ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬೆನ್ನುಬಿಡದೆ ಕಾಡುತ್ತಿರುವ ಸ್ನೇಹಮಯಿ ಕೃಷ್ಣ; ಸಿಎಂ ವಿರುದ್ಧ ಇ.ಡಿಗೂ ದೂರು
Sep 29, 2024 11:23 AM IST
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸ್ನೇಹಮಯಿ ಕೃಷ್ಣ.
- CM Siddaramaiah: ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ನೇಹಮಯಿ ಕೃಷ್ಣ ಅವರು ಮತ್ತೊಂದು ದೂರು ನೀಡಿದ್ದಾರೆ. ಮುಡಾದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು 16 ಪುಟಗಳಲ್ಲಿ ದೂರು ಸಲ್ಲಿಸಿದ್ದಾರೆ.
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೇಲಿಂದ ಮೇಲೆ ಸಂಕಷ್ಟ ಎದುರಾಗುತ್ತಿದೆ. ಈಗಾಗಲೇ ಮುಡಾ ಹಗರಣಕ್ಕೆ ಸಂಬಂಧಿಸಿ ತನ್ನ ವಿರುದ್ಧ ಮೈಸೂರು ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿದೆ. ಅಲ್ಲದೆ, ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ದೂರುದಾರ ಸ್ನೇಹಮಯಿ ಕೃಷ್ಣ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಸ್ನೇಹಮಹಿ ಕೃಷ್ಣ, ಸಿಎಂ ವಿರುದ್ಧ ಮತ್ತೊಂದು ದೂರು ನೀಡಿದ್ದಾರೆ. ಜಾರಿ ನಿರ್ದೇಶನಾಲಯ (ಇಡಿ)ಕ್ಕೆ ಮತ್ತೊಂದು ದೂರು ಕೊಟ್ಟಿದ್ದಾರೆ.
ಇಡಿ ಜಂಟಿ ನಿರ್ದೇಶಕರಿಗೆ ಇ-ಮೇಲ್ ಮೂಲಕ ಹಾಗೂ ಪತ್ರ ಬರೆದು ಸ್ನೇಹಮಹಿ ಕೃಷ್ಣ ದೂರು ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅಧಿಕಾರ ದುರ್ಬಳಕೆ ಮಾಡಿಕೊಂಡು ಮುಡಾದಲ್ಲಿ ಪತ್ನಿಯ ಹೆಸರಿನಲ್ಲಿ 14 ನಿವೇಶನಗಳನ್ನು ಪಡೆದಿದ್ದಾರೆ. ಮುಡಾದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. 16 ಪುಟಗಳಲ್ಲಿ ದೂರು ಸಲ್ಲಿಸಿದ್ದಾರೆ. ಲಾಂಡರಿಂಗ್ ಆಕ್ಟ್ ಮೂಲಕ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಇದರಿಂದ ಸಿದ್ದರಾಮಯ್ಯಗೆ ಟೆನ್ಶನ್ ಶುರುವಾಗಿದ್ದು, ಸೂಕ್ಷ್ಮವಾಗಿ ಹೆಜ್ಜೆ ಇಡುವಂತಾಗಿದೆ.
ಮುಡಾ ಹಗರಣದ ಕೇಸ್; ಸಿಎಂ ಎ1 ಆರೋಪಿ
ಮುಡಾದಲ್ಲಿ ಅಕ್ರಮ ನಡೆದಿದ್ದು, ತನಿಖೆಗೆ ಆದೇಶಿಸುವಂತೆ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸುವಂತೆ ಮೈಸೂರು ಲೋಕಾಯುಕ್ತಕ್ಕೆ ಆದೇಶ ನೀಡಿತ್ತು. ಅದರಂತೆ ಸಿಎಂ, ಅವರ ಪತ್ನಿ ಎ2, ಬಾಮೈದ ಎ3, ಭೂಮಿ ಮಾರಾಟ ಮಾಡಿದವರು ಎ4 ಆರೋಪಿಯಾಗಿದ್ದಾರೆ. ಐಪಿಸಿ ಸೆಕ್ಷನ್ 120 ಬಿ, 166, 403, 420, 426, 465, 468, 340, 351 ಅಡಿ ಎಫ್‌ಐಆರ್ ದಾಖಲಿಸಲಾಗಿದೆ.
ಸಿದ್ದರಾಮಯ್ಯ ಅವರ ಮುಂದಿನ ಆಯ್ಕೆಗಳು
- ಸಿಆರ್ಪಿಸಿ 438 ಅಡಿಯಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಬೇಲ್ ಅರ್ಜಿ ಹಾಕುವುದು
- ಬೇಲ್ ಜೊತೆಗೆ 482ರ ಅಡಿಯಲ್ಲಿ ನೇರವಾಗಿ ಹೈಕೋರ್ಟ್‌ಗೆ ಪ್ರಕರಣ ರದ್ಧತಿ ಕೋರಿ ಅರ್ಜಿ ಹಾಗು ತನಿಖೆಗೆ ತಾತ್ಕಲಿಕ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಬಹುದು
- ಎಫ್‌ಐಆರ್ ಮಾಡಿರುವುದನ್ನು ಚಾಲೆಂಜ್ ಮಾಡುವುದು
- ನ್ಯಾಯಾಲಯದ ಆದೇಶವನ್ನೇ ಹೈಕೋರ್ಟ್ನಲ್ಲಿ ಚಾಲೆಂಜ್ ಮಾಡಬಹುದು
- ಹೈಕೋರ್ಟ್ ಮಾಡಿರುವ ಆದೇಶವನ್ನು ಸುಪ್ರೀಂಕೋರ್ಟ್ಗೆ ಹೋಗುವುದು
ಸಿದ್ದರಾಮಯ್ಯಗೆ ಇರುವ ಸವಾಲುಗಳು
- ದಸರಾ ಪ್ರಯುಕ್ತ ನ್ಯಾಯಾಲಯಗಳು ಅಕ್ಟೋಬರ್ 2 ರಿಂದ 13 ರವರಗೆ ರಜೆ ಇರುವುದು ಸಮಸ್ಯೆ
- ನಿರಂತರವಾಗಿ ಜಡ್ಜ್ ಸೆಟ್ಟಿಂಗ್ ಕೂರದಿರುವುದು ವಿಳಂಬವಾಗಬಹುದ
- ನ್ಯಾಯಾಧೀಶರು ರಜೆಯಲ್ಲಿರುವ ಕಾರಣ ತುರ್ತು ಆದೇಶ ನಿರಾಕರಿಸುವ ಸಾಧ್ಯತೆ ಹೆಚ್ಚು
ಇದನ್ನೂ ಓದಿ: ಹಂದಿಗಳ ಜೊತೆ ಕುಸ್ತಿ ಬೇಡ; ಕುಮಾರಸ್ವಾಮಿಗೆ ಎಡಿಜಿಪಿ ಚಂದ್ರಶೇಖರ್ ಟಾಂಗ್, ಕೇಂದ್ರ ಸಚಿವ vs ಐಪಿಎಸ್ ಅಧಿಕಾರಿ ಜಟಾಪಟಿ