ತುಂಟ ಆನೆ ಕಂಜನ್ ದಸರಾಗೆ ಬಂದಿದ್ದಾರೂ ಹೇಗೆ; ಅರಣ್ಯ ಇಲಾಖೆಯಲ್ಲಿ ಪ್ರಭಾವಕ್ಕೆ ಮಣಿಯಿತೇ ದಸರಾ ಆನೆ ಆಯ್ಕೆ ಸಮಿತಿ?
Sep 22, 2024 02:44 PM IST
ಮೈಸೂರು ಅರಮನೆ ಆವರಣದಲ್ಲಿ ತಿಂಗಳಿನಿಂದ ಕೆಲಸವಿಲ್ಲದೇ ಇರುವ ಕಂಜನ್ ಆನೆ.
- ಮೈಸೂರು ದಸರಾಗೆ ಆಗಮಿಸಿ ಹೆದ್ದಾರಿಗೆ ನುಗ್ಗಿ ಅವಾಂತರ ಸೃಷ್ಟಿಸಿದ ಕಂಜನ್ ಆಯ್ಕೆ ಮಾಡಿದ್ದಾದರೂ ಹೇಗೆ, ಆನೆ ಹಿನ್ನೆಲೆಯ ಏನು ಎನ್ನುವ ಮಾಹಿತಿ ಇಲ್ಲಿದೆ.
ಮೈಸೂರು: ಮೈಸೂರು ದಸರಾ ಆನೆಗಳ ಆಯ್ಕೆ ವಿಚಾರದಲ್ಲಿ ಎಷ್ಟೇ ಎಚ್ಚರವಿದ್ದರೂ ಕೊಂಚ ಯಾಮಾರಿದರೆ ಹಿಂದೆ ಆಗಿರುವ ಅನಾಹುತಗಳು ಮರುಕಳಿಸಬಹುದು. ಆನೆಗಳ ನಡುವೆ ಸಂಘರ್ಷ ಆಗಿರುವ ಘಟನೆಗಳು ಇದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಚ್ಚರ ವಹಿಸುವಲ್ಲಿ ಎಡವಿದರೇ ಎನ್ನುವ ಪ್ರಶ್ನೆ ಎದುರಾಗಿದೆ. ಶನಿವಾರ ರಾತ್ರಿ ಕಂಜನ್ ಆನೆ ಮೈಸೂರಿನ ಬೀದಿಗೆ ನುಗ್ಗಿ ಕೆಲ ಹೊತ್ತು ಓಡಾಡಿದ್ದು ಕೊಂಚವೇ ಅನಾಹುತ ತಪ್ಪಿದೆ. ಆದರೆ ಕಂಜನ್ ಆನೆಯನ್ನು ಈವರೆಗೂ ದಸರಾ ತಾಲೀಮಿಗೆ ಬಳಸಿಲ್ಲ. ಅದು ತುಂಟ ಆನೆ. ಮಾತು ಕೇಳುವುದಿಲ್ಲ, ಸೂಚನೆ ಪಾಲಿಸುವುದಿಲ್ಲ ಎನ್ನುವ ಅಭಿಪ್ರಾಯಗಳಿದ್ದರೂ ಆ ಆನೆಯನ್ನು ಮೈಸೂರು ದಸರಾದಂತಹ ದೊಡ್ಡ ಉತ್ಸವಕ್ಕೆ ಆಯ್ಕೆ ಮಾಡಿದ್ಧಾದರೂ ಏಕೆ ಎನ್ನುವ ಪ್ರಶ್ನೆ ಎದುರಾಗಿದೆ.
ಪ್ರಭಾವಕ್ಕೆ ಮಣಿಯಿತೇ ಸಮಿತಿ
ದಸರಾ ಮೂರು ತಿಂಗಳ ಮುಂಚೆಯೇ ಆನೆಗಳ ಆಯ್ಕೆ ಪ್ರಕ್ರಿಯೆ ಶುರುವಾಗುತ್ತದೆ. ಕರ್ನಾಟಕ ನಾಗರಹೊಳೆ, ಬಂಡಿಪುರ, ಕೆ.ಗುಡಿ, ಕೊಡಗಿನ ದುಬಾರೆ, ಶಿವಮೊಗ್ಗದ ಸಕ್ರೆಬೈಲ್ ಸಹಿತ ಹಲವು ಕಡೆಗಳಲ್ಲಿರುವ ಅರಣ್ಯ ಇಲಾಖೆಯ ಆನೆ ಶಿಬಿರಗಳಿಗೆ ತೆರಳಿ ಮೈಸೂರು ವನ್ಯಜೀವಿ ಡಿಸಿಎಫ್, ವನ್ಯಜೀವಿ ಪಶುವೈದ್ಯಾಧಿಕಾರಿ, ಆರ್‌ಎಫ್‌ಒ ಅವರಿರುವ ನಾಲ್ಕೈದು ಸದಸ್ಯರ ತಂಡ ಆಯ್ಕೆ ಪ್ರಕ್ರಿಯೆ ನಡೆಸುತ್ತದೆ. ಮುಖ್ಯವಾಗಿ ಹೊಸದಾಗಿ ಆಯ್ಕೆ ಮಾಡುವ ಆನೆಗಳ ಸ್ವಭಾವ, ಆರೋಗ್ಯ ಸ್ಥಿತಿ, ಮದಕ್ಕೆ ಬಂದಿರುವ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತದೆ. ಆನೆಯ ಹಿನ್ನೆಲೆ ನೋಡಿಯೇ ಆಯ್ಕೆ ಮಾಡುವುದು ಸಹಜ ಪ್ರಕ್ರಿಯೆ. ಇದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಅವರು ನೀಡುವ ವರದಿ ಆಧರಿಸಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಆನೆಗಳ ಪಟ್ಟಿ ಅಂತಿಮಗೊಳಿಸುತ್ತಾರೆ.
ಹಿಂದೆಲ್ಲಾ ಆನೆ ಆಯ್ಕೆ ಮಾಡುವಾಗ ನಿಖರೆಗೆ ಒತ್ತು ನೀಡುತ್ತಿದ್ದರು. ಅರ್ಜುನ ಆನೆಯಿಂದ ಆದ ಅನಾಹುತಗಳ ಎಚ್ಚರಿಕೆಯೂ ಕೂಡ ಇದಕ್ಕೆ ಕಾರಣ. ಈ ವರ್ಷ ಆನೆಗಳ ಆಯ್ಕೆ ವಿಚಾರದಲ್ಲಿ ಪ್ರಭಾವಕ್ಕೆ ಸಮಿತಿ ಮಣಿಯಿತೇ ಎನ್ನುವ ಪ್ರಶ್ನೆ ಎದುರಾಗಿದೆ.
ಕಂಜನ್ ಆನೆ ತುಂಟ. ಅದು ದಸರೆಗೆ ತರುವುದು ಬೇಡ. ಕಾಲು ನೋವು ಬೇರೆ ಇದೆ ಎನ್ನುವ ಮಾಹಿತಿಯಿದ್ದರೂ ಕೊನೆ ಕ್ಷಣದಲ್ಲಿ ಆ ಆನೆ ಆಯ್ಕೆ ಮಾಡಲಾಗಿದೆ. ಇದರ ಹಿಂದೆ ಇಲಾಖೆಯ ಕೆಲ ಪ್ರಭಾವಗಳು ಕೆಲಸ ಮಾಡಿರುವ ಆರೋಪಗಳು ಕೇಳಿ ಬರುತ್ತಿವೆ.
ಆನೆ ಹೆಸರು ಬಂದಿದ್ದು ಹೇಗೆ
ಕಂಜನ್ ಆನೆ ಈಗಿರುವ ಜಂಬೂಸವಾರಿ ಗಜಪಡೆಗಳ 14 ಆನೆಗಳ ಪೈಕಿ 9 ಕಿರಿಯ ಆನೆಗಳಲ್ಲಿ ಒಂದು. ಸದ್ಯ ಇದಕ್ಕೆ 25ವರ್ಷ ವಯಸ್ಸಾಗಿದ್ದು, ಮೊದಲು ಇದು ಕೂಡ ಪುಂಡಾನೆಯಾಗಿತ್ತು. ಎಲ್ಲ ಆನೆಗಳಂತೆ ಕಾಡಿನಿಂದ ಹೊರ ಬಂದು ರೈತರ ತೋಟಗಳಿಗೆ ನುಗ್ಗಿ ಉಪಟಳ ನೀಡುತ್ತಿದ್ದುದರಿಂದ 2014ರಲ್ಲಿ ಹಾಸನ ಜಿಲ್ಲೆಯ ಆಲೂರಿನಲ್ಲಿ ಆನೆ ಕಾರ್ಯಾಚರಣೆಯಲ್ಲಿ ಸೆರೆ ಸಿಕ್ಕಿತ್ತು. ಆ ನಂತರ ಅದನ್ನು ತಂದು ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಪಳಗಿಸಲಾಯಿತು. ಆಗ ಆನೆ ಶಿಬಿರ ನೋಡಿಕೊಳ್ಳುತ್ತಿದ್ದ, ಈಗಲೂ ಇರುವ ಉಪ ವಲಯ ಅರಣ್ಯ ಅಧಿಕಾರಿಯೊಬ್ಬರು ತಮ್ಮ ಹೆಸರನ್ನು ಹೋಲುವ ರೀತಿಯಲ್ಲಿ ಈ ಆನೆಗೂ ಹೆಸರು ಇಟ್ಟರು. ತಾವೂ ಆನೆ ಸೆರೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರ ನೆನಪು ಹಾಗೂ ದಸರಾದಲ್ಲಿ ತಮ್ಮ ಹೆಸರು ಚಿರಸ್ಥಾಯಿಯಾಗಲು ಆನೆಗೆ ಹೆಸರು ಇಟ್ಟರು. ಇದಾದ ಮೇಲೆ ಆನೆ ದಸರಾಗೆ ಆಯ್ಕೆಯಾಗುವಂತೆಯೂ ನೋಡಿಕೊಂಡರು. ಕಳೆದ ವರ್ಷ ಪಾರ್ಥಸಾರಥಿ ಎನ್ನುವ ಆನೆ ಮದಕ್ಕೆ ಬಂದಿದೆ ಎನ್ನುವ ಕಾರಣ ನೀಡಿ ಹೊರಗಿಟ್ಟು ಕಂಜನ್ ಆನೆ ಆಯ್ಕೆ ಮಾಡಲಾಯಿತು.
ಈ ಬಾರಿಯೂ ಕಾಲು ನೋವು ಸಹಿತ ಹಲವು ಕಾರಣದಿಂದ ಆ ಆನೆಯನ್ನು ಆಯ್ಕೆ ಮಾಡುವ ಪಟ್ಟಿಯಲ್ಲಿ ಇರಲಿಲ್ಲ. ಮತ್ತೆ ಪ್ರಭಾವ ಕೆಲಸ ಮಾಡಿ ಪಟ್ಟಿಗೆ ಸೇರಿಸಲಾಗಿದೆ ಎನ್ನಲಾಗುತ್ತಿದೆ.
ತಿಂಗಳಿನಿಂದ ಕೆಲಸವಿಲ್ಲ
ದಸರಾಕ್ಕೆ ಮೊದಲ ತಂಡದ ಆನೆಗಳು ಮೈಸೂರು ಅರಮನೆ ಅಂಗಳ ಪ್ರವೇಶಿಸಿ ತಿಂಗಳೇ ಆಗಿದೆ. ಈವರೆಗೂ ಆನೆಗಳಿಗೆ ನಿತ್ಯ ತಾಲೀಮು ನೀಡಲಾಗುತ್ತಿದೆ. ಆದರೆ ಕಂಜನ್ ಆನೆಯನ್ನು ಯಾವುದೇ ತಾಲೀಮಿಗೆ ಕರೆ ತಂದಿಲ್ಲ. ಬಹುತೇಕ ದಿನ ಅದು ಅರಮನೆ ಅಂಗಳಕ್ಕೆ ಸೀಮಿತವಾಗಿದೆ. ತುಂಟ ಆನೆ ತೊಂದರೆ ಮಾಡೀತು. ಮಾರ್ಗಮಧ್ಯೆದಲ್ಲಿ ಗಲಾಟೆ ಎಬ್ಬಿಸಿದರೆ ಹೇಗೆ ಎನ್ನುವ ಆತಂಕವೂ ಅಧಿಕಾರಿಗಳನ್ನು ಕಾಡಿ ಅದನ್ನು ಹೊರಗೆ ಕರೆತರುವುದು ಕಡಿಮೆಯಾಗಿದೆ. ಇದರ ನಡುವೆ ಶನಿವಾರ ರಾತ್ರಿಯೂ ಊಟದ ವೇಳೆ ಧನಂಜಯ ಆನೆಯೊಂದಿಗೆ ಗಲಾಟೆ ಮಾಡಿಕೊಂಡು ಕಂಜನ್ ಆನೆ ಓಡಿ ಬಂದು ಅವಾಂತರ ಸೃಷ್ಟಿಸಿದೆ. ಅದೂ ಬೆಂಗಳೂರು- ಊಟಿ ರಾಷ್ಟ್ರೀಯ ಹೆದ್ದಾರಿಯೂ ಆನೆ ನುಗ್ಗಿದೆ. ರಾತ್ರಿ 8 ರ ಸಮಯದಲ್ಲಿ ಕಡಿಮೆ ಜನ ಇದ್ದುದರಿಂದ ಹಾಗೂ ವಾಹನ ದಟ್ಟಣೆಯೂ ಅಷ್ಟಾಗಿ ಇಲ್ಲುದರಿಂದ ಯಾವುದೇ ಅನಾಹುತ ಆಗಿಲ್ಲ.
ವಾಪಾಸ್ ಏಕೆ ಕಳುಹಿಸಿಲ್ಲ
ಹಿಂದೆಲ್ಲಾ ಆನೆಗಳು ಮದಕ್ಕೆ ಬಂದಿದ್ದರೆ ಇಲ್ಲವೇ ಆರೋಗ್ಯ ಸಮಸ್ಯೆಯಾಗಿದ್ದರೆ ವಾಪಾಸ್ ಆನೆ ಶಿಬಿರಕ್ಕೆ ತೆಗೆದುಕೊಂಡು ಹೋದ ಉದಾಹರಣೆಯೂ ಇದೆ. ಹೀಗಿದ್ದರೂ ಕಂಜನ್ ಆನೆಯನ್ನು ದಸರಾಕ್ಕೆ ಬಳಕೆ ಮಾಡಿಕೊಳ್ಳದೇ ಇದ್ದರೂ ಮೈಸೂರಿನಲ್ಲಿ ಇಟ್ಟುಕೊಂಡಿರುವುದು ಯಾಕೆ ಎನ್ನುವ ಪ್ರಶ್ನೆಯೂ ಎದುರಾಗಿದೆ.