ಇನ್ನು ಮಳೆ ಬರದಿದ್ರೆ ಮಂಗಳೂರಷ್ಟೇ ಅಲ್ಲ, ಇಡೀ ಕರಾವಳಿಗೇ ನೀರಿನ ಕೊರತೆ ಗ್ಯಾರಂಟಿ
Aug 31, 2023 07:39 AM IST
ಮಳೆ ಬರದಿದ್ದರೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಿಸಲಿರುವ ಕರಾವಳಿ ಜನತೆ
ಈ ವರ್ಷ ಮಳೆ ಆರಂಭವಾದದ್ದೇ ತುಂಬಾ ತಡವಾಗಿ. ಆದರೆ ಜುಲೈ ತಿಂಗಳ ಅಂತ್ಯದಲ್ಲಿ ಮಳೆ ಜೋರು ಬಂದಿದ್ದು ಮುಂದೆ ಇದೇ ರೀತಿ ಮಳೆ ಬರುತ್ತದೆಂಬ ಆಸೆಯಲ್ಲಿದ್ದರು ಜನರು. ಆದರೆ ಆಗಸ್ಟ್ ತಿಂಗಳಿನಲ್ಲಿ ಒಂದೆರಡು ದಿನ ಮಳೆ ಬಂದಿದ್ದು ಬಿಟ್ಟರೆ ಮತ್ತೆ ಮಳೆ ಬರಲೇ ಇಲ್ಲ.
(ವಿಶೇಷ ವರದಿ: ಹರೀಶ್ ಮಾಂಬಾಡಿ, ಮಂಗಳೂರು)
ಮಂಗಳೂರು: ಕಳೆದ ಒಂದು ತಿಂಗಳಿಂದ ಸರಿಯಾಗಿ ಮಳೆ ಬಾರದೆ ಮರ ಗಿಡಗಳು ಒಣಗುತ್ತಿವೆ. ಯಾವಾಗಲೂ ಮಳೆ ಆಗುವ ಕರಾವಳಿ ಬಯಲು ಸೀಮೆಯಂತಾಗಿದೆ. ನೇತ್ರಾವತಿ ನದಿ ನೀರು ತಿರುಗಿಸುವ ಯೋಜನೆ ಎಂದೇ ಹೇಳಲಾದ ಎತ್ತಿನಹೊಳೆ ಜಾರಿ ಮಾಡಿಯೇ ಸಿದ್ಧ ಎಂದು ಓಟನ್ನು ಭದ್ರಪಡಿಸಿಕೊಳ್ಳುವ ರಾಜಕಾರಣಿಗಳು ಅತ್ತ ಬಯಲು ಸೀಮೆಯನ್ನೂ ಇತ್ತ ಕರಾವಳಿಗರನ್ನು ದಡ್ಡರನ್ನಾಗಿ ಮಾಡುತ್ತಿದ್ದಾರೆ.
ಕಾರಣವಿಷ್ಟೇ, ನೇತ್ರಾವತಿ ನದಿ ಆಗಸ್ಟ್ ತಿಂಗಳಲ್ಲೇ ಬಡವಾಗುತ್ತಿದೆ. ಘಟ್ಟ ಪ್ರದೇಶದಲ್ಲಿ ನದಿ ಹುಟ್ಟುವ ಜಾಗದಲ್ಲೇ ನೀರಿನ ಸೆಲೆ ಇಲ್ಲ, ಅಲ್ಲೇ ನೀರಿಲ್ಲದಿದ್ದರೆ ಇನ್ನು ತಿರುಗಿಸುವ ಮಾತೆಲ್ಲಿ? ಅಲ್ಲೂ ನೀರಿಲ್ಲ, ಕರಾವಳಿಗೂ ನೀರಿಲ್ಲ. ಇದನ್ನೇ ನಂಬಿ ಹತ್ತಾರು ಚೆಕ್ ಡ್ಯಾಂಗಳು, ಬ್ರಿಡ್ಜ್ ಕಂ ಬ್ಯಾರೇಜ್‌ಗಳು, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಹಿತ ಮಂಗಳೂರಿಗೆ ಮಂಗಳೂರು ಮಹಾ ನಗರವೇ ಕಂಗಾಲಾಗಿ ಕುಳಿತುಕೊಳ್ಳಲು ಹೆಚ್ಚು ತಿಂಗಳು ಬೇಡ. ಒಂದು ಅಂದಾಜಿನ ಪ್ರಕಾರ, ಪರಿಸ್ಥಿತಿ ಹೀಗೇ ಮುಂದುವರಿದರೆ, ಈ ವರ್ಷಾಂತ್ಯದಲ್ಲೇ ಬರಗಾಲ ತಟ್ಟುವುದು ಶತಃಸಿದ್ಧ
ತುಂಬೆ ಡ್ಯಾಂನಲ್ಲಿದೆ ಮಂಗಳೂರಿನ ಸ್ಟಾಕ್
ಮಂಗಳೂರು ಮಹಾಜನತೆಗೆ ನೀರುಣಿಸಲು ನೇತ್ರಾವತಿಗೆ ತುಂಬೆ ಎಂಬಲ್ಲಿ ಅಣೆಕಟ್ಟು ಕಟ್ಟಲಾಗಿತ್ತು. 7 ಮೀಟರ್ ಎತ್ತರದ ಈ ಡ್ಯಾಂನಲ್ಲಿ 5 ಮೀಟರ್ ನಷ್ಟು ನೀರಿದೆ. ನೆನಪಿಡಿ, ಇದು ಆಗಸ್ಟ್ ತಿಂಗಳು. ಇನ್ನು ಮುಂದಿನ ಕತೆ ನೀವೇ ಊಹಿಸಿ. ನೇತ್ರಾವತಿ ನದಿಯ ಒಳ ಹರಿವಿನಲ್ಲಿ ಗಣನೀಯ ಕುಸಿತ ಕಂಡು ಬಂದಿದ್ದು, ಇದಕ್ಕೆ ಕಾರಣ. ತುಂಬೆ ವೆಂಟೆಡ್ ಡ್ಯಾಂನಲ್ಲಿ 30 ಗೇಟ್‌ಗಳಿದ್ದು ಮಂಗಳೂರು ಮಹಾನಗರ ಪಾಲಿಕೆಗೆ ಕುಡಿಯುವ ನೀರಿಗಾಗಿ ಕೇವಲ ಒಂದು ಗೇಟ್‌ನಿಂದ ಹೊರಕ್ಕೆ ನೀರು ಬಿಡಲಾಗಿದೆ. ಮಂಗಳೂರು ಮಹಾನಗರದ ಜನತೆಗೆ ಮುಂದಿನ ದಿನಗಳಲ್ಲಿ ಸಮಸ್ಯೆ ಬರದಂತೆ ಈಗಲೇ ನೀರು ಶೇಖರಿಸಿಡುವ ಕೆಲಸ ನಡೆಯುತ್ತಿದೆ.
ಕಳೆದ ವರ್ಷ ಹೀಗಿರಲಿಲ್ಲ
ಕಳೆದ ವರ್ಷ ನಿರಂತರ ಮಳೆ ಸುರಿಯುತ್ತಿತ್ತು. ಮಳೆ ಬರುವ ಸಂದರ್ಭ ಎಲ್ಲಾ ಗೇಟ್‌ಗಳಿಂದ ನೀರನ್ನು ಹೊರಕ್ಕೆ ಬಿಡಲಾಗಿತ್ತು. ಆದರೆ ಈ ವರ್ಷ ಜುಲೈ ತಿಂಗಳಲ್ಲಿ ನಿರಂತರವಾಗಿ 15 ದಿನ ಮಳೆ ಸುರಿದಿದ್ದು, ನದಿಯ ನೀರಿನ ಮಟ್ಟ ಡ್ಯಾಂನಲ್ಲಿಯೂ 8.5 ಮೀಟರ್ ರಷ್ಟು ಹೆಚ್ಚಳವಾಗಿತ್ತು. ಅಲ್ಲದೇ ತಗ್ಗು ಪ್ರದೇಶಗಳೆಲ್ಲವೂ ಮುಳುಗಡೆಯಾಗಿತ್ತು.
ನೇತ್ರಾವತಿ ನದಿಯಲ್ಲಿ ಅಲ್ಲಲ್ಲಿ ಸಣ್ಣ ಸಣ್ಣ ಡ್ಯಾಂ ಕಟ್ಟಿರುವುದರಿಂದ ನದಿಯಲ್ಲಿ ಒಳ ಹರಿವು ಈಗ ಸ್ಥಗಿತವಾಗಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು ನೇತ್ರಾವತಿಯ ಒಳ ಹರಿವಿನ ಪ್ರಮಾಣ ಕುಸಿತವಾಗಿದೆ. ಆಗಸ್ಟ್ ತಿಂಗಳಲ್ಲಿ ಮಳೆ ಇಲ್ಲದ್ದರಿಂದ ತುಂಬೆ ಡ್ಯಾಂನಲ್ಲಿ ನೀರು ಹೊರ ಬಿಡುವುದನ್ನು ಕಡಿಮೆ ಮಾಡಲಾಗಿದೆ.
ಈ ವರ್ಷ ಮಳೆ ಆರಂಭವಾದದ್ದೇ ತುಂಬಾ ತಡವಾಗಿ. ಆದರೆ ಜುಲೈ ತಿಂಗಳ ಅಂತ್ಯದಲ್ಲಿ ಮಳೆ ಜೋರು ಬಂದಿದ್ದು ಮುಂದೆ ಇದೇ ರೀತಿ ಮಳೆ ಬರುತ್ತದೆಂಬ ಆಸೆಯಲ್ಲಿದ್ದರು ಜನರು. ಆದರೆ ಆಗಸ್ಟ್ ತಿಂಗಳಿನಲ್ಲಿ ಒಂದೆರಡು ದಿನ ಮಳೆ ಬಂದಿದ್ದು ಬಿಟ್ಟರೆ ಮತ್ತೆ ಮಳೆ ಬರಲೇ ಇಲ್ಲ. ಈಗಿನ ಬಿಸಿಲು ನೋಡಿದರೆ ಏಪ್ರಿಲ್, ಮೇ ತಿಂಗಳಿನಲ್ಲಿ ಬರುವಷ್ಟು ಬಿಸಿಲು ಇದೆ. ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ಬರಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ತುಂಬೆ ಡ್ಯಾಂನಲ್ಲಿ 5 ಮೀಟರ್ ನೀರು
ತುಂಬೆ ಅಣೆಕಟ್ಟಿನಲ್ಲಿ ಪ್ರಸ್ತುತ 5 ಮಿಟರ್ ನೀರು ನಿಲ್ಲಿಸಲಾಗುತ್ತಿದೆ. ಕಳೆದ ವರ್ಷಕ್ಕಿಂತ ಈ ವರ್ಷ ನದಿಯಲ್ಲಿ ನೀರು ಕಡಿಮೆ ಇರುವುದರಿಂದ ಡ್ಯಾಂನಿಂದ ನೀರನ್ನು ಹೊರ ಬಿಡುವುದನ್ನು ಕಡಿಮೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮಳೆ ಬರುವ ನಿರೀಕ್ಷೆ ಇದ್ದು, ಒಂದು ವೇಳೆ ಮಳೆ ಕಡಿಮೆಯಾದರೆ ಮಂಗಳೂರು ಜನತೆಗೆ ನೀರು ಸಮಸ್ಯೆಯಾಗದಂತೆ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಹೊಸ ಯೋಜನೆ ರೂಪಿಸಲಾಗುವುದು ಎನ್ನುತ್ತಾರೆ ಮನಪಾ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನರೇಶ್ ಶೆಣೈ. ಆದರೆ ಹೆಚ್ಚೆಂದರೆ ಬೋರು (ಕೊಳವೆಬಾವಿ) ಕೊರೆಯಬಹುದಲ್ಲದೆ ಬೇರೇನೂ ಮಾಡಲು ಸಾಧ್ಯವಿಲ್ಲ ಎಂಬುದು ತಜ್ಞರ ಅಭಿಪ್ರಾಯ. ಇಷ್ಟೆಲ್ಲಾ ಆದರೂ ಜಲಸಂರಕ್ಷಣೆಯ ಪಾಠವನ್ನು ಕರಾವಳಿಯ ಜನತೆ ಕಲಿಯುತ್ತಿಲ್ಲ ಎಂಬುದು ಬೇಸರದ ವಿಚಾರ.
ವಿಶೇಷ ವರದಿ: ಹರೀಶ್ ಮಾಂಬಾಡಿ, ಮಂಗಳೂರು