logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Congress: ಬಿಜೆಪಿಯಲ್ಲಿನ ಸಂಪೂರ್ಣ ಲಿಂಗಾಯತ ನಾಯಕತ್ವ ನಾಶ ಮಾಡುವುದು ಮೋದಿ-ಶಾ ಉದ್ದೇಶ: ಕಾಂಗ್ರೆಸ್‌ ಆರೋಪ!

Karnataka Congress: ಬಿಜೆಪಿಯಲ್ಲಿನ ಸಂಪೂರ್ಣ ಲಿಂಗಾಯತ ನಾಯಕತ್ವ ನಾಶ ಮಾಡುವುದು ಮೋದಿ-ಶಾ ಉದ್ದೇಶ: ಕಾಂಗ್ರೆಸ್‌ ಆರೋಪ!

Nikhil Kulkarni HT Kannada

Apr 16, 2023 01:18 PM IST

google News

ಸಂಗ್ರಹ ಚಿತ್ರ

    • ಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಜೋಡಿ, ರಾಜ್ಯದ ಲಿಂಗಾಯತ ನಾಯಕರನ್ನು ಮೂಲೆ ತಳ್ಳುವ ಕುತಂತ್ರ ನಡೆಸುತ್ತಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ‌. ಬಿಎಸ್‌ವೈ, ಸವದಿ, ಶೆಟ್ಟರ್‌ ಅವರಂತಹ ಪ್ರಮುಖ ಲಿಂಗಾಯತ ನಾಯಕರನ್ನು ಬಿಜೆಪಿ ಅವಮಾನಿಸಿದೆ ಎಂದು ಕಾಂಗ್ರೆಸ್‌ ಹೇಳಿದೆ. ಈ ಕುರಿತು ಇಲ್ಲಿದೆ ಮಾಹಿತಿ..
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ (HT)

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತ ನಾಯಕರ ಚರ್ಚೆ ಜೋರಾಗಿದೆ. ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್‌ ಲಿಂಗಾಯತ ಪ್ರೀತಿಯನ್ನು ತೋರ್ಪಡಿಸಲು ನಾ ಮುಂದು, ನೀ ಮುಂದು ಎಂದು ಜಿದ್ದಿಗೆ ಬಿದ್ದಿವೆ. ಇದಕ್ಕೆ ಬಿಜೆಪಿಯ ಲಿಂಗಾಯತ ನಾಯಕರ ಬಗ್ಗೆ ಪ್ರತಿಪಕ್ಷ ಕಾಂಗ್ರೆಸ್‌ ಮಾಡಿರುವ ಟ್ವೀಟ್‌ ಸಾಕ್ಷಿಯಾಗಿದೆ.

ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಬಿಜೆಪಿ ತೊರೆಯುತ್ತಿದ್ದು, ಈಗಾಗಲೇ ಸ್ಪೀಕರ್‌ ಕಾಗೇರಿ ಅವರಿಗೆ ರಾಜೀನಾಮೆ ಪತ್ರ ನೀಡಲು ಶಿರಸಿಗೆ ತೆರಳಿದ್ದಾರೆ. ಈ ಮೂಲಕ ಬಿಜೆಪಿಯಿಂದ ಮತ್ತೋರ್ವ ಪ್ರಮುಖ ಲಿಂಗಾಯತ ನಾಯಕ ಹೊರಗೆ ಕಾಲಿಟ್ಟಂತಾಗಿದೆ. ಶೆಟ್ಟರ್‌ ಕಾಂಗ್ರೆಸ್‌ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಲಕ್ಷ್ಮಣ ಸವದಿ ಬಳಿಕ ಉತ್ತರ ಕರ್ನಾಟಕದ ಮತ್ತೋರ್ವ ಪ್ರಬಲ ನಾಯಕ ಕಾಂಗ್ರೆಸ್‌ ತೆಕ್ಕೆಗೆ ಸೇರುವ ಸಾಧ್ಯತೆ ಇದೆ.

ಇದಕ್ಕೆ ಪುಷ್ಠಿ ಎಂಬಂತೆ ರಾಜ್ಯ ಕಾಂಗ್ರೆಸ್‌ ಘಟಕ ಈ ವಿಚಾರವಾಗಿ ಟ್ವೀಟ್‌ ಮಾಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಜೋಡಿ, ರಾಜ್ಯದ ಲಿಂಗಾಯತ ನಾಯಕರನ್ನು ಮೂಲೆ ತಳ್ಳುವ ಕುತಂತ್ರ ನಡೆಸುತ್ತಿದೆ ಎಂದು ಗಂಭೀರ ಆರೋಪ ಮಾಡಿದೆ.

''ಮೊ-ಶಾ ಜೋಡಿ ಹಾಗೂ ಜೋ-ಸ ಜೋಡಿ ಕೇವಲ ಅವರನ್ನು ಮಾತ್ರ ಮುಗಿಸಿದೆ ಎಂದುಕೊಂಡಿದ್ದರೆ ಅದು ತಪ್ಪು. ಬಿಜೆಪಿಯಲ್ಲಿನ ಸಂಪೂರ್ಣ ಲಿಂಗಾಯತ ನಾಯಕತ್ವವನ್ನೇ ನಾಶ ಮಾಡುವುದು ಈ ಜೋಡಿಗಳ ಏಕೈಕ ಅಜೆಂಡಾ. ಬಿಎಸ್‌ ಯಡಿಯೂರಪ್ಪ, ಸವದಿ

ಶೆಟ್ಟರ್ ಸೇರಿದಂತೆ ನಾಯಕತ್ವ ಹೊಂದಿದವರೆಲ್ಲರನ್ನೂ ಬಿಜೆಪಿ ಎತ್ತಿ ಬಿಸಾಡಿದೆ..'' ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

ಬಿಎಸ್‌ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲು ಮೋದಿ-ಶಾ ಜೋಡಿ ಹೆಣೆದ ಕುತಂತ್ರೇ ಕಾರಣ ಎಂಬರ್ಥದಲ್ಲಿ ಕಾಂಗ್ರೆಸ್‌ ಮಾತನಾಡಿದೆ. ಅಲ್ಲದೇ ಸವದಿ, ಶೆಟ್ಟರ್‌ ಸೇರಿದಂತೆ ಇತರ ಲಿಂಗಾಯತರನ್ನೂ ಬಿಜೆಪಿ ಟಾರ್ಗೆಟ್‌ ಮಾಡಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಬಿಜೆಪಿ ಹೈಕಮಾಂಡ್‌ ಬಿಎಸ್‌ ಯಡಿಯೂರಪ್ಪ ಅವರನ್ನು ಕಣ್ಣೀರು ಸುರಿಸುವಂತೆ ಮಾಡಿತ್ತು. ಇದೀಗ ಸವದಿ ಮತ್ತು ಶೆಟ್ಟರ್‌ ಸರದಿಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಲಿಂಗಾಯತ ನಾಯಕರನ್ನು ಅವಮಾನಿಸುವ ಹುನ್ನಾರ ನಡೆದಿದೆ ಎಂದು ಕಾಂಗ್ರೆಸ್‌ ಹರಿಹಾಯ್ದಿದೆ.

ಇತ್ತ ಜಗದೀಶ್‌ ಶೆಟ್ಟರ್‌ ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಸ್ಪೀಕರ್‌ ಕಾಗೇರಿ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಶೆಟ್ಟರ್‌ ಹುಬ್ಬಳ್ಳಿಯಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ತೆರಳಲಿದ್ದು, ಅವರಿಗಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರೇ ವಿಶೇಷ ವಿಮಾನದ ವ್ಯವಸ್ಥೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದು ಶೆಟ್ಟರ್‌ ಅವರು ಕಾಂಗ್ರೆಸ್‌ ಸೇರುವ ಸಾಧ್ಯತೆಯನ್ನು ದಟ್ಟವಾಗಿಸಿದೆ.

ಬಿಎಸ್‌ ಯಡಿಯೂರಪ್ಪ ಗುಡುಗು:

ಇನ್ನು ಜಗದೀಶ್‌ ಶೆಟ್ಟರ್‌ ಅವರು ಬಿಜೆಪಿ ತೊರೆದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ, ತಮಗೆ ಎಲ್ಲವನ್ನೂ ನೀಡಿದ ಪಕ್ಷವನ್ನು ಬಿಡುವ ಮೂಲಕ ಜಗದೀಶ್‌ ಶೆಟ್ಟರ್‌ ದ್ರೋಹ ಮಾಡಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಶೆಟ್ಟರ್‌ ಅವರನ್ನು ಶಾಸಕ, ಸಚಿವ, ವಿರೋಧ ಪಕ್ಷದ ನಾಯಕ, ಪಕ್ಷದ ರಾಜ್ಯಾಧ್ಯಕ್ಷ, ಮುಖ್ಯಮಂತ್ರಿಯನ್ನಾಗಿ ಬಿಜೆಪಿ ಮಾಡಿದೆ. ಆದರೂ ಅಧಿಕಾರದ ಆಸೆಗೆ ಇದೀಗ ಪಕ್ಷ ತ್ಯಜಿಸಿರುವ ಜಗದೀಶ್‌ ಶೆಟ್ಟರ್‌ ಅವರನ್ನು ನಾಡಿನ ಜನತೆ ಕ್ಷಮಿಸುವುದಿಲ್ಲ ಎಂದು ಬಿಎಸ್‌ವೈ ಗುಡುಗಿದ್ದಾರೆ.

ಸಿಎಂ ಕಿಡಿ:

ಇನ್ನು ಜಗದೀಶ್‌ ಶೆಟ್ಟರ್‌ ಅವರು ಬಿಜೆಪಿ ತೊರೆದಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಗದೀಶ್‌ ಶೆಟ್ಟರ್‌ ಪಕ್ಷ ತೊರೆದಿರುವುದು ತೀವ್ರ ನೋವು ತಂದಿದೆ ಎಂದು ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ