KAS officer Suspend: ಸಿಎಂಗೆ ಕೈ ಕೊಟ್ಟ ವಿದ್ಯುತ್ ಬಟನ್, ಹಿರಿಯ ಕೆಎಎಸ್ ಅಧಿಕಾರಿ ಅಮಾನತು
Jan 25, 2024 04:34 PM IST
ಪಿರಿಯಾಪಟ್ಟಣದಲ್ಲಿ ನೀರಾವರಿ ಯೋಜನೆ ಉದ್ಘಾಟನೆ ವೇಳೆ ತೊಂದರೆ ಅನುಭವಿಸಿದ ಸಿಎಂ ಸಿದ್ದರಾಮಯ್ಯ
- ಮೈಸೂರು ಜಿಲ್ಲೆಯ ಯೋಜನೆಯೊಂದರ ಉದ್ಘಾಟನೆ ವೇಳೆ ವಿದ್ಯುತ್ ಬಟನ್ ಕೈ ಕೊಟ್ಟು ಹಿರಿಯ ಕೆಎಎಸ್ ಅಧಿಕಾರಿಯೇ ಅಮಾನತಾಗಿದ್ದಾರೆ.
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ಯುತ್ ಬಟನ್ ಚಾಲನೆಯಾಗಲಿಲ್ಲ ಎನ್ನುವ ಕಾರಣಕ್ಕೆ ಹಿರಿಯ ಕೆಎಎಸ್ ಅಧಿಕಾರಿಯೊಬ್ಬರನ್ನು ಅಮಾನತು ಮಾಡಲಾಗಿದೆ. ಮೈಸೂರು, ಚಾಮರಾಜನಗರ, ಹಾಸನ, ಕೊಡಗು ಹಾಗೂ ಮಂಡ್ಯ ಜಿಲ್ಲಾ ವ್ಯಾಪ್ತಿ ಒಳಗೊಂಡ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಹಿರಿಯ ಕೆಎಎಸ್ ಅಧಿಕಾರಿ ಸಿ.ಎನ್.ಶ್ರೀಧರ್ ಅಮಾನತುಗೊಂಡವರು. ಅದು ಸಿಎಂ ಸೂಚಿಸಿದ ಕೆಲವೇ ಹೊತ್ತಿನಲ್ಲಿ ಆದೇಶವೂ ಜಾರಿಯಾಗಿದೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಮುಳ್ಳುಸೋಗೆಯಲ್ಲಿ ಏತ ನೀರಾವರಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮವಿತ್ತು. ಸಿಎಂ ಸಿದ್ದರಾಮಯ್ಯ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿ ನೀರಾವರಿ ಯೋಜನೆ ಉದ್ಘಾಟನೆಗೆ ಆಗಮಿಸಿದ್ದರು. ವೇದಿಕೆ ಬಳಿಯೇ ನಿರ್ಮಿಸಿದ್ದ ಜಾಗದಲ್ಲಿ ಮೋಟಾರ್ ಆನ್ ಮಾಡಿ ಯೋಜನೆ ಉದ್ಘಾಟಿವವರು ಇದ್ದರು. ಬಟನ್ ಎಷ್ಟೇ ಒತ್ತಿದರೂ ಚಾಲನೆಯಾಗಲೇ ಇಲ್ಲ. ಅಲ್ಲೇ ಇದ್ದವರು ಗಮನಿಸಿದರೂ ಸರಿಯಾಗಲಿಲ್ಲ. ಈ ಕುರಿತು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರನ್ನು ಕರೆಯಿಸಿ ವಿಚಾರಿಸಲು ಮುಂದಾದರು. ಅವರು ಅಲ್ಲಿ ಬಂದಿರಲೇ ಇಲ್ಲ. ಸಿಎಂ ಬಂದರೂ ಹಿರಿಯ ಅಧಿಕಾರಿ ಸ್ಥಳಕ್ಕೆ ಬರುವುದಿಲ್ಲ ಎಂದರೆ ಹೇಗೆ ಎಂದು ಸಿಎಂ ಅಲ್ಲಿಯೇ ತರಾಟೆ ಕೂಡ ತೆಗೆದುಕೊಂಡರು. ಅಲ್ಲದೇ ಅವರನ್ನು ಕೂಡಲೇ ಅಮಾನತುಪಡಿಸುವಂತೆ ಸ್ಥಳದಲ್ಲೇ ಆದೇಶಿಸಿದರು. ನಂತರ ಎಂಡಿ ಆಗಮಿಸಿ ವಿವರಣೆ ನೀಡಲು ಮುಂದಾದರೂ ಸಿಎಂ ಆಲಿಸಲಿಲ್ಲ.
ಈಗಾಗಲೇ ಸೂಪರ್‌ಟೈಂ ಶ್ರೇಣಿಯ ಹಿರಿಯ ಕೆಎಎಸ್ ಅಧಿಕಾರಿ ಸಿ.ಎನ್.ಶ್ರೀಧರ್ ಅಮಾನತು ಆದೇಶವೂ ಹೊರ ಬಿದ್ದಿದೆ. ಇನ್ನೂ ಯಾರನ್ನೂ ಈವರೆಗೂ ಎಂಡಿಯಾಗಿ ನೇಮಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ವಿಭಾಗ