Mysore Dasara 2024: ಮೈಸೂರು ದಸರಾ ಉತ್ಸವದಲ್ಲಿ ಕಣ್ಮನ ಸೆಳೆದ ಬಗೆಬಗೆಯ ಶ್ವಾನಗಳು, ಗೋಪಿಯೊಂದಿಗೆ ನಾಡಹಬ್ಬಕ್ಕೆ ಬಂದರು ಸುಧಾಮೂರ್ತಿ
Oct 06, 2024 01:56 PM IST
ತಮ್ಮ ನಾಯಿ ಗೋಪಿಯೊಂದಿಗೆ ಮೈಸೂರು ದಸರಾದಲ್ಲಿ ಭಾಗಿಯಾದ ಸುಧಾಮೂರ್ತಿ.
- Mysore Dasara 2024 pet Show ಮೈಸೂರು ದಸರಾದಲ್ಲಿ ವೈಯ್ಯಾರದಿಂದ ಬಳುಕುವ ಭಿನ್ನ ತಳಿಯ ಶ್ವಾನಗಳದ್ದೇ ಆಕರ್ಷಣೆ. ನಾನಾ ಭಾಗಗಳಿಂದ ತಮ್ಮ ಪ್ರೀತಿಯ ನಾಯಿಗಳನ್ನು ಕರೆದು ತಂದಿದ್ದರು. ಸ್ವತಃ ಸುಧಾಮೂರ್ತಿ ಅವರೂ ತಮ್ಮ ಶ್ವಾನದೊಂದಿಗೆ ಬಂದದ್ದು ವಿಶೇಷ.
ಮೈಸೂರು:ಮೈಸೂರು ದಸರಾ ದಿನದಿಂದ ದಿನಕ್ಕೆ ವೈವಿಧ್ಯಮಯ ಚಟುವಟಿಕೆಗಳಿಂದ ಕಳೆಗಟ್ಟುತ್ತಿದೆ. ಭಾನುವಾರದಂದು ನಾನಾ ಸ್ಪರ್ಧೆ, ಚಟುವಟಿಕೆ ನಡೆದವು. ಅದರಲ್ಲೂ ಶ್ವಾನ ಪ್ರದರ್ಶನದಲ್ಲಿ ದೇಶ-ವಿದೇಶದ ಶ್ವಾನಗಳು ತಮ್ಮ ತುಂಟಾಟ, ಓಡಾಟದ ಮೂಲಕ ನೂರಾರು ಮಂದಿಯನ್ನು ಆಕರ್ಷಿಸಿದವು. ಶ್ವಾನಗಳ ಆಟ-ಪಾಠ, ಬೆಡಗು ಬಿನ್ನಾಣದಲ್ಲಿ ಹೆಜ್ಜೆ ಹಾಕಿದ ಶ್ವಾನಗಳ ಬುದ್ಧಿವಂತಿಕೆ ಹಾಗೂ ಪ್ರೀತಿಯನ್ನು ಪ್ರವಾಸಿಗರು ಕಣ್ತುಂಬಿ ಕೊಂಡು ಶ್ವಾನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಜೆ.ಕೆ ಮೈದಾನದಲ್ಲಿ ನಡೆದ 'ಮುದ್ದು ಪ್ರಾಣಿಗಳ ಪ್ರದರ್ಶನ ಸ್ಪರ್ಧೆಯ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜರ್ಮನ್ ಶೆಫರ್ಡ್, ಟಿಬೆಟಿಯನ್ ಮಸ್ಟಿಫ್, ಇಂಡಿಯನ್ ಮಸ್ಟಿಫ್, ಡಾಬರ್ ಮ್ಯಾನ್, ಮುಧೋಳ್, ಸಿಬೇರಿಯನ್ ಹಸ್ಕಿ, ಐರಿಷ್ ಶೆಟ್ಟರ್, ಅಕಿಟಾ, ಲೆಬ್ರಡರ್ ಲ್ಯಾಬ್ರಡರ್, ಪೂಡ್ಲೆ, ಡಾಗೋ ಅರ್ಜೆಂಟೈನಾ, ಗ್ರೇಟ್ ಡೇನ್, ಪೋಮೋರಿಯನ್, ರಾಜ ಪಲ್ಯಮ್, ಪಿಟ್ ಬುಲ್ ಹಾಗೂ ಗೋಲ್ಡನ್ ರಿಟ್ರೀವರ್, ಕಾಕರ್ ಸ್ಫ್ಯಾನಿಯಲ್, ಅಮೇರಿಕನ್ ಬುಲ್ಲಿ, ಬಾಕ್ಸರ್, ಬೀಗಲ್, ಫ್ರೆಂಡ್ಸ್ ಬುಲ್ ಡಾಗ್, ಚೌಚೌ, ಪಗ್, ಡಚ್ ಶೆಫರ್ಡ್ , ಟಿಬೇಟಿಯನ್ ಸ್ಫ್ಯಾನಿಯಲ್, ರಾಟ್ ವಿಲ್ಲರ್, ಸೈಂಟ್ ಬೆರ್ನಾರ್ಡ್, ನಾಯಿಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.
ಈ ಬಾರಿಯ ದಸರಾದಲ್ಲಿ ವಿಶೇಷತೆ
ಕಳೆದ ಬಾರಿ ದಸರಾದಲ್ಲಿ ಸುಮಾರು 20 ರಿಂದ 25 ತಳಿಗಳ ನಾಯಿಗಳು ಮಾತ್ರ ನೋಂದಣಿಯಾಗುತ್ತಿದ್ದು, ಈ ಬಾರಿಯ ದಸರಾದಲ್ಲಿ 45 ತಳಿಗಳು ಪ್ರದರ್ಶನದಲ್ಲಿ ನೊಂದಣಿಯಾಗಿವೆ. ಅದರಲ್ಲಿ ಪ್ರಮುಖವಾಗಿ 12 ತಳಿಗಳು ದೇಶಿಯದ್ದಾಗಿದ್ದು, ಉಳಿದ ಎಲ್ಲಾ ತಳಿಗಳು ಸ್ವದೇಶಿಯದ್ದಾಗಿದೆ.
ಕಾರ್ಯಕ್ರಮದಲ್ಲಿ ಸುಧಾ ಮೂರ್ತಿ ಭಾಗಿ
ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ರಾಜ್ಯ ಸಭೆಯ ಸದಸ್ಯೆ ಸುಧಾ ಮೂರ್ತಿ ಅವರು ಮಾತನಾಡಿ, ಮುದ್ದು ಪ್ರಾಣಿಗಳು ನಮ್ಮ ಮಕ್ಕಳಿದ್ದಂತೆ ಅವುಗಳನ್ನು ನಾವು ಪ್ರೀತಿಯಿಂದ ನೋಡಿಕೊಳ್ಳಬೇಕು. ಅನಾರೋಗ್ಯಕ್ಕೆ ತುತ್ತಾಗಿರುವ ಹಾಗೂ ಗಾಯಗೊಂಡ ಎಷ್ಟೋ ಬೀದಿ ನಾಯಿಗಳಿದ್ದಾವೆ. ನಮ್ಮ ಮಕ್ಕಳೊಂದಿಗೆ ಅವುಗಳ ಹಾರೈಕೆಗೆ ಮುಂದಾಗಬೇಕು. ಇಂತಹ ಶ್ವಾನಗಳ ಪ್ರದರ್ಶನದಿಂದ ಮಕ್ಕಳಲ್ಲಿ ಪ್ರಾಣಿಗಳ ಪ್ರೀತಿ ಹೆಚ್ಚಾಗುತ್ತದೆ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ತಮ್ಮ ಮುದ್ದಾದ ಗೋಪಿ ಶ್ವಾನವು ಪ್ರದರ್ಶನದಲ್ಲಿ ಪಾಲ್ಗೊಂಡಿತ್ತು. ಈ ವೇಳೆ ಗೋಪಿಯೊಂದಿಗಿನ ಒಡನಾಟವನ್ನು ಸುಧಾಮೂರ್ತಿ ಅವರು ನೆನಪಿಸಿಕೊಂಡರು. ಗೋಪಿ ನಾಯಿ ಸ್ಪಂದಿಸುವ ರೀತಿಯ ಹಲವಾರು ಘಟನೆಗಳನ್ನು ಹೇಳಿದರು. ತಮ್ಮ ಬರವಣಿಗೆಗೂ ಅದು ಪ್ರೇರಣೆಯಾದ ಪರಿಯನ್ನು ಸುಧಾಮೂರ್ತಿ ವಿವರಿಸಿದರು.
ದಸರಾದಲ್ಲಿ ಭಾಗಿಯಾಗಿದ್ದ ಗೋಪಿ ನಾಯಿ ಇಂದಿನ ಆಕರ್ಷಣೆಯಾಗಿತ್ತು. ತಮಗೆ ಮಾಡಿದ ಸನ್ಮಾನವನ್ನು ಅದಕ್ಕೆ ಸಲ್ಲಿಸಿದರು ಸುಧಾಮೂರ್ತಿ. ಶಾಲು ಹೊದಿಸಿ ಅಭಿನಂದಿಸಿದರು. ಈ ವೇಳೆ ಗೋಪಿ ಜತೆ ಹಲವರು ಸೆಲ್ಫಿ ತೆಗೆದುಕೊಂಡರು.
ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಉತ್ತಮ ಹಾಗೂ ಮೂಲ ತಳಿಗಳ ಶ್ವಾನಗಳನ್ನು ಶ್ವಾನ ವೈದ್ಯಾಧಿಕಾರಿಗಳು ಹಾಗೂ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅನುಭವ ಹೊಂದಿದಂತಹ ತೀರ್ಪುಗಾರರಿಂದ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ವಿತರಿಸಲಾಯಿತು. ಈ ಪ್ರದರ್ಶನದಲ್ಲಿ ಭಾಗಿಯಾಗಿದ್ದ, ವಿವಿಧ ಪ್ರಕಾರದ ತಳಿಯ ಶ್ವಾನಗಳ ಬಗ್ಗೆ ಜನರು ಮಾಹಿತಿ ಪಡೆದರು.