Mangaluru News: ಹೊಸ ಚಾರಣ ಪಥ ಸೃಷ್ಟಿಯಿಂದ ಪಶ್ಚಿಮ ಘಟ್ಟಕ್ಕೇ ಅಪಾಯ; ಪರಿಸರವಾದಿಗಳ ಆತಂಕ
Aug 24, 2023 04:52 PM IST
ಹೊಸ ಚಾರಣ ಪಥ ಸೃಷ್ಟಿಯಿಂದ ಪಶ್ಚಿಮ ಘಟ್ಟಕ್ಕೇ ಅಪಾಯ; ಪರಿಸರವಾದಿಗಳ ಆತಂಕ
- ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ಪರಿಸರವಾದಿಗಳು ಕುದುರೆಮುಖ ಪ್ರದೇಶದಲ್ಲಿ ಹೊಸ ಚಾರಣ ಮಾರ್ಗಗಳನ್ನು ತೆರೆಯುವ ಪ್ರಸ್ತಾಪವನ್ನು ವಿರೋಧಿಸಿದ್ದಾರೆ. ಇದಕ್ಕೆ ಕಾರಣಗಳನ್ನು ಅವರು ಹೀಗೆ ನೀಡುತ್ತಾರೆ.
ಮಂಗಳೂರು: ಬೆಟ್ಟ, ಗುಡ್ಡಗಳನ್ನು ಕಂಡೊಡನೆ ಅದರಲ್ಲಿ ಏನಿದೆ ಎಂದು ಉತ್ಸಾಹದಿಂದ ಚಾರಣ ಮಾಡುವ ಹವ್ಯಾಸ ಹಲವರಿದೆ. ಹೀಗಿದ್ದರೆ ಒಳ್ಳೆಯದೇ, ಪ್ರಕೃತಿಯ ಕುರಿತ ಪಾಠವನ್ನು ನೇರವಾಗಿ ಸಂದರ್ಶಿಸುವ ಮೂಲಕ ಕಲಿತಂತಾಗುತ್ತದೆ. ಆದರೆ ಇಂಥ ನೈಜ ಉತ್ಸಾಹಿ ಚಾರಣಿಗರಲ್ಲದೆ, ಮೋಜು, ಮಸ್ತಿಗಾಗಿಯೇ ಬೆಟ್ಟ, ಗುಡ್ಡಗಳನ್ನು ಏರುವವರಿದ್ದಾರೆ. ಜೋರಾಗಿ ಕೂಗಾಡುವುದು, ಬೆಟ್ಟದಲ್ಲಿ ಮೌನವಾಗಿ ಕುಳಿತ ಪಕ್ಷಿ, ಪ್ರಾಣಿಗಳನ್ನು ಬೆಚ್ಚಿಬೀಳಿಸುವುದು, ಕ್ಯಾಂಪ್ ಫೈರ್ ಹೆಸರಲ್ಲಿ ಬೆಂಕಿ ಹಚ್ಚಿ ಕಾಡ್ಗಿಚ್ಚಿಗೆ ಕಾರಣವಾಗುವುದು, ಮದ್ಯಪಾನಗೋಷ್ಠಿಗಳನ್ನು ಆಯೋಜಿಸಿ, ಅಲ್ಲೇ ಬಾಟಲಿಗಳನ್ನು ಎಲ್ಲೆಂದಲ್ಲಿ ಎಸೆಯುವುದು, ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು, ಹೀಗೆ ಪ್ರಕೃತಿಯ ಸೌಂದರ್ಯ ಸವಿಯಲೆಂದು ಬರುವ ನೆಪದಲ್ಲಿ ವನ್ಯಪ್ರದೇಶವನ್ನು ತಮ್ಮ ಚಟುವಟಿಕೆಗಳನ್ನು ನಿರ್ಭಿಡೆಯಾಗಿ ನಡೆಸಲು ಅಡಗುದಾಣವನ್ನಾಗಿಸುವವರೂ ಇದ್ದಾರೆ. ಇಂಥವರಿಂದ ಪಶ್ಚಿಮ ಘಟ್ಟಕ್ಕೇ ಅಪಾಯವಿದೆ ಎನ್ನುತ್ತಾರೆ ಪ್ರವಾಸಿಗರು. ಹೀಗಾಗಿಯೇ ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ಪರಿಸರವಾದಿಗಳು ಕುದುರೆಮುಖ ಪ್ರದೇಶದಲ್ಲಿ ಹೊಸ ಚಾರಣ ಮಾರ್ಗಗಳನ್ನು ತೆರೆಯುವ ಪ್ರಸ್ತಾಪವನ್ನು ವಿರೋಧಿಸಿದ್ದಾರೆ.
ಯಾತಕ್ಕಾಗಿ ಈ ವಿರೋಧ, ಮನವಿಯಲ್ಲಿ ಹೇಳಿದ್ದೇನು
ತಿರಿಮರಿಗುಪ್ಪೆ, ಬಂಗಾರಬಳಿಗೆಯ ಎಳನೀರು ಜಲಪಾತಗಳು ಮತ್ತು ಸೂಜಿಗುಡ್ಡೆಗಳಿಗೆ ಹೊಸ ಚಾರಣ ಮಾರ್ಗಗಳನ್ನು ತೆರೆಯದಂತೆ ಮನವಿಯೊಂದಿಗೆ ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಕೆ ಅವರನ್ನು ಭೇಟಿ ಮಾಡಿದ್ದೇವೆ ಎಂದು ಸಹ್ಯಾದ್ರಿ ಸಂಚಯದ ಸಂಚಾಲಕ ದಿನೇಶ್ ಹೊಳ್ಳ ತಿಳಿಸಿದ್ದಾರೆ. ಈ ಸಂದರ್ಭ ಪರಿಸರ ಪ್ರೇಮಿಗಳಾದ ಸಚಿನ್ ಮುಂಡಾಜೆ, ಅವಿನಾಶ್ ಭಿಡೆ, ಪ್ರತಾಪ್ ಶೆಣೈ ಉಪಸ್ಥಿತರಿದ್ದರು.
ದುರ್ಬಲವಾದ ಪಶ್ಚಿಮ ಘಟ್ಟಗಳ ವಲಯವು ಹಲವಾರು ನದಿಗಳು ಮತ್ತು ಉಪನದಿಗಳಿಗೆ ಜನ್ಮಸ್ಥಳವಾಗಿದೆ. ಈಗಾಗಲೇ ಕುದುರೆಮುಖ ಶಿಖರ ಮತ್ತು ನೇತ್ರಾವತಿ ಶಿಖರಗಳಿಗೆ ಚಾರಣಕ್ಕೆ ಹೋಗಲು ಅವಕಾಶವಿದೆ ಮತ್ತು ಸಾವಿರಾರು ಚಾರಣಿಗರು ಈ ಸ್ಥಳಗಳಿಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದಾರೆ. ಎಲ್ಲಾ ಚಾರಣಿಗರು ಪ್ರಕೃತಿಯ ಉತ್ಸಾಹಿಗಳಲ್ಲ ಮತ್ತು ಅನೇಕರಿಗೆ ಚಾರಣಕ್ಕೆ ಹೋಗುವುದು ಶುದ್ಧ ಮನರಂಜನೆಯ ವಿಷಯವಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ, ಚಾರಣಿಗರು ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಮದ್ಯದ ಬಾಟಲಿಗಳನ್ನು ಎಸೆಯುತ್ತಾರೆ, ಅದೇ ಸಮಯದಲ್ಲಿ ಜೋರಾಗಿ ಸಂಭಾಷಣೆಯಲ್ಲಿ ತೊಡಗುತ್ತಾರೆ ಮತ್ತು ಜೋರಾಗಿ ಸಂಗೀತ ನುಡಿಸುತ್ತಾರೆ. ಈ ನಡವಳಿಕೆಯು ಸ್ಥಳೀಯ ಪ್ರಾಣಿಗಳ ಜನಸಂಖ್ಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು, ಎಂದು ಅವರು ಹೇಳಿದರು.
ಮಡಿಕೇರಿ, ಚಿಕ್ಕಮಗಳೂರು, ಸಕಲೇಶಪುರದಲ್ಲಿ ಪರಿಸರಕ್ಕೆ ಆಗಿರುವ ಹಾನಿಯನ್ನು ಈಗಾಗಲೇ ಗಮನಿಸಿದ್ದೇವೆ. ಹೊಸ ಮಾರ್ಗಗಳನ್ನು ತೆರೆಯುವುದರಿಂದ ದುರ್ಬಲ ಪ್ರದೇಶಗಳಲ್ಲಿ ಹೋಂಸ್ಟೇಗಳ ಸಂಖ್ಯೆಯಲ್ಲಿ ಕ್ರಮೇಣ ಏರಿಕೆಯಾಗಲಿದೆ ಎಂದು ಅವರು ಹೇಳಿದರು.
ಪಶ್ಚಿಮ ಘಟ್ಟಗಳಿಗೆ ಉಂಟಾಗುವ ಅಪಾಯಗಳ ಕುರಿತು ದಿನೇಶ್ ಹೊಳ್ಳ ವಿವರಿಸಿದ್ದು ಹೀಗೆ
ದಕ್ಷಿಣ ಭಾರತದ ಸಕಲ ಜೀವ ಸಂಕುಲಗಳ ಬದುಕಿನ ಚೇತನಾ ಶಕ್ತಿಯೇ ಆಗಿರುವ ಪಶ್ಚಿಮ ಘಟ್ಟ ಇಂದು ಮಾನವ ಸಾಮ್ರಾಜ್ಯದ ವ್ಯಾವಹಾರಿಕ ದೃಷ್ಟಿಕೋನದಿಂದಾಗಿ ತನ್ನ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದೆ. ನಮ್ಮನ್ನಾಳುವವರ ಅಭಿವೃದ್ಧಿ ಎಂಬ ಅಸಂಬದ್ಧ ಯೋಜನೆಗಳಿಂದಾಗಿ ಪಶ್ಚಿಮ ಘಟ್ಟವು ತನ್ನ ಪ್ರಾಕೃತಿಕ ಪ್ರತೀಕಾರವನ್ನು ತೀರಿಸುತ್ತಾ ಬರುತ್ತಿದೆ. ಈ ವರುಷದ ಮಳೆಯನ್ನೇ ಗಮನಿಸಿದರೆ ಇದು ನಾವು ಪ್ರಕೃತಿಯ ಮೇಲೆ ಮಾಡಿರುವ ದರ್ಪ, ದಬ್ಬಾಳಿಕೆಯ ಪ್ರತಿಫಲ ಎನ್ನಬಹುದು. ಅತಿವೃಷ್ಟಿ, ಅನಾವೃಷ್ಟಿಯ ಪರಿಣಾಮವಾಗಿ ಮಳೆಯ ಏರುಪೇರುನಿಂದಾಗಿ ಬರಗಾಲದ ಕರಾಳ ಛಾಯೆ ನಮನ್ನಾವರಿಸುತ್ತಿದೆ. ಪಶ್ಚಿಮ ಘಟ್ಟವನ್ನು ಅದರ ಪಾಡಿಗೆ ಬಿಟ್ಟು, ನಾವು ಯಾವುದೇ ಹಸ್ತಕ್ಷೇಪವನ್ನು ಮಾಡದೇ ಸುಮ್ಮನಿದ್ದರೂ ಅದು ನೆಮ್ಮದಿಯಾಗಿ ಇರಬಹುದು. ಪಶ್ಚಿಮ ಘಟ್ಟದ ಶಿಖರ, ಕಾನನ, ಜಲಪಾತಗಳಿಗೆ ಈಗ ಚಾರಣಕ್ಕೆ ಅಂತ ಬರುವವರು ಹೆಚ್ಚಾಗುತ್ತಿದ್ದಾರೆ. ಕೇವಲ ಚಾರಣಿಗರಾಗಿ ಪ್ರಕೃತಿಯ ಕಾಳಜಿಗೆ, ಜಾಗೃತಿಗೆ ಆದ್ಯತೆ ಕೊಡುವುದಾದರೆ ಓಕೆ. ಆದರೆ ಇಂದು ಕೇವಲ ಮೋಜು, ಮಸ್ತಿ, ಗೌಜಿಗೆ ಬರುವವರೇ ಹೆಚ್ಚಾಗುತ್ತಿದ್ದಾರೆ. ಬೆಟ್ಟ ಕಣಿವೆಯ ಅಲ್ಲಲ್ಲಿ ಕಸ, ಪ್ಲಾಸ್ಟಿಕ್ ತ್ಯಾಜ್ಯ ಎಸೆದು ಮಾಲಿನ್ಯ ಮಾಡುವವರು ಚಾರಣಕ್ಕೆ ಬರದೇ ಇರುವುದು ಒಳಿತು. ಮೌನವಾಗಿರುವ ಬೆಟ್ಟ ಕಾಡಿನ ನಡುವೆ ಕಿರುಚುವುದು, ಧೂಮಪಾನ, ಮದ್ಯಪಾನ, ಸಾಮೂಹಿಕ ನೃತ್ಯ, ಅಸಭ್ಯ ವರ್ತನೆ ಹೆಚ್ಚಾಗುತ್ತಿದೆ.
ಕುದುರೆಮುಖ ಮತ್ತು ಹಿರಿ ಮರಿ ಗುಪ್ಪೆ ( ನೇತ್ರಾವತಿ ಪೀಕ್ ) ಶಿಖರಗಳಿಗೆ ಸಾವಿರಾರು ಚಾರಣಿಗರು ಜಾತ್ರೆಯ ಹಾಗೆ ಬರುತ್ತಿದ್ದಾರೆ. ಇದೀಗ ಕುದುರೆಮುಖದ ಸಮೀಪದ ಸೂಜಿಗಲ್ಲು ಬೆಟ್ಟ, ಬಂಗ್ರಬಲಿಕೆ, ಎಳನೀರು ಜಲಪಾತ ಕ್ಕೂ ಚಾರಣ ಪಥ ಮಾಡಿಕೊಡಬೇಕೆಂಬ ಬೇಡಿಕೆ ಬಂದಿದೆ. ಈ ಹೊಸ ಚಾರಣ ಪಥ ನೇತ್ರಾವತಿ ನದಿಯ ಮೂಲ ಸ್ಥಾನದ ಸೂಕ್ಷ್ಮ ಜೀವ ವೈವಿದ್ಯತಾ ತಾಣವಾಗಿರುವುದರಿಂದ ಇಂತಹ ಪ್ರದೇಶಗಳಿಗೆ ಮಾನವ ಹೆಜ್ಜೆ ಬೀಳದೇ ಇರುವುದು ಕ್ಷೇಮವೇ. ಈಗಾಗಲೇ ನೇತ್ರಾವತಿ ನದಿಯು ವರ್ಷದಿಂದ ವರ್ಷಕ್ಕೆ ಬಡಕಲಾಗುತ್ತಾ ಇದ್ದು ದಕ್ಷಿಣ ಕನ್ನಡ ಜಿಲ್ಲೆಗೆ ನೀರಿನ ಸಮಸ್ಯೆ ಆಗುತ್ತಾ ಇದೆ. ಅದಲ್ಲದೆ ಈ ಪ್ರದೇಶವು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಇದ್ದು ವನ್ಯಜೀವಿ ಕಾರಿಡಾರ್ ಆಗಿರುತ್ತದೆ. ಆದುದರಿಂದ ಇಂತಹ ಸೂಕ್ಷ್ಮ ಪ್ರದೇಶದಲ್ಲಿ ಯಾವುದೇ ಮಾನವ ಹಸ್ತ ಕ್ಷೇಪ ಆಗದೇ ಇದ್ದರೆ ನೇತ್ರಾವತಿ ನದಿ ಮತ್ತು ಅಮೂಲ್ಯ ಪಶ್ಚಿಮ ಘಟ್ಟವು ನೆಮ್ಮದಿಯಾಗಿ ಇರಬಹುದು. ಈ ಬಗ್ಗೆ ಕುದುರೆ ಮುಖ ರಾಷ್ಟ್ರೀಯ ಉದ್ಯಾನವನದ ವನ್ಯ ಜೀವಿ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿಯವರಿಗೆ ಮಂಗಳೂರಿನ ಸಹ್ಯಾದ್ರಿ ಸಂಚಯ ಮತ್ತು ಮುಂಡಾಜೆಯ ' ಹಸಿರು ತಪಸ್ಸು ' ಸಂಘಟನೆ ಮೂಲಕ ಮನವಿ ನೀಡಿದ್ದೇವೆ. ರಾಜ್ಯ ಅರಣ್ಯ ಸಚಿವರಿಗೂ ಕಳುಹಿಸಲಾಗಿದೆ ಎಂದರು.
(ವರದಿ: ಹರೀಶ ಮಾಂಬಾಡಿ, ಮಂಗಳೂರು)