Mysore Muda Meeting: ಭಾರೀ ಹಗರಣಗಳ ಸದ್ದಿನ ನಂತರ ಮೈಸೂರು ಮುಡಾದಲ್ಲಿ ಮೊದಲ ಸಾಮಾನ್ಯ ಸಭೆ, ಕಠಿಣ ಕ್ರಮಗಳ ನಿರೀಕ್ಷೆ
Nov 07, 2024 01:24 PM IST
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಸಾಮಾನ್ಯ ಸಭೆ ಡಿಸಿ ಲಕ್ಷ್ಮಿಕಾಂತರೆಡ್ಡಿ ಅಧ್ಯಕ್ಷತೆಯಲ್ಲಿ ಆರಂಭಗೊಂಡಿದೆ.
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿನ ಬದಲಿ ನಿವೇಶನ ಹಂಚಿಕೆ ಸದ್ದು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿ ಸಾಕಷ್ಟು ಬೆಳವಣಿಗೆಗಳು ಆಗಿರುವ ನಡುವೆ ಮುಡಾದ ಮೊದಲ ಸಾಮಾನ್ಯ ಸಭೆ ಗುರುವಾರ ಮೈಸೂರಿನಲ್ಲಿ ಆರಂಭಗೊಂಡಿದೆ.
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಹಾಗೂ ಕುಟುಂಬದವರಿಗೆ ಬದಲಿ ನಿವೇಶನ ನೀಡಿದ ವಿಚಾರದಲ್ಲಿ ಭಾರೀ ಹಗರಣದ ಸದ್ದು ಮಾಡಿದ ಬಳಿಕ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಮೊದಲ ಸಭೆ ಗುರುವಾರ ಆರಂಭಗೊಂಡಿದೆ. ಸಿಎಂ ಸಿದ್ದರಾಮಯ್ಯ ಅವರ ಆಪ್ತರಲ್ಲಿ ಒಬ್ಬರಾಗಿದ್ದ ಕೆ.ಮರಿಗೌಡ ಅವರನ್ನು ಅಧ್ಯಕ್ಷ ಸ್ಥಾನದಿಂದ ಬದಲಿಸಿದ ನಂತರ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ ಅವರ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಅವರ ಅಧ್ಯಕ್ಷತೆಯಲ್ಲಿಯೇ ಮಹತ್ವದ ಸಭೆ ಶುರುವಾಗಿದ್ದು, ಮುಡಾ ಆಡಳಿತ ಸುಧಾರಣೆ ನಿಟ್ಟಿನಲ್ಲಿ ಪ್ರಮುಖ ನಿರ್ಣಯ ಕೈಗೊಳ್ಳುವ ನಿರೀಕ್ಷೆಯಿದೆ. ಮುಡಾದಲ್ಲಿ 50:50 ಅನುಪಾತದಡಿ ನಿವೇಶನಗಳ ಹಂಚಿಕೆಯಲ್ಲಿ ನಡೆದಿರುವ ಬಹುಕೋಟಿ ಹಗರಣ ಬೆಳಕಿಗೆ ಬಂದನಂತರ ನಡೆಯುತ್ತಿರುವ ಮೊದಲ ಮುಡಾದ ಸಾಮಾನ್ಯ ಸಭೆ ಇದಾಗಿರುವುದರಿಂದ ಭಾರೀ ಮಹತ್ವವನ್ನು ಪಡೆದುಕೊಂಡಿದೆ.
ಲೋಕಸಭೆ ಚುನಾವಣೆ ನಂತರ ಒಂದು ಬಾರಿ ಮುಡಾ ಸಭೆ ನಡೆದಿದ್ದರೂ ಮಹತ್ವದ ತೀರ್ಮಾನ ಕೈಗೊಳ್ಳಲಾಗಿರಲಿಲ್ಲ. ಮುಡಾ ಅಧ್ಯಕ್ಷರಾಗಿದ್ದ ಕೆ.ಮರಿಗೌಡ ಅವರು ಬದಲಿ ನಿವೇಶನದ ವಿಚಾರದಲ್ಲಿ ಸರ್ಕಾರಕ್ಕೆ ಪತ್ರ ಬರೆದು ಆಗುತ್ತಿರುವ ನಷ್ಟವನ್ನು ಗಮನಕ್ಕೆ ತಂದಿದ್ದರು. ಇದು ಭಾರೀ ವಿರೋಧಕ್ಕೆ ದಾರಿಯಾಗಿ ವಿವಾದ ಸ್ವರೂಪ ಪಡೆದಿತ್ತು. ಆನಂತರ ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಹದಿನಾಲ್ಕು ಬದಲಿ ನಿವೇಶನಗಳನ್ನು ಪಡೆದಿರುವ ಆರೋಪಗಳು ಕೇಳಿ ಬಂದವು. ಸಿಎಂ ಪತ್ನಿ ನಿವೇಶನ ವಾಪಾಸ್ ಪಡೆದಿದ್ದು,ಇದರ ನಡುವೆ ಜಾರಿ ನಿರ್ದೇಶನಾಲಯವೂ ತನಿಖೆ ನಡೆಸುತ್ತಿದೆ. ಲೋಕಾಯುಕ್ತ ಕೂಡ ವಿಚಾರಣೆ ನಡೆಸುತ್ತಿದೆ.
ಈ ಎಲ್ಲಾ ಗೊಂದಲಗಳ ನಡುವೆ ಸರ್ಕಾರ ಮುಡಾ ಆಯುಕ್ತ, ಕಾರ್ಯದರ್ಶಿಯನ್ನು ಬದಲಿಸಿತ್ತು. ಅಧ್ಯಕ್ಷರ ರಾಜೀನಾಮೆ ಬಳಿಕ ಡಿಸಿ ಅಧಿಕಾರ ವಹಿಸಿಕೊಂಡಿದ್ದಾರೆ. ಹೊಸ ಅಧ್ಯಕ್ಷರು, ಆಯುಕ್ತರು ಹಾಗೂ ಕಾರ್ಯದರ್ಶಿ ಬಳಿಕ ಈಗ ಮೊದಲ ಸಭೆ ನಡೆಯುತ್ತಿರುವುದು ವಿಶೇಷ.
ಶಾಸಕರು ಹೇಳಿದ್ದೇನು
ಮುಡಾದಲ್ಲಿನ 50:50 ಅನುಪಾತದ ಅಕ್ರಮ ನಿವೇಶನ ಗಳನ್ನು ಸರ್ಕಾರ ವಾಪಸ್ ಪಡೆಯಬೇಕು ಎನ್ನುವ ಸಲಹೆಯನ್ನುಚಾಮುಂಡೇಶ್ವರಿ ಕ್ಷೇತ್ರದ ಹಿರಿಯ ಶಾಸಕ ಜಿ.ಟಿ ದೇವೇಗೌಡ ಸಲಹೆ ನೀಡಿದರು.
50: 50 ಅನುಪಾತ ರದ್ದು ಮಾಡಿ ಅಂತಾ ನಾನು ಹೇಳಲ್ಲ. ಆದರೆ ಮುಡಾ 50: 50 ನಿವೇಶಗಳನ್ನು ವಾಪಸ್ ಪಡೆಯಬೇಕು. ಅದರಲ್ಲೂ ಅಕ್ರಮವಾಗಿ ನೀಡಿರುವ ನಿವೇಶನಗಳನ್ನ ವಾಪಸ್ ಪಡೆಯಬೇಕು ಎನ್ನುವುದು ನನ್ನ ಸಲಹೆ. ಆಡಳಿತವನ್ನೂ ಚುರುಕುಗೊಳಿಸಿ ಜನರ ಕೆಲಸ ಆಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಮುಡಾದಲ್ಲಿ 2020 ರಿಂದ 2024 ರವರೆಗೂ ಕೊಟ್ಟಿರುವ 50:50 ಅನುಪಾತದ ಎಲ್ಲಾ ನಿವೇಶನ ಸರ್ಕಾರ ಜಪ್ತಿ ಮಾಡುವುದು ಸೂಕ್ತ ಎಂದು ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಹರೀಶ್ ಗೌಡ ಸೂಚಿಸಿದರು.
ಈಗಾಗಲೇ ಪಿ.ಎನ್ ದೇಸಾಯಿ ಆಯೋಗದ ತನಿಖಾ ವರದಿ ಬಂದ ಮೇಲೆ ನ್ಯಾಯಸಮ್ಮತ ನಿವೇಶನ ಗಳನ್ನು ಸಂಬಂಧಪಟ್ಟವರಿಗೆ ವಾಪಸ್ ಕೊಡಲಿ. ಅಕ್ರಮ ನಿವೇಶನಗಳನ್ನು ಸರ್ಕಾರವೇ ಮುಟ್ಟುಗೋಲು ಹಾಕಿಕೊಳ್ಳುವುದು ಸೂಕ್ತ. ನನ್ನದು ಯಾವುದಾದರೂ ಸೈಟ್ ಇದ್ದರೆ ಅದನ್ನು ಮುಟ್ಟುಗೋಲು ಹಾಕಿಕೊಳ್ಳಲಿ. ನಾನು ಶಾಸಕನಾದ ಮೇಲೆ ಒಂದು ಇಂಚೂ ಜಾಗವನ್ನು 50:50 ಅನುಪಾತದಲ್ಲಿ ಪಡೆದಿಲ್ಲ.ಶಿಫಾರಸ್ಸು ಕೂಡ ಮಾಡಿಲ್ಲ ಎಂದು ಹೇಳಿದರು.
ಏನು ನಿರ್ಣಯ ಆಗಬಹುದು
ಹಗರಣದ ಸದ್ದು, ತನಿಖೆಯ ಕಾರಣದಿಂದ ಮುಡಾದಲ್ಲಿ ಆಡಳಿತ ವ್ಯವಸ್ಥೆ ಕುಸಿತು ಹೋಗಿದೆ. ಜನರಿಗೆ ಸೇವೆ ಸಕಾಲಕ್ಕೆ ಸಿಗುತ್ತಿಲ್ಲ. ಇದನ್ನು ಚುರುಕುಗೊಳಿಸಲು ಆದ್ಯತೆ ನೀಡಲಾಗುತ್ತದೆ.
ಬದಲಿ ನಿವೇಶನ ವಿಚಾರದಲ್ಲಿ ಸರ್ಕಾರಕ್ಕೆ ಪತ್ರ ಬರೆದು ನಗರಾಭಿವೃದ್ದಿ ಇಲಾಖೆಯಿಂದ ಬರುವ ನಿರ್ದೇಶನ ಆಧರಿಸಿ ಮುಂದುವರೆಯುವುದು.
ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿ ಇರುವುದರಿಂದ ನ್ಯಾಯಾಲಯ ನಿರ್ದೇಶನವನ್ನೂ ಪಾಲಿಸುವುದು.
ಖಾತಾ ಪತ್ರ ನೀಡುವ ವಿಚಾರದಲ್ಲಿ ಸರ್ಕಾರದ ನಿರ್ದೇಶನ ಆಧರಿಸಿ ಕ್ರಮ ವಹಿಸುವುದು.
ವಿಭಾಗ