Mysore Muda Scam: ಸಿದ್ದರಾಮಯ್ಯಗೆ ತಪ್ಪದ ಸಂಕಷ್ಟ; ಸಿಎಂ ವಿರುದ್ದ ತನಿಖೆಗೆ ಆದೇಶಿಸಿದ ಬೆಂಗಳೂರು ಜನಪ್ರತಿನಿಧಿಗಳ ಕೋರ್ಟ್
Sep 25, 2024 02:49 PM IST
ಸಿಎಂ ಸಿದ್ದರಾಮಯ್ಯ ವಿರುದ್ದ ತನಿಖೆಗೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ನೀಡಿದೆ.
- ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ವಿರುದ್ದ ತನಿಖೆ ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯ ಆದೇಶಿಸಿದೆ.
ಬೆಂಗಳೂರು: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿನ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಸಂಕಷ್ಟಕ್ಕೆ ಸದ್ಯಕ್ಕೆ ನಿಲ್ಲುವ ಸೂಚನೆಯಿಲ್ಲ. ಸಿಎಂ ಸಿದ್ದರಾಮಯ್ಯ ಅವರ ವಿರುದ್ದ ದಾಖಲಾಗಿದ್ದ ಖಾಸಗಿ ದೂರಿನ ಅರ್ಜಿ ಆಧರಿಸಿ ತನಿಖೆ ನಡೆಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆದೇಶ ನೀಡಿದೆ. ಮೈಸೂರು ಲೋಕಾಯುಕ್ತ ಪೊಲೀಸರಿಗೆ ಸಿದ್ದರಾಮಯ್ಯ ವಿರುದ್ಧ ಸಿಆರ್ ಪಿಸಿ ಕಾಯ್ದೆಯಡಿ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. 6 ವಾರಗಳಲ್ಲಿ ತನಿಖೆ ನಡೆಸಿ, ಡಿಸೆಂಬರ್ 24ರ ಒಳಗೆ ವರದಿ ನೀಡುವಂತೆ ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮಂಗಳವಾರ ಸಲ್ಲಿಸಿರುವ ಖಾಸಗಿ ದೂರಿನ ಅರ್ಜಿಯ ವಿಚಾರಣೆಯನ್ನು ಬುಧವಾರ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶ ಹೊರಡಿಸಿದರು.
ಸಿಎಂ ಅವರ ಪತ್ನಿಗೆ ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ಪಾತ್ರವೇನೆಂದು ಪರಿಶೀಲಿಸಿ, ಪಿಸಿ ಆಕ್ಟ್ 7ಸಿ ಅಡಿ ತನಿಖೆ ನಡೆಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಧೀಶರು ಸೂಚಿಸಿದರು.
ಮುಡಾ ಹಗರಣದಲ್ಲಿ ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿಯನ್ನು ಎತ್ತಿಹಿಡಿದಿದ್ದ ಹೈಕೋರ್ಟ್ ತನಿಖೆ ನಡೆಸುವಂತೆ ತೀರ್ಪು ನೀಡಿದ ಬೆನ್ನಲ್ಲೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕೂಡಾ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಬೇಕೆಂದು ಆದೇಶ ನೀಡುವ ಮೂಲಕ ಸಿದ್ದರಾಮಯ್ಯ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಸಿಎಂ ಸಿದ್ದರಾಮಯ್ಯ ಅವರ ವಿರುದ್ದ ಮೈಸೂರು ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ತನಿಖೆಗೆ ಅನುಮತಿ ನೀಡುವಂತೆ ಮೈಸೂರಿನ ಸ್ನೇಹಮಯಿ ಕೃಷ್ಣ ಅವರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಕಳೆದ ತಿಂಗಳೇ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು. ಆದರೆ ಇದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯಹೈಕೋರ್ಟ್ ಮೆಟ್ಟಿಲು ಏರಿದ್ದರು. ಈ ಕುರಿತು ಒಂದು ತಿಂಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ ವಾದ- ಪ್ರತಿವಾದಗಳನ್ನು ಆಲಿಸಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠವು ಸಿದ್ದರಾಮಯ್ಯ ಅವರ ಅರ್ಜಿ ವಜಾಗೊಳಿಸಿತ್ತು. ರಾಜ್ಯಪಾಲರ ಆದೇಶವನ್ನು ಎತ್ತಿ ಹಿಡಿದಿತ್ತು. ಅಲ್ಲದೇ ಈ ಪ್ರಕರಣದಲ್ಲಿ ತನಿಖೆಯ ಅಗತ್ಯವಿದೆ. ಸಿಎಂ ಸಿದ್ದರಾಮಯ್ಯ ಅವರು ತಮ್ಮ ಕುಟುಂಬದವರಿಗೆ ಲಾಭ ಮಾಡಿಕೊಳ್ಳಲು ಹುದ್ದೆ ದುರುಪಯೋಗಪಡಿಸಿಕೊಂಡಿದ್ದಾರೆ ಎನ್ನುವುದನ್ನು ನ್ಯಾಯಾಲಯ ಒತ್ತಿ ಹೇಳಿತ್ತು.
ನ್ಯಾಯಾಲಯವು ಸಿದ್ದರಾಮಯ್ಯ ಅವರ ಅರ್ಜಿ ವಜಾಗೊಳಿಸುತ್ತಿದ್ದಂತೆ ದೂರುದಾರ ಸ್ನೇಹಮಯಿ ಕೃಷ್ಣ, ಪ್ರದೀಪ್‌ಕುಮಾರ್ ಅವರು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಅವರು ತನಿಖೆಗೆ ನಡೆಸಲು ಆದೇಶ ನೀಡಿದರು.
ಮೈಸೂರು ಲೋಕಾಯುಕ್ತ ಪೊಲೀಸರು ಮುಡಾದಲ್ಲಿನ ನಿವೇಶನಗಳ ಹಗರಣದ ವಿಚಾರವಾಗಿ ತನಿಖೆ ನಡೆಸಿ 6 ವಾರಗಳಲ್ಲಿ ತನಿಖೆ ನಡೆಸಿ, ಡಿಸೆಂಬರ್ 24ರ ಒಳಗೆ ವರದಿ ನೀಡಬೇಕು ಎಂದು ಆದೇಶಿಸಿದರು. ಇದರೊಂದಿಗೆ ಲೋಕಾಯುಕ್ತ ತನಿಖೆಯೂ ಸಿದ್ದರಾಮಯ್ಯ ಅವರ ವಿರುದ್ದ ಚುರುಕುಗೊಳ್ಳಲಿದೆ.
ಈ ನಡುವೆ ಹೈಕೋರ್ಟ್ ಪೀಠದ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಲು ಸಿದ್ದರಾಮಯ್ಯ ಸಿದ್ದತೆ ಮಾಡಿಕೊಂಡಿದ್ದಾರೆ. ಅವರ ನ್ಯಾಯವಾದಿಗಳೊಂದಿಗೆ ಚರ್ಚಿಸಿದ್ದು ಶೀಘ್ರವೇ ಕಾನೂನು ಹೋರಾಟ ಮುಂದುವರೆಸಲಿದ್ದಾರೆ.