Arun Kumar Puthila: ಲೋಕಸಭೆ ಚುನಾವಣೆ, ಬಿಜೆಪಿಗೆ ಕರಾವಳಿಯಲ್ಲಿ ಬಂಡಾಯದ ಬಿಸಿ; ಸತ್ಯಜಿತ್ ಬಳಿಕ ಪುತ್ತಿಲ ಸ್ವತಂತ್ರ ಸ್ಪರ್ಧೆ ಘೋಷಣೆ
Feb 29, 2024 03:21 PM IST
ಅರುಣ್ ಕುಮಾರ್ ಪುತ್ತಿಲ (ಎಡ ಚಿತ್ರ); ಸತ್ಯಜಿತ್ ಸುರತ್ಕಲ್ (ಬಲ ಚಿತ್ರ)
ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರಕ್ಕೆ ಸಂಬಂಧಿಸಿದ ದೆಹಲಿಯಲ್ಲಿ ಬಿಜೆಪಿ ವರಿಷ್ಠರ ಮಹತ್ವದ ಸಭೆ ನಡೆದಿರುವಾಗ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕುತೂಹಲ ಕೆರಳಿಸಿದ್ದ ಪುತ್ತಿಲ ಪರಿವಾರದ ಸ್ಪರ್ಧೆ ಖಚಿತವಾಗಿದೆ. ಅರುಣ್ ಕುಮಾರ್ ಪುತ್ತಿಲ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಪರಿವಾರ ಘೋಷಿಸಿದೆ.
(ವರದಿ- ಹರೀಶ ಮಾಂಬಾಡಿ, ಮಂಗಳೂರು)
ಮಂಗಳೂರು: ಕೆಲ ದಿನಗಳ ಹಿಂದೆಯಷ್ಟೇ ಹಿಂದು ಮುಖಂಡ ಸತ್ಯಜಿತ್ ಸುರತ್ಕಲ್ ಜಿಲ್ಲಾ ಮಟ್ಟದ ಸಮಾವೇಶ ಮಾಡಿ, ಬಿಜೆಪಿ ಟಿಕೆಟ್ ಕೊಡಿ, ಇಲ್ಲವಾದರೆ ಸ್ವತಂತ್ರ ಸ್ಪರ್ಧೆಗೆ ರೆಡಿ ಎಂದು ಘಂಟಾಘೋಷವಾಗಿ ಹೇಳಿದ ಬೆನ್ನಿಗೇ ವಿಧಾನಸಭೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಹಿಂದು ಸಂಘಟನೆ ಮುಖಂಡ ಪುತ್ತೂರಿನ ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಯುವುದು ಬಹುತೇಕ ಖಚಿತವಾದ ಕುರಿತು ಬೆಂಬಲಿಗರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದರೊಂದಿಗೆ ಸತತ ನಾಲ್ಕನೇ ಬಾರಿ ಸ್ಪರ್ಧೆಗಿಳಿಯುವ ಹುಮ್ಮಸ್ಸಿನಲ್ಲಿದ್ದ ನಳಿನ್ ಸ್ಪರ್ಧೆಗೆ ಬಹಿರಂಗವಾಗಿಯೇ ಎರಡೂ ನಾಯಕರು ಸೆಡ್ಡು ಹೊಡೆದಿದ್ದು, ಕೊನೇ ಕ್ಷಣದ ಬದಲಾವಣೆಗಳು ನಡೆಯದಿದ್ದರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿಂದುತ್ವದ ಪ್ರತಿಪಾದಕರಿಂದಲೇ ಬಂಡಾಯದ ಬಿಸಿ ಕಾಡಲಿದೆ. ಅದರಲ್ಲೂ ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ನೀಡಿದರೆ, ಈ ಬಂಡಾಯ ತಾರಕಕ್ಕೇರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪುತ್ತಿಲ ಬಿಜೆಪಿ ಸೇರ್ಪಡೆಗೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದವು. ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕಗೊಂಡ ಬಳಿಕ ಈ ಆಕಾಂಕ್ಷೆಗಳು ಗರಿಗೆದರಿದ್ದವು. ಆದರೆ ಪುತ್ತಿಲ ಪರಿವಾರ ಸಭೆಯೊಂದನ್ನು ನಡೆಸಿ ಬಿಜೆಪಿಗೆ ಮೂರು ದಿನಗಳ ಗಡುವನ್ನು ನೀಡಿದ್ದರು. ಮೂರು ದಿನಗಳಾಗಿ ಹಲವು ದಿನಗಳಾದರೂ ಬಿಜೆಪಿ ಹೈಕಮಾಂಡ್ ಈ ಗಡುವಿಗೆ ಸಕಾರಾತ್ಮಕ ಸ್ಪಂದನೆ ಸಿಗಲಿಲ್ಲ. ಇದು ಪುತ್ತಿಲ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿತ್ತು.
ಅರುಣ್ ಕುಮಾರ್ ಪುತ್ತಿಲ ಸ್ಪರ್ಧೆ ಘೋಷಣೆ
ಇದೀಗ ಪುತ್ತಿಲ ಸ್ಪರ್ಧೆಗಿಳಿಯಲಿದ್ದಾರೆ ಎಂದು ಸ್ವತಃ ಅವರ ಬೆಂಬಲಿಗರು ಪತ್ರಿಕಾಗೋಷ್ಠಿ ಮಾಡಿ ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಸ್ಪರ್ಧೆ ಮಾಡಲಿದ್ದಾರೆ ಎಂದು ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಪುತ್ತೂರಿನಲ್ಲಿ ಗುರುವಾರ ಬೆಳಗ್ಗೆ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಬಿಜೆಪಿ ಪಕ್ಷದ ನಾಯಕರಾದ ಯಡಿಯೂರಪ್ಪ, ಸಂತೋಷ್, ವಿಜಯೇಂದ್ರ, ಸತೀಶ್ ಕುಂಪಲ, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಅವರೊಂದಿಗೆ ಮಾತುಕತೆ ನಡೆದಿತ್ತು. ಎಲ್ಲರಿಂದಲೂ ಸಕಾರಾತ್ಮಕವಾಗಿ ಸ್ಪಂದನೆ ಸಿಕ್ಕಿದೆ. ಅದರೆ ಇಲ್ಲಿನ ತನಕ ಯಾವ ನಿರ್ಧಾರವನ್ನು ಅವರು ಕೈಗೊಂಡಿಲ್ಲ. ಹಾಗಾಗಿ ಪುತ್ತಿಲ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದರು.
ಇನ್ನು ಬಹಿರಂಗವಾಗಿ ಮಂಡಲ ಅಧ್ಯಕ್ಷ ನೀಡಬೇಕೆಂದು ಬೇಡಿಕೆ ಇಟ್ಟಿದ್ದೆವು ಆದರೆ ಅದ್ಯಾವುದು ಸಫಲವಾಗಿಲ್ಲ. ಕಾರ್ಯಕರ್ತರ ಒತ್ತಾಸೆಯಂತೆ ಅರುಣ್ ಕುಮಾರ್ ಪುತ್ತಿಲ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಬಿಜೆಪಿಗೆ ಮತ್ತಷ್ಟು ಬಂಡಾಯ?
ಅರುಣ್ ಕುಮಾರ್ ಪುತ್ತಿಲ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ವಲ್ಪ ಮತಗಳ ಅಂತರದಿಂದ ಕಾಂಗ್ರೆಸ್ ಪಕ್ಷದ (ಹಿಂದೊಮ್ಮೆ ಬಿಜೆಪಿ ಒಲವಿದ್ದ) ಅಶೋಕ್ ಕುಮಾರ್ ರೈ ವಿರುದ್ಧ ಸೋಲು ಕಂಡವರು. ಅದು ವೀರೋಚಿತ ಸೋಲು ಎಂದು ಪುತ್ತಿಲ ಪರಿವಾರದವರು ಹೇಳುತ್ತಾರೆ. 60 ಸಾವಿರಕ್ಕೂ ಅಧಿಕ ಮತಗಳನ್ನು ಪುತ್ತಿಲ ಪಡೆದರೆ, ಬಿಜೆಪಿ ಅಭ್ಯರ್ಥಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು.
ಸಂಘ ಪರಿವಾರದ ನಾಯಕರ ಸತತ ನೆಗೆಟಿವ್ ಕ್ಯಾಂಪೇನ್ ಬಳಿಕವೂ ಪುತ್ತಿಲ ಪಡೆ ಗಟ್ಟಿಯಾಗಿ ಅರುಣ್ ಪುತ್ತಿಲ ಬೆನ್ನಿಗೆ ನಿಂತಿತ್ತು. ಅದಾದ ಬಳಿಕ ಪುತ್ತೂರಿನಲ್ಲಿ ನಡೆದ ಅಹಿತಕರ ಘಟನೆಗಳಲ್ಲಿ ಪುತ್ತಿಲ ಪರ ಯುವಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರಲಾಗಿತ್ತು. ಬಳಿಕ ನಡೆದ ಗ್ರಾಪಂ ಚುನಾವಣೆ ಹಾಗೂ ನಗರಸಭಾ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಅಭ್ಯರ್ಥಿಯನ್ನು ನಿಲ್ಲಿಸಿ ಶಕ್ತಿಪ್ರದರ್ಶನ ಮಾಡಿತ್ತು. ದಕ್ಷಿಣ ಕನ್ನಡ ಜಿಲ್ಲೆ ಲೋಕಸಭೆ ಚುನಾವಣೆಯ ಮತದಾರರ ಪೈಕಿ ಪುತ್ತೂರು, ಸುಳ್ಯ, ಬೆಳ್ತಂಗಡಿ ಭಾಗದ ಹಲವು ಕಾರ್ಯಕರ್ತರು ಪುತ್ತಿಲ ಕಡೆಗೆ ನಿಲ್ಲುತ್ತಾರೆ ಎಂಬ ಭರವಸೆ ಪುತ್ತಿಲ ಪರಿವಾರಕ್ಕಿದೆ.
ಮಂಗಳೂರಲ್ಲೂ ಪುತ್ತಿಲ ಕಡೆ ಬೆಂಬಲ ದೊರಕಬಹುದು ಎಂಬ ನಿರೀಕ್ಷೆಯೂ ಇದೆ. ಬಿಜೆಪಿ ಸರಿಯಾದ ಸ್ಥಾನಮಾನ ಕೊಡದಿದ್ದರೆ, ಪಕ್ಷೇತರರಾಗಿ ಸ್ಪರ್ಧೆಗಿಳಿಯಬೇಕು ಎಂದು ಬೆಂಬಲಿಗರು ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರು ತಮ್ಮ ನಾಯಕ ಪಕ್ಷೇತರರಾಗಿ ಸ್ಪರ್ಧೆಗಿಳಿಯಲಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಸತ್ಯಜಿತ್ ಸುರತ್ಕಲ್ ದಶಕಗಳಿಂದ ಹಿಂದುತ್ವ ಸಂಘಟನೆಯ ಯುವಪಡೆ ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಹೀಗಾಗಿ ಬಿಜೆಪಿಗೆ ಚುನಾವಣೆಗೆ ಮೊದಲೇ ಬಂಡಾಯದ ಬಿಸಿ ತಾಗಿದೆ.
(ವರದಿ- ಹರೀಶ ಮಾಂಬಾಡಿ, ಮಂಗಳೂರು)
(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)