ಮಣಿಕಂಠ ರಾಠೋಡ್ ಕಾರು ಅಪಘಾತವನ್ನ ಹಲ್ಲೆ ಎಂದು ಬಿಂಬಿಸಿದ ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್; ಪ್ರಿಯಾಂಕ್ ಖರ್ಗೆ
Dec 07, 2023 06:37 AM IST
ಅಪಘಾತ ಪ್ರಕರಣವನ್ನು ಹಲ್ಲೆ ಎಂದು ಬಿಂಬಿಸಿರುವ ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮೇಲೆ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಹಲ್ಲೆ ನಡೆದಿಲ್ಲ, ಅಪಘಾತದಿಂದ ಗಾಯಗಳಾಗಿವೆ ಎಂದು ಎಸ್‌ಪಿ ಸ್ಪಷ್ಟಪಡಿಸಿದ್ದಾರೆ.
ಕಲಬುರಗಿ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಮೇಲೆ ಹಲ್ಲೆ ಆರೋಪ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಅವರು ದೂರು ನೀಡಿರುವಂತೆ ಶಂಕರವಾಡಿ ಬಳಿ ಅವರ ಮೇಲೆ ಯಾವುದೇ ಹಲ್ಲೆಯಾಗಿಲ್ಲ ಬದಲಿಗೆ ಮಣಿಕಂಠ ಹಾಗೂ ಅವರ ಸ್ನೇಹಿತರು ಪ್ರಯಾಣಿಸುತ್ತಿದ್ದ ವಾಹನ ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲೂಕಿನ ಚೆಪೆಟ್ಲಾ ಬಳಿ ಅಪಘಾತಕ್ಕೀಡಾಗಿದೆ. ಈ ವೇಳೆ ಅವರಿಗೆ ಗಾಯಗಳಾಗಿವೆ ಇದು ತನಿಖೆಯ ವೇಳೆ ಸಾಕ್ಷಿಗಳ ಹೇಳಿಕೆಯಿಂದ ತಿಳಿದುಬಂದಿದೆ ಎಂದು ಎಸ್ ಪಿ ಅಡ್ಡೂರು ಶ್ರೀನಿವಾಸಲು ಸ್ಪಷ್ಟಪಡಿಸಿದ್ದಾರೆ.
ಎಸ್ಪಿ ಅವರ ಈ ಹೇಳಿಕೆ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಮೇಲೆ ಹಲ್ಲೆ ನಿರಾಧಾರ ಆರೋಪ ಮಾಡಿ ಚಾರಿತ್ರ್ಯ ಹರಣ ಮಾಡಿದ ಬಿಜೆಪಿಯ ನಾಯಕರ ವಿರುದ್ದ ಕಾನೂನು ಕ್ರಮ ಜರುಗಿಸುವುದಾಗಿ ಗುಡುಗಿದ್ದಾರೆ.
ಅಶೋಕ್, ವಿಯೇಂದ್ರ ವಿರುದ್ದ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಿನ್ನೆ ಸಂಜೆ (ಡಿಸೆಂಬರ್ 6, ಬುಧವಾರ) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಕ್ಕಿ ಹಾಗೂ ಹಾಲಿನ ಪುಡಿ ಕಳ್ಳತನದ ಆರೋಪದ ಮೇಲೆ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ವ್ಯಕ್ತಿಯ ಮಾತು ಕೇಳಿಕೊಂಡು ನನ್ನ ಚಾರಿತ್ರ್ಯ ಹರಣ ಮಾಡಿ ರಾಜೀನಾಮೆಗೆ ಒತ್ತಾಯಿಸಿದ್ದ ವಿರೋಧ ಪಕ್ಷದ ನಾಯಕ ಆರ್ ಅಶೋಕ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ ಸೇರಿದಂತೆ ಬಿಜೆಪಿಯ ಎಲ್ಲಾ ನಾಯಕರ ವಿರುದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಮಾಡುವುದರ ಜೊತೆಗೆ ಸಿಎಲ್‌ಪಿ ಲೀಡರ್ ಜೊತೆಗೆ ಚರ್ಚಿಸಿ ಹಕ್ಕುಚ್ಯುತಿ ಮಂಡನೆ ಮಾಡುವುದಾಗಿ ಖರ್ಗೆ ಹೇಳಿದ್ದಾರೆ.
ಆತ ನೀಡಿದ ದೂರಿನಂತೆ ದಿನಾಂಕ 19-11-2023 ರಂದು ಬೆಳಿಗ್ಗೆ 1.30 ರಿಂದ ಅವನು ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಹೇಳಿರುವ ಸ್ಥಳದಲ್ಲಿ ಇರಲೇ ಇಲ್ಲ. ಅವನು ಹಾಗೂ ಅವನ ಇಬ್ಬರು ಸ್ನೇಹಿತರು ಪ್ರಯಾಣಿಸುತ್ತಿದ್ದ ಇನ್ನೋವಾ ವಾಹನ ಚೆಪೆಟ್ಲಾ ಬಳಿಯ ತಿರುವಿನಲ್ಲಿ ಅಪಘಾತಕ್ಕೀಡಾಗಿತ್ತು. ಆ ನಂತರ ತನ್ನ ಕಡೆಯವರಿಗೆ ಫೋನ್ ಮಾಡಿ ಬೇರೆ ವಾಹನ ತರಿಸಿಕೊಂಡು ಕಲಬುರಗಿಗೆ ಬಂದಿದ್ದಾನೆ. ಅಪಘಾತವಾದ ವಾಹನವನ್ನು ಹೈದರಾಬಾದ್‌ಗೆ ಕಳಿಸಿದ್ದಾನೆ. ಇದು ಪೊಲೀಸ್ ತನಿಖೆಯ ವೇಳೆ ತಿಳಿದುಬಂದಿದೆ' ಎಂದು ಸಚಿವರು ವಿವರಿಸಿದ್ದಾರೆ.
ಪಡಿತರ ಫಲಾನುಭವಿಗಳಿಗೆ ವಿತರಿಸುವ ಅಕ್ಕಿ ಕಳ್ಳತನ, ಅಂಗನವಾಡಿ ಮಕ್ಕಳಿಗೆ ವಿತರಿಸಲು ಉದ್ದೇಶಿಸಲಾಗಿದ್ದ ಹಾಲಿನಪುಡಿ ಕಳ್ಳತನ ಆರೋಪ, ವಂಚನೆ, ಮೋಸ ಇತ್ಯಾದಿ ಕ್ರಿಮಿನಲ್ ಪ್ರಕರಣ ಆರೋಪಿಯಾಗಿ ಕಲಬುರಗಿ, ಯಾದಗಿರಿ, ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಕಡೆ ಹಾಗೂ ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯದಲ್ಲಿ ಒಟ್ಟು 33 ಕೇಸು ಎದುರಿಸುತ್ತಿರುವ ಮಣಿಕಂಠನಿಗೆ ಬಿಜೆಪಿಯವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಚಿತ್ತಾಪುರದಿಂದ ಟಿಕೆಟ್ ನೀಡಿದ್ದರು.
ಬಿಜೆಪಿಯವರು ಟಿಕೇಟ್ ನೀಡುವ ಮುನ್ನ ಅವನ ಹಿನ್ನೆಲೆಯನ್ನಾದರೂ ತಿಳಿದುಕೊಳ್ಳಬೇಕಿತ್ತು. ಅಂತವನ ಮಾತು ಕೇಳಿಕೊಂಡು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು' ಪ್ರಿಯಾಂಕ್ ಖರ್ಗೆ ಹಲ್ಲೆ ಮಾಡಿದ್ದಾರೆ' ಎಂದು ನನ್ನ ಚಾರಿತ್ರ್ಯ ಹರಣ ಮಾಡಿದರು. ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಅವರು ಕ್ಯಾಬಿನೆಟ್ ಸಚಿವರೊಬ್ಬರ ಮೇಲೆ ಹೀಗೆ ಆರೋಪ ಮಾಡಬಹುದೇ? ಜೊತೆಗೆ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಅವರು ಕೂಡಾ ಅವನ ಬೆಂಬಲಕ್ಕೆ ನಿಂತಿದ್ದಾರೆ. ಇನ್ನೂ ರವಿಕುಮಾರ್ ' ಮಣಿಕಂಠನ ಜೀವಕ್ಕೆ ಏನಾದರೂ ಆದರೆ ಅದಕ್ಕೆ ಪ್ರಿಯಾಂಕ್ ಖರ್ಗೆ ಕಾರಣ' ಎಂದು ಹೇಳುತ್ತಾರೆ. ಅಂತಹ ವ್ಯಕ್ತಿಯ ಜೊತೆಗೆ ನನಗೇನಿಗೆ ಕೆಲಸ? ನನಗೆ ಮಾಡಲು ಸಾಕಷ್ಟು ಕೆಲಸಗಳಿವೆ. ಬಿಜೆಪಿ ನಾಯಕರು ಇಂತಹ ನಾಟಕಗಳನ್ನು ಬಿಟ್ಟು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಿ ಎಂದು ಸಲಹೆ ನೀಡಿದರು.
' ಮಣಿಕಂಠ ರಾಠೋಡ್ ನೀಡಿದ ದೂರಿನಂತೆ ತನಿಖೆ ಕೈಗೊಂಡ ಪೊಲೀಸರು ಸತ್ಯವನ್ನು ಬಯಲಿಗೆ ಎಳೆದಿದ್ದಾರೆ. ನನ್ನ ಮೇಲೆ ಆಧಾರರಹಿತ ಆರೋಪ ಹೊರೆಸಿ ನನ್ನ ರಾಜೀನಾಮೆಗೆ ಆಗ್ರಹಿಸಿ ನನ್ನನ್ನು ಸಂಪುಟದಿಂದ ವಜಾ ಮಾಡುವಂತೆ ಹೇಳಿದ ಬಿಜೆಪಿ ನಾಯಕರು ಈಗ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಡುತ್ತಾರೆಯೇ ಎಂದು ಖರ್ಗೆ ಖಾರವಾಗಿ ಪ್ರಶ್ನಿಸಿದ್ದಾರೆ. ಮಣಿಕಂಠನ ಪರವಾಗಿ ಬ್ಯಾಟಿಂಗ್ ಮಾಡುವ ಬಿಜೆಪಿ ನಾಯಕರು ಆತ ಪ್ರಿಯಾಂಕ್ ಖರ್ಗೆಯನ್ನು ಶೂಟ್ ಮಾಡುತ್ತೇನೆ ಎಂದಾಗ, ಖರ್ಗೆ ಕುಟುಂಬವನ್ನು ಸಾಫ್ ಮಾಡುತ್ತೇನೆ ಎಂದಾಗ, ನನ್ನ ಕುಟುಂಬದವರ, ತಾಯಿಯವರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾಗ ಎಲ್ಲಿ ಹೋಗಿದ್ದರು ? ಎಂದರು.
ಪೊಲೀಸ್ ತನಿಖೆಯಿಂದ ನಿಜಸಂಗತಿ ಬಯಲಾಗಿದೆ
ಈಗ ಪೊಲೀಸ್ ತನಿಖೆಯಿಂದ ನಿಜಸಂಗತಿ ಬಯಲಾಗಿದೆ. ವಿನಾಕಾರಣ ನನ್ನ ಮೇಲೆ ಆರೋಪ ಹೊರಿಸಿ ಚಾರಿತ್ರ್ಯ ಹರಣ ಮಾಡಿದ ಯಾವೊಬ್ಬ ಬಿಜೆಪಿ ನಾಯಕರನ್ನು ಸುಮ್ಮನೆ ಬಿಡಲ್ಲ. ನನ್ನ ತಾಳ್ಮೆಗೂ ಮಿತಿ ಇದೆ. ವಕೀಲರೊಂದಿಗೆ ಚರ್ಚಿಸಿ ಮುಂದಿನ ಕಾನೂನು ಕ್ರಮವಾಗಿ ಮಾನನಷ್ಠ ಮೊಕದ್ದುಮೆ ಹೂಡುತ್ತೇನೆ. ಜೊತೆಗೆ ಸಿಎಲ್‌ಪಿ ನಾಯಕರೊಂದಿಗೆ ಚರ್ಚಿಸಿ ಹಕ್ಕುಚ್ಯುತಿ ಮಂಡನೆ ಮಾಡುವ ಬಗ್ಗೆ ನಿರ್ಧರಿಸುತ್ತೇನೆ ಎಂದು ಖರ್ಗೆ ಪುನರುಚ್ಚರಿಸಿದ್ದಾರೆ. (ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)