logo
ಕನ್ನಡ ಸುದ್ದಿ  /  ಕರ್ನಾಟಕ  /  ಮೈಸೂರು ದಸರಾ ಬಂದರೂ ವೆಬ್‌ಸೈಟ್‌ ಅಣಿಯಾಗಲಿಲ್ಲ: ತಿಂಗಳಿನಿಂದಲೂ ಕ್ಷಣಗಣನೆ ಆರಂಭದ ಮಾಹಿತಿ, ಪ್ರವಾಸಿಗರಿಗೆ ವಿವರ ಸಿಗೋದು ಯಾವಾಗ

ಮೈಸೂರು ದಸರಾ ಬಂದರೂ ವೆಬ್‌ಸೈಟ್‌ ಅಣಿಯಾಗಲಿಲ್ಲ: ತಿಂಗಳಿನಿಂದಲೂ ಕ್ಷಣಗಣನೆ ಆರಂಭದ ಮಾಹಿತಿ, ಪ್ರವಾಸಿಗರಿಗೆ ವಿವರ ಸಿಗೋದು ಯಾವಾಗ

Umesha Bhatta P H HT Kannada

Sep 20, 2024 01:16 PM IST

google News

ಮೈಸೂರು ದಸರಾ ದಿನ ಹತ್ತಿರವಾಗುತ್ತಿದ್ದರೂ ವೆಬ್‌ಸೈಟ್‌ ಗೆ ಚಾಲನೆ ನೀಡಿಯೇ ಇಲ್ಲ.

    • ಮೈಸೂರು ದಸರಾ ಉತ್ಸವಕ್ಕೆ ದಿನಗಣನೆ ಆರಂಭಗೊಂಡಿದ್ದರೂ ಇನ್ನೂ ಮಾಹಿತಿಯನ್ನೇ ನೀಡದೇ ಪ್ರಚಾರ ಚಟುವಟಿಕೆಗಳು ನಿಂತಂತೆ ಕಾಣುತ್ತಿವೆ. ದಸರಾ ವೆಬ್‌ಸೈಟ್‌ ಕೂಡ ಬಿಡುಗಡೆಯಾಗಿಲ್ಲ.
ಮೈಸೂರು ದಸರಾ ದಿನ ಹತ್ತಿರವಾಗುತ್ತಿದ್ದರೂ ವೆಬ್‌ಸೈಟ್‌ ಗೆ ಚಾಲನೆ ನೀಡಿಯೇ ಇಲ್ಲ.
ಮೈಸೂರು ದಸರಾ ದಿನ ಹತ್ತಿರವಾಗುತ್ತಿದ್ದರೂ ವೆಬ್‌ಸೈಟ್‌ ಗೆ ಚಾಲನೆ ನೀಡಿಯೇ ಇಲ್ಲ.

ಮೈಸೂರು: ಮೈಸೂರು ದಸರಾಕ್ಕೆ ದಿನಗಣನೆ ಶುರುವಾಗಿದೆ. ಈ ಬಾರಿ ಭಾರೀ ವೈಭವದೊಂದಿಗೆ ದಸರಾ ಆಚರಣೆ ಮಾಡುವುದಾಗಿ ಸರ್ಕಾರವೂ ಘೋಷಿಸಿ ಸಿದ್ದತೆಯನ್ನು ಆರಂಭಿಸಿದೆ. ದಸರಾ ಆಚರಣೆ, ಚಟುವಟಿಕೆಗಳು ಬರೀ ಮೈಸೂರಿಗೆ ಮಾತ್ರ ಸೀಮಿತವಾದಂತೆ ಕಾಣುತ್ತಿದೆ. ಏಕೆಂದರೆ ದಸರಾದಲ್ಲಿ ಏನೇನು ಇರಲಿದೆ. ಈ ಬಾರಿಯ ಆಕರ್ಷಣೆ ಏನು ಎನ್ನುವುದನ್ನು ನೀಡಬೇಕಿದ್ದ ದಸರಾ ಸಮಿತಿ ಅದನ್ನು ಮರೆತಂತೆಯೇ ಕಾಣುತ್ತಿದೆ. ದಸರಾ ವೆಬ್‌ಸೆಟ್‌ ಈ ಹೊತ್ತಿಗೆ ಒಂದಷ್ಟು ಮಾಹಿತಿಗಳನ್ನು ನೀಡುತ್ತಿದ್ದವು. ಈ ವರ್ಷದ ದಸರೆಯ ವೆಬ್‌ಸೈಟ್‌ mysoredasara.gov.in ಈವರೆಗೂ ಚಾಲನೆಯಾಗಿಯೇ ಇಲ್ಲ. ಈ ವೆಬ್‌ಸೈಟ್‌ ಒಳ ಹೊಕ್ಕರೆ ದಿನಗಣನೆಯ ಮಾಹಿತಿ ಬಿಟ್ಟರೆ ಇನ್ನೇನು ಸಿಗುತ್ತಿಲ್ಲ. ದಸರಾ ಕಾರ್ಯಕ್ರಮಗಳು, ಈ ಬಾರಿ ವಿಶೇಷಗಳ ಮಾಹಿತಿ ಪಡೆಯಲು ಸರಿಯಾದ ವಿವರಗಳೇ ಸಿಗುತ್ತಿಲ್ಲ ಎನ್ನುವ ಅಸಮಾಧಾನ ವ್ಯಕ್ತವಾಗಿದೆ.

ದಸರಾ ಸಡಗರ

ಮೈಸೂರು ಎಂದರೆ ದಸರಾ ಎನ್ನುವಷ್ಟರ ಮಟ್ಟಿಗೆ ಜನಪ್ರಿಯವಾಗಿದೆ ನಾಡಹಬ್ಬ. ನಾಲ್ಕುನೂರು ವರ್ಷಕ್ಕೂ ಮಿಗಿದಾದ ಇತಿಹಾಸ ಹೊಂದಿರುವ ಮೈಸೂರು ದಸರಾ ವರ್ಷದಿಂದ ವರ್ಷಕ್ಕೆ ವಿಸ್ತಾರಗೊಳ್ಳುತ್ತಲೇ ಇದೆ. ಜನಮುಖಿಯಾಗಿ ಬದಲಾವಣೆಯೂ ಆಗಿದೆ. ಇದರಿಂದ ಕರ್ನಾಟಕ ಮಾತ್ರವಲ್ಲದೇ ದೇಶ ವಿದೇಶದಿಂದಲೂ ದಸರಾವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಆಗಮಿಸುತ್ತಾರೆ. ಇದಕ್ಕೆ ಕಾರಣ ಮೈಸೂರಿನ ಸೂಜಿಗಲ್ಲಿನಂತಹ ಅರಮನೆ, ಚಾಮುಂಡಿಬೆಟ್ಟ ಹಾಗೂ ದಸರಾದಲ್ಲಿನ ಹತ್ತು ದಿನಗಳ ಚಟುವಟಿಕೆ. ಮುಖ್ಯವಾಗಿ ಜಂಬೂಸವಾರಿ. ತಾಯಿ ಚಾಮುಂಡೇಶ್ವರಿಯ ಮೂರ್ತಿಯನ್ನು ಆನೆಯ ಮೇಲೆ ಇಟ್ಟು ಪೂಜೆ ಸಲ್ಲಿಸಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಐದು ಕಿ.ಮಿ. ವರೆಗೂ ಸಾಲಂಕೃತ ಆನೆಗಳು, ಕಲಾತಂಡಗಳು, ಸ್ಥಬ್ಧಚಿತ್ರಗಳೊಂದಿಗೆ ಮೆರವಣಿಗೆ ಸಾಗುವುದನ್ನು ನೋಡುವುದೇ ಚಂದ. ಅರಮನೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭೋಗ, ಯುವ ದಸರಾ ಸಹಿತ ನಾನಾ ದಸರಾ ಚಟುವಟಿಕೆಗಳು. ಇವೆಲ್ಲವೂ ವಿಶೇಷವೇ. ಇದಕ್ಕಾಗಿ ಮೂರು ತಿಂಗಳಿನಿಂದಾದರೂ ಮೈಸೂರಿನಲ್ಲಿ ತಯಾರಿ ಆಗುತ್ತದೆ. ಮೈಸೂರಿಗರು ನೋಡಿದರೆ ಸಾಲು ಹೊರಗಡೆಯವರು ದಸರಾ ನೋಡಲು ಬರಬೇಕು ಎನ್ನುವುದು ಪ್ರಮುಖ ಉದ್ದೇಶ.

ಪ್ರವಾಸೋದ್ಯಮದ ಹಬ್‌

ಮೈಸೂರು ದಸರಾಕ್ಕೆ ಹಲವಾರು ಆಯಾಮಗಳಿವೆ. ದಸರಾವನ್ನು ಸಾಂಸ್ಕೃತಿಕ, ಧಾರ್ಮಿಕ,ಪಾರಂಪರಿಕ ನೆಲೆಯಲ್ಲಿ ನೋಡಲಾಗುತ್ತದೆ. ಮತ್ತೊಂದು ಕಡೆ ಇದು ಪ್ರವಾಸೋದ್ಯಮದ ಚಿಮ್ಮು ಹಲಗೆ. ದಸರಾ ಎನ್ನುವ ಉತ್ಸವ ಮೂರು ತಿಂಗಳ ಕಾಲ ಪ್ರವಾಸೋದ್ಯಮಕ್ಕೆ ಚೇತರಿಕೆ ನೀಡುತ್ತದೆ. ದಸರಾ ವೇಳೆಯಂತೂ ಹೊಟೇಲ್‌, ಲಾಡ್ಜ್‌, ಟ್ರಾವೆಲ್ಸ್‌, ಬಸ್‌,ರೈಲು, ವಿಮಾನ ಸೇವೆ ಎಲ್ಲವೂ ತುಂಬಿರಲಿವೆ. ಖರೀದಿಯೂ ಜೋರಾಗಲಿದೆ. ಕೋಟ್ಯಂತರ ರೂ.ವಹಿವಾಟು ದಸರಾ ವೇಳೆ ಆಗುತ್ತದೆ. ಇದು ಮೈಸೂರಿನ ಸಣ್ಣ ಚುರುಮುರಿ ವ್ಯಾಪಾರಿಯಿಂದ ಹಿಡಿದು ಆಟೋರಿಕ್ಷಾ, ಟಾಂಗಾ ವಾಲಗಳ ತುತ್ತಿನ ಉತ್ಸವವೂ ಹೌದು.ಇದರ ಅರಿವು ಇದ್ದಾಗ ಮೈಸೂರನ್ನು ಪ್ರವಾಸೋದ್ಯಮದ ನೆಲೆಯಲ್ಲಿ ಪ್ರಚುರಪಡಿಸುವ ಕೆಲಸ ಆಗಬೇಕಿತ್ತು. ಅದು ಮೈಸೂರು ಜಿಲ್ಲಾಡಳಿತದಿಂದ ಆಗುತ್ತಿಲ್ಲ.

ಪ್ರಚಾರ ಕೊರತೆ

ಈ ಬಾರಿ ದಸರಾಕ್ಕೆ ಸಿದ್ದತೆ ನಡೆದಿದ್ದರೂ ಪ್ರಚಾರದ ಕೊರತೆ ಎದ್ದು ಕಾಣುತ್ತಿಲ್ಲ. ಬರೀ ಸಭೆಗಳನ್ನು ನಡೆಸುವುದು ಬಿಟ್ಟರೆ ಬೇರೆನೂ ಆಗುತ್ತಿಲ್ಲ. ಹಿಂದೆಯೆಲ್ಲಾ ಈ ಹೊತ್ತಿಗೆ ದಸರಾ ಆಚರಣೆಗೆ ಸಂಬಂಧಿಸಿದಂತೆ ವೆಬ್‌ಸೈಟ್‌ ಸಿದ್ದವಾಗಿರೋದು. ಎರಡು ತಿಂಗಳ ಮುಂಚೆಯೇ ವೆಬ್‌ಸೈಟ್‌ ನಲ್ಲಿ ನಿತ್ಯ ಮಾಹಿತಿ ನೀಡಲಾಗುತ್ತಿತ್ತು. ಈ ಬಾರಿ ದಸರಾ ಆರಂಭಕ್ಕೆ ಬರೀ ಹನ್ನೆರಡು ದಿನ ಉಳಿದಿದ್ದರೂ ಇನ್ನೂ ವೆಬ್‌ಸೈಟ್‌ ಚಾಲನೆಯಾಗಿಲ್ಲ. ಇದರಿಂದ ದಸರಾ ಎಂದರೆ ಬರೀ ಆನೆ, ಜನ ಎಂದು ತಿಳಿದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇದರೋದಲ್ಲಿಯೇ ಖಾಸಗಿ ಸಂಸ್ಥೆಗಳು ದಸರಾ ಕುರಿತು ನೀಡುತ್ತಿರುವ ಪ್ರಚಾರವೇ ಹೆಚ್ಚಿದ್ದು. ಸರ್ಕಾರ ಹಿಂದೆ ಬಿದ್ದಿದೆ.

ದಸರಾ ಚಟುವಟಿಕೆ ಪ್ರಕಟಣೆಯಾದ ಕೆಲವೇ ದಿನಗಳಲ್ಲಿ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ದಸರಾ ಪೋಸ್ಟರ್‌, ಹೋರ್ಡಿಂಗ್‌ಗಳನ್ನು ಹಾಕಲಾಗುತ್ತಿತ್ತು. ಇದರಿಂದ ಹೊರಗಿನವರಿಗೆ ಮಾಹಿತಿ ಸಿಗುತ್ತಿಲ್ಲ. ಈವರೆಗೂ ಅಂತಹ ಯಾವುದೇ ಚಟುವಟಿಕೆಗಳೂ ಇಲ್ಲ.

ಕಲಾವಿದರ ಪಟ್ಟಿಯಿಲ್ಲ

ಮೈಸೂರು ಅರಮನೆ ಎದುರು ದಿಗ್ಗಜ ಕಲಾವಿದರು ಕಾರ್ಯಕ್ರಮ ನೀಡುತ್ತಾರೆ. ಶಾಸ್ತ್ರೀಯ ಸಂಗೀತ, ನೃತ್ಯ ಪ್ರಕಾರದ ಚಟುವಟಿಕೆ ವೀಕ್ಷಣೆಗೆ ಬರುವವರು ಅಧಿಕ. ಈವರೆಗೂ ಪ್ರಮುಖ ಅರಮನೆ ಕಾರ್ಯಕ್ರಮ ನೀಡುವ ಕಲಾವಿದರು ಯಾರು ಎನ್ನುವುದನ್ನೂ ಪ್ರಕಟಿಸಿಲ್ಲ. ಇದರಿಂದ ಸಾಂಸ್ಕೃತಿಕ ಪ್ರಿಯರು ಕೊನೆ ಕ್ಷಣದವರೆಗೂ ಕಾಯುವಂತಾಗಿದೆ. ಹಿಂದೆಲ್ಲಾ ನಾಲ್ಕೈದು ಕಲಾವಿದರ ಹೆಸರು ಅಂತಿಮವಾದ ತಕ್ಷಣ ವೆಬ್‌ಸೈಟ್‌ ಮೂಲಕ ಪ್ರಕಟಿಸಲಾಗುತ್ತಿತ್ತು. ಈ ವರ್ಷ ಅಂತಹ ಸೂಚನೆಯೇ ಇಲ್ಲ.

ಸಾಮಾಜಿಕ ಮಾಧ್ಯಮಗಳಲ್ಲೂ ಇಲ್ಲ

ಇನ್ನು ದಸರಾ ಕುರಿತು ಈಗ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳುವ ಅವಕಾಶವಿದೆ. ದಸರಾ ಕುರಿತು ಆಸಕ್ತಿ ಇರುವವರು ಆನೆಗಳ ವಿಡಿಯೋ, ಮೈಸೂರಿನ ಪಾರಂಪರಿಕ ಸ್ಥಳಗಳ ಮಾಹಿತಿ ಪ್ರಕಟಿಸುತ್ತಿದ್ದಾರೆ. ಅದನ್ನು ಬಿಟ್ಟಿರೆ ದಸರಾ ಎನ್ನುವ ದೊಡ್ಡ ಉತ್ಸವ ಬಿಂಬಿಸುವ ಪೋಸ್ಟರ್‌ ಅನ್ನು ಮೈಸೂರು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಪ್ರಕಟಿಸಿಲ್ಲ. ಪಾರಂಪರಿಕ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದಲೂ ಆಗಿಲ್ಲ.

ಮೈಸೂರಿನವರೇ ಆದ ಸಿಎಂ ಸಿದ್ದರಾಮಯ್ಯ ಅವರು ದಸರಾವನ್ನು ವಿಶೇಷವಾಗಿ ಆಚರಿಸುವ ಘೋಷಣೆಯನ್ನೇನೋ ಮಾಡಿದರು. ಅದಕ್ಕೆ ಪೂರಕವಾಗಿ ಜನರಿಗೆ ಮಾಹಿತಿ ನೀಡಲು ಯಾಕೆ ಆಗುತ್ತಿಲ್ಲ ಎನ್ನುವ ಪ್ರಶ್ನೆ ಮಾತ್ರ ಇದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ