Case on Karnataka Minister: ಜಮೀನು ವಿವಾದದಲ್ಲಿ ಕುಟುಂಬಕ್ಕೆ ಬೆದರಿಕೆ; ಸಚಿವರ ವಿರುದ್ಧ ಕೇಸ್
Aug 31, 2022 01:33 PM IST
ಸಚಿವರು ಮತ್ತು ಇತರೆ ಮೂವರಿಂದ ಬೆದರಿಕೆಗೆ ಒಳಗಾದ ಕುಟುಂಬದ ಸದಸ್ಯರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಆಗಮಿಸಿ ಮೈಮೇಲೆ ಪೆಟ್ರೋಲ್ ಸುರಿದ ಸಂದರ್ಭ.
ಜಮೀನು ವಿವಾದಕ್ಕೆ ಸಂಬಂಧಿಸಿದ ಕುಟುಂಬ ಒಂದಕ್ಕೆ ಬೆದರಿಕೆ ಒಡ್ಡಿದ ಪ್ರಕರಣದಲ್ಲಿ ರಾಜ್ಯದ ಪ್ರವಾಸೋದ್ಯಮ, ಪರಿಸರ ಸಚಿವ ಆನಂದ್ ಸಿಂಗ್ ವಿರುದ್ಧ ಕೇಸ್ ದಾಖಲಾಗಿದೆ.
ಹೊಸಪೇಟೆ: ಜಮೀನು ವಿವಾದಕ್ಕೆ ಸಂಬಂಧಿಸಿ ಜೀವ ಬೆದರಿಕೆ ಒಡ್ಡಿದ್ದಕ್ಕಾಗಿ ಪ್ರವಾಸೋದ್ಯಮ, ಪರಿಸರ ಸಚಿವ ಆನಂದ್ ಸಿಂಗ್ ಮತ್ತು ಇತರೆ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿರುವುದಾಗಿ ಪೊಲೀಸರು ಬುಧವಾರ ತಿಳಿಸಿದ್ಧಾರೆ.
ಸಚಿವರು ಮತ್ತು ಇತರೆ ಮೂವರಿಂದ ಬೆದರಿಕೆಗೆ ಒಳಗಾದ ಕುಟುಂಬದ ಸದಸ್ಯರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಆಗಮಿಸಿತ್ತು. ಎಲ್ಲರೂ ಮೈಮೇಲೆ ಪೆಟ್ರೋಲ್ ಸುರಿದುಕೊಂಡು, ಸಚಿವರು ಮತ್ತು ಇತರೆ ಮೂವರು ನಮ್ಮನ್ನು ಸುಟ್ಟು ಹಾಕ್ತೇವೆ ಎಂದು ಹೇಳಿದ್ದಾರೆ. ನಾವು ಈಗ ಪೆಟ್ರೋಲ್ ಸುರಿದುಕೊಂಡಿದ್ದೇವೆ. ಬಂದು ಸುಟ್ಟುಹಾಕಲಿ ಎಂದು ಹೇಳಿ ಅಸಹಾಯಕತೆ ಪ್ರದರ್ಶಿಸಿದ್ದರು.
ಈ ಕುಟುಂಬದ ಡಿ. ಪೋಲಪ್ಪ ನೀಡಿದ ದೂರಿನ ಪ್ರಕಾರ ಸಚಿವ ಆನಂದ್ ಸಿಂಗ್ ಮತ್ತು ಇತರೆ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಪೋಲಪ್ಪ ಅವರು ನೀಡಿದ ದೂರಿನ ಪ್ರಕಾರ, ಆರೋಪಿಗಳ ವಿರುದ್ಧ ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 504 ಮತ್ತು 506ರ ಪ್ರಕಾರ ಕೇಸ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿದ್ದಾಗಿ ಪಿಟಿಐ ವರದಿ ಮಾಡಿದೆ.
ವಿಜಯನಗರ ಜಿಲ್ಲೆಯ ಗ್ರಾಮವೊಂದರ ಜಮೀನಿಗೆ ಸಂಬಂಧಿಸಿ ಸಮುದಾಯವೊಂದರ ಸದಸ್ಯರು ಮತ್ತು ಎಸ್‌ಸಿ ಸಮುದಾಯಕ್ಕೆ ಸೇರಿದ ಪೋಲಪ್ಪ ನಡುವೆ ವಿವಾದ ಇತ್ತು. ಇದಕ್ಕೆ ಸಂಬಂಧಿಸಿ ಈ ಕೇಸ್ ದಾಖಲಾಗಿದೆ. ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿದ ಸಚಿವರ ಬಳಿ ವಿವಾದ ಬಗೆಹರಿಸಲು ಸಹಕರಿಸುವಂತೆ ಸಮುದಾಯದವರು ಮನವಿ ಮಾಡಿದ್ದರು. ವಿವಾದ ಇತ್ಯರ್ಥಗೊಳಿಸಲು ಸಹಕರಿಸದೇ ಇದ್ದರೆ ತಮ್ಮ ಇಡೀ ಕುಟುಂಬವನ್ನು ಸುಟ್ಟು ಹಾಕುವುದಾಗಿ ಸಚಿವರು ಬೆದರಿಕೆ ಹಾಕಿದ್ದಾರೆ ಎಂದು ಪೋಲಪ್ಪ ದೂರಿನಲ್ಲಿ ಆರೋಪಿಸಿದ್ದಾರೆ. ಪಿರ್ಯಾದಿದಾರರು ತಮ್ಮ ಐವರು ಸಂಬಂಧಿಕರೊಂದಿಗೆ ಮಂಗಳವಾರ ರಾತ್ರಿ ಹೊಸಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಬಳಿ ಬಂದಿದ್ದಾರೆ. ಅವರೆಲ್ಲರೂ ಆತ್ಮಹತ್ಯೆಗೆ ಯತ್ನಿಸಿದರು. ಆದರೆ, ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೋಲಪ್ಪ ಮತ್ತು ಇತರ ಐವರ ವಿರುದ್ಧವೂ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.