logo
ಕನ್ನಡ ಸುದ್ದಿ  /  ಕರ್ನಾಟಕ  /  ಒಂದೇ ದಿನದಲ್ಲಿ 43 ಲೀಟರ್‌ ಹಾಲು ಕರೆದ ಹಸು, ಮೈಸೂರು ದಸರಾದಲ್ಲಿ ಆನೆಕಲ್‌ ರಾಮಚಂದ್ರ ರೆಡ್ಡಿಗೆ ಭರ್ಜರಿ ಬಹುಮಾನ

ಒಂದೇ ದಿನದಲ್ಲಿ 43 ಲೀಟರ್‌ ಹಾಲು ಕರೆದ ಹಸು, ಮೈಸೂರು ದಸರಾದಲ್ಲಿ ಆನೆಕಲ್‌ ರಾಮಚಂದ್ರ ರೆಡ್ಡಿಗೆ ಭರ್ಜರಿ ಬಹುಮಾನ

Umesha Bhatta P H HT Kannada

Oct 08, 2024 09:43 AM IST

google News

ಮೈಸೂರು ದಸರಾ ಹಾಲು ಕರೆಯುವ ಸ್ಪರ್ಧೆಯಲ್ಲಿ ವಿಜೇತರಾದ ಹಸುವಿನ ಮಾಲೀಕರಿಗೆ ಬಹುಮಾನ ವಿತರಿಸಲಾಯಿತು.

  •  ಮೈಸೂರು ದಸರಾದಲ್ಲಿ ನೃತ್ಯ, ಸಂಗೀತ, ಕಲೆಯ ಜತೆಗೆ ಕೃಷಿಕರಿಗೂ ಹಲವು ವೇದಿಕೆಯಿದೆ.  ಅದರಲ್ಲೂ ಹೈನುಗಾರಿಕೆಗೆ ಪ್ರೋತ್ಸಾಹಿಸುವ ಹಾಲು ಕರೆಯುವ ಸ್ಪರ್ಧೆಯೂ ನಡೆಯುತ್ತದೆ. ಮೊದಲ ಬಾರಿಗೆ ಬಹುಮಾನದ ಮೊತ್ತವನ್ನು ಒಂದು ಲಕ್ಷ ರೂ.ಗೆ ಏರಿಸಿದ್ದು, ಸ್ಪರ್ಧೆಯೂ ಉತ್ತಮವಾಗಿತ್ತು.

ಮೈಸೂರು ದಸರಾ ಹಾಲು ಕರೆಯುವ ಸ್ಪರ್ಧೆಯಲ್ಲಿ ವಿಜೇತರಾದ ಹಸುವಿನ ಮಾಲೀಕರಿಗೆ ಬಹುಮಾನ ವಿತರಿಸಲಾಯಿತು.
ಮೈಸೂರು ದಸರಾ ಹಾಲು ಕರೆಯುವ ಸ್ಪರ್ಧೆಯಲ್ಲಿ ವಿಜೇತರಾದ ಹಸುವಿನ ಮಾಲೀಕರಿಗೆ ಬಹುಮಾನ ವಿತರಿಸಲಾಯಿತು.

ಮೈಸೂರು: ಒಂದೇ ದಿನದಲ್ಲಿ ಆ ಹಸು ಕರೆದಿದ್ದು ಬರೋಬ್ಬರಿ 43 ಲೀಟರ್‌ ಹಾಲು. ಆತ ಹಾಲನ್ನು ಕರೆಯುತ್ತಿದ್ದರೆ ಕಾಮಧೇನುವಿನಂತೆ ಆ ಹಸು ಹಾಲನ್ನು ನೀಡುತ್ತಲೇ ಇತ್ತು. ಅಲ್ಲಿದ್ದವರಿಗೂ ಅಚ್ಚರಿ. ಬೆಳಿಗ್ಗೆ ಹಾಗೂ ಸಂಜೆ ಎರಡೂ ಹೊತ್ತು ಸೇರಿ ಹಸು ನೀಡಿದ ಹಾಲಿನ ಪ್ರಮಾಣಕ್ಕೆ ಮಾಲೀಕನಿಗೆ ದೊರೆತಿದ್ದು ಒಂದು ಲಕ್ಷ ರೂ. ಬಹುಮಾನ. ಅವರೊಂದಿಗೆ ಇನ್ನೂ ಮೂರು ಹಸುಗಳು ಕೊಂಚ ಕಡಿಮೆ ಹಾಲನ್ನು ಕರೆದವು. ಆದರೆ ಬೆಂಗಳೂರಿನ ಆನೆಕಲ್‌ನ ರಾಮಚಂದ್ರರೆಡ್ಡಿ ಅವರ ಹಸುವಿಗೆ ಮಾತ್ರ ದೊರೆತಿದ್ದು ಮೊದಲ ಸ್ಥಾನ. ಮೈಸೂರು ದಸರಾದಲ್ಲಿ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಾಲು ಕರೆಯುವ ಸ್ಪರ್ಧೆಯನ್ನು ಆಯೋಜಿಸಿಕೊಂಡು ಬರಲಾಗುತ್ತಿದ್ದು. ಈ ಬಾರಿ ದಸರಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಮೈಸೂರು ದಸರಾ ಮಹೋತ್ಸವ-2024 ರ ಅಂಗವಾಗಿ ರೈತ ದಸರಾ ಉಪ ಸಮಿತಿ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ 'ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ ಗಮನ ಸೆಳೆಯಿತು.

ಈ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಯ 8 ಹಸುಗಳು ಭಾಗವಹಿಸಿದ್ದು, ಒಟ್ಟು 20 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು. ಅದರಲ್ಲಿ ಇಂದು ಬೆಳಿಗ್ಗೆ ಮತ್ತು ಸಂಜೆ ಅಂತಿಮ ಮಟ್ಟದ ಹಾಲು ಕರೆಯುವ ಸ್ಪರ್ಧೆಯನ್ನು ನಡೆಸಲಾಗಿತ್ತು.

ಸ್ಪರ್ಧೆಯಲ್ಲಿ ಹೆಚ್ಚಿನ ಪ್ರಮಾಣದ ಹಾಲನ್ನು ಕರೆದ ಸ್ಪರ್ಧಿಗೆ ಪ್ರಶಸ್ತಿ ನೀಡಲಾಯಿತು.ಕಳೆದ ವರ್ಷಗಳಿಂದ ಕೇವಲ 50,000 ಮತ್ತು 30,000 ಮಾತ್ರ ಬಹುಮಾನ ನೀಡುತ್ತಿದ್ದು, ಆದರೆ ಈ ಬಾರಿ ನಮ್ಮ ಸರ್ಕಾರ ಪ್ರಥಮ ಬಹುಮಾನಕ್ಕೆ ಒಂದು ಲಕ್ಷ, ದ್ವಿತೀಯ ಬಹುಮಾನಕ್ಕೆ 80,000 ಸಾವಿರ, ತೃತೀಯ ಬಹುಮಾನಕ್ಕೆ 60,000, ಹಾಗೂ ಕೊನೆಯ ಬಹುಮಾನಕ್ಕೆ 40,000 ರೂಗಳನ್ನು ನೀಡಲು ತೀರ್ಮಾನಿಸಲಾಗಿತ್ತು.

ಬಹುಮಾನ ಗೆದ್ದವರು

ಆನೇಕಲ್ ತಾಲ್ಲೂಕಿನ ಕಗ್ಗಲೀಪುರದ ತನಿಷ್ ಪಾರಂ ಡೈರಿಯ ರಾಮಚಂದ್ರ ರೆಡ್ಡಿ - ಬೆಳಗ್ಗೆ ಮತ್ತು ಸಂಜೆ ಎರಡೂ ಸೇರಿ - 42.840 ಲೀ ಹಾಲು ಕರೆಯುವ ಮೂಲಕ 1 ಲಕ್ಷ ರೂ ನಗದು ಗಳಿಸಿಕೊಂಡು‌ ಪ್ರಥಮ ಸ್ಥಾನ ಪಡೆದುಕೊಂಡರು.

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ತೋಟಿ ಗ್ರಾಮದ ಬಾಬು ಬಿನ್ ರೇವಣ್ಣ ಅವರು ಬೆಳಗ್ಗೆ ಮತ್ತು ಸಂಜೆ ಎರಡೂ ಸೇರಿ - 42.300 ಲೀ ಹಾಲು ಕರೆಯುವ ಮೂಲಕ ದ್ವಿತೀಯ ಸ್ಥಾನ ಗಳಿಸಿ 80 ಸಾವಿರ ರೂ ನಗದು ಹಣ ಗಳಿಸಿದರು.

ಆನೇಕಲ್ ತಾಲ್ಲೂಕಿನ ವೆಟ್ ಫಾರಂ, ನಕುಂದಿ, ದೊಮ್ಮಸಂದ್ರ, ಅಜಯ್.ಪಿ ರೆಡ್ಡಿ ಅವರ ಹಸು ಬೆಳಗ್ಗೆ ಮತ್ತು ಸಂಜೆ ಎರಡೂ ಸೇರಿ - 41.300 ಲೀ ಕರೆಯುವ ಮೂಲಕ ತೃತೀಯ ಸ್ಥಾನ ಗಳಿಸಿ 60 ಸಾವಿರ ನಗದು ಪಡೆದುಕೊಂಡರು.

ಮೈಸೂರು ಜಿಲ್ಲೆ ಎಚ್ ಡಿ ಕೋಟೆ ತಾಲೂಕಿನ ಕಣಿಯನಹುಂಡಿ ಗ್ರಾಮದ AGM ಡೈರಿ ಫಾರಂ ದೇವರಾಜ್ ಅವರ ಹಸು ಬೆಳಗ್ಗೆ ಮತ್ತು ಸಂಜೆ ಎರಡೂ ಸೇರಿ - 40.580 ಲೀ ಕರೆಯುವ ಮೂಲಕ ನಾಲ್ಕನೇ ಸ್ಥಾನ ಪಡೆದುಕೊಂಡು 40 ಸಾವಿರ ನಗದು ಹಣ ತಮ್ಮದಾಗಿಸಿಕೊಂಡರು.

ಈ ಸಂದರ್ಭದಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ನಾಲ್ಕನೇ ಸ್ಥಾನ ಪಡೆದುಕೊಂಡ ವಿಜೇತರಿಗೆ ನಗದು ಬಹುಮಾನ ಜೊತೆಗೆ ಹಾಲಿನ ಕ್ಯಾನ್, ಟ್ರೋಫಿ, ಪ್ರಶಸ್ತಿ ಪ್ರಮಾಣ ಪತ್ರ ನೀಡಿ ಗೌರವಿಸಿ. ಉಳಿದ ಎಲ್ಲಾ ಸ್ಪರ್ಧಿಗಳಿಗೂ ಹಾಲಿನ ಕ್ಯಾನ್ ನೀಡುವ ಮೂಲಕ ಗೌರವ ಸಮರ್ಪಣೆ ಮಾಡಲಾಯಿತು.

ನಮ್ಮ ಮೈಸೂರು ದಸರಾ ಇಡೀ ವಿಶ್ವಕ್ಕೆ ಪ್ರಸಿದ್ಧಿಯಾಗಿದೆ. ಕಳೆದ ಬಾರಿ ಸರಿಯಾದ ರೀತಿಯಲ್ಲಿ ಮಳೆ, ಬೆಳೆ ಇಲ್ಲದ ಕಾರಣ ನಮ್ಮ ರೈತರು ಬಹಳ ಸಂಕಷ್ಟಕ್ಕೆ ಸಿಲುಕಿದರು. ಅದರ ಪರಿಣಾಮ, ದಸರಾವನ್ನು ಸಾಂಪ್ರದಾಯಿಕವಾಗಿ ನಡೆಸಲಾಯಿತು. ಆದರೆ ಈ ಬಾರಿಯ ದಸರಾದಲ್ಲಿ ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಹಾಗೂ ವರುಣದೇವನ ಅನುಗ್ರಹದಿಂದ ಉತ್ತಮ ಮಳೆ ಬೆಳೆಯಾಗಿ ಹಸಿರು ವಾತಾವರಣ ಮೂಡಿದೆ. ಹೈನುಗಾರಿಕೆ ಹಲವರ ಬದುಕಿಗೆ ಆಸರೆಯಾಗಿದ್ದು. ಪ್ರೀತಿಯಿಂದಲೇ ಈ ಕಾಯಕ ಮಾಡಿ ಎಂದು ಶಾಸಕರಾದ ಕೆ. ಹರೀಶ್‌ ಗೌಡ, ಡಿ.ರವಿಶಂಕರ್‌ ಸಲಹೆ ನೀಡಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ