Kalburgi News: ಪ್ರವಾಹ ಭೀತಿಯಲ್ಲಿ ಕಲಬುರಗಿ ಜಿಲ್ಲೆ ಜನ: ಮಳೆಗೆ 84 ಸೇತುವೆ, 283 ಮನೆಗಳಿಗೆ ಹಾನಿ, ಡಿಸಿ ರೌಂಡ್ಸ್ , ನಿಖರ ವರದಿಗೆ ಸೂಚನೆ
Jul 30, 2023 10:52 AM IST
ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅಧಿಕಾರಿಗಳ ತಂಡದೊಂದಿಗೆ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದರು.
- Kalburgi Rains ಭಾರೀ ಮಳೆಯಿಂದ ಕಲಬುರಗಿ ಜಿಲ್ಲೆಯ ಹಲವೆಡೆ ಹಾನಿಯಾಗಿದೆ. ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ನಿಖರ ವರದಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕಲಬುರಗಿ ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ಹಾನಿಯ ವಿವರ ಇಲ್ಲಿದೆ.
ಕಲಬುರಗಿ: ಮುಂಗಾರು ಕೈಕೊಟ್ಟು ಮಳೆಯೇ ಬರುವುದಿಲ್ಲ. ಬರಪೀಡಿತ ಜಿಲ್ಲೆವೆಂದು ಘೋಷಿಸಬೇಕೆಂಬ ಕೂಗು ರೈತರಿಂದ ಕೇಳಿ ಬಂದಿತ್ತು. ಆದರೆ ವರುಣ ಕೃಪೆ ತೋರಿ ವಿಳಂಬವಾದರೂ ಧರೆಗಿಳಿದು ಬಂದಿರುವುದರಿಂದ ಕಳೆದ 10 ದಿನಗಳಿಂದ ಸುರಿಯತ್ತಿರುವ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಜಿಲ್ಲೆಯ ಜಲಾಶಯಗಳು, ಹಳ್ಳ, ಕೊಳ್ಳಗಳು ಭರ್ತಿಯಾಗುತ್ತಿವೆ. ಇನ್ನೊಂದೆಡೆ ಮಳೆಗೆ ಹಲವಾರು ಮನೆಗಳು ಕುಸಿದು ಬಿದ್ದಿವೆ. ಕೆಲ ಜನ- ಜಾನುವಾರುಗಳು ಸಾವನ್ನಪ್ಪಿರುವ ಘಟನೆಗಳು ನಡೆದಿವೆ.
38 ಅಂಗನವಾಡಿ ಕೇಂದ್ರಗಳಿಗೆ ಹಾನಿ
ಕಳೆದ ಜೂನ್ 1 ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ 283 ಮನೆಗಳು ಭಾಗಶ: ಹಾನಿಗೊಂಡಿವೆ. 20 ಕಿ.ಮೀ. ರಾಜ್ಯ ಹೆದ್ದಾರಿ, 27.50 ಕಿ.ಮೀ. ಜಿಲ್ಲಾ ಹೆದ್ದಾರಿ, 100 ಕಿ.ಮೀ. ಗ್ರಾಮೀಣ ರಸ್ತೆಗಳು ಸೇರಿದಂತೆ ಒಟ್ಟು 147.50 ಕಿ.ಮೀ. ರಸ್ತೆ, 84 ಸೇತುವೆಗಳು, 89 ಶಾಲಾ ಕೊಠಡಿಗಳು ಹಾಗೂ 38 ಅಂಗನವಾಡಿ ಕೇಂದ್ರಗಳು ಸಹ ಹಾನಿಗೊಳಗಾಗಿವೆ ಎಂದು ಜಿಲ್ಲಾಡಳಿತ ಅಂಕಿ ಅಂಶ ನೀಡಿದೆ. ಆದರೆ ವಾಸ್ತವವಾಗಿ ಜಿಲ್ಲಾಡಳಿತ ಗಮನಕ್ಕೆ ಬರದೇ ಎಷ್ಟೋ ಮನೆಗಳು, ಅಂಗನವಾಡಿ ಕೇಂದ್ರಗಳು, ಶಾಲೆಗಳು, ರಸ್ತೆಗಳು ಹಾನಿಯಾಗಿವೆ ಎಂದು ಹೇಳಲಾಗುತ್ತಿದೆ.
35 ವಿದ್ಯುತ್ ಪರಿವರ್ತಕಗಳಿಗೆ ಹಾನಿ
ತೀವ್ರ ಮಳೆಯಿಂದ ಜಿಲ್ಲಾದ್ಯಂತ 281 ವಿದ್ಯುತ್ ಕಂಬಗಳು, 35 ವಿದ್ಯುತ್ ಪರಿವರ್ತಕಗಳು ಹಾನಿಗೊಂಡಿದ್ದು, ಈ ಪೈಕಿ ಕ್ರಮವಾಗಿ 203 ವಿದ್ಯುತ್ ಕಂಬಗಳು ಮತ್ತು 31 ವಿದ್ಯುದ್ ಪರಿವರ್ತಕಗಳನ್ನು ದುರಸ್ತಿಗೊಳಿಸಿ ವಿದ್ಯುತ್ ಪ್ರಸರಣಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಕಲಬುರಗಿ ನಗರಕ್ಕೆ 0.2 ಟಿ.ಎಂ.ಸಿ. ಬಿಡುಗಡೆ
ಬೆಣ್ಣೆತೋರಾ, ಕೆರಿ ಭೋಸಗಾ, ಸರಡಗಿ ಬ್ಯಾರೇಜಿನಿಂದ ಕಲಬುರಗಿ ನಗರಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ನಗರದ ಪ್ರತಿ ದಿನದ ಬೇಡಿಕೆ 95 ಎಂ.ಎಲ್.ಡಿ. ಇದ್ದು, ಪ್ರಸ್ತುತ 85 ಎಂ.ಎಲ್.ಡಿ. ಪೂರೈಸಲಾಗುತ್ತಿದೆ. ಜೂನ್ 20ಕ್ಕೆ ನಾರಾಯಣಪುರ ಜಲಾಶಯದಿಂದ 0.2 ಟಿ.ಎಂ.ಸಿ. ನೀರು ಬಿಟ್ಟಿದ್ದು, ಸರಡಗಿ ಬ್ಯಾರೇಜಿಗೆ ತಲುಪಲಿದೆ.
5 ಲಕ್ಷ ರೂ. ಪರಿಹಾರ ವಿತರಣೆ
ಕಳೆದ ಜುಲೈ 24 ರಂದು ಜೇವರ್ಗಿ ತಾಲೂಕಿನ ಬಿರಾಳ (ಬಿ) ಗ್ರಾಮದಲ್ಲಿ ಮಳೆಯಿಂದ ಮನೆ ಕುಸಿತ ಪರಿಣಾಮ ಗ್ರಾಮದ 38 ವರ್ಷದ ಬಸಮ್ಮ ಬಸವರಾಜ ಬಳಗಾರ ಅವರು ಮೃತಪಟ್ಟಿದ್ದು, ಮೃತರ ವಾರಸುದಾರರಿಗೆ ಸರ್ಕಾರದ ಮಾರ್ಗಸೂಚಿಯಂತೆ 5 ಲಕ್ಷ ರೂ. ಪರಿಹಾರ ವಿತರಣೆ ಮಾಡಲಾಗಿದೆ. ಇನ್ನು ಜಿಲ್ಲಾದ್ಯಂತ ಯಾವುದೇ ಜಾನುವಾರುಗಳ ಪ್ರಾಣ ಹಾನಿ ಕುರಿತು ವರದಿಯಾಗಿಲ್ಲ ಎಂದು ಹೇಳಲಾಗುತ್ತಿದೆ.
ಅಂಗನವಾಡಿ ಕೇಂದ್ರಗಳ ದುರಸ್ತಿಗೆ ಡಿಸಿ ಸೂಚನೆ
ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಶನಿವಾರ ಅಫಜಲಪುರ ತಾಲೂಕಿನ ವಿವಿಧ ಮಳೆ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಮಳೆಯಿಂದಾದ ಹಾನಿ ಕುರಿತು ವೀಕ್ಷಿಸಿದರು.
ಮೊದಲು ಅಪಜಲಪೂರ ತಾಲೂಕಿನ ಚೌಡಾಪುರ ಗ್ರಾಮಕ್ಕೆ ತೆರಳಿದ ಅವರು, ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದರು. ಅಂಗನವಾಡಿ ಕೇಂದ್ರದ ಮೇಲ್ಛಾವಣಿ ಮಳೆಯಿಂದ ಸೋರುತ್ತಿದ್ದನ್ನು ಕಂಡ ಅವರು, ತಕ್ಷಣ ಈ ಕಟ್ಟಡ ಸೇರಿದಂತೆ ತಾಲೂಕಿನಲ್ಲಿ ಅಗತ್ಯವಿದ್ದೆಡೆ ಅಂಗನವಾಡಿ ಕೇಂದ್ರಗಳನ್ನು ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಸಿ.ಡಿ.ಪಿ.ಓ ಪ್ರೇಮಾ ಅವರಿಗೆ ಸೂಚಿಸಿದರು.
ಇನ್ನು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಅವರು, ಶಾಲೆಯಲ್ಲಿ ವ್ಯವಸ್ಥಿತ ಶೌಚಾಲಯದ ವ್ಯವಸ್ಥೆಯನ್ನು ಮಾಡುವಂತೆ ತಾಲೂಕು ಪಂಚಾಯತ ಇ.ಓ ಹಾಗೂ ಪಿ.ಡಿ.ಓ ಗೆ ಸೂಚಿಸಿದರು.
ಮೂಲ ಸೌಲಭ್ಯ ಕಲ್ಪಿಸಿ
ಅಫಜಲಪೂರ ತಾಲೂಕಿನ ಇಂಚಗೇರಾ ಗ್ರಾಮದಲ್ಲಿ ಮಳೆಯಿಂದ ಹಾನಿಗೊಳಗಾದ ಮನೆಗಳನ್ನು ವೀಕ್ಷಿಸಿದ ಅವರು, ತಕ್ಷಣ ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಪರಿಹಾರ ನೀಡುವಂತೆ ತಹಸೀಲ್ದಾರ ಸಂಜೀವಕುಮಾರ ದಾಸರ್ ಅವರಿಗೆ ನಿರ್ದೇಶನ ನೀಡಿದರು. ಅಲ್ಲದೆ ಹಿಂಚಗೇರಾ ಗ್ರಾಮದಲ್ಲಿ ರಸ್ತೆ, ಕುಡಿಯುವ ನೀರು, ಒಳಚರಂಡಿ, ಇತ್ಯಾದಿ ಗ್ರಾಮದ ಮೂಲಸೌಕರ್ಯಗಳ ವ್ಯವಸ್ಥೆ ಸರಿಯಾಗಿರುವಂತೆ ನೋಡಿಕೊಳ್ಳಬೇಕು ಎಂದು ಸ್ಥಳದಲ್ಲಿದ್ದ ತಾ.ಪಂ. ಇ.ಓ ವಿಜಯ ಮಹಾಂತೇಶ ಅವರಿಗೆ ಸೂಚಿಸಿದರು.
ಅಫಜಲಪೂರ ತಾಲೂಕಿನ ಅತನೂರ ಗ್ರಾಮದ ನಾಡ ಕಛೇರಿಗೆ ಭೇಟಿ ಡಿ.ಸಿ. ಅವರು ಭೇಟಿ ನೀಡಿದರು. ಕಟ್ಟಡ ಹಳೇಯದಾಗಿದ್ದರಿಂದ ಹೊಸ ಕಟ್ಟಡಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ತಹಸೀಲ್ದಾರರಿಗೆ ಸೂಚಿಸಿದರು.
ಕೋಣೆ ಬದಲಾಯಿಸಿ
ಘತ್ತರಗಾ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಮಳೆಯಿಂದ ಶಾಲಾ ಕೋಣೆ ಮೇಲ್ಚಾವಣಿ ಸೋರಿಕೆ ಕಂಡು, ಕೂಡಲೆ ದುರಸ್ತಿಗೊಳಿಸುವಂತೆ ಸ್ಥಳದಲ್ಲಿದ್ದ ತಹಶೀಲ್ದಾರರಿಗೆ ಸೂಚಿಸಿದರು. ದುರಸ್ತಿ ಕಾರ್ಯ ಪೂರ್ಣಗೊಳ್ಳುವವರೆಗೆ ಶಾಲಾ ಮಕ್ಕಳನ್ನು ಬೇರೆ ಕೋಣೆಯಲ್ಲಿ ಪಾಠ ಬೋಧಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಅವರಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು. ನಂತರ ಘತ್ತರಗಾ ಸೇತುವೆ ವೀಕ್ಷಣೆ ಮಾಡಿ ನೀರಿನ ಒಳಹರಿವು ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಮನೆ ಹಾನಿ ಕುರಿತು ಸಮಗ್ರ ವರದಿ ನೀಡಿ
ಜೇವರ್ಗಿ ತಾಲೂಕಿನ ನೇದಲಗಿಗೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಭೇಟಿ ನೀಡಿ, ಮಳೆಯಿಂದ ಹಾನಿಗೊಳಾಗದ ಎರಡ್ಮೂರು ಮನೆಗಳನ್ನು ವೀಕ್ಷಿಸಿದರು.
ಮನೆಯಿಂದ ಹಾಳಾದ ಮನೆಗಳಿಗೆ ಕೂಡಲೆ ಎಸ್.ಡಿ.ಆರ್.ಎಫ್ ಮಾರ್ಗಸಸೂಚಿಯಂತೆ ಪರಿಹಾರ ನೀಡಬೇಕು. ಇದೂವರೆಗೆ ತಾಲೂಕಿನಲ್ಲಿ ಮಳೆಯಿಂದ ಮನೆ ಹಾನಿ ಕುರಿತು ಸಮಗ್ರ ವರದಿ ನೀಡುವಂತೆ ತಹಶೀಲ್ದಾರರಿಗೆ ಸೂಚಿಸಿದರು
ಜೇರಟಗಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಕಟ್ಟಡದ ಪರಿಸ್ಥಿತಿ ಅವಲೋಕಿಸಿ 2 ಲಕ್ಷ ರೂ. ವೆಚ್ಚದಲ್ಲಿ ಕೂಡಲೆ ಕಟ್ಟಡ ದುರಸ್ತಿಗೊಳಿಸಿ ಎಂದ ಅವರು, ಹೊಸದಾಗಿ ಅಂಗನವಾಡಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದಾಗ, ಸಿ.ಡಿ.ಪಿ.ಓ ಮಾತನಾಡಿ, ಈಗಾಗಲೆ ಹೊಸದಾಗಿ ಅಂಗನವಾಡಿ ಕೇಂದ್ರಕ್ಕೆ ಮಂಜೂರಾತಿ ದೊರೆತಿದೆ ಎಂದು ತಿಳಿಸಿದರು.
ಜಿಲ್ಲಾದ್ಯಂತ ಮಳೆಯಿಂದ ಯಾವುದೇ ಕೃಷಿ, ತೋಟಗಾರಿಕೆ ಬೆಳೆಗಳು ಹಾನಿಯಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿನ ಮಳೆಯ ಪರಿಸ್ಥಿತಿ ಕುರಿತು ಈಗಾಗಲೇ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದ್ದು, ಅವರು ಅಗತ್ಯ ಸಲಹೆ ಸೂಚನೆ ನೀಡಿದ್ದು, ಅದನ್ನು ಪಾಲಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಸಹಾಯವಾಣಿ ಸ್ಥಾಪನೆ
ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮಳೆ ಸುರಿಯುತ್ತಿದ್ದು, ಭಾರಿ ಮಳೆಯಿಂದ ಸಾರ್ವಜನಿಕರಿಗೆ ಏನಾದರೂ ತೊಂದರೆಯಾದಲ್ಲಿ ಜಿಲ್ಲಾ ತುರ್ತು ನಿರ್ವಹಣಾ ಕೇಂದ್ರದ ಸಹಾಯವಾಣಿ ಸಂಖ್ಯೆ 08472-278677, ಟೋಲ್ ಫ್ರೀ ಸಂಖ್ಯೆ 1077ಗೆ ಸಂಪರ್ಕಿಸಲು ಕೋರಲಾಗಿದೆ.
ಇದಲ್ಲದೇ ತಾಲೂಕು ಹಂತದಲ್ಲಿ ಅಫಜಲಪುರ 08470-282020, ಆಳಂದ-08477-202428, ಚಿಂಚೋಳಿ-8475200113, ಚಿತ್ತಾಪುರ-08474-236250, ಜೇವರ್ಗಿ 08442-236024, ಕಲಬುರಗಿ-08472-278657/ 278636, ಕಾಳಗಿ 9741680444, ಕಮಲಾಪುರ-7411843393, ಸೇಡಂ 08441-276184, ಶಹಾಬಾದ-08477-202428 ಹಾಗೂ ಯಡ್ರಾಮಿ 8147003348ಗೆ ಸಂಪರ್ಕಿಸಬಹುದಾಗಿದೆ.
( ವರದಿ: ಎಸ್.ಬಿ. ರೆಡ್ಡಿ ಕಲಬುರಗಿ)