logo
ಕನ್ನಡ ಸುದ್ದಿ  /  ಕರ್ನಾಟಕ  /  Puttur Halasu Mela: ಪುತ್ತೂರು ಹಲಸುಮೇಳದಲ್ಲಿ ಜನಪ್ರಿಯಗೊಂಡ ಹಲಸಿನ ಕಬಾಬ್, ಬಿರಿಯಾನಿ, ಮಿಲ್ಕ್ ಶೇಕ್

Puttur Halasu Mela: ಪುತ್ತೂರು ಹಲಸುಮೇಳದಲ್ಲಿ ಜನಪ್ರಿಯಗೊಂಡ ಹಲಸಿನ ಕಬಾಬ್, ಬಿರಿಯಾನಿ, ಮಿಲ್ಕ್ ಶೇಕ್

HT Kannada Desk HT Kannada

Jun 22, 2023 05:20 PM IST

google News

ಪುತ್ತೂರು ಹಲಸುಮೇಳದಲ್ಲಿ ಜನಪ್ರಿಯಗೊಂಡ ಖಾದ್ಯಗಳು

    • Puttur Jackfruit fest: ಸಾಮಾನ್ಯವಾಗಿ ಹಲಸಿನ ಹಣ್ಣಿನ ಪಾಯಸ, ದೋಸೆ ಮನೆಗಳಲ್ಲಿ ನಾವು ಮಾಡುತ್ತೇವೆ. ಆದರೆ ಹಲಸಿನ ಪಲಾವ್, ಮಂಚೂರಿ, ಬಿರಿಯಾನಿಯಂಥ ವೆರೈಟಿಗಳನ್ನು ಕೇಳಿರುವುದೇ ಇಲ್ಲ. ಈ ಹೆಸರುಗಳೊಂದಿಗೆ ತೆರೆದಿಟ್ಟ ಫುಡ್ ಕೋರ್ಟ್ ನಲ್ಲಿ ಇವುಗಳಿಗೆ ಭಾರಿ ಬೇಡಿಕೆ ಬಂತು. ಇದರ ತಯಾರಿಯೂ ಸುಲಭವೇ. ಮನೆಯಲ್ಲೂ ಮಾಡುವಂಥದ್ದು.
ಪುತ್ತೂರು ಹಲಸುಮೇಳದಲ್ಲಿ ಜನಪ್ರಿಯಗೊಂಡ ಖಾದ್ಯಗಳು
ಪುತ್ತೂರು ಹಲಸುಮೇಳದಲ್ಲಿ ಜನಪ್ರಿಯಗೊಂಡ ಖಾದ್ಯಗಳು

ಮಂಗಳೂರು: ಹಲಸಿನ ಬಿರಿಯಾನಿ, ಹಲಸಿನ ಕಬಾಬ್, ಹಲಸಿನ ಬರ್ಗರ್, ಪೆರಿಪೆರಿ ಹಲಸು, ಹಲಸಿನ ಕೇಕ್, ಹಲಸಿನ ಮಿಲ್ಕ್ ಶೇಕ್, ಹಲಸಿನ ಹೋಳಿಗೆ, ಹಲಸಿನ ಪಲಾವ್...

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಕಳೆದ ವಾರ ನಡೆದ ಎರಡು ದಿನಗಳ ಹಲಸುಮೇಳದಲ್ಲಿ (Puttur Halasu Mela) ಫುಡ್ ಕೋರ್ಟ್ ಗೆ ಗ್ರಾಹಕರು ಲಗ್ಗೆ ಇಟ್ಟಿದ್ದರು. ಅಲ್ಲಿ ನಮೂದಿಸಿದ ಮೆನುವಿನ ಫೊಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪಸರಿಸಿದರು. ನಿರೀಕ್ಷೆಗೂ ಮೀರಿ ಹಲಸುಮೇಳ ಯಶಸ್ವಿಯಾಯಿತು. ಯೂಟ್ಯೂಬರ್ ಗಳು, ಬ್ಲಾಗರ್ ಗಳು, ಸೋಶಿಯಲ್ ಮೀಡಿಯಾದಲ್ಲಿ ನಿಯಮಿತವಾಗಿ ಮಾಹಿತಿ ಪಸರಿಸುವವರು ಮೇಳದಲ್ಲಿನ ವಿವಿಧ ಹಲಸುಗಳ ತಳಿಗಳ ಕುರಿತು ಹಾಕುವುದರೊಂದಿಗೆ ಆಹಾರ ವೈವಿಧ್ಯಗಳ ಕುರಿತು ಗಮನ ಸೆಳೆದರು.

ಇದ್ಯಾವುದು ಹೊಸರುಚಿ? ಎಂದು ಹುಡುಕಲು ಹೊರಟರೆ, ಮೇಳದ ಆಯೋಜಕ, ಪುತ್ತೂರು ಜೇಸಿ ಅಧ್ಯಕ್ಷ ಸುಹಾಸ್ ಮರಿಕೆ ಹೇಳಿದ್ದು ಹೀಗೆ..

"ನಾವು ಎರಡು ದಿನಗಳ ಹಲಸು ಮೇಳವನ್ನು ಆಯೋಜಿಸಿದ್ದೆವು. ಹಲಸಿನ ಮೌಲ್ಯವರ್ಧನೆ ಹಾಗೂ ಅದರ ಕುರಿತ ಸಂಶೋಧನಾಸಕ್ತರಿಗೊಂದು ಸ್ಪಷ್ಟ ಮಾರ್ಗದರ್ಶನ, ಹಲಸಿನ ವೆರೈಟಿಗಳನ್ನು ಪಟ್ಟಣದವರಿಗೂ ನೋಡುವ ಅವಕಾಶ, ಅದರ ಆಹಾರವೈವಿಧ್ಯಗಳ ಸಾಧ್ಯತೆಗಳನ್ನು ಜನರಿಗೆ ನೀಡುವ ಉದ್ದೇಶ ಇದರಲ್ಲಿ ಅಡಗಿತ್ತು. ಇದಕ್ಕಾಗಿ ಮಾಹಿತಿ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು. ಎರಡು ದಿನಗಳ ಮೇಳದಲ್ಲಿ ಉತ್ತಮ ಸಂಖ್ಯೆಯಲ್ಲಿ ಜನಸಂದಣಿಯೂ ಇತ್ತು. ಸಾಮಾಜಿಕ ಜಾಲತಾಣ ದೊಡ್ಡ ಕೊಡುಗೆಯನ್ನೂ ನೀಡಿತು. ಹಲಸಿನ ವೆರೈಟಿಗಳನ್ನು ಆಯ್ದುಗೊಳ್ಳುವುದು, ಗಿಡಗಳನ್ನು ಪಡೆಯುವುದು ಒಂದೆಡೆಯಾದರೆ, ಫುಡ್ ಕೋರ್ಟ್ ಗೆ ಹೋಗಿ ಅಲ್ಲಿನ ಖಾದ್ಯವೈವಿಧ್ಯಗಳನ್ನು ನೋಡುವವರು ಇನ್ನೊಂದೆಡೆ. ಬಹಳಷ್ಟು ಮಂದಿ ಮೆನು ನೋಡಿ ಹಲಸಿನ ವೆರೈಟಿ ಸವಿದು ಹೋಗಿದ್ದಾರೆ.

ಸಾಮಾನ್ಯವಾಗಿ ಹಲಸಿನ ಹಣ್ಣಿನ ಪಾಯಸ, ದೋಸೆ ಮನೆಗಳಲ್ಲಿ ನಾವು ಮಾಡುತ್ತೇವೆ. ಆದರೆ ಹಲಸಿನ ಪಲಾವ್, ಮಂಚೂರಿ, ಬಿರಿಯಾನಿಯಂಥ ವೆರೈಟಿಗಳನ್ನು ಕೇಳಿರುವುದೇ ಇಲ್ಲ. ಈ ಹೆಸರುಗಳೊಂದಿಗೆ ತೆರೆದಿಟ್ಟ ಫುಡ್ ಕೋರ್ಟ್ ನಲ್ಲಿ ಇವುಗಳಿಗೆ ಭಾರಿ ಬೇಡಿಕೆ ಬಂತು. ಇದರ ತಯಾರಿಯೂ ಸುಲಭವೇ. ಮನೆಯಲ್ಲೂ ಮಾಡುವಂಥದ್ದು. ಮಾಮೂಲಿಯಾಗಿ ಚಿಕನ್ ಬಿರಿಯಾನಿ ಮಾಡುವ ಸಂದರ್ಭ ಬಳಸುವ ಚಿಕನ್ ಇದರಲ್ಲಿಲ್ಲ ಅಷ್ಟೇ. ಚಿಕನ್ ಬದಲು ಹಲಸನ್ನು ಹಾಕಲಾಗುತ್ತದೆ. ಹಾಗೆಯೇ ಕಬಾಬ್, ಬರ್ಗರ್. ಇವು ಆಧುನಿಕ ಶೈಲಿಯ ಜೀವನಪದ್ಧತಿಯನ್ನು ನಡೆಸುವವರೂ ಇಷ್ಟಪಡುವಂಥ ಹೆಸರುಗಳಾಗಿದ್ದವು. ಹಲಸಿನ ಬಿರಿಯಾನಿ, ಹಲಸಿನ ಕಬಾಬ್, ಹಲಸಿನ ಬರ್ಗರ್ ಶುದ್ಧ ಸಸ್ಯಾಹಾರವಾಗಿರುವ ಕಾರಣ ಮಾಂಸಾಹಾರಿಗಳಷ್ಟೇ ಅಲ್ಲ, ಸಸ್ಯಾಹಾರಿಗಳೂ ಖುಷಿಪಟ್ಟರು. ಇನ್ನು, ಪೆರಿಪೆರಿ ಹಲಸು ಎಂಬುದು ಫ್ರೇಂಚ್ ಫ್ರೈಯಂತೆ ಮಾಡಿ ಕೊಡಲಾಗುತ್ತದೆ. ಹಾಗೆಯೇ ಕೇಕ್, ಮಿಲ್ಕ್ ಶೇಕ್ ಅನ್ನೂ ಸವಿದವರು ಹಲವರು. ಒಟ್ಟಿನಲ್ಲಿ ಹಲಸುಮೇಳ ಬೆಳೆಯ ಕುರಿತು ಚಿಂತನೆಯನ್ನಷ್ಟೇ ಅಲ್ಲ, ಅದರಿಂದ ಯಾವುದೆಲ್ಲಾ ಖಾದ್ಯಗಳನ್ನು ಮಾಡಲಾಗುತ್ತದೆ ಎಂಬುದನ್ನು ನಿರೂಪಿಸಿತು".

ವರದಿ: ಹರೀಶ ಮಾಂಬಾಡಿ, ಮಂಗಳೂರು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ