ಮುಂಗಾರು ಮಳೆ; ದಕ್ಷಿಣ ಕನ್ನಡ ಶಾಲೆಗಳಿಗೆ ನಾಳೆ ರಜೆ, ಧಾರಾಕಾರ ಮಳೆಗೆ ಹಲವೆಡೆ ಹಲವು ಸಮಸ್ಯೆ, ರೆಡ್ ಅಲರ್ಟ್ ಘೋಷಣೆ
Jun 26, 2024 08:02 PM IST
ಮುಂಗಾರು ಮಳೆ; ದಕ್ಷಿಣ ಕನ್ನಡ ಶಾಲೆಗಳಿಗೆ ನಾಳೆ ರಜೆ, ಧಾರಾಕಾರ ಮಳೆಗೆ ಹಲವೆಡೆ ಹಲವು ಸಮಸ್ಯೆ, ರೆಡ್ ಅಲರ್ಟ್ ಘೋಷಣೆ.
ಮುಂಗಾರು ಮಳೆ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಶಾಲೆಗಳಿಗೆ ನಾಳೆ ರಜೆ ಘೋಷಿಸಿರುವ ಜಿಲ್ಲಾಡಳಿತವು, ತುರ್ತು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಇದೇ ವೇಳೆ, ಧಾರಾಕಾರ ಮಳೆಗೆ ಹಲವೆಡೆ ಹಲವು ಸಮಸ್ಯೆಗಳಾಗಿವೆ. ಭಾರಿಮಳೆಯಾಗುತ್ತಿರುವ ಕಾರಣ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಹಾನಿಗಳು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ಗುರುವಾರ ರೆಡ್ ಎಲರ್ಟ್ ಘೋಷಿಸಲಾಗಿದ್ದು, ಶಾಲೆಗಳಿಗೆ ಜೂನ್ 27ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚನೆ ಹೊರಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಅಂಗನವಾಡಿ, ಸರಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜೂನ್ 27ರಂದು ರಜೆಯನ್ನು ಘೋಷಿಸಲಾಗಿದೆ.
ಸಂಭಾವ್ಯ ಪ್ರವಾಹ, ಭೂಕುಸಿತ ಪ್ರದೇಶಗಳನ್ನು ಗುರುತಿಸಿ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿತೀರ, ಸಮುದ್ರ ತೀರಕ್ಕೆ ಸಾರ್ವಜನಿಕರು, ಪ್ರವಾಸಿಗರು ತೆರಳದಂತೆ ಜಾಗ್ರತೆ ವಹಿಸುವಂತೆ ಸೂಚನೆ ನೀಡಲಾಗಿದೆ.
ದಕ್ಷಿಣ ಕನ್ನಡದಲ್ಲಿ ಧಾರಾಕಾರ ಮಳೆ; ರೆಡ್ ಅಲರ್ಟ್ ಘೋಷಣೆ
ಮೀನುಗಾರರು ಸಮುದ್ರಕ್ಕೆ ಮೀನುಗಾರಿಕೆ ತೆರಳದಂತೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ವಿಪರೀತ ಮಳೆ ಇರುವ ಕಾರಣ ಸಾರ್ವಜನಿಕರು ನದಿಗಳ ತೋಡುಗಳ ಸಮೀಪ ಹೋಗದಂತೆ ಎಚ್ಚರಿಕೆ ವಹಿಸುವುದು. ಪ್ರಾಕೃತಿಕ ವಿಕೋಪದಿಂದ ಯಾವುದೇ ರೀತಿಯ ಘಟನೆಗಳು ಸಂಭವಿಸಿದಲ್ಲಿ, ಅಥವಾ ಸಂಭವಿಸಬಹುದಾದ ಸೂಚನೆ ಇದ್ದಲ್ಲಿ, ಸಾರ್ವಜನಿಕರು ಸಂಬಂಧಪಟ್ಟ ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳಿಗೆ ಮಾಹಿತಿ ನೀಡಲು ಸೂಚನೆ ನೀಡಲಾಗಿದೆ.
ಸಂಭಾವ್ಯ ಹಾನಿಗಳನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಪಾಯಕಾರಿ ಸನ್ನಿವೇಶಗಳಿಂದ ದೂರವಿದ್ದು, ಜಿಲ್ಲಾಡಳಿತದ ಸಲಹೆ ಸೂಚನೆಗಳನ್ನು ಪಾಲಿಸುವಂತೆ ಕೋರಲಾಗಿದೆ. ಪ್ರಾಕೃತಿಕ ವಿಕೋಪ ಇದ್ದರೆ, ತುರ್ತುಸೇವೆಗಳಿಗೆ ಟೋಲ್ ಫ್ರೀ ಸಂಖ್ಯೆಯಾದ 1077 ಮತ್ತು 0824-2442590 ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಭಾರಿ ಮಳೆ ಹಿನ್ನೆಲೆಯಲ್ಲಿ ಮಂಗಳೂರು ಸಹಿತ ಹಲವೆಡೆ ಟ್ರಾಫಿಕ್ ಜಾಮ್ ಇತ್ತು. ಸುರತ್ಕಲ್ ನಲ್ಲಿ ಹೊಂಡಕ್ಕೆ ವಾಹನ ಬಿದ್ದ ಘಟನೆ ನಡೆದಿದ್ದು, ಈ ಸಂದರ್ಭ ಸ್ಥಳದಲ್ಲೇ ಪ್ರತಿಭಟನೆ ನಡೆಯಿತು. ಕಲ್ಲಡ್ಕದಲ್ಲಿ ರಸ್ತೆ ಬ್ಲಾಕ್ ಆದ ವೇಳೆ ಕೆಲ ವಾಹನಗಳು ನರಿಕೊಂಬು ಬಾಳ್ತಿಲ ಮಾರ್ಗವಾಗಿ ಸಂಚರಿಸಿದವು. ಕಲ್ಲಡ್ಕದಲ್ಲಿ ಫ್ಲೈಓವರ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಾಹನಗಳು ನಿಧಾನವಾಗಿ ಚಲಿಸಿದವು. ಮಳೆಯಿಂದಾಗಿ ರಸ್ತೆಯಲ್ಲಿ ಕೆಸರು ತುಂಬಿತ್ತು.
ಮನೆಗಳು ಅಪಾಯದ ಸ್ಥಿತಿಯಲ್ಲಿ
ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಸಮಸ್ಯೆಗಳು ತಲೆದೋರಿವೆ. ವಿಶೇಷವಾಗಿ ಮಂಗಳೂರು ಮತ್ತು ಬಂಟ್ವಾಳ ತಾಲೂಕಿನಲ್ಲಿ ಮಳೆ ಜಾಸ್ತಿ ಸುರಿದಿದೆ. ಬಂಟ್ವಾಳ ಕಸಬಾ ಗ್ರಾಮದ ಹೊಸ್ಮಾರ್ ಎಂಬಲ್ಲಿ ಅಶೋಕ್ ಪೂಜಾರಿ ಹಾಗೂ ಗಣೇಶ ಪೂಜಾರಿ ಎಂಬುವರ ಬದಿಯ ಕಾಂಪೌಡ್ ಕುಸಿದು ರಸ್ತೆಗೆ ಬಿದ್ದಿದೆ. ಇದರಿಂದ ಎರಡು ಮನೆಗಳು ಅಪಾಯದ ಸ್ಥಿತಿಯಲ್ಲಿವೆ. ಮನೆಯವರಿಗೆ ಸ್ಥಳಾಂತರ ಮಾಡಲು ಕಂದಾಯ ಇಲಾಖಾಧಿಕಾರಿಗಳು ತಿಳಿಸಿದ್ದು ಸಂಬಂಧಿಕರ ಮನೆಗೆ ಸ್ಥಳಾಂತರ ಆಗಲು ಒಪ್ಪಿರುತ್ತಾರೆ. ಪುರಸಭೆ ಜೆಸಿಬಿ ಯಿಂದ ಮಣ್ಣು ತೆರವು ಕಾರ್ಯಾಚರಣೆ ಮಾಡಲಾಗಿದೆ. ಕಾಂಪೌಂಡ್ ಗೆ ತಡೆಗೋಡೆ ನಿರ್ಮಾಣದ ತುರ್ತು ಅವಶ್ಯಕತೆ ಇರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪುಣಚ ಗ್ರಾಮದ ಮಲ್ಲಿಕಟ್ಟೆ ಎಂಬಲ್ಲಿನ ನಿವಾಸಿಯಾದ ಭಾಸ್ಕರ ಬಿನ್ ಕಾಂತು ನಲಿಕೆ ಎಂಬವರ ಮನೆಯ ಆವರಣ ಗೋಡೆ ಕುಸಿದಿರುತ್ತದೆ. ಅಮ್ಟಾಡಿ ಗ್ರಾಮದ ಕಿನ್ನಿ ಬಿಟ್ಟು ನಿವಾಸಿ ಬ್ರಿಜಿತ್ ಡಿಕೋಸ್ಟ ರೈಮಂಡ್ ಡಿಕೋಸ್ಟ ರವರ ವಾಸ್ತವ್ಯದ ಮನೆಗೆ ತಾಗಿರುವ ಹಟ್ಟಿ ಹಾನಿಯಾಗಿರುತ್ತದೆ ಎಂದು ಕಂದಾಯ ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಡಿಸಿ ಜನಸ್ಪಂದನ ಸಭೆ ರದ್ದು: ಭಾರಿ ಮಳೆ ಹಾಗೂ ಉಳ್ಳಾಲ ತಾಲೂಕಿನಲ್ಲಿ ನಾಲ್ವರು ಮೃತಪಟ್ಟ ಹಿನ್ನೆಲೆಯಲ್ಲಿ ಸಚಿವರ ಭೇಟಿ ಮತ್ತಿತರ ಕೆಲಸ ಕಾರ್ಯಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಬುಧವಾರ ಮಧ್ಯಾಹ್ನ ನಿಗದಿಪಡಿಸಿದ್ದ ಜನಸ್ಪಂದನ ಸಭೆಯನ್ನು ರದ್ದುಗೊಳಿಸಿದರು. ಬಿ.ಸಿ.ರೋಡಿನ ಅಂಬೇಡ್ಕರ್ ಭವನದಲ್ಲಿ ಮಧ್ಯಾಹ್ನ 3 ಗಂಟೆಗೆ ಈ ಸಭೆ ನಿಗದಿಯಾಗಿತ್ತು.
(ವರದಿ- ಹರೀಶ್ ಮಾಂಬಾಡಿ, ಮಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.