Talaluru Inscription; ಹಾಸನ ತಳಲೂರಿನ ಶಿವದೇವಾಲಯದ ಹೊರ ಆವರಣದಲ್ಲಿ ಹೊಯ್ಸಳ ಶಾಸನ ಪತ್ತೆ; ಗಮನಸೆಳೆದ ಶಿಲಾಶಾಸನ
Aug 30, 2024 08:16 PM IST
ಹಾಸನ ತಳಲೂರಿನ ಶಿವದೇವಾಲಯದ ಹೊರ ಆವರಣದಲ್ಲಿ ಹೊಯ್ಸಳ ಶಾಸನ ಪತ್ತೆ
Mangaluru News; ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ತಳಲೂರು ಗ್ರಾಮದ ಶಿವ ದೇವಸ್ಥಾನದ ಹೊರ ಆವರಣದಲ್ಲಿ ಹೊಯ್ಸಳ ಶಾಸನ ಪತ್ತೆಯಾಗಿದೆ. ಅರಸೀಕೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಹರೀಶ್ ಗಮನಸೆಳೆದ ಶಿಲಾಶಾಸನದ ವಿವರ ಇಲ್ಲಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
ಮಂಗಳೂರು: ಹಾಸನ ತಳಲೂರಿನ ಶಿವದೇವಾಲಯದ ಹೊರ ಆವರಣದಲ್ಲಿ ಹೊಯ್ಸಳ ಶಾಸನ ಪತ್ತೆಯಾಗಿದೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ತಳಲೂರು ಗ್ರಾಮದ ಶಿವದೇವಾಲಯದ ಹೊರ ಆವರಣದಲ್ಲಿ ಅಪ್ರಕಟಿತ ಶಾಸನವೊಂದನ್ನು ಅರಸೀಕೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಹರೀಶ್ ಅವರು ಪತ್ತೆ ಮಾಡಿ, ಶಾಸನದ ಅಧ್ಯಯನಕ್ಕಾಗಿ ನನ್ನ ಗಮನಕ್ಕೆ ತಂದರು.
ಶಾಸನವನ್ನು 13ನೇ ಶತಮಾನದ ಹೊಯ್ಸಳ ಲಿಪಿ ಮತ್ತು ಕನ್ನಡ ಭಾಷೆಯಲ್ಲಿ ರಚಿಸಲಾಗಿದೆ. ಐದು ಸಾಲಿನ ಈ ಪುಟ್ಟ ಶಾಸನದ ಬರವಣಿಗೆಯ ಶೈಲಿ ಹೊಯ್ಸಳರ ಕಾಲದ ಲಿಪಿ ಲಕ್ಷಣವನ್ನು ಹೊಂದಿದ್ದರೂ ಅಕ್ಷರ ಸ್ಖಾಲಿತ್ಯಗಳಿವೆ. ಎಂದು ದಕ್ಷಿಣ ಕನ್ನಡದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವ ಶಾಸ್ತ್ರ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕ ಪ್ರೊ. ಟಿ. ಮುರುಗೇಶಿ ತಿಳಿಸಿರುತ್ತಾರೆ.
ಶಾಸನದ ಪಠ್ಯ ಹೀಗಿದೆ
“@ ಸುಭಾನು ಸಂವತ್ಸರದ ವೈಶಾಖ ಬಹುಳ ಬ್ರಹವಾರದಂದು ಭಂಟಾರನ ಹಕ್ಷಯ ಕೈಯಾಣ ೧ ಕಂ ಗಾಣದಲ್ಲಿ ವಿಸುದೀ ಕಾಚಯ ನಾಯಕ ಬಿಠ ಧರ್ಮ”
ಶಾಸನೋಕ್ತ ಕಾಲದ ವಿವರಗಳು, 16 ನೇ ತಾರೀಕು ಏಪ್ರಿಲ್ 1223 ರ ಗುರುವಾರಕ್ಕೆ ಸರಿಹೊಂದುತ್ತದೆ. ಲಿಪಿ ಲಕ್ಷಣಗಳೂ ಸರಿಸುಮಾರು ಇದೇ ಕಾಲಕ್ಕೆ ಅನ್ವಯವಾಗುತ್ತವೆ. ಶಾಸನದಲ್ಲಿ ಬೃಹಸ್ಪತಿವಾರ ಎಂಬುದನ್ನು ಬ್ರಹವಾರವೆಂದು, ಅಕ್ಷಯ ಎಂಬುದನ್ನು ಹಕ್ಷಯ ಎಂದೂ, ಬಿಟ್ಟ ಎನ್ನುವುದನ್ನು ಬಿಠ ಎಂದು ಬರೆಯಲಾಗಿದೆ.
ಶಾಸನದ ಮಹತ್ವ
ಅರಸೀಕೆರೆ, ಹೊಯ್ಸಳ ರಾಜ್ಯದ ಹೃದಯಭಾಗವಾಗಿದ್ದು, ಹೊಯ್ಸಳರ ಕಾಲದ ಅಸಂಖ್ಯಾತ ಶಾಸನ, ವಾಸ್ತುಶಿಲ್ಪ, ಕೆರೆ-ಕಟ್ಟೆಗಳ ತವರೂರಾಗಿದೆ. ಪ್ರಸ್ತುತ ಶಾಸನದ ಮೇಲ್ಭಾಗದ ಪಟ್ಟಿಕೆಯಲ್ಲಿ ಶಿವಲಿಂಗವಿದೆ, ಲಿಂಗದ ಬಲಭಾಗದಲ್ಲಿ ವ್ಯಕ್ತಿಯೋರ್ವ ಅಂಜಲೀಬದ್ಧನಾಗಿ ಕುಳಿತಿರುವಂತೆ, ಎಡಭಾಗದಲ್ಲಿ ಹಸುವನ್ನು ಚಿತ್ರಿಸಲಾಗಿದೆ. ಕಾಚಯ ನಾಯಕ ಎಂಬ ಸ್ಥಳೀಯ ಅಧಿಕಾರಿ ವೈಶಾಖ ಬಹುಳದಂದು ಭಂಟಾರ ಎಂಬ ವ್ಯಕ್ತಿಗೆ ಮರಣೋತ್ತರವಾಗಿ ಅಕ್ಷಯ ಪುಣ್ಯ ಪ್ರಾಪ್ತಿ ಆಗಲಿಯೆಂದು ನೀಡಿದ ದಾನವನ್ನು ಶಾಸನದಲ್ಲಿ ದಾಖಲಿಸಲಾಗಿದೆ.
ಭಂಟಾರ ಎಂಬುದು ಬಹುಶಃ ಭಟ್ಟಾರಕ ಎಂಬ ಪದದ ಪ್ರಕ್ಷಿಪ್ತ ರೂಪವಾಗಿರುವಂತಿದೆ. ಭಂಟಾರ ತಳಲೂರು ಗ್ರಾಮzಲ್ಲಿರುವ ಹೊಯ್ಸಳರ ಕಾಲದ ಶಿವ ದೇವಾಲಯದ ಶೈವಯತಿ ಆಗಿದ್ದಿರಬಹುದು. ಬಹುಳದಲ್ಲಿ ಮಾಡಿದ ದಾನ ಬಹುತೇಕ ಮರಣೋತ್ತರ ಕ್ರಿಯೆಗೆ ಸಂಬಂಧಿಸಿದ್ದಾಗಿದೆ. ಆದ್ದರಿಂದ, ಈ ಶಾಸನವನ್ನು ಭಂಟಾರ ಅಥವಾ ಭಟ್ಟಾರಕ ಎಂಬ ಶೈವಯತಿಯ ಮರಣ ದಾಖಲೆಯೆಂದು ಪರಿಗಣಿಸಬಹುದಾಗಿದೆ ಎಂದು ಮುರುಗೇಶಿ ತಿಳಿಸಿದ್ದಾರೆ.
(ವರದಿ- ಹರೀಶ್ ಮಾಂಬಾಡಿ, ಮಂಗಳೂರು)