ಎಡಮಂಗಲದಲ್ಲಿ ಕಾಂತಾರ ಮಾದರಿ ಸನ್ನಿವೇಶ: ದೈವನರ್ತನ ಹೊಣೆಹೊತ್ತ ಮಕ್ಕಳು
Jan 28, 2024 04:49 PM IST
ಕಾಂತು ಅಜಿಲರ ಮಕ್ಕಳಾದ ಮೋನಪ್ಪ ಮತ್ತು ದಿನೇಶ್
- Edamangala News: ಕಾಂತಾರ ಸಿನಿಮಾದಲ್ಲೂ ತಂದೆ ಮೃತಪಟ್ಟ ಬಳಿಕ ನಾಯಕ ದೈವನರ್ತಕನಾಗುವ ದೃಶ್ಯವಿದೆ. ಇದೇ ರೀತಿಯ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಎಡಮಂಗಲದಲ್ಲಿ ನಡೆದಿದೆ. (ವರದಿ: ಹರೀಶ ಮಾಂಬಾಡಿ)
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಡಮಂಗಲ ಎಂಬಲ್ಲಿ ಥೇಟ್ ಕಾಂತಾರ ಚಿತ್ರದಲ್ಲಿ ಬರುವ ಶೈಲಿಯಲ್ಲೇ ನಡೆದ ಘಟನೆ ಈಗ ಜನಜನಿತವಾಗುತ್ತಿದೆ. ತುಳುನಾಡಿನ ದೈವಾರಾಧನೆಯ ಕಥಾಹಂದರವಿರುವ ಕಾಂತಾರ ಸಿನಿಮಾದಲ್ಲಿ ಬರುವ ದೃಶ್ಯಗಳಲ್ಲಿದ್ದಂತೆ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಎಡಮಂಗಲದಲ್ಲಿ ನಡೆದಿದೆ.
ದೈವ ನರ್ತಿಸುತ್ತಾ, ದೇವರ ಪಾದ ಸೇರಿದ ನರ್ತಕನ ಮಗ ದೈವಚಾಕರಿಯ ದೈವಬೂಳ್ಯ ಹಿಡಿದು, ಹೊಣೆಹೊತ್ತ ವಿಚಾರವಿದು. ಕೆಲ ತಿಂಗಳ ಹಿಂದೆ ಎಡಮಂಗಲದ ಶಿರಾಡಿ ದೈವಸ್ಥಾನದ ವಾರ್ಷಿಕ ಜಾತ್ರೆಯ ಸಂದರ್ಭ ಉಳ್ಳಾಕುಲು ದೈವ ಹಾಗೂ ನಾಗಬ್ರಹ್ಮ ದೈವದ ನರ್ತನ ಸೇವೆ ನಡೆಯುತ್ತಿತ್ತು. ಈ ಸಂದರ್ಭ, ಉಳ್ಳಾಕುಲು ದೈವದ ನರ್ತಕರಾದ 60 ವರ್ಷದ ಕಾಂತು ಅಜಿಲ ಅವರು ನರ್ತನ ಮಾಡುವಾಗಲೇ ಕುಸಿದು ಸಾವನ್ನಪ್ಪಿದ್ದರು. ಬಳಿಕ ಗ್ರಾಮಸ್ಥರು ದೈವದ ನರ್ತಕನ ಹುಡುಕಾಟದಲ್ಲಿ ತೊಡಗಿದ್ದರು.
ಪ್ರಶ್ನಾ ಚಿಂತನೆ ನಡೆಸಲಾಯಿತು. ಈ ಸಂದರ್ಭ, ಕಾಂತು ಅಜಿಲರ ಮಕ್ಕಳಾದ ಮೋನಪ್ಪ ಮತ್ತು ದಿನೇಶ್ ಅವರೇ ಮುಂದೆ ಆ ಹೊಣೆ ಹೊರಬೇಕು ಎಂಬ ಅಂಶ ಕಂಡುಬಂತು. ಬಳಿಕ ಇದಕ್ಕೆ ಶಿರಾಡಿ ದೈವದ ಒಪ್ಪಿಗೆ ಪಡೆಯಲಾಯಿತು. ಈ ಹಿನ್ನೆಲೆಯಲ್ಲಿ ಈ ವರ್ಷದ ನೇಮದ ದಿನ ಇಬ್ಬರೂ ಯುವಕರನ್ನು ದೈವದ ಮುಂದೆ ನಿಲ್ಲಿಸಿ, ದೈವದ ಸೇವೆಯನ್ನು ಮಾಡುವ ರೀತಿ ವಿವರಿಸಲಾಯಿತು.
ಶುದ್ಧವಾಗಿ ಮಡಿಬಟ್ಟೆ ಸುತ್ತಿ, ಮನೆ ಮಂದಿ, ಗ್ರಾಮದ ಊರ ಹಿರಿಯರ ಆಶೀರ್ವಾದ ಪಡೆದು, ಒಂಭತ್ತು ದಿಕ್ಕಿಗೆ ಸೇರಿದ ಜನರ ಸಮ್ಮುಖದಲ್ಲಿ ದೀಕ್ಷೆಬೂಳ್ಯವನ್ನು ನೀಡಲಾಯಿತು. ದೈವ ತನ್ನ ನರ್ತಕನಿಗೆ ತನ್ನ ಸೇವೆ ಮಾಡುವಂತೆ ನೀಡುವ ದೀಕ್ಷೆಯಿದು. ದೈವ ತನ್ನ ಆವಾಹನೆಯನ್ನು ಹೊಸದಾಗಿ ನೇಮಕವಾದ ದೈವನರ್ತಕರ ಮೂಲಕ ತೋರ್ಪಡಿಸಲಿದ್ದು, ದೀಕ್ಷೆ ಪಡೆದ ಬಳಿಕ ದೈವನರ್ತಕ ನಾಲ್ಕು ಗ್ರಾಮಗಳಿಗೆ ಸಂಬಂಧಿಸಿದ ದೈವನರ್ತನೆಯ ಹೊಣೆ ಹೊರುತ್ತಾನೆ.
ಕಾಂತಾರ ಸಿನಿಮಾದಲ್ಲೂ ತಂದೆ ಮೃತಪಟ್ಟ ಬಳಿಕ ನಾಯಕ ದೈವನರ್ತಕನಾಗುವ ದೃಶ್ಯವಿದೆ. ಇದೇ ರೀತಿಯ ದೃಶ್ಯವನ್ನು ಈ ಘಟನೆಗೆ ತಳಕು ಹಾಕಿಕೊಳ್ಳಲಾಗಿದ್ದು, ಸ್ಥಳೀಯವಾಗಿ ಇದು ಜನಜನಿತವಾಗಿದೆ.
ವರದಿ: ಹರೀಶ ಮಾಂಬಾಡಿ, ಮಂಗಳೂರು