Mangaluru News: ಆಟಿ ತಿಂಗಳಲ್ಲಿ ಪ್ರೇತಾತ್ಮಗಳ ಮದುವೆ: ಕರಾವಳಿಯಲ್ಲಿ ಏನಿದು ವಿಶಿಷ್ಟ ಆಚರಣೆ
Aug 15, 2023 06:36 PM IST
ಪ್ರೇತಾತ್ಮಗಳ ಮದುವೆಯ ಒಂದು ನೋಟ
Mangaluru News: ಕರಾವಳಿ ಕರ್ನಾಟಕದ ತುಳುನಾಡಿನಲ್ಲಿ ಇದೊಂದು ವಿಶಿಷ್ಟ ಸಂಪ್ರದಾಯದ ಆಚರಣೆ. ಆಟಿ ಅಥವಾ ಆಷಾಢ ಮಾಸದಲ್ಲಿ ಪ್ರೇತಾತ್ಮಗಳ ಮದುವೆ ಮಾಡಿಸುತ್ತಾರೆ. ಮೃತರ ಆತ್ಮಕ್ಕೆ ಶಾಂತಿ ಮಾಡುವ ಆಚರಣೆ ಇದು. ಇದರ ವಿವರ ನೀಡಿದ್ದಾರೆ ಹರೀಶ್ ಮಾಂಬಾಡಿ.
ಮಂಗಳೂರು: ಕರ್ನಾಟಕ ಕರಾವಳಿಯಲ್ಲಿ ತುಳು ಸಂಪ್ರದಾಯದ ಆಚರಣೆಗಳಿಗೆ ತನ್ನದೇ ಆದ ಮಹತ್ವವಿರುತ್ತದೆ. ಮಳೆಗಾಲದಲ್ಲಿ ಕಾರ್ಮೋಡ ದಟ್ಟೈಸಿ, ಎಡೆಬಿಡದೆ ಮಳೆ ಬರುವ ಹೊತ್ತು ಎಂಬ ಪ್ರತೀತಿ ಇರುವ ಆಟಿ ತಿಂಗಳು ಈಗ ನಡೆಯುತ್ತಿದೆ (ಆಟಿ ತಿಂಗಳು ಎಂದರೆ ಆಷಾಢ ಮಾಸ). ಈ ಸಂದರ್ಭ ಮನೆಯಿಂದ ಹೊರಬರುವುದೇ ಅಸಾಧ್ಯವಾದ ಕಾರಣ, ಗೆಡ್ಡೆಗೆಣಸುಗಳನ್ನು ಎಲೆ, ಸೊಪ್ಪುಗಳನ್ನು ಆಹಾರವಾಗಿ ಸೇವಿಸುತ್ತಾರೆ.
ಮದುವೆಯಂಥ ಶುಭ ಕಾರ್ಯಗಳನ್ನು ನಡೆಸುವುದೂ ಕಷ್ಟಸಾಧ್ಯವಾದ ಸನ್ನಿವೇಶ. ಹೀಗಾಗಿಯೇ ಆಟಿ ತಿಂಗಳ ಅಮವಾಸ್ಯೆ ಸಂದರ್ಭ ಪಾಲೆದ ಕೆತ್ತೆ ಕಷಾಯ (ಹಾಳೆ ಮರದ ಕೆತ್ತೆಯನ್ನು ಕಷಾಯ ರೂಪವಾಗಿ ಬೆಳಗ್ಗೆಯೇ ಸೇವಿಸುವುದು) ಕುಡಿಯುವುದು ಹಾಗೂ ಆಟಿಯ ತಿನಿಸುಗಳಾದ ಕೆಸುವಿನ ಎಲೆಯ ಪತ್ರೊಡೆಯೇ ಮೊದಲಾದವುಗಳನ್ನು ಕನಿಷ್ಠ ಹಾಗೆಯೇ ಬಲಿಷ್ಠವಾದ ಆಹಾರವನ್ನು ಸೇವಿಸುವುದು ವಾಡಿಕೆ. ಇಂಥ ಕಾಲದಲ್ಲೇ ಕುಲೆಮದಿಮೆ ಅಥವಾ ಪ್ರೇತಾತ್ಮಗಳ ಮದುವೆಯನ್ನು ನಡೆಸಲಾಗುತ್ತದೆ. ಏನಿದು ಪ್ರೇತಗಳ ಮದುವೆ?
ಮೃತಪಟ್ಟವರೇ ವಧೂವರರು, ಅವರ ಹೆಸರಲ್ಲೇ ಮದುವೆ
ಹೌದು. ಭೂತಾರಾಧನೆ, ದೈವಾರಾಧನೆಗಳ ನಂಬಿಕೆಯಿಂದಲೇ ಮನೆ ಮಾತಾಗಿರುವ ಕರಾವಳಿ ಭಾಗದ ವಿಶೇಷ ಆಚರಣೆ ಇದು. ಇಲ್ಲಿ ಅಕಾಲ ಮೃತ್ಯುವಶರಾದ ಯುವಕ, ಯುವತಿಯರೇ ವಧೂವರರು. ಸಾಮಾನ್ಯವಾಗಿ ಮದುವೆಯನ್ನು ನಾವು ನಿಶ್ಚಯಿಸುವಾಗ ಹುಡುಗಿಯ ಮನೆಗೆ ಹುಡುಗ ಹೋಗುವ ಶಾಸ್ತ್ರವಿರುತ್ತದೆ. ಇಲ್ಲೂ ಹಾಗೆ, ಅಕಾಲ ಮೃತ್ಯುವಿಗೀಡಾದ ಹುಡುಗಿ ಮನೆಗೆ ಅಕಾಲ ಮೃತ್ಯುವಿಗೀಡಾದ ಯುವಕನ ಮನೆಯವರು ತೆರಳಿ ಮದುವೆ ನಿಶ್ಚಯಿಸುತ್ತಾರೆ. ಬಳಿಕ ಶಾಸ್ತ್ರೋಕ್ತವಾಗಿ ಮದುವೆ ಕಾರ್ಯ ನಡೆಯುತ್ತದೆ. ಹೀಗೆ ಪ್ರೇತಗಳ ಮದುವೆಯಾದರೆ ಸದ್ಗತಿ ದೊರಕುತ್ತದೆ ಎಂಬುದು ತುಳುನಾಡ ನಂಬಿಕೆಗಳಲ್ಲೊಂದು.
ಅದರಂತೆ ಇದೀಗ ಬಂಟ್ವಾಳ ತಾಲೂಕಿನ ವಗ್ಗ ಎಂಬಲ್ಲಿಯ ವಧುವಿನ ಕುಟುಂಬ ಹಾಗೂ ಉಳ್ಳಾಲ ತಾಲೂಕಿನ ಕೋಣಾಜೆ ಸಮೀಪದ ಬೊಳ್ಮ ಎಂಬಲ್ಲಿಯ ವರನ ಕುಟುಂಬದ ನಡುವೆ ಮದುವೆ ಸಂಬಂಧ ಏರ್ಪಟ್ಟಿದೆ ಇತ್ತೀಚೆಗೆ ಇಂಥ ಒಂದು ಮದುವೆಯೂ ನಡೆಯಿತು.
ಬಂಟ್ವಾಳ ತಾಲೂಕಿನ ವಧು, ಉಳ್ಳಾಲ ತಾಲೂಕಿನ ವರನಿಗೆ ಮದುವೆ ನಡೆಯಿತು. 2 ವರ್ಷದ ಮಗುವಾಗಿದ್ದಾಗ ಅಂದರೆ ಸರಿ ಸುಮಾರು 35 ವರ್ಷಗಳ ಹಿಂದೆ ವಧು ಮೃತಪಟ್ಟಿದ್ದರು. ಉಳ್ಳಾಲದ ಯುವಕ ಕಳೆದ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಹೃದಯದ ತೊಂದರೆ ಇದ್ದ ಕಾರಣ ಯುವಕನಿಗೆ ಮದುವೆ ಮಾಡುವ ಬಗ್ಗೆ ಮನೆಯವರು ಯೋಚನೆ ಮಾಡಿರಲಿಲ್ಲ. ಆದ್ರೆ, ಆತನಿಗೆ ಮದುವೆ ಆಗಬೇಕು ಎನ್ನುವ ಆಸೆ ಇತ್ತಾದರೂ ಹೃದಯದ ಕಾಯಿಲೆಯಿಂದ ಗುಣಮುಖವಾಗದೆ ಮೃತಪಟ್ಟಿದ್ದರು. ವಧುವಿನ ಕಡೆಯವರಿಗೆ ಜ್ಯೋತಿಷ್ಯದಲ್ಲಿ ಕಂಡು ಬಂದಂತೆ ಆಕೆಗೂ ಮದುವೆ ಮಾಡಬೇಕಾಗಿತ್ತು. ಈ ವೇಳೆ ವರಾನ್ವೇಷಣೆ ನಡೆಸಿದಾಗ ಸಂಬಂಧ ಸಿಕ್ಕಿ ಎಲ್ಲಾ ಮಾತುಕತೆ ನಡೆಸಿ ಸಂಪ್ರದಾಯದಂತೆ ಮದುವೆ ಕಾರ್ಯ ಮಾಡಲಾಗಿದೆ.
ವಿಧಿವಿಧಾನದಂತೆ ವಧುವಿನ ಮನೆ ಭೇಟಿ, ವಿವಾಹ ನಿಶ್ಚಯ, ಮದರಂಗಿ ಶಾಸ್ತ್ರಗಳನ್ನು ನಡೆಸಲಾಯಿತು. ವಿವಾಹ ಸಮಾರಂಭದಲ್ಲಿ ಅಕ್ಷತೆ ಹಾಕಿದ ಬಳಿಕ ವಧು-ವರರಿಗೆ ಆರತಿ ಬೆಳಗಿ, ಚಪ್ಪಲಿ ಹಾಕಿ, ಕೊಡೆ ಹಿಡಿದು ಅಂಗಳಕ್ಕೆ ಇಳಿಯುವ ಸಂಪ್ರದಾಯ ನಡೆಯಿತು. ವಿವಾಹ ಕಾರ್ಯಕ್ರಮದ ಬಳಿಕ ಔತಣ ಬಡಿಸಿ, ಇನ್ನು ಮುಂದೆ ಕುಟುಂಬದವರಿಗೆ ಯಾವುದೇ ತೊಂದರೆ ನೀಡದಂತೆ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಬೀಗರಿಗೆ, ಮದುವೆಗೆ ಬಂದ ಅತಿಥಿಗಳಿಗೆ ಔತಣ, ಊಟದ ಬಳಿಕ ವಧುವಿನ ಕಡೆಯವರು ಹೆಣ್ಣಿನ ವಸ್ತ್ರ, ಆಭರಣ, ಕೊಡೆ ಮೊದಲಾದವುಗಳನ್ನು ನೀಡಿ ತೆರಳಿದರು.