ರೈಲು ಪ್ರಯಾಣಿಕರಿಗೆ ಗುಡ್‍ನ್ಯೂಸ್: ಇನ್ಮುಂದೆ ರಾತ್ರಿಯಲ್ಲ ಸಂಜೆಗೇ ಬೆಂಗಳೂರು ತಲುಪಲಿದೆ ಮಂಗಳೂರು ರೈಲು
Aug 04, 2024 08:15 AM IST
ಬೆಳಗ್ಗೆ 11.30ಕ್ಕೆ ಹೊರಟು, ರಾತ್ರಿ 8.45ಕ್ಕೆ ತಲುಪುತ್ತಿದ್ದ ಮಂಗಳೂರು - ಯಶವಂತಪುರ (ಬೆಂಗಳೂರು) ರೈಲು ಸಮಯ ಬದಲಾವಣೆ ಆಗಿದೆ.
Indian Railways Train Schedule; ಮಂಗಳೂರಿನಿಂದ ಬೆಂಗಳೂರಿಗೆ ಹಗಲು ವೇಳೆ ರೈಲಿನಲ್ಲಿ ಪ್ರಯಾಣಿಸುವವರು 11.30ಕ್ಕೆ ಕೂತರೆ ಅದು ಯಶವಂತಪುರ ತಲುಪುವಾಗ ರಾತ್ರಿ 8.45 ಆಗುತ್ತಿತ್ತು. ಕ್ರಾಸಿಂಗ್ ಇದ್ದರೆ 10 ಗಂಟೆ ಆದರೂ ಆಯ್ತು. ಬೆಳಗ್ಗೆ ರೈಲು ಹೊರಡಬೇಕೆಂಬ ಈ ಭಾಗದ ಪ್ರಯಾಣಿಕರ ಬಹಳ ದಿನಗಳ ಬೇಡಿಕೆ ಈಗ ಈಡೇರಿದೆ. (ವರದಿ: ಹರೀಶ್ ಮಾಂಬಾಡಿ, ಮಂಗಳೂರು)
ಮಂಗಳೂರು: ಮಂಗಳೂರಿನಿಂದ ಬೆಂಗಳೂರಿಗೆ ಮಧ್ಯಾಹ್ನದ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ರೈಲ್ವೇ ಇಲಾಖೆ ಸಂತಸದ ಸುದ್ದಿ ನೀಡಿದೆ. ಮಧ್ಯಾಹ್ನ ಹೊರಡುವ ರೈಲಿನ ಸಮಯವನ್ನು ಬೆಳಗ್ಗೆಗೆ ಬದಲಾಯಿಸುವಂತೆ ಈ ಭಾಗದ ಪ್ರಯಾಣಿಕರ ಬೇಡಿಕೆಯಾಗಿತ್ತು. ಇದೀಗ ಬಹುದಿನಗಳ ಬೇಡಿಕೆಯ ಕನಸು ಸಾಕಾರಾಗೊಂಡಿದ್ದು, ಪ್ರಯಾಣಿಕರಿಗೆ ರೈಲ್ವೇ ಇಲಾಖೆ ಸಂತಸದ ಸುದ್ದಿ ನೀಡಿದೆ. ಬೆಳಗ್ಗೆ 11.30ಕ್ಕೆ ಹೊರಟು, ರಾತ್ರಿ 8.45ಕ್ಕೆ ತಲುಪುತ್ತಿದ್ದ ಮಂಗಳೂರು-ಯಶವಂತಪುರ (ಬೆಂಗಳೂರು) ರೈಲು ಸಮಯ ಬದಲಾಯಿಸಿದೆ. 2024ರ ನವೆಂಬರ್ 1ರಿಂದ ಹೊಸ ವೇಳಾಪಟ್ಟಿ ಜಾರಿಗೆ ಬರಲಿದೆ.
ಹೌದು, ಬೆಳಗ್ಗೆ 11.30ಕ್ಕೆ ಹೊರಡುತ್ತಿದ್ದ ರೈಲಿನ ಸಮಯವನ್ನು ಬೆಳಗ್ಗೆ 7 ಗಂಟೆಗೆ ಬದಲಾಯಿಸಲಾಗಿದೆ. ವಾರದಲ್ಲಿ ಮೂರು ದಿನ ಸಂಚರಿಸುವ ಮಂಗಳೂರು ಜಂಕ್ಷನ್-ಯಶವಂತಪುರ (ರೈಲು ಸಂಖ್ಯೆ 16576) ವೇಳಾಪಟ್ಟಿ ಬದಲಾವಣೆಯಾಗಿದೆ. ಪರಿಷ್ಕೃತ ವೇಳಾಪಟ್ಟಿ ಪ್ರಕಾರ, ಈ ರೈಲು ಬೆಳಿಗ್ಗೆ 7 ಗಂಟೆಗೆ ಮಂಗಳೂರು ಜಂಕ್ಷನ್ನಿಂದ ಹೊರಟರೆ ಸಂಜೆ 4.30ಕ್ಕೆ ಬೆಂಗಳೂರಿನ ಯಶವಂತಪುರ ನಿಲ್ದಾಣ ತಲುಪಲಿದೆ.
ಹೊಸ ವೇಳಾಪಟ್ಟಿ ಹೀಗಿರಲಿದೆ
ಮಂಗಳೂರು ಜಂಕ್ಷನ್ನಿಂದ 7 ಗಂಟೆಗೆ ರೈಲು ಹೊರಡುತ್ತದೆ. ಬಂಟ್ವಾಳಕ್ಕೆ 7.35ಕ್ಕೆ ಆಗಮಿಸಿ, ಹೊರಡುತ್ತದೆ. ಕಬಕ ಪುತ್ತೂರಿನಿಂದ 8.22, ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಿಂದ 9.10, ಸಕಲೇಶಪುರದಿಂದ 11.40ಕ್ಕೆ, ಆಲೂರಿನಿಂದ ಮಧ್ಯಾಹ್ನ 12.15ಕ್ಕೆ, ಹಾಸನದಿಂದ 1.10ಕ್ಕೆ ಚನ್ನರಾಯಪಟ್ಟಣದಿಂದ 1.22ಕ್ಕೆ, ಶ್ರವಣಬೆಳಗೊಳದಿಂದ 1.32ಕ್ಕೆ, ಬಾಲಗಂಗಾಧರನಾಥ ನಗರ ನಿಲ್ದಾಣದಿಂದ 1.59ಕ್ಕೆ, ಯಡಿಯೂರಿನಿಂದ 2.12ಕ್ಕೆ, ಕುಣಿಗಲ್ನಿಂದ 2.25ಕ್ಕೆ, ನೆಲಮಂಗಲದಿಂದ 3ಕ್ಕೆ, ಚಿಕ್ಕಬಾಣಾವರದಿಂದ 3.45ಕ್ಕೆ ಹೊರಡಲಿದೆ. ಸೋಮವಾರ, ಬುಧವಾರ ಹಾಗೂ ಶುಕ್ರವಾರ ರೈಲು ಮಂಗಳೂರು ಜಂಕ್ಷನ್ನಿಂದ ಹೊರಡಲಿದೆ.
ಸಂಸದ ಬ್ರಿಜೇಶ್ ಚೌಟ ಕೃತಜ್ಞತೆ
ಇನ್ನು ರೈಲ್ವೇ ವೇಳಾಪಟ್ಟಿ ಬದಲಾವಣೆ ಆದ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಬ್ರಿಜೇಶ್ ಚೌಟ ಕೃತಜ್ಞತೆ ಸಲ್ಲಿಸಿದ್ದಾರೆ. ಮಂಗಳೂರು ಜಂಕ್ಷನ್ - ಯಶವಂತಪುರ ನಡುವೆ ಚಲಿಸುವ ರೈಲು ಸಂಖ್ಯೆ 16576 ರ ಸಮಯಗಳಲ್ಲಿ ಬದಲಾವಣೆಯನ್ನು ರೈಲ್ವೆ ಸಚಿವಾಲಯ ತಂದಿದೆ. ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರಿಗೆ ಸಲ್ಲಿಸಿದ ಮನವಿಯ ಮೇರೆಗೆ ಈ ಬದಲಾವಣೆಯನ್ನು ತರಲಾಗಿದೆ. ಈ ರೈಲು ಬೆಳಿಗ್ಗೆ 7 ಗಂಟೆಗೆ ಮಂಗಳೂರಿನಿಂದ ಹೊರಟು ಸಂಜೆ 4.30ಕ್ಕೆ ಬೆಂಗಳೂರಿನ ಯಶವಂತಪುರ ತಲುಪಲಿದೆ.
'ರೈಲ್ವೆ ಸಚಿವಾಲಯವು ತಂದಿರುವ ಈ ಬದಲಾವಣೆಯಿಂದ ಮಂಗಳೂರು ಮತ್ತು ಬೆಂಗಳೂರು ನಡುವಿನ ಪ್ರಯಾಣಿಕರಿಗೆ ಬಹಳ ಅನುಕೂಲವಾಗಲಿದೆ' ಎಂದು ಸಂಸದರು ತಿಳಿಸಿದ್ದಾರೆ. ತನ್ನ ಮನವಿಗೆ ಸ್ಪಂದಿಸಿ ಬಹು ಕಾಲದಿಂದ ಬಾಕಿ ಉಳಿದಿದ್ದ ಬೆಂಗಳೂರು ಮತ್ತು ಮಂಗಳೂರು ನಡುವಿನ ಪ್ರಯಣಿಕರ ಈ ಬೇಡಿಕೆಯನ್ನು ಈಡೇರಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಶ್ಣವ್ ಮತ್ತು ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಸಂಸದರು ಧನ್ಯವಾದ ಸಲ್ಲಿಸಿದ್ದಾರೆ.
(ವರದಿ:ಹರೀಶ್ ಮಾಂಬಾಡಿ, ಮಂಗಳೂರು)
ವಿಭಾಗ