ಸುಬ್ರಹ್ಮಣ್ಯ-ಸಕಲೇಶಪುರ ರೈಲ್ವೆ ಘಾಟಿ ಎಡಕುಮೇರಿ - ಕಡಗರವಳ್ಳಿ ನಡುವೆ ಭೂಕುಸಿತ; ರೈಲು ಸಂಚಾರದಲ್ಲಿ ವ್ಯತ್ಯಯ
Jul 27, 2024 09:09 AM IST
ಸುಬ್ರಹ್ಮಣ್ಯ-ಸಕಲೇಶಪುರ ರೈಲ್ವೆ ಘಾಟಿ ಎಡಕುಮೇರಿ - ಕಡಗರವಳ್ಳಿ ನಡುವೆ ಭೂಕುಸಿತ; ರೈಲು ಸಂಚಾರದಲ್ಲಿ ವ್ಯತ್ಯಾಸ (ಸಾಂಕೇತಿಕ ಚಿತ್ರ)
ರೈಲು ಪ್ರಯಾಣಿಕರ ಗಮನಕ್ಕೆ; ದಕ್ಷಿಣ ಕನ್ನಡ, ಹಾಸನ ಭಾಗದಲ್ಲಿ ನಿನ್ನೆ ಧಾರಾಕಾರ ಮಳೆ ಸುರಿದಿದ್ದು, ಕೆಲವು ಕಡೆ ಭೂಕುಸಿತ ಸಂಭವಿಸಿದೆ. ಇದರಂತೆ, ಸುಬ್ರಹ್ಮಣ್ಯ-ಸಕಲೇಶಪುರ ರೈಲ್ವೆ ಘಾಟಿ ಎಡಕುಮೇರಿ - ಕಡಗರವಳ್ಳಿ ನಡುವೆ ಭೂಕುಸಿತ ಉಂಟಾಗಿದ್ದು, ಈ ಭಾಗದಲ್ಲಿ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
ಮಂಗಳೂರು: ದಕ್ಷಿಣ ಕನ್ನಡ, ಹಾಸನ ಭಾಗದಲ್ಲಿ ಧಾರಾಕಾರ ಮಳೆ ಸುರಿದಿದ್ದು, ಸುಬ್ರಹ್ಮಣ್ಯ-ಸಕಲೇಶಪುರ ರೈಲ್ವೆ ಘಾಟಿಯ ಎಡಕುಮೇರಿ ಮತ್ತು ಕಡಗರವಳ್ಳಿ ನಡುವೆ ನಿನ್ನೆ (ಜುಲೈ 26) ಭೂಕುಸಿತ ಸಂಭವಿಸಿದೆ. ಇದರಿಂದಾಗಿ, ಈ ಮಾರ್ಗದ ಕೆಲವು ರೈಲುಗಳ ಸಂಚಾರ ರದ್ದುಗೊಂಡಿದೆ. ಕೆಲವು ರೈಲುಗಳ ಸಂಚಾರ ಮಾರ್ಗವನ್ನು ನೈಋತ್ಯ ರೈಲ್ವೆ ಬದಲಾಯಿಸಿದೆ.
ಕಾರವಾರದಿಂದ ನಿನ್ನೆ ಹೊರಡಬೇಕಾಗಿದ್ದ ರೈಲು ಸಂಖ್ಯೆ 06568 ಕಾರವಾರ – ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ರದ್ದುಗೊಂಡಿದೆ.
ಬೆಂಗಳೂರು- ಮಂಗಳೂರು ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತ; ಹಲವು ರೈಲುಗಳ ಮಾರ್ಗ ಬದಲಾವಣೆ
ಬೆಂಗಳೂರಿನಿಂದ ನಿನ್ನೆ ಹೊರಟ ರೈಲು ಸಂಖ್ಯೆ 16595 ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು–ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್ ರೈಲಿನ ಮಾರ್ಗ ಬದಲಾವಣೆ ಮಾಡಲಾಗಿದ್ದು, ಕುಣಿಗಲ್,ಪಡೀಲು ಬೈಪಾಸ್ ಬದಲು ಯಶವಂತಪುರ, ಬಾಣಸವಾಡಿ, ಜೋಲಾರ್‌ಪೇಟೆ ಕ್ಯಾಬಿನ್, ಸೇಲಂ, ಪೊದನೂರು, ಶೋರನೂರು, ಮಂಗಳೂರು ಜಂಕ್ಷನ್, ಸುರತ್ಕಲ್ ಮೂಲಕ ಸಂಚರಿಸಿದೆ.
ಇನ್ನೊಂದೆಡೆ, ಮಂಗಳೂರಿನಿಂದ ನಿನ್ನೆ ಹೊರಟ ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್ – ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ರೈಲಿನ ಮಾರ್ಗ ಬದಲಾವಣೆ ಆಗಿದ್ದು, ಹಾಸನದ ಬದಲು ಸುಬ್ರಹ್ಮಣ್ಯ ರಸ್ತೆ, ಪಡೀಲ್, ಸುರತ್ಕಲ್, ಕಾರವಾರ, ಮಡಗಾಂವ್, ಕೂಲಂ, ಕ್ಯಾಸ್ಟಲ್ ರಾಕ್, ಲೊಂಡಾ, ಶ್ರೀ ಸಿದ್ಧರೂಡ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್ ಮೂಲಕ ಸಂಚರಿಸಿದೆ.
ಮುರುಡೇಶ್ವರದಿಂದ ನಿನ್ನೆ ಹೊರಟ ರೈಲು ಸಂಖ್ಯೆ 16586 ಮುರಡೇಶ್ವರ–ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ ಮಾರ್ಗ ಬದಲಾವಣೆಗೊಂಡು ಹಾಸನ,ಮೈಸೂರು ಮಾರ್ಗದ ಬದಲು ಮಂಗಳೂರು ಜಂಕ್ಷನ್, ಶೋರನೂರು, ಸೇಲಂ, ಜೋಲಾರ್ಪೇಟೆ ಕ್ಯಾಬಿನ್ ಮೂಲಕ ಸಂಚರಿಸಿದೆ.
ಕಣ್ಣೂರಿನಿಂದ ನಿನ್ನೆ ಹೊರಟ ರೈಲು ಸಂಖ್ಯೆ 16512 ಕಣ್ಣೂರು–ಕ್ರಾ.ಸಂ.ರಾ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಕುಣಿಗಲ್ ಬದಲು ಮಂಗಳೂರು ಸೆಂಟ್ರಲ್, ಶೋರನೂರು, ಸೇಲಂ, ಜೋಲಾರ್ಪೇಟೆ ಕ್ಯಾಬಿನ್ ಮೂಲಕ ಪ್ರಯಾಣಿಸಿದೆ.
ಕಾರವಾರದಿಂದ ನಿನ್ನೆ ಹೊರಟ ರೈಲು ಸಂಖ್ಯೆ 16596 ಕಾರವಾರ-ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್ ಪಡೀಲು ಬೈಪಾಸ್ ಬದಲು ಮಂಗಳೂರು ಜಂಕ್ಷನ್, ಶೋರನೂರು, ಸೇಲಂ, ಜೋಲಾರ್ಪೇಟೆ ಕ್ಯಾಬಿನ್ ಮೂಲಕ ಸಂಚರಿಸಿದೆ.
ಅಂತೆಯೇ ರೈಲು ಸಂಖ್ಯೆ 16511 ಕ್ರಾ.ಸಂ.ರಾ ಬೆಂಗಳೂರು–ಕಣ್ಣೂರು ಎಕ್ಸ್‌ಪ್ರೆಸ್ ಕುಣಿಗಲ್ ಬದಲು ಜೋಲಾರ್ಪೇಟೆ ಕ್ಯಾಬಿನ್, ಸೇಲಂ, ಶೋರನೂರು, ಮಂಗಳೂರು ಜಂಕ್ಷನ್ ಮೂಲಕ ಸಂಚರಿಸಿದೆ. ಅದೇ ರೀತಿ, ರೈಲು ಸಂಖ್ಯೆ 16585 ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು–ಮುರಡೇಶ್ವರ ಎಕ್ಸ್‌ಪ್ರೆಸ್ ನಿನ್ನೆ ರಾತ್ರಿ ಹೊರಟಿರುವುದು ಕ್ರಾ.ಸಂ.ರಾ ಬೆಂಗಳೂರು, ಜೋಲಾರ್ಪೇಟೆ ಕ್ಯಾಬಿನ್, ಶೋರನೂರು, ಮಂಗಳೂರು ಜಂಕ್ಷನ್ ಮೂಲಕ ಓಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ರೈಲು ಪ್ರಯಾಣಿಕರ ಬಳಕೆದಾರರ ಸಂಘ ತಿಳಿಸಿದೆ.
(ವರದಿ- ಹರೀಶ್ ಮಾಂಬಾಡಿ, ಮಂಗಳೂರು)
(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್. ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿ ರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲು kannada.hindustantimes.com/nation-and-world ಕ್ಕೆ ಭೇಟಿ ನೀಡಿ.)