರಾಗಿದ್ದ ಕಾಮತ್, 1954ರಲ್ಲಿ ಬಡ ಕುಟುಂಬಲ್ಲಿ ಜನಿಸಿದ್ದರು. ಹಣ್ಣಿನ ವ್ಯಾಪಾರಿಯಾಗಿದ್ದ ಕಾಮತ್ ತಂದೆಯೊಂದಿಗೆ ರಘುನಂದನ್ ಅವರೂ ಸಹಕರಿಸುತ್ತಿದ್ದರು. ತಮ್ಮ 15ನೇ ವಯಸ್ಸಿನಲ್ಲೇ ಅಣ್ಣನ ಹೋಟೆಲ್ ನಲ್ಲಿ ಕೆಲಸಕ್ಕೆಂದು ಮುಂಬೈಗೆ ತೆರಳಿದ ಅವರು, ಹೋಟೆಲ್ ಉದ್ಯಮ ಆರಂಭಿಸಿದರು. ಅಲ್ಲಿ ಹಣ್ಣುಗಳಿಂದಲೇ ಐಸ್ ಕ್ರೀಮ್ ತಯಾರಿಸಿ ಗಮನ ಸೆಳೆದರು.
1984ರಲ್ಲಿ ಮುಂಬಯಿಯಲ್ಲಿ ನ್ಯಾಚುರಲ್ಸ್ ಐಸ್ ಕ್ರೀಮ್ ಆರಂಭಿಸಿ, ನೈಸರ್ಗಿಕವಾಗಿ ದೊರಕುವ ವಸ್ತುಗಳಿಂದಲೇ ಐಸ್ ಕ್ರೀಮ್ ತಯಾರಿಸಿ ಅದರ ರುಚಿಯನ್ನು ಮುಂಬಯಿಗರಿಗೆ ಹಂಚಿದ್ದರು. ಅದು ದೇಶದಾದ್ಯಂತ ಜನಪ್ರಿಯವಾಯಿತು. ದೊಡ್ಡ ಉದ್ಯಮವಾಗಿ ಬೆಳೆಯಿತು. 40ಕ್ಕೂ ಅಧಿಕ ನಗರಗಳಿಗೆ ವ್ಯಾಪಿಸಿತು.
ಸುಮಾರು 140ಕ್ಕೂ ಅಧಿಕ ಮಳಿಗೆಯನ್ನು ಹೊಂದಿ, 400 ಕೋಟಿಗೂ ಅಧಿಕ ವ್ಯವಹಾರ ನಡೆಸುವಷ್ಟು ಮುಂದುವರಿಯಿತು. ಕಾಮತ್ ಅವರ ಧ್ಯೇಯೋದ್ದೇಶವೇನಿತ್ತು ಎಂದರೆ, ಅವರು ವಿತರಿಸುವ ಐಸ್ ಕ್ರೀಮ್ ಗಳಲ್ಲಿ ಕೃತಕ ಸಾಮಗ್ರಿಗಳು ಇಲ್ಲದೆ, ಸ್ಥಳೀಯ ಸ್ವಾದವಷ್ಟೇ ಇರುವುದು. ಹೀಗಾಗಿ ಅಂಥ ಬ್ರಾಂಡ್ ಮೂಲಕ ನ್ಯಾಚುರಲ್ಸ್ ಜನಪ್ರಿಯವಾಗಿತ್ತು. ಗುಣಮಟ್ಟ, ಮತ್ತು ಗ್ರಾಹಕರ ಸಂತೃಪ್ತಿಗೆ ಪ್ರಥಮ ಆದ್ಯತೆ ನೀಡಿದ್ದ ಕಾಮತ್, ಹಲಸು, ಸೀಯಾಳ, ಗೇರುಹಣ್ಣುಗಳಿಂದಲೂ ಐಸ್ ಕ್ರೀಮ್ ಮಾಡಿ ವಿತರಿಸಿದ ಖ್ಯಾತಿ ಹೊಂದಿದವರು.
ನಾಲ್ಕು ಸಿಬಂದಿಗಳಿಂದ 140 ಮಳಿಗೆವರೆಗೆ
ನ್ಯಾಚುರಲ್ ಐಸ್‌ಕ್ರೀಂ 4 ಸಿಬ್ಬಂದಿಯಿಂದ ಆರಂಭಗೊಂಡು ಇದೀಗ ದೊಡ್ಡ ಬ್ರ್ಯಾಂಡ್ ಆಗಿ ಬೆಳೆದಿದೆ. ಸುಮಾರು 140 ಮಳಿಗೆಗಳನ್ನು ಹೊಂದಿದೆ. ಹೀಗಾಗಿ ಕಾಮತ್ ಜೀವನಸಾಧನೆ ಹಲವರಿಗೆ ಸ್ಫೂರ್ತಿಯೂ ಹೌದು.
ಹಣ್ಣಿನ ವ್ಯಾಪಾರ ಮಾಡುತ್ತಿದ್ದ ತಂದೆಯವರ ಬಳಿ ಜತೆಗೂಡುವ ಸಂದರ್ಭ ಹಣ್ಣುಗಳ ರುಚಿಯಿಂದಲೂ ಕಾಮತ್ ಆಕರ್ಷಿತರಾಗಿದ್ದರು. ಅವರಿಗೆ ಏಳು ಸಹೋದರರು ಮತ್ತು ಸಹೋದರಿಯರಿದ್ದರು ಮತ್ತು ಅವರ ತಿಂಗಳ ಆದಾಯ ಕೇವಲ 100 ರೂ.ಇದ್ದ ವೇಳೆಯದು. ಆ ಹೊತ್ತಿನಲ್ಲೇ ಅವರ ಸಹೋದರ ಮುಂಬೈನಲ್ಲಿ ಆಹಾರ ಖಾದ್ಯ ತಯಾರಿ ಕೆಲಸ ಮಾಡುತ್ತಿದ್ದರು.ಹೀಗೆ ಅವರು 1966 ರಲ್ಲಿ ಸಹೋದರರೊಂದಿಗೆ ಕೆಲಸ ಮಾಡಲು ಮುಂಬೈಗೆ ತೆರಳಿದರು.
ಇದೇ ವೇಳೆ ಡಾಬಾದಲ್ಲಿ ಗ್ರಾಹಕರಿಗೆ ಐಸ್ ಕ್ರೀಮ್ ವಿತರಿಸುತ್ತಿದ್ದ ರಘುನಂದನ್ ಅವರಿಗೆ ಈ ವಿಷಯದ ಕುರಿತು ಆಸಕ್ತಿ ಮತ್ತಷ್ಟು ಹೆಮ್ಮರವಾಯಿತು. ಆಗ ಐಸ್ ಕ್ರೀಂ ಮಾರುಕಟ್ಟೆಯಲ್ಲಿ ಶ್ರೀಮಂತರಿಗೆ ಎಂಬತೆ ಇತ್ತು. ಆಗಲೇ ದೊಡ್ಡ ದೊಡ್ಡ ಬ್ರ್ಯಾಂಡ್ ಐಸ್ ಕ್ರೀಮ್ ಗಳು ಇದ್ದವು.
ಪಾವ್ ಭಾಜಿ ಜೊತೆ ಮಾರಾಟ
ಕಾಮತ್ ಆರಂಭದಲ್ಲಿ ನ್ಯಾಚುರಲ್ಸ್ ಐಸ್ ಕ್ರೀಮ್ ಮುಂಬೈ ಎಂಬ ಹೆಸರಿನ ಔಟ್ಲೆಟ್ ಆರಂಭಿಸಿ ಜುಹುದಲ್ಲಿ ತೆರೆದರು. 1984ನೇ ಇಸವಿ ಫೆಬ್ರವರಿ 14ರಂದು ಆರಂಭಗೊಂಡ ಈ ಔಟ್ಲೆಟ್ ಗೆ ಜನರನ್ನು ಆಕರ್ಷಿಸಲು ಪಾವ್ ಭಾಜಿಯನ್ನು ಜತೆಗಿಟ್ಟರು. ಬಳಿಕ ಬರಬರುತ್ತಾ ಐಸ್ ಕ್ರೀಮ್ ಅನ್ನೇ ಜನರು ಇಷ್ಟಪಡಲಾರಂಭಿಸಿದರು. ನೋಡನೋಡುತ್ತಿದ್ದಂತೆ ಉದ್ಯಮ ಬೆಳೆಯಿತು.
ಗ್ರಾಹಕರ ವಿಶ್ವಾಸವನ್ನು ಗಳಿಸಲು, ಕಾಮತ್ ಯಾವುದೇ ಕಲಬೆರಕೆ ಇಲ್ಲದೆ ಕೇವಲ ಹಣ್ಣುಗಳು, ಹಾಲು ಮತ್ತು ಸಕ್ಕರೆ ಬಳಸಿ ಐಸ್ ಕ್ರೀಮ್ ತಯಾರಿಸುತ್ತಿದ್ದರು. ಮಾವು, ಚಾಕೊಲೇಟ್, ಸೀತಾಫಲ, ಗೋಡಂಬಿ ಮತ್ತು ಸ್ಟ್ರಾಬೆರಿ ಎಂಬ ಐದು ಫ್ಲೇವರ್‌ಗಳ ಐಸ್‌ಕ್ರೀಮ್‌ಗಳನ್ನು ಗ್ರಾಹಕರಿಗೆ ನೀಡಿದರು. ಇದನ್ನು ಇಷ್ಟಪಡಲು ಆರಂಭಿಸಿದ ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಕಾಮತ್ ನ್ಯಾಚುರಲ್ಸ್ ಬೆಳೆಯಿತು. ಹಲಸು, ಎಳೆನೀರಿನ ಸ್ವಾದವೂ ಇದರೊಂದಿಗೆ ಸೇರಿತು. ಕಾಮತ್ ಅವರೇ ಹಣ್ಣುಗಳನ್ನು ಸಂಸ್ಕರಿಸಲು ವಿಶೇಷ ಯಂತ್ರವನ್ನು ತಯಾರಿಸಿದರು. ಅವರ ಅಗತ್ಯಕ್ಕೆ ತಕ್ಕಂತೆ ವಿನ್ಯಾಸಗೊಳಿಸಿದರು. ಮುಂಬೈನ ಜುಹುವಿನಿಂದ ಆರಂಭವಾದ ನ್ಯಾಚುರಲ್ ದೇಶಾದ್ಯಂತ ವ್ಯಾಪಿಸಿತು. ಮಂಗಳೂರಿನ ಬೊಂಡ ಫ್ಯಾಕ್ಟರಿಯಲ್ಲಿ ಎಳೆನೀರು ಮಾರಾಟ ಪ್ರಸಿದ್ಧವಾಗಿದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.