logo
ಕನ್ನಡ ಸುದ್ದಿ  /  ಕರ್ನಾಟಕ  /  Mangaluru News: ಡಿಪ್ರೆಶನ್ ನಿಂದ ಊರು ಸುತ್ತುತ್ತಿದ್ದ ಮೇಘರಾಜ್ ಮರಳಿ ಕೇರಳದ ಮನೆಗೆ; ಮಂಗಳೂರಿನ ವೈಟ್ ಡೌಸ್ ತಂಡದ ಪ್ರಯತ್ನ

Mangaluru News: ಡಿಪ್ರೆಶನ್ ನಿಂದ ಊರು ಸುತ್ತುತ್ತಿದ್ದ ಮೇಘರಾಜ್ ಮರಳಿ ಕೇರಳದ ಮನೆಗೆ; ಮಂಗಳೂರಿನ ವೈಟ್ ಡೌಸ್ ತಂಡದ ಪ್ರಯತ್ನ

HT Kannada Desk HT Kannada

Jun 20, 2023 11:14 AM IST

google News

ಮಾನಸಿಕ ರೋಗಿಯಾಗಿದ್ದ (ಎಡಗಡೆ ಚಿತ್ರ) ಮೇಘರಾಜ್‌ನನ್ನು ಗುಣಪಡಿಸಿ ಮನೆ ಸೇರಿಸಿದ ವೈಟ್‌ ಡೌಸ್‌ ತಂಡ

    • White Doves Success Story: ಡಿಪ್ರೆಶನ್ ನಿಂದ ಬಳಲುತ್ತಿದ್ದ ಕೇರಳದ ಯುವಕನೋರ್ವ ನಾಪತ್ತೆಯಾಗಿ ಮಂಗಳೂರಿನಲ್ಲಿ ಮಾನಸಿಕ ಅಸ್ವಸ್ಥನಾಗಿ ತಿರುಗಾಡುತ್ತಿದ್ದವನನ್ನು ನಗರದ ವೈಟ್ ಡೌಸ್ ತಂಡ ಈತನನ್ನು ಗುಣಮುಖನನ್ನಾಗಿ ಮಾಡಿ ಮನೆಯವರ ಜೊತೆ ಸೇರಿಸಿದ್ದಾರೆ.
ಮಾನಸಿಕ ರೋಗಿಯಾಗಿದ್ದ (ಎಡಗಡೆ ಚಿತ್ರ) ಮೇಘರಾಜ್‌ನನ್ನು ಗುಣಪಡಿಸಿ ಮನೆ ಸೇರಿಸಿದ ವೈಟ್‌ ಡೌಸ್‌ ತಂಡ
ಮಾನಸಿಕ ರೋಗಿಯಾಗಿದ್ದ (ಎಡಗಡೆ ಚಿತ್ರ) ಮೇಘರಾಜ್‌ನನ್ನು ಗುಣಪಡಿಸಿ ಮನೆ ಸೇರಿಸಿದ ವೈಟ್‌ ಡೌಸ್‌ ತಂಡ

ಮಂಗಳೂರು: ಮಂಗಳೂರಿನ ಪಡೀಲ್ ನಲ್ಲಿ ಇರುವ ಕಾಡುಪ್ರದೇಶದಲ್ಲಿ ಮಾನಸಿಕ ಅಸ್ವಸ್ಥನಂತೆ ತಿರುಗಾಡುತ್ತಿದ್ದ ಯುವಕನೋರ್ವನನ್ನು ಕನಿಕರದಿಂದ ಮಂಗಳೂರಿನ ಸ್ವಯಂಸೇವಾ ಸಂಸ್ಥೆಯಾದ ವೈಟ್ ಡೌಸ್ ತಂಡದವರು ಕರೆದುಕೊಂಡು ವಾಹನಕ್ಕೆ ಹತ್ತಿಸಿಕೊಂಡರು. ನೋಡನೋಡುತ್ತಿದ್ದಂತೆ ವಾಹನದ ಕಿಟಕಿಯಿಂದ ಈತ ಹಾರಲು ಪ್ರಯತ್ನಪಟ್ಟ. ಆದರೆ ಸಾಧ್ಯವಾಗಲಿಲ್ಲ. ಬಳಿಕ ಸಂಸ್ಥೆಯ ಹಾಸ್ಟೆಲ್ ನಲ್ಲಿ ಇರಿಸಲಾಯಿತು. ಆಗ ಕಟ್ಟಡದ ಮೇಲ್ಭಾಗದಿಂದ ಪೈಪ್ ಮೂಲಕ ಸರಸರನೆ ಇಳಿದು ಪರಾರಿಯಾದ. ಕೆಲ ಸಮಯದ ಬಳಿಕ ಮಂಗಳೂರಿನ ಕುಂಟಿಕಾನದ ಬಳಿ ಮತ್ತೆ ಪತ್ತೆಯಾದ. ಹೀಗೆ ಮಾನಸಿಕ ಸ್ಥಿಮಿತ ಕಳೆದುಕೊಂಡು ತಿರುಗಾಡುತ್ತಿದ್ದ ಈ ಯುವಕನ ಬಗ್ಗೆ ಮಿಸ್ಸಿಂಗ್ ಕಂಪ್ಲೈಂಟ್ ಒಂದು ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ದಾಖಲಾಗಿತ್ತು. ಅವನೀಗ ಮರಳಿ ಮನೆಗೆ ಸೇರಿದ್ದಾನೆ.

ಇವನು ಕೇರಳದ ಕೊಟ್ಟಾಯಂ ಜಿಲ್ಲೆಯ ಚಂಗನಶ್ಶೇರಿಯ ತ್ರಿಕೋಡಿನಂನ ಮೇಘರಾಜ್ 27 ವರ್ಷದ ಈತ 2022 ನವೆಂಬರ್ ನಲ್ಲಿ ಕೇರಳದ ತನ್ನ ಮನೆಯಿಂದ ನಾಪತ್ತೆಯಾಗಿದ್ದ. ಈತನನ್ನು ಹುಡುಕಾಡಿ ಸಾಕಾಗಿದ್ದ ಮನೆಯವರು ಕೇರಳದ ಕೊಟ್ಟಾಯಂ ನ ತ್ರಿಕೋಡಿನಂ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದರು.

ಹೀಗೆ ನಾಪತ್ತೆಯಾಗಿದ್ದ ಮೇಘರಾಜ್ ಮಂಗಳೂರಿನಲ್ಲಿ ‌ಮಾನಸಿಕ ಅಸ್ವಸ್ಥ ನಾಗಿ ತಿರುಗಾಡುತ್ತಿದ್ದ. ಮಂಗಳೂರಿನ ಪಡೀಲ್ ನ ಅರಣ್ಯ ಪ್ರದೇಶದಲ್ಲಿ ಮಾನಸಿಕ ಅಸ್ವಸ್ಥನಾಗಿ ತಿರುಗಾಡುತ್ತಿದ್ದ ಈತನನ್ನು ವೈಟ್ವಡೌಸ್ ಸಂಸ್ಥೆಯ ಕೊರಿನಾ ರಸ್ಕಿನಾ ಅವರ ನೇತೃತ್ವದಲ್ಲಿ ಸಂಸ್ಥೆಗೆ ಕರೆ ತಂದು ಉಪಚರಿಸಲಾಯಿತು. ಈತ ಆ ಸಂದರ್ಭವೂ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ. ಆತನನ್ನು ಕರೆದುಕೊಂಡು ಬರುತ್ತಿದ್ದಾಗಲೇ ಆತ ವಾಹನದ ಕಿಟಕಿಯಿಂದ ಹಾರಲು ಯತ್ಮಿಸಿದ್ದ. ಆ ಬಳಿಕ ವೈಟ್ ಡೌಸ್ ಸಂಸ್ಥೆಯ ಕಟ್ಟಡದ ಮೇಲ್ಬಾಗದಿಂದ ಪೈಪ್ ಮೂಲಕ ಕೆಳಗಿಳಿದು ಪರಾರಿಯಾಗಿದ್ದ. ಆ ಬಳಿಕ ಆತನನ್ನು ಕುಂಟಿಕಾನದ ಎ ಜೆ ಆಸ್ಪತ್ರೆಯ ಬಳಿ ಪತ್ತೆ ಹಚ್ಚಿ ಮತ್ತೆ ಚಿಕಿತ್ಸೆ ನೀಡಲಾಯಿತು. ಆತ ತಪ್ಪಿಸಿಕೊಂಡು ಹೋಗುವ ಜಾಯಮಾನ ಹೊಂದಿದ್ದ ಕಾರಣ ಆತನನ್ನು ವೈಟ್ ಡೌಸ್ ಸಂಸ್ಥೆಯ ಸೆಲ್ ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗಿತ್ತು.

ಚಿಕಿತ್ಸೆಯಿಂದ ಗುಣಮುಖನಾಗಿದ್ದ ಮೇಘರಾಜ್ ತನ್ನ ಊರಿನ ಹೆಸರನ್ನು ಹೇಳಿದ್ದ. ವೈಟ್ ಡೌಸ್ ಸಂಸ್ಥೆ ಸಿಬ್ಬಂದಿಗಳು ತ್ರಿಕೋಡಿನಂ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದಾಗ ಆತ ನಾಪತ್ತೆಯಾಗಿರುವ ದೂರು ದಾಖಲಾಗಿರುವ ಬಗ್ಗೆ ತಿಳಿಸಿದ್ದರು. ತ್ರಿಕೋಡಿನಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಅನ್ಸಾರಿ, ಪೊಲೀಸ್ ಸಿಬ್ಬಂದಿ ಸೆಲ್ವರಾಜ್, ಮೇಘರಾಜ್ ನ ಅಣ್ಣ ತಾರನಾಥ್, ಅಣ್ಣನ ಗೆಳೆಯ ಶ್ಯಾಮ್ ಜಿತ್, ಸೋದರ ಸಂಬಂಧಿ‌ ಕಣ್ಣನ್ ಅವರು ಇಂದು ವೈಟ್ ಡೌಸ್ ಸಂಸ್ಥೆಗೆ ಆಗಮಿಸಿ ಮೇಘರಾಜ್ ನನ್ನು ಕರೆದುಕೊಂಡು ಹೋಗಿದ್ದಾರೆ.

ಮೇಘರಾಜ್ ತನ್ನ ಮನೆಯವರು ಬರುವರೆಂದು ಕಾದಿದ್ದು, ತನ್ನನ್ನು ಕರೆದುಕೊಂಡು ಹೋಗಲು ಅಣ್ಣ ಬಂದಾಗ ಸಂತೋಷಗೊಂಡಿದ್ದಾನೆ. ತನ್ನ ಅಣ್ಣನ ಮೊಬೈಲ್ ‌ನಿಂದ ತಾಯಿ ಮತ್ತು ಅತ್ತಿಗೆಯ ಜೊತೆಗೆ ವಿಡಿಯೋ ಕಾಲ್ ನಲ್ಲಿ ಮಾತನಾಡಿ ಖುಷಿ ಪಟ್ಟಿದ್ದಾನೆ.

ಕೆಲಸ ತೃಪ್ತಿ ತಂದಿದೆ

ಈ ಬಗ್ಗೆ ಮಾತನಾಡಿದ ವೈಟ್ ಡೌಸ್ ಸಂಸ್ಥೆ ಯ ಕೊರಿನಾ ರಸ್ಕಿನಾ ಅವರು 2022 ರ ನವೆಂಬರ್ ನಲ್ಲಿ ಪಡೀಲ್ ನ ಅರಣ್ಯದಲ್ಲಿ ಈತ ಸಿಕ್ಕಿದ್ದ. ಆತನಿಗೆ ಚಿಕಿತ್ಸೆ ‌ನೀಡುತ್ತಿರುವ ಸಂದರ್ಭದಲ್ಲಿ ಆತ ಪರಾರಿಯು ಆಗಿದ್ದ. ಆ ಬಳಿಕ ಆತನನ್ನು ಪತ್ತೆ ಹಚ್ಚಿ ಗುಣಮುಖ ಮಾಡಿ ಇದೀಗ ಆತನನ್ನು ಅವರ ಮನೆಯವರಿಗೆ ಮುಟ್ಟಿಸುವ ಕೆಲಸ ಮಾಡಿರುವುದು ತೃಪ್ತಿ ತಂದಿದೆ. ಇದು ನಮ್ಮ ಸಂಸ್ಥೆ ಯಿಂದ ಗುಣಮುಖವಾಗಿ ಮನೆಯವರಿಗೆ ತಲುಪಿಸಿದ 412 ನೇ ಪ್ರಕರಣವಾಗಿದೆ ಎನ್ನುತ್ತಾರೆ. ಈತನಿಗೆ ಬಾಲ್ಯದಲ್ಲಿ ಫಿಟ್ಸ್ ಖಾಯಿಲೆ ಇತ್ತು. ಆತ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ. ಆತ ಒಂದು ದಿನ ರಾತ್ರಿ ಕೆಲಸ ಮುಗಿಸಿ ಬರುವಾಗ ಯಾವುದೋ ನೋಡಿ ಭಯ ಪಟ್ಟಿದ್ದ. ಇದರಿಂದ ಆತ ಖಿನ್ನತೆಗೊಳಗಾಗಿದ್ದ. ಆ ಬಳಿಕ ನಾಪತ್ತೆಯಾಗಿದ್ದಾನೆ. ಇದೀಗ ಆತ ಸಿಕ್ಕಿರುವುದು ಖುಷಿ ತಂದಿದೆ ಎನ್ನುತ್ತಾರೆ. ಮೇಘರಾಜ್ ಅಣ್ಣ ತಾರನಾಥ.

ವರದಿ: ಹರೀಶ ಮಾಂಬಾಡಿ, ಮಂಗಳೂರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ