Puttur Stabbing Case; ಪುತ್ತೂರು ವಿದ್ಯಾರ್ಥಿನಿಗೆ ಇರಿತ ಘಟನೆ, ದಿನವಿಡೀ ಆರೋಪ, ಪ್ರತ್ಯಾರೋಪದ ಸರಮಾಲೆ, 5 ಅಂಶಗಳಲ್ಲಿ ಪೂರ್ಣ ವಿವರ
Aug 21, 2024 04:11 PM IST
Puttur Stabbing Case; ಪುತ್ತೂರು ವಿದ್ಯಾರ್ಥಿನಿಗೆ ಇರಿತ ಘಟನೆ ಬಳಿಕ ನಿನ್ನೆ(ಆಗಸ್ಟ್ 20) ಸರ್ಕಾರಿ ಆಸ್ಪತ್ರೆ ಸಮೀಪ ಸೇರಿದ್ದ ಬಾಲಕಿಯ ಸಮುದಾಯದವರು, ಸೂಕ್ತ ತನಿಖೆ ನಡೆಸುವಂತೆ ಪೊಲೀಸರನ್ನು ಒತ್ತಾಯಿಸಿದರು.
Puttur Crime News; ಪುತ್ತೂರು ವಿದ್ಯಾರ್ಥಿನಿಗೆ ಇರಿತ ಘಟನೆ ರಾಜ್ಯಮಟ್ಟದಲ್ಲಿ ಗಮನಸೆಳೆದಿದ್ದು, ಮಂಗಳವಾರ ದಿನವಿಡೀ ಆರೋಪ, ಪ್ರತ್ಯಾರೋಪದ ಸರಮಾಲೆಯೇ ನಡೆದಿತ್ತು. ಸಂಜೆ ವೇಳೆ ಪೋಕ್ಸೊ ಪ್ರಕರಣ ದಾಖಲಾಯಿತು. ಹಾಗಾದರೆ ನಡೆದದ್ದೇನು? 5 ಅಂಶಗಳಲ್ಲಿ ಪ್ರಕರಣದ ಪೂರ್ಣ ವಿವರ ನೀಡುವ ಪ್ರಯತ್ನ ಇದು. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳಿಗೆ ಅದೇ ಕಾಲೇಜಿನ ವಿದ್ಯಾರ್ಥಿಯೊಬ್ಬ ಇರಿದು ಗಾಯಗೊಳಿಸಿರುವುದಾಗಿ ಆಪಾದಿಸಿದ ಹಿನ್ನೆಲೆಯಲ್ಲಿ ಇಡೀ ದಿನ ಪುತ್ತೂರಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.
ಇಬ್ಬರೂ ಅಪ್ರಾಪ್ತ ವಯಸ್ಕರಾಗಿರುವ ಹಿನ್ನೆಲೆಯಲ್ಲಿ ಕಾನೂನಿನ ಪ್ರಕಾರ, ವಿಚಾರಣೆ, ಹೇಳಿಕೆ ಪಡೆದುಕೊಳ್ಳುವ ಪ್ರಕ್ರಿಯೆಯನ್ನು ಪೊಲೀಸರು ನಡೆಸುತ್ತಿದ್ದು, ಇದೀಗ ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ. ಘಟನೆ ನಡೆದಿದೆ ಎಂದು ಆಪಾದಿಸಿ, ವಿದ್ಯಾರ್ಥಿನಿ ಆಸ್ಪತ್ರೆಗೆ ದಾಖಲಾದ ತರುವಾಯ, ಮಂಗಳವಾರ ದಿನವಿಡೀ ಎಸ್.ಡಿ.ಪಿ.ಐ, ಕಾಂಗ್ರೆಸ್, ಬಿಜೆಪಿ, ಹಿಂದು ಸಂಘಟನೆಗಳು ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ, ಘಟನೆಯನ್ನು ನಿಷ್ಪಕ್ಷಪಾತವಾಗಿ ಗಮನಿಸಿ, ತನಿಖೆ ನಡೆಸಬೇಕು ಎಂದು ಪಟ್ಟುಹಿಡಿದವು.
ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿ ಇಬ್ಬರೂ ಭಿನ್ನ ಸಮುದಾಯಕ್ಕೆ ಸೇರಿದವರಾದ ಹಿನ್ನೆಲೆಯಲ್ಲಿ ಆತಂಕದ ಪರಿಸ್ಥಿತಿಯೂ ನಿರ್ಮಾಣವಾಯಿತು. ಸಾಮಾಜಿಕ ಜಾಲತಾಣಗಳು ಘಟನೆಯ ಕುರಿತು ಚಿತ್ರವಿಚಿತ್ರ ಮಾಹಿತಿಯನ್ನು ಬಿತ್ತರಿಸಿ, ಆತಂಕದ ಬೆಂಕಿಗೆ ತುಪ್ಪ ಸುರಿಯಿತು. ಈ ಮಧ್ಯೆ ಆರೋಪಿ ಎನ್ನಲಾದ ವಿದ್ಯಾರ್ಥಿಯನ್ನು ಬಿಡುಗಡೆ ಮಾಡಲಾಗಿದೆ ಎಂಬ ಮಾಹಿತಿ ಹರಿದಾಡಿದರೂ ಪೊಲೀಸರು ಇದನ್ನು ಖಚಿತಪಡಿಸಿಲ್ಲ. ಕಾನೂನಾತ್ಮಕ ಪ್ರಕ್ರಿಯೆಗಳನ್ನಷ್ಟೇ ಮಾಡಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದು, ಸದ್ಯ ಪೋಕ್ಸೊ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ. ಇದುವರೆಗೆ ನಡೆದ ಘಟನೆಯ ವಿವರಗಳು ಇಲ್ಲಿವೆ.
ಮಂಗಳವಾರ ದಿನವಿಡೀ ಏನೇನು ನಡೆಯಿತು?
1) ಬೆಳಗ್ಗೆ 8ರಿಂದ 9.30ರವರೆಗಿನ ಘಟನೆ: ಪ್ರಕರಣ ಇನ್ನೂ ತನಿಖೆ ಹಂತದಲ್ಲಿದ್ದು, ದಿನವಿಡೀ ಊಹಾಪೋಹಗಳು ಹರಿದಾಡಿದವು. ಸೋಮವಾರ ಬೆಳಗ್ಗೆ ಘಟನೆ ನಡೆದಿದೆ ಎಂದು ಆಪಾದಿಸಲಾಗಿದೆ. ಆದರೂ ಸ್ಥಳೀಯ ಸುದ್ದಿಮಾಧ್ಯಮಗಳಲ್ಲಿ ಬಿತ್ತರವಾದ ಮಾಹಿತಿಯಂತೆ ಎಂದಿನಂತೆಯೇ ಬೆಳಗ್ಗೆ 8.30ರ ವೇಳೆ ಕಾಲೇಜಿಗೆಂದು ವಿದ್ಯಾರ್ಥಿನಿಯೊಬ್ಬಳು ಪೇಟೆಯ ಮಾರ್ಗದ ಮೂಲಕ ಆಗಮಿಸುತ್ತಾಳೆ. ಕಾಲೇಜಿನಲ್ಲಿ ತನಗೆ ಗಾಯವಾಗಿದೆ ಎಂದು ಶಿಕ್ಷಕರಿಗೆ ತಿಳಿಸಿದ್ದಾಗಿ ವಿದ್ಯಾರ್ಥಿನಿ ಹೇಳಿದ್ದು, ಬಳಿಕ ಆಕೆ ಚಿಕಿತ್ಸೆಗೆ ಆಸ್ಪತ್ರೆಗೆ ತೆರಳಿದ್ದಾಳೆ. ವಿದ್ಯಾರ್ಥಿನಿಯ ಮನೆಯವರು ಆಗಮಿಸಿದ್ದು, ಬಳಿಕ ವಿದ್ಯಾರ್ಥಿನಿಯೇ ವಿಡಿಯೋ ಹೇಳಿಕೆ ಮೂಲಕ ತನಗೆ ಆಪಾದಿತ ವಿದ್ಯಾರ್ಥಿ ಇರಿದಿದ್ದಾನೆ ಎಂದಿದ್ದಾಳೆ ಎನ್ನಲಾಗಿದೆ.
2) ಬೆಳಗ್ಗೆ 9.30ರಿಂದ ಮಧ್ಯಾಹ್ನದವರೆಗಿನ ಘಟನೆ: ವಿದ್ಯಾರ್ಥಿನಿ ಹೇಳಿಕೆಯ ಬಳಿಕ ವಿದ್ಯಾರ್ಥಿನಿ ತಾಯಿ ನೀಡಿದ ದೂರಿನ ಪ್ರಕಾರ ಪುತ್ತೂರು ಪೊಲೀಸರು ಕಾಲೇಜಿಗೆ ಆಗಮಿಸಿದ್ದಾರೆ. ಕಾಲೇಜಿಗೆ ಆಗಮಿಸಿ, ಸಿಸಿಟಿವಿ ವಿಡಿಯೋ ಪರಿಶೀಲನೆ ನಡೆಸಿದ್ದಾರೆ. ಆಕೆಯ ಜತೆಗಿದ್ದ ಬೇರೆ ವಿದ್ಯಾರ್ಥಿಗಳ ಬಳಿ ಮಾಹಿತಿ ಕಲೆ ಹಾಕಿದ್ದಾರೆ. ಆರೋಪಿ ಎನ್ನಲಾದ ವಿದ್ಯಾರ್ಥಿಯನ್ನು ಕರೆದುಕೊಂಡು ವಿಚಾರಣೆ ನಡೆಸಿದ್ದಾರೆ. ವಿದ್ಯಾರ್ಥಿಗಳಿಬ್ಬರ ಸಹಪಾಠಿಗಳನ್ನು ಕರೆಯಿಸಿ, ವಾಸ್ತವ ಸಂಗತಿಯೇನು ಎಂಬ ಕುರಿತು ಮಾಹಿತಿ ಸಂಗ್ರಹಣೆ ಮಾಡಿದ್ದಾರೆ. ಕಾಲೇಜಿನ ಆವರಣದೊಳಗೆ ಘಟನೆ ಆಗಿದೆಯೇ ಅಥವಾ ಹೊರಗೆ ಆಗಿದೆಯೇ, ಅಥವಾ ಹೇಳಿಕೆಯಲ್ಲೇನಾದರೂ ತಪ್ಪಿದೆಯೇ, ವಾಸ್ತವವೇನು ಎಂಬ ಕುರಿತು ತನಿಖೆ ಆರಂಭಿಸಿದ್ದಾರೆ.
3) ಸಂಘಟನೆಗಳ ಪ್ರವೇಶ, ಧರ್ಮದಂಗಲ್‌ಗೆ ಯತ್ನ: ಮಧ್ಯಾಹ್ನದ ಹೊತ್ತಿಗಾಗಲೇ ಸೋಶಿಯಲ್ ಮೀಡಿಯಾ ತನ್ನ ಕೆಲಸ ಮಾಡಿದೆ. ತಲೆಗೊಂದರಂತೆ ಮಾಹಿತಿಯನ್ನು ಹಂಚಲಾಗಿದೆ. ಅಷ್ಟು ಹೊತ್ತಿಗೆ ಇಬ್ಬರೂ ಭಿನ್ನ ಧರ್ಮದ ವಿದ್ಯಾರ್ಥಿಗಳು ಎಂಬ ವಿಚಾರ ಸಂಘಟನೆಗಳಿಗೆ ಗೊತ್ತಾಗಿದೆ. ಆಸ್ಪತ್ರೆಗೆ ಒಂದು ಸಮುದಾಯದ ನೂರಾರು ಮಂದಿ ಆಗಮಿಸಿ, ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಪೊಲೀಸರು ಆಸ್ಪತ್ರೆ ಮುಂಭಾಗ ಬಿಗು ಬಂದೋಬಸ್ತ್ ಮಾಡಿ, ಮುಖಂಡರನ್ನು ಸಮಾಧಾನಪಡಿಸಿದ್ದಾರೆ. ಗಾಯವು ಗಾಜು ತಗಲಿ ಆದದ್ದು ಎಂದು ಪೊಲೀಸರಿಗೆ ತಿಳಿಸುವಂತೆ ಕಾಲೇಜಿನ ಉಪನ್ಯಾಸಕಿಯೊಬ್ಬರು ಹೇಳಿದ್ದಾರೆ ಎಂಬ ಸುದ್ದಿ ಹರಡಿ, ಅವರನ್ನು ಕಾಲೇಜಿನಿಂದ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.
4) ಸಂಜೆಯ ಬಳಿಕ ಕ್ಷಿಪ್ರ ಘಟನಾವಳಿಗಳು, ಎಫ್‌ಐಆರ್ ದಾಖಲು: ವಿದ್ಯಾರ್ಥಿನಿಗೆ ಗಾಯವಾಗಿದ್ದು ಹೇಗೆ, ಯಾವುದರಿಂದ ಇರಿಯಲಾಗಿದೆ, ಹೇಗೆ ಆಗಿದೆ, ನಿಜಕ್ಕೂ ನಡೆದದ್ದೇನು? ಇದು ಕೇವಲ ಮಕ್ಕಳ ಜಗಳವೇ, ಅದಕ್ಕೆ ಕೋಮುಬಣ್ಣ ಬಳಿಯಲಾಗುತ್ತಿದೆಯೇ ಎಂಬಿತ್ಯಾದಿ ಚರ್ಚೆಗಳು ಆರಂಭಗೊಳ್ಳುತ್ತಿದ್ದಂತೆ, ನಾನಾ ರಾಜಕೀಯ ಪಕ್ಷಗಳ ಮುಖಂಡರು ಮಾಧ್ಯಮಗಳಿಗೆ ಹೇಳಿಕೆ ನೀಡಲು ಆರಂಭಿಸಿದ್ದಾರೆ. ಪುತ್ತೂರು ಬ್ಲಾಕ್ ಕಾಂಗ್ರೆಸ್, ಎಸ್.ಡಿ.ಪಿ.ಐ., ಎನ್.ಎಸ್.ಯು.ಐ. ಸಹಿತ ವಿವಿಧ ಸಂಘಟನೆಗಳ ಪ್ರಮುಖರು ವಿದ್ಯಾರ್ಥಿನಿ ದಾಖಲಾಗಿದ್ದ ಪುತ್ತೂರು ಸರಕಾರಿ ಆಸ್ಪತ್ರೆ ಮುಂದೆ ಜಮಾಯಿಸಿ, ಘಟನೆ ಖಂಡಿಸಿ ವಿದ್ಯಾರ್ಥಿಯನ್ನು ಬಂಧಿಸಿ, ಶಿಕ್ಷೆ ವಿಧಿಸುವಂತೆ ಒತ್ತಾಯಹಿಸಿದ್ದಾರೆ. ನಗರಸಭೆ ಸದಸ್ಯ ರಿಯಾಜ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರೋಶನ್ ರೈ, ಎಸ್.ಡಿ.ಪಿ.ಐ. ಅಧ್ಯಕ್ಷ ಇಬ್ರಾಹಿಂ ಸಾಗರ್, ಜಿಪಂ ಮಾಜಿ ಸದಸ್ಯ ಎಂ.ಎಸ್.ಮಹಮ್ಮದ್ ಮತ್ತಿತರರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಇದೇ ವೇಳೆ ಸ್ಥಳೀಯ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಸತ್ಯಾಸತ್ಯತೆಯ ತನಿಖೆ ಮಾಡುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ. ಬಿಜೆಪಿ ಮುಖಂಡರಾದ ಸಾಜ ರಾಧಾಕೃಷ್ಣ ಆಳ್ವ ಇಡೀ ಪ್ರಕರಣದಲ್ಲಿ ಅನುಮಾನ ವ್ಯಕ್ತಪಡಿಸಿ, ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ನಡೆಸಬೇಕೆಂದು ಹೇಳಿದ್ದಾರೆ.
5) ಅರುಣ್ ಪುತ್ತಿಲ ಹೇಳಿರುವುದೇನು?: ಈ ಮಧ್ಯೆ ಹಿಂದು ಮುಖಂಡ ಹಾಗೂ ಬಿಜೆಪಿ ನಾಯಕ ಅರುಣ್ ಪುತ್ತಿಲ ಸುದ್ದಿಗಾರರೊಂದಿಗೆ ಮಾತನಾಡಿ, ಪುತ್ತೂರಿನ ಜೂನಿಯರ್ ಕಾಲೇಜಿನ ವಿದ್ಯಾರ್ಥಿನಿಗೆ ಚೂರಿ ಇರಿತ ಎಂಬ ಆರೋಪದ ಬಗ್ಗೆ ಅನುಮಾನವಿದ್ದು ತನಿಖೆ ನಡೆಸಿ ಶೀಘ್ರ ಸತ್ಯಾಸತ್ಯ ಹೊರತರಬೇಕು ಎಂದಿದ್ದಾರೆ. ಪುತ್ತೂರಿನ ಕೊಂಬೆಟ್ಟು ಜ್ಯೂನಿಯರ್ ಕಾಲೇಜಿನ ವಿದ್ಯಾರ್ಥಿನಿಗೆ ಚೂರಿ ಇರಿತ ಎಂಬ ಆರೋಪದ ಬಗ್ಗೆ ಕ್ಷಣಕ್ಕೊಂದು ಹೇಳಿಕೆ ಬಗ್ಗೆ ಅನುಮಾನ ಸೃಷ್ಟಿಯಾಗಿದ್ದು, ಶೀಘ್ರ ಪೊಲೀಸರು ತನಿಖೆ ನಡೆಸಿ ಸತ್ಯಸತ್ಯತೆ ಹೊರ ತರಬೇಕು ಮೊದಲು ಚೂರಿಯಿಂದ ಇರಿತ ಎಂಬ ಹೇಳಿಕೆ ಮಾಧ್ಯಮಗಳಲ್ಲಿ ವರದಿಯಾಗಿತ್ತು, ನಂತರ ಆಸ್ಪತ್ರೆಯಲ್ಲಿ ಅಪ್ರಾಪ್ತ ಬಾಲಕಿಯ ವಿಡಿಯೋ ಬಿಡುಗಡೆಗೊಳಿಸಲಾಯಿತು. ಇದೀಗ ಚೂರಿ ಎಂಬ ಆರೋಪದ ಬದಲು ಬ್ಲೇಡ್, ಗ್ಲಾಸ್ ನಿಂದ ಇರಿದಿದ್ದಾರೆ ಎಂಬ ಆರೋಪ ಬದಲಾಗುತ್ತಿರುವುದು ಮಾಧ್ಯಮ ವರದಿ ಮೂಲಕ ತಿಳಿದುಬಂತು. ಶಿಕ್ಷಣ ಕ್ಷೇತ್ರದಲ್ಲಿ ನಡೆದ ಘಟನೆಯ ಸತ್ಯಸತ್ಯತೆಯನ್ನು ಶೀಘ್ರ ಪೊಲೀಸರು ತನಿಖೆ ನಡೆಸಿ ಹೊರತರಬೇಕು. ಯಾವೂದೇ ರಾಜಕೀಯ ಒತ್ತಡಕ್ಕೆ ಪೊಲೀಸ್ ಇಲಾಖೆ ಬಗ್ಗದೆ ಘಟನೆಯ ನೈಜತೆಯನ್ನು ಶೀಘ್ರ ಹೊರತರಬೇಕು ಎಂದಿದ್ದಾರೆ.
ಎಫ್‌ಐಆರ್ ಕಾಪಿಯಲ್ಲೇನಿದೆ?
ಪ್ರಕರಣದ ಕುರಿತು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಥಮ ವರ್ತಮಾನ ವರದಿ ಹೀಗಿದೆ.
ದಿನಾಂಕ 20.08.2024 ರಂದು ಬೆಳಿಗ್ಗೆ, ಪ್ರಕರಣದ ಪಿರ್ಯಾದಿದಾರರಾದ ಸಂತ್ರಸ್ತ ಬಾಲಕಿ ತಾನು ವ್ಯಾಸಂಗ ಮಾಡುತ್ತಿರುವ ಪುತ್ತೂರಿನ ಕಾಲೇಜಿಗೆ ತೆರಳುತ್ತಿದ್ದಾಗ, ಬಾಲಕಿಯ ಹಿಂಬಾಲಿಸಿಕೊಂಡು ಬಂದ ಆಕೆಯ ಪರಿಚಯದ ಆರೋಪಿ ಬಾಲಕ (ಕಾನೂನಿನೊಂದಿಗೆ ಸಂಘರ್ಷಕ್ಕೊಳಗಾದ), ಪ್ರೀತಿಸುತ್ತಿರುವ ವಿಚಾರದಲ್ಲಿ ಮಾತನಾಡಿರುತ್ತಾನೆ. ಈ ವೇಳೆ ಸದ್ರಿ ಬಾಲಕಿಯು ಆತನ ಪ್ರೀತಿಯನ್ನು ನಿರಾಕರಿಸಿದ್ದು, ಇದರಿಂದ ಕೋಪಗೊಂಡ ಬಾಲಕನು ಆತನ ಬಳಿ ಇದ್ದ ಯಾವುದೋ ಹರಿತ ಆಯುಧದಿಂದ ಸಂತ್ರಸ್ತೆಯ ಕೈಗೆ ತಿವಿದು ಪರಾರಿಯಾಗಿರುತ್ತಾನೆ. ಗಾಯಗೊಂಡ ಬಾಲಕಿಯು ಪುತ್ತೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ದ.ಕ ಮಹಿಳಾ ಪೊಲೀಸ್ ಠಾಣೆಯಲ್ಲಿ ಅ.ಕ್ರ: 42/2024 ಕಲಂ: 78, 126(2), 118(1), 238 BNS 2023 ಮತ್ತು ಕಲಂ 12 ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಲಾಗುತ್ತಿದೆ.