logo
ಕನ್ನಡ ಸುದ್ದಿ  /  ಕರ್ನಾಟಕ  /  Mangaluru News: ಕರಾವಳಿ ಕರ್ನಾಟಕದಲ್ಲಿ ಸಮುದ್ರದ ಅಲೆಗಳ ಅಬ್ಬರ; ಬೇಗನೆ ಕಾಣಿಸಿಕೊಂಡ ಕಡಲ್ಕೊರೆತ

Mangaluru News: ಕರಾವಳಿ ಕರ್ನಾಟಕದಲ್ಲಿ ಸಮುದ್ರದ ಅಲೆಗಳ ಅಬ್ಬರ; ಬೇಗನೆ ಕಾಣಿಸಿಕೊಂಡ ಕಡಲ್ಕೊರೆತ

HT Kannada Desk HT Kannada

Jun 12, 2023 08:33 PM IST

google News

ಕರಾವಳಿ ಕರ್ನಾಟಕದಲ್ಲಿ ಕಡಲ್ಕೊರೆತ

  • Mangaluru News: ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಡಲಿನ ಅಲೆಗಳು ತೀರ ಪ್ರದೇಶಗಳಿಗೆ ಅಪ್ಪಳಿಸಲು ಆರಂಭವಾಗಿವೆ. ಪ್ರತಿ ಮಳೆಗಾಲದಲ್ಲೂ ಕಡಲ್ಕೊರೆತ ಕಾಣಿಸಿಕೊಳ್ಳುತ್ತದೆ. ಈ ಬಾರಿ ಚಂಡಮಾರುತ ಎಫೆಕ್ಟ್ ನಿಂದ ಜೂನ್ ಆದಿಯಲ್ಲೇ ಕಡಲಬ್ಬರ.

ಕರಾವಳಿ ಕರ್ನಾಟಕದಲ್ಲಿ ಕಡಲ್ಕೊರೆತ
ಕರಾವಳಿ ಕರ್ನಾಟಕದಲ್ಲಿ ಕಡಲ್ಕೊರೆತ (Harish MG / HT Kannada)

ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಕಡಲ ಅಲೆಗಳ ಅಬ್ಬರ ಜೋರಾಗಿದೆ. ಕೆಲವು ಮನೆಗಳನ್ನೇ ಅದು ಬೀಳಿಸಿದೆ. ದೈತ್ಯಗಾತ್ರದಂತೆ ತೋರುವ ಅಲೆಗಳು ಕಾಣಿಸಲಾರಂಭಿಸಿವೆ. ಪ್ರತಿ ಮಳೆಗಾಲದಲ್ಲೂ ಕಡಲ್ಕೊರೆತ ಮಾಮೂಲು. ಈ ಬಾರಿಯೂ ಮುಂಗಾರು ಪ್ರವೇಶದ ಸಮಯದಲ್ಲೇ ಚಂಡಮಾರುತದ ಸನ್ನಿವೇಶ ಇದ್ದ ಕಾರಣ ಬೇಗನೇ ಕಡಲ್ಕೊರೆತ ಕಾಣಿಸಿಕೊಂಡಿದೆ.

ಉತ್ತರ ಕನ್ನಡ ಜಿಲ್ಲೆ ಮುರ್ಡೇಶ್ವರದಲ್ಲಿ ಅಲೆಗಳ ಅಬ್ಬರ ಹೆಚ್ಚಿದ್ದು, ಬೀಚ್ ನಲ್ಲಿರುವ ಅಂಗಡಿ, ಮಳಿಗೆಗಳತ್ತಲೂ ನೀರು ನುಗ್ಗುತ್ತಿತ್ತು. ಕಡಲತೀರಕ್ಕೆ ಬಂದ ಪ್ರವಾಸಿಗರು ಸುರಕ್ಷತೆ ಹಿನ್ನೆಲೆಯಲ್ಲಿ ಮರಳುತ್ತಿದ್ದಾರೆ. ಲೈಫ್‌ ಗಾರ್ಡ್‌ ಸಿಬ್ಬಂದಿ ಕಡಲಿಗಿಳಿಯದಂತೆ ಎಚ್ಚರಿಕೆ ನೀಡಿದರೂ ಕೆಲವರು ಸಮುದ್ರಕ್ಕಿಳಿಯುತ್ತಿರುವುದು ಕಂಡುಬಂದಿದೆ.

ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿಯದಂತೆ ಹಾಗೂ ಪ್ರವಾಸಿಗರು ಸಮುದ್ರದಲ್ಲಿ ಇಳಿಯದಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಆದರೂ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಬೀಚ್ ಗಳಲ್ಲಿ ಆಳ ಅರಿಯದ ಪ್ರವಾಸಿಗರು ಸಮುದ್ರದ ಪಕ್ಕ ಬಂದು ನಿಲ್ಲುತ್ತಿರುವುದು ಕಂಡುಬರುತ್ತಿದೆ.

ಮಂಗಳೂರಿನ ಪಣಂಬೂರು, ಉಳ್ಳಾಲ, ಸೋಮೇಶ್ವರ, ಬಟಪಾಡಿಗಳಲ್ಲಿ ಭಾನುವಾರವೇ ಕಡಲಂಚಿನಲ್ಲಿರುವ ಮನೆಗಳು, ತೆಂಗಿನ ಮರಗಳು ಸಮುದ್ರ ಪಾಲಾಗಿವೆ. ಉಡುಪಿ ಜಿಲ್ಲೆ ಮಲ್ಪೆ ಬೀಚಿನಲ್ಲಿ ಪ್ರವಾಸಿಗರು ಕಡಲಿಗೆ ಇಳಿಯದಂತೆ ಬೀಚಿನ ಸುಮಾರು 1 ಕಿ.ಮೀ.ನಷ್ಟುಉದ್ದಕ್ಕೂ ಸುರಕ್ಷತಾ ಬಲೆ ಹಾಗೂ ಕೆಂಪು ಬಾವುಟಗಳನ್ನು ಅಳವಡಿಸಲಾಗಿದೆ.

ಮಂಗಳೂರು ಶಾಸಕ, ಸ್ಪೀಕರ್‌ ಯು.ಟಿ.ಖಾದರ್‌ ಹಾಗೂ ಅಧಿಕಾರಿಗಳ ಜತೆಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅವರು ಭಾನುವಾರ ಉಚ್ಚಿಲ ಹಾಗೂ ಬಟಪಾಡಿಯಲ್ಲಿ ಕಡಲ್ಕೊರೆತಕ್ಕೆ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಮತ್ತೆ ತಡೆಗೋಡೆ ಆಶ್ವಾಸನೆ

ಪ್ರತಿ ಬಾರಿ ಕಡಲ್ಕೊರೆತವಾದಾಗಲೂ ಶಾಶ್ವತ ತಡೆಗೋಡೆ ನಿರ್ಮಾಣದ ವಿಚಾರ ಮುನ್ನಲೆಗೆ ಬರುತ್ತದೆ. ಆದರೆ ಅದು ಹಾಗೆಯೇ ಕಡಲಿನ ಪಾಲಾಗುತ್ತದೆ. ಈಗಾಗಲೇ ಸುಮಾರು 400 ಕೋಟಿ ರೂಗಳು ಕರಾವಳಿಯ ಮೂರು ಜಿಲ್ಲೆಗಳ ಕಡಲ್ಕೊರೆತ ಪರಿಹಾರಕ್ಕಾಗಿ ಆಯಾ ಕಾಲಕ್ಕೆ ಘೋಷಣೆಯಾಗಿದ್ದವು. ಆದರೆ ಅವುಗಳು ಮರಳದಿಬ್ಬ, ಕಲ್ಲು ಕಟ್ಟುವುದಂಥ ಕೆಲಸಗಳಿಗೆ ಮುಗಿದವೇ ವಿನಃ ಶಾಶ್ವತ ಪರಿಹಾರ ಮರೀಚಿಕೆಯಾದವು.

ಕರ್ನಾಟಕದ 152.73 ಕಿ.ಮೀ. ತೀರವನ್ನು ಸಮುದ್ರ ಕೊರೆತ ವಲಯಗಳೆಂದು ಬಹಳ ಹಿಂದೆಯೇ ಗುರುತಿಸಲಾಗಿತ್ತು. ಸಮುದ್ರದ ಅಂಚಿನವರೆಗೂ ನಗರಗಳು ಬೆಳೆದಿರುವ ಪರಿಣಾಮ ಸಾಮಾನ್ಯವಾಗಿ ಉತ್ತರ ಕನ್ನಡ ಕರಾವಳಿಗಿಂತ ಅವಿಭಜಿತ ದಕ್ಷಿಣ ಕನ್ನಡ ಕರಾವಳಿಯಲ್ಲೇ ಕಡಲ್ಕೊರೆತ ಪರಿಣಾಮ ಹೆಚ್ಚಾಗುತ್ತಿದೆ ಎಂದು ವಿಶ್ಲೇಶಿಷಲಾಗುತ್ತಿದೆ.

ಹೀಗಾಗಿಯೇ ಕಡಲ್ಕೊರೆತ ಮತ್ತು ತಡೆಗೋಡೆ ಕಾಮಗಾರಿಗಳೂ ಇಲ್ಲಿ ನಿರಂತರವಾಗಿ ಕಾಣಿಸುತ್ತದೆ.ಉಳ್ಳಾಲವನ್ನು ಕರ್ನಾಟಕದಲ್ಲೇ ಅತ್ಯಂತ ಅಪಾಯದಲ್ಲಿರುವ ತೀರ ಎಂದು ಕೇಂದ್ರ ಜಲ ನಿಗಮ ಗುರುತಿಸಿತ್ತು. ಇದೀಗ ಕಳೆದ ಎರಡು ದಿನಗಳಿಂದ ಉಳ್ಳಾಲ ಭಾಗದಲ್ಲಿ ಕಡಲಿನ ಮೊರೆತ, ಭೂಕೊರೆತ ಕಾಣಿಸಿಕೊಂಡಿವೆ.

(ವರದಿ: ಹರೀಶ ಮಾಂಬಾಡಿ, ಮಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ