logo
ಕನ್ನಡ ಸುದ್ದಿ  /  ಕರ್ನಾಟಕ  /  Mysore Dasara: ಮೈಸೂರು ದಸರಾ ಮತ್ತಷ್ಟು ಸುಂದರ, ಧಾರ್ಮಿಕತೆಯಿಂದ ಬ್ರಾಂಡ್‌ವರೆಗೆ; ಸುದೀರ್ಘ 414 ವರ್ಷಗಳ ಇತಿಹಾಸದ ನಾಡಹಬ್ಬದ 10 ಮುಖಗಳು

Mysore Dasara: ಮೈಸೂರು ದಸರಾ ಮತ್ತಷ್ಟು ಸುಂದರ, ಧಾರ್ಮಿಕತೆಯಿಂದ ಬ್ರಾಂಡ್‌ವರೆಗೆ; ಸುದೀರ್ಘ 414 ವರ್ಷಗಳ ಇತಿಹಾಸದ ನಾಡಹಬ್ಬದ 10 ಮುಖಗಳು

Umesha Bhatta P H HT Kannada

Oct 03, 2024 09:49 AM IST

google News

ಮೈಸೂರು ದಸರಾ ಎನ್ನುವುದು ಈಗ ದೊಡ್ಡ ಬ್ರಾಂಡ್‌ ಆಗಿ ಬೆಳೆದಿದೆ.

    • ಮೈಸೂರು ದಸರಾ ಎನ್ನುವುದು ಬರೀ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವವಾಗಿ ಉಳಿಯದೇ ಬ್ರಾಂಡ್‌ ದಸರಾ ಆಗಿ ಬೆಳೆದಿದೆ. ಮೈಸೂರು ದಸರಾ ಎಂದರೆ ಏನೆಲ್ಲಾ ಇದೆ ಎನ್ನುವ ಮಾಹಿತಿ ಇಲ್ಲಿದೆ.
ಮೈಸೂರು ದಸರಾ ಎನ್ನುವುದು ಈಗ ದೊಡ್ಡ ಬ್ರಾಂಡ್‌ ಆಗಿ ಬೆಳೆದಿದೆ.
ಮೈಸೂರು ದಸರಾ ಎನ್ನುವುದು ಈಗ ದೊಡ್ಡ ಬ್ರಾಂಡ್‌ ಆಗಿ ಬೆಳೆದಿದೆ.

ಮೈಸೂರು ದಸರಾ ಎಂದರೆ ಎಷ್ಟೊಂದು ಸುಂದರ ಎನ್ನುವ ಹಾಡು ನೆನಪಾಗುತ್ತದೆ. ಈಗ ಮೈಸೂರು ದಸರಾ ಹಳೆಯ ವೈಭವ, ಧಾರ್ಮಿಕ, ಸಾಂಸ್ಕೃತಿಕ ಮಹತ್ವದ ಅಡಿಪಾಯದೊಂದಿಗೆ ಹಲವು ಆಯಾಮಗಳನ್ನು ಪಡೆದುಕೊಂಡಿದೆ. ದಸರಾ ಎಂದರೆ ಬರೀ ಉತ್ಸವವಲ್ಲ. ಉದ್ಯಮದ ಸ್ವರೂಪ. ಬ್ರಾಂಡ್‌ ಪ್ರತಿಬಿಂಬವಾಗಿಯೂ ಬೆಳೆದಿದೆ. ಯುವಕರಿಂದ ಹಿಡಿದು ಮಹಿಳೆಯರು. ಹಿರಿಯರು, ಆಹಾರ ಪ್ರಿಯರು, ಭಿನ್ನ ಭಾವನೆಗಳ ಪ್ರವಾಸಿಗರನ್ನು ಸೆಳೆಯುವ ಉತ್ಸವವಾಗಿ ಮಾರ್ಪಾಡಾಗಿದೆ. ನಾಲ್ಕು ನೂರು ವರ್ಷದ ದಸರಾವೀಗ ಜನರನ್ನು ಸೆಳೆಯುವ ಪ್ರವಾಸಿ ದಸರವೂ ಹೌದು. ಇದು ಬದಲಾದ ಹಾದಿಯ ನೋಟ ಇಲ್ಲಿದೆ.

ಧಾರ್ಮಿಕ ದಸರಾ

ದಸರಾವನ್ನು ಮೊದಲೆಲ್ಲಾ ಧಾರ್ಮಿಕ ಆಯಾಮದಲ್ಲಿಯೇ ನೋಡಲಾಗುತಿತ್ತು. ದಸರಾ ಎಂದರೆ ಚಾಮುಂಡೇಶ್ವರಿ ತಾಯಿಗೆ ಪೂಜೆ ಎನ್ನುವುದು ನಂಬಿಕೆ. ದಸರಾ ವೇಳೆ ನಡೆಯುವ ವಿಶೇಷ ಪೂಜೆಗಳು, ಧಾರ್ಮಿಕ ವಿಧಿವಿಧಾನಗಳ ಕಾರಣದಿಂದ ಇದಕ್ಕೆ ಧಾರ್ಮಿಕ ಮಹತ್ವ ಮೊದಲಿನಿಂದಲೂ ಬಂದಿದೆ. ಏಕೆಂದರೆ ನವರಾತ್ರಿಯ ಎಲ್ಲಾ ದಿನಗಳಲ್ಲೂ ಮೈಸೂರಿನ ಬೆಟ್ಟದ ಚಾಮುಂಡಿ ತಾಯಿಗೆ ವಿಶೇಷ ಪೂಜೆಗಳು ನಡೆಯುತ್ತವೆ. ಆಗಲೂ ಇದ್ದವು. ಈಗಲೂ ಅದು ಮುಂದುವರಿದಿದೆ. ಇದರಿಂದ ದಸರೆಗೆ ಮೊದಲ ಮಹತ್ವವೇ ಧಾರ್ಮಿಕವಾದದ್ದು.

ಐತಿಹಾಸಿಕ ದಸರಾ

ಮೈಸೂರು ದಸರಾಕ್ಕೆ ಇರುವುದು ಬರೋಬ್ಬರಿ 414 ವರ್ಷಗಳ ಸುದೀರ್ಘ ಇತಿಹಾಸ. 1610ರಲ್ಲಿ ಮೊದಲ ಬಾರಿಗೆ ಶ್ರೀರಂಗಪಟ್ಟಣದಲ್ಲಿ ದಸರಾ ಆರಂಭಗೊಂಡಿತ್ತು. ಆಗ ಮೈಸೂರು ಸಂಸ್ಥಾನದ ರಾಜಧಾನಿ ಶ್ರೀರಂಗಪಟ್ಟಣವೇ ಆಗಿತ್ತು. ಅರಸರು ಅಲ್ಲಿ ದಸರಾದೊಂದಿಗೆ ವಿಜಯದಶಮಿ ಆಚರಿಸಿದ್ದರು. ಅಲ್ಲಿಂದ ಮೈಸೂರಿಗೆ ದಸರಾ ಸ್ಥಳಾಂತರಗೊಂಡಿತು. ಆಗಿನಿಂದಲೂ ಕೆಲವು ಬಾರಿ ಸರಳ ದಸರಾ ಆಚರಣೆಗೊಂಡರೂ ರದ್ದಾಗಿದ್ದು ಬಹಳ ಕಡಿಮೆಯೇ. ಇಷ್ಟು ಸುದೀರ್ಘವಾಗಿ ಉತ್ಸವವೊಂದು ನಡೆದುಕೊಂಡು ಬಂದಿರುವುದು ಕಡಿಮೆಯೇ. ಇದರಿಂದ ದಸರಾಕ್ಕೆ ಐತಿಹಾಸಿಕ ಮಹತ್ವವೂ ಇದೆ.

ಸಾಂಸ್ಕೃತಿಕ ದಸರಾ

ಆನಂತರ ಇದು ಸಾಂಸ್ಕೃತಿಕ ಸ್ವರೂಪವನ್ನು ಮಹತ್ವವನ್ನೂ ಪಡೆದುಕೊಂಡಿದೆ. ಮೈಸೂರಿನ ಅರಮನೆ ಎದುರು ದಸರಾದ ಒಂಬತ್ತು ದಿನವೂ ಒಂದಿಲ್ಲೊಂದು ಕಾರ್ಯಕ್ರಮ ನಡೆಯುತ್ತಿದ್ದವು. ಅದರಲ್ಲೂ ಜಗದ್ವಿಖ್ಯಾತ ಕಲಾವಿದರು ಇಲ್ಲಿ ಕಾರ್ಯಕ್ರಮ ನೀಡುತ್ತಿದ್ದಾರೆ. ಉತ್ತರ ಭಾರತದ ಪ್ರಸಿದ್ದ ಘರಾನಗಳ ಕಲಾವಿದರನ್ನು ಕರ್ನಾಟಕದಲ್ಲಿ ನೋಡಬೇಕು ಎಂದರೆ ಅದು ಮೈಸೂರು ದಸರಾಕ್ಕೆ ಬರಬೇಕು ಎನ್ನುವ ಒಂದು ಕಾಲವೂ ಇತ್ತು. ಕರ್ನಾಟಕ ಸಂಗೀತ ದಿಗ್ಗಜರು, ಖ್ಯಾತ ನೃತ್ಯ ಕಲಾವಿದರು, ಸುಗಮ ಸಂಗೀತ ಕಲಾವಿದರು, ಶಹಾನಾಯ್‌ನಿಂದ ಸೀತಾರ್‌, ಸಂತೂರ್‌ ನಿಂದ ವಯೋಲಿನ್‌ ವರೆಗೂ, ತಬಲಾದಿಂದ ಘಟಂವರೆಗೂ, ಸ್ಯಾಕ್ಸೋಫೋನ್‌ನಿಂದ ಬಾನ್ಸುರಿಯ ಹತ್ತಾರು ಕಲಾವಿದರಿಗೆ ದಸರಾ ವೇದಿಕೆ. ಆಗ ಇದ್ದುದು ಒಂದೇ ವೇದಿಕೆ. ಅದು ಅರಮನೆ. ಈಗ ಹತ್ತಾರು ಕಡೆ ಕಾರ್ಯಕ್ರಮಗಳು ನಡೆದರೂ ಸಾಂಸ್ಕೃತಿಕ ಮಹತ್ವ ಈಗಲೂ ಇದೆ. ಇದರೊಂದಿಗೆ ಕವಿಗೋಷ್ಠಿ ಕೂಡ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೆಚ್ಚಿಸಿಕೊಂಡು ಬಂದಿದೆ.

ಪಾರಂಪರಿಕ ದಸರಾ

ಮೈಸೂರಿಗೆ ಪಾರಂಪರಿಕ ಮಹತ್ವವೂ ಇದೆ. ಏಕೆಂದರೆ ಮೈಸೂರಿನ ಅರಮನೆ, ಇಲ್ಲಿನ ಕಟ್ಟಡಗಳು, ವೃತ್ತಗಳು, ರಸ್ತೆಗಳು, ಹಲವಾರು ಕಚೇರಿಗಳಿಗೆ ಈಗಲೂ ಪಾರಂಪರಿಕ ಮಹತ್ವವಿದೆ. ಇತ್ತೀಚಿನ ವರ್ಷಗಳಲ್ಲಿ ಮೈಸೂರು ಪಾರಂಪರಿಕ ನಗರಿಯಾಗಿಯೂ ಮಹತ್ವ ಪಡೆದುಕೊಂಡಿದೆ. ಮೈಸೂರಿನ ಪಾರಂಪರಿಕ ಕಟ್ಟಡಗಳು, ಚಟುವಟಿಕೆಗಳನ್ನು ದಸರಾದ ವೇಳೆ ಪಾರಂಪರಿಕ ಮಹತ್ವದೊಂದಿಗೆ ಆಚರಿಸಲಾಗುತ್ತದೆ. ಈ ವೇಳೆ ದಸರಾ ವೈಭವವನ್ನು ಜನರಿಗೆ ಪರಿಚಯಿಸುವ ಜತೆಗೆ ಮೈಸೂರಿನ ಪಾರಂಪರಿಕ ತಾಣಗಳನ್ನೂ ತೋರಿಸುವ ಪಾರಂಪರಿಕ ನಡಿಗೆಯನ್ನೂ ಹಲವಾರು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ.

ಪ್ರವಾಸಿ ದಸರಾ

ಮೈಸೂರು ದಸರಾ ಧಾರ್ಮಿಕ, ಪಾರಂಪರಿಕ. ಸಾಂಸ್ಕೃತಿಕ ಹಿರಿಮೆಗಳೊಂದಿಗೆ ಪ್ರವಾಸಿ ಕೇಂದ್ರಿತ ಉತ್ಸವವಾಗಿಯೂ ಮಾರ್ಪಾಡಾಗಿದೆ. ಜಂಬೂ ಸವಾರಿಯಂತಹ ಉತ್ಸವ ಕರ್ನಾಟಕದಲ್ಲಿ ಮಾತ್ರವಲ್ಲದೇ ಭಾರತದಲ್ಲೂ ಇಲ್ಲ. ಸಾಲಂಕೃತ ಆನೆಗಳೊಂದಿಗೆ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿ ವಿಗ್ರಹ ಕುಳ್ಳರಿಸಿ ಐದು ಕಿ.ಮಿ ಉದ್ದದ ಮೆರವಣಿಗೆಯೊಂದಿಗೆ ಸಾಗುವ ಜಂಬೂ ಸವಾರಿಯೂ ಇದರ ಕೇಂದ್ರ ಬಿಂದು. ಇದು ಪ್ರವಾಸಿ ಚಟುವಟಿಕೆಗೆ ಚಿಮ್ಮು ಹಲಗೆಯೂ ಆಗಿದೆ. ದಸರಾ ಬಂದರೆ ಅದು ಹತ್ತು ದಿನ ಮಾತ್ರ ಇದ್ದರೂ ಆನಂತರದ ಮೂರು ತಿಂಗಳೂ ಮೈಸೂರು ಹಾಗೂ ಸುತ್ತಮುತ್ತಲಿನ ಪ್ರವಾಸಿ ಕೇಂದ್ರಗಳಿಗೂ ಶಕ್ತಿ ತುಂಬುವ ಚಿಮ್ಮು ಹಲಗೆಯಾಗಿಯೂ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುತ್ತದೆ. ಮೈಸೂರು ಎಂದರೆ ದಸರಾ ಪ್ರವಾಸೋದ್ಯಮ ಎನ್ನುವ ಮಟ್ಟಿಗೆ ಬೆಳೆದಿದೆ.

ಬ್ರಾಂಡ್‌ ದಸರಾ

ಮೈಸೂರು ದಸರಾ ಎನ್ನುವುದು ಇತ್ತೀಚಿನ ವರ್ಷಗಳಲ್ಲಿ ಬ್ರಾಂಡ್‌ ಆಗಿ ಬೆಳೆದಿದೆ. ದಸರಾ ವನ್ನೇ ಬ್ರಾಂಡ್‌ ಆಗಿಸಿ ಹತ್ತಾರು ಆಯಾಮದ ಚಟುವಟಿಕೆಗಳು, ಪ್ರವಾಸೋದ್ಯಮಕ್ಕೆ ಉತ್ತೇಜನ, ಮೂಲಸೌಕರ್ಯ ಅಭಿವೃದ್ದಿಗೆ ಒತ್ತು, ಉದ್ಯಮದ ರೂಪದೊಂದಿಗೆ ಬ್ರಾಂಡ್‌ ದಸರಾ ಬೆಳೆದಿದೆ. ಮೈಸೂರಿನ ಯೋಗ ಚಟುವಟಿಕೆಗೆ ಬ್ರಾಂಡ್‌ ಇದ್ದ ರೀತಿಯಲ್ಲೇ ದಸರಾ ಕೂಡ ಜಗತ್ತಿನ ಹಲವು ಭಾಗಗಳ ಜನರಿಗೆ ಪ್ರಮುಖ ಬ್ರಾಂಡ್‌ ಉತ್ಸವವಾಗಿ ಕಾಣಲಿದೆ. ಹೊರ ರಾಜ್ಯಗಳಿಂದಲೂ ಅದರಲ್ಲೂ ಉತ್ತರ ಹಾಗೂ ದಕ್ಷಿಣ ಭಾರತದ ಕೆಲ ರಾಜ್ಯಗಳ ಜನರಂತೂ ದಸರಾ ವೇಳೆ ಆಗಮಿಸುವುದು ಇದೇ ಕಾರಣದಿಂದಲೇ.

ಕ್ರೀಡಾ ದಸರಾ

ದಸರಾ ಎಂದರೆ ಕ್ರೀಡೆಯೂ ಇದರೊಂದಿಗೆ ಸೇರಿ ಹೋಗಿದೆ. ಪ್ರತಿ ವರ್ಷ ತಾಲ್ಲೂಕು, ಜಿಲ್ಲಾ, ವಿಭಾಗ ಮಟ್ಟದಲ್ಲೂ ದಸರಾ ಕ್ರೀಡಾಕೂಟ ಆಯೋಜಿಸಿ ಅಂತಿಮವಾಗಿ ರಾಜ್ಯಮಟ್ಟದ ಕ್ರೀಡಾಕೂಟ ಮೈಸೂರನಲ್ಲಿ ನಡೆಯುತ್ತದೆ. ಅದರಲ್ಲಿ ಆಟೋಟಗಳು, ಈಜು ಸಹಿತ ಹಲವು ಸ್ಪರ್ಧೆಗಳು ಇರಲಿವೆ. ದಸರಾ ಕ್ರೀಡೆಯಲ್ಲಿ ಗೆದ್ದವರು ಮುಂದೆ ಹಲವಾರು ಕ್ರೀಡಾ ಸ್ಪರ್ಧೆಗಳಲ್ಲಿ ಜಯಿಸಿ ರಾಜ್ಯ, ರಾಷ್ಟ್ರ ಮಟ್ಟದಲ್ಲೂ ಮಿಂಚಿದವರು ಇದ್ದಾರೆ. ಈಗಲೂ ಮೈಸೂರಿನಲ್ಲಿ ಹಿಂದಿನ ವೈಭವದೊಂದಿಗೆ ದಸರಾ ಕ್ರೀಡಾ ಕೂಟ ಆಯೋಜನೆಗೊಳ್ಳುತ್ತದೆ.

ಕುಸ್ತಿ ದಸರಾ

ದಸರಾ ಕ್ರೀಡೆಯಷ್ಟೇ ಕುಸ್ತಿಗೂ ಮಹತ್ವವಿದೆ. ಏಕೆಂದರೆ ರಾಜ ಮಹಾರಾಜರ ಕಾಲದಿಂದಲೂ ದಸರಾ ಕುಸ್ತಿಗೆ ವಿಶೇಷ ಒತ್ತು ನೀಡುತ್ತಾ ಬರಲಾಗಿದೆ. ಅದರಲ್ಲೂ ಕಂಠೀರವ ನರಸರಾಜ ಒಡೆಯರ್‌ ಕುಸ್ತಿ ಪಟುವೇ ಆಗಿ ಕುಸ್ತಿಗೆ ಒತ್ತು ನೀಡಿದರು. ಈ ಕಾರಣದಿಂದಲೇ ಮೈಸೂರಿನ ಹಲವು ಬಡಾವಣೆಗಳಲ್ಲಿ ಈಗಲೂ ಗರಡಿ ಮನೆಗಳಿವೆ. ಕುಸ್ತಿ ಇಲ್ಲಿ ನಿತ್ಯದ ಚಟುವಟಿಕೆ. ಈಗಲೂ ಮೈಸೂರು ದಸರಾ ಬಂದರೆ ಸ್ಥಳೀಯ ಕುಸ್ತಿ ಜತೆಗೆ ರಾಜ್ಯ,ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಗಳು ನಡೆಯುತ್ತವೆ. ಮಹಾರಾಷ್ಟ್ರ, ಕೇರಳ, ಉತ್ತರ ಭಾರತದ ಹಲವು ಕುಸ್ತಿ ಪಟುಗಳು ದಸರಾ ಸ್ಪರ್ಧೆಯಲ್ಲಿ ಭಾಗಿಯಾಗುತ್ತಾರೆ. ದಸರಾ ಕುಮಾರ, ಕಂಠೀರವ, ಕೇಸರಿ ಸಹಿತ ಹಲವು ಟೈಟಲ್‌ಗಳನ್ನೂ ನೀಡಲಾಗುತ್ತದೆ. ಮಹಿಳಾ ಕುಸ್ತಿಯೂ ದಸರಾದೊಂದಿಗೆ ಇತ್ತೀಚಿನ ವರ್ಷಗಳಲ್ಲೂ ಬೆಸೆದಿದೆ.

ಯುವ ದಸರಾ

ಮೈಸೂರು ದಸರಾ ಎರಡು ದಶಕದಿಂದೀಚೆಗೆ ಯುವ ದಸರಾ ಎಂಬ ಹೊಸ ಆಯಾಮವನ್ನೂ ಪಡೆದುಕೊಂಡಿದೆ. ದಸರಾ ಎಂದರೆ ಬರೀ ಹಿರಿಯರು, ಒಂದು ವಯಸ್ಸಿನ ಆಸಕ್ತರ ಉತ್ಸವವಲ್ಲ. ಇದಕ್ಕೆ ಯುವ ಜನತೆಯನ್ನು ಸೆಳಯಬೇಕು ಎನ್ನುವ ಉದ್ದೇಶದಿಂದ ಎರಡು ದಶಕದಿಂದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್.ವಿಶ್ವನಾಥ್‌, ಆಗ ಡಿಸಿಯಾಗಿದ್ದ ಈಗಿನ ರಾಯಚೂರು ಸಂಸದ ಜಿ.ಕುಮಾರನಾಯಕ್‌ ಅವರ ಪರಿಕಲ್ಪನೆಯಡಿ ಅದು ಯುವ ದಸರಾದ ಸ್ವರೂಪ ಪಡೆಯಿತು. ಈಗಲೂ ಆರು ದಿನ ಯುವ ದಸರಾ, ವಾರ ಕಾಲ ಯುವ ಸಂಭ್ರಮದೊಂದಿಗೆ ದಸರಾ ಯುವ ಮನಸುಗಳು ಆಕರ್ಷಕ ಉತ್ಸವವೂ ಆಗಿ ಮಾರ್ಪಾಡಾಗಿದೆ.

ಬಗೆಬಗೆಯ ದಸರಾ

ದಸರಾ ಎಂದರೆ ಎಲ್ಲಾ ವಯೋಮಾನದವರು, ಆಸಕ್ತರಿಗೆ ಇರಬೇಕು. ಕೃಷಿ, ಗ್ರಾಮೀಣ, ಮಹಿಳೆ, ಮಕ್ಕಳು, ಆಹಾರ, ಜನಪದ, ಹಾಸ್ಯ, ದೀಪಾಲಂಕಾರ ಸಹಿತ ಹಲವು ಆಯಾಮ ಪಡೆದಿದೆ. ಒಂದೂವರೆ ದಶಕದ ಹಿಂದೆ ಮೈಸೂರು ಉಸ್ತುವಾರಿ ಸಚಿವರಾಗಿದ್ದ ಈಗಿನ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಹಲವು ಬಗೆಯ ದಸರಾಗಳಿಗೆ ಚಾಲನೆ ಕೊಟ್ಟು ವೈವಿಧ್ಯದ ರೂಪ ನೀಡಿದರು. ಈಗಲೂ ಜನರಿಗೆ ದಸರಾ ಎಂದರೆ ಹತ್ತಾರು ಬಗೆಯ ಸಂಗಮ ಎನ್ನುವ ಪರಿಕಲ್ಪನೆಯೂ ಬಂದಿದೆ. ಅದು ವರ್ಷದಿಂದ ವರ್ಷಕ್ಕೆ ಭಿನ್ನ ರೂಪ ಪಡೆದುಕೊಂಡು ಮೈಸೂರು ದಸರಾ ಎಂದರೆ ಮತ್ತಷ್ಟು ಸುಂದರ ಎನ್ನುವಂತಾಗಿದೆ.

 

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ