logo
ಕನ್ನಡ ಸುದ್ದಿ  /  ಕರ್ನಾಟಕ  /  Padmashri: ಜೀತದಾಳುವಿನಿಂದ ಪದ್ಮಶ್ರೀವರೆಗೆ; ಎಚ್‌.ಡಿ.ಕೋಟೆ ಹಾಡಿ ನಿವಾಸಿ ಹೋರಾಟಗಾರನ ಕಥೆ

Padmashri: ಜೀತದಾಳುವಿನಿಂದ ಪದ್ಮಶ್ರೀವರೆಗೆ; ಎಚ್‌.ಡಿ.ಕೋಟೆ ಹಾಡಿ ನಿವಾಸಿ ಹೋರಾಟಗಾರನ ಕಥೆ

Umesha Bhatta P H HT Kannada

Jan 26, 2024 10:42 AM IST

google News

ಜೀತದಾಳುವಾಗಿ ನಂತರ ಹೋರಾಟಗಾರನಾಗಿ ಜೇನುಕುರುಬರು, ಸೋಲಿಗರ ಬದುಕಿಗೆ ಶಕ್ತಿ ತುಂಬಿದ ಸೋಮಣ್ಣಗೆ ಪದ್ಮಶ್ರೀ ಗರಿ.,

    • ಮೈಸೂರು ಜಿಲ್ಲೆ ಎಚ್‌ಡಿಕೋಟೆ ತಾಲ್ಲೂಕಿನ ಮೊತ್ತ ಹಾಡಿನ ಸೋಮಣ್ಣ ನಾಲ್ಕು ದಶಕದಿಂದ ನಿರಂತರ ಹೋರಾಡುತ್ತಲೇ ಗಿರಿಜನರ ಬದುಕಿಗೆ ಶಕ್ತಿ ತುಂಬಿದ್ದಾರೆ. ಅವರಿಗೆ ಕೇಂದ್ರ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಗೌರವ ಸಂದಿದೆ.
ಜೀತದಾಳುವಾಗಿ ನಂತರ ಹೋರಾಟಗಾರನಾಗಿ ಜೇನುಕುರುಬರು, ಸೋಲಿಗರ ಬದುಕಿಗೆ ಶಕ್ತಿ ತುಂಬಿದ ಸೋಮಣ್ಣಗೆ ಪದ್ಮಶ್ರೀ ಗರಿ.,
ಜೀತದಾಳುವಾಗಿ ನಂತರ ಹೋರಾಟಗಾರನಾಗಿ ಜೇನುಕುರುಬರು, ಸೋಲಿಗರ ಬದುಕಿಗೆ ಶಕ್ತಿ ತುಂಬಿದ ಸೋಮಣ್ಣಗೆ ಪದ್ಮಶ್ರೀ ಗರಿ.,

ಮೈಸೂರು: ಇವರ ಹೆಸರು ಸೋಮಣ್ಣ. ಒಂದು ಕಾಲದಲ್ಲಿ ಜೀತದಾಳು. ಈಗ ದೇಶದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ. ಮೈಸೂರು ಜಿಲ್ಲೆ ಎಚ್‌ಡಿಕೋಟೆ ತಾಲ್ಲೂಕಿನಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಇದ್ದುಕೊಂಡೇ ಈಗಲೂ ಗಿರಿಜನರ ಸೇವೆಯಲ್ಲಿ ನಿರತರು. ಓದಿದ್ದು ನಾಲ್ಕನೇ ತರಗತಿಯಾದರೂ ಅರಣ್ಯ, ಗಿರಿಜನರಿಗೆ ಸಂಬಂಧಿಸಿದ ಕಾಯಿದೆ, ಕಾರ್ಯಕ್ರಮಗಳ ಕುರಿತು ತಿಳಿದುಕೊಂಡು ನಾಲ್ಕು ದಶಕದಿಂದಲೂ ಸಮುದಾಯದ ಜನರೊಂದಿಗೆ ಸೇರಿ ಕಾಯಕ ನಿರತ. ಕೆಲ ದಿನಗಳ ಹಿಂದೆಯಷ್ಟೇ ಕರ್ನಾಟಕ ಸರ್ಕಾರ ವಾಲ್ಮೀಕಿ ಪ್ರಶಸ್ತಿಯನ್ನು ಪ್ರದಾನ ಮಾಡಿತ್ತು. ಈಗ ಅವರ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಪದ್ಮಶ್ರೀಗೆ ಆಯ್ಕೆ ಮಾಡಿದೆ. ಸಮಾಜಪರ ಹೋರಾಟಗಾರ, ಸಂಘಟಕನಿಗೆ ಒಲಿದಿದೆ ಪ್ರಶಸ್ತಿ.

ಜೀತದಾಳುವಿನಿಂದ ಹೋರಾಟಗಾರ

ಸೋಮಣ್ಣ ಹುಟ್ಟಿದ್ದು ಎಚ್‌ಡಿಕೋಟೆ ತಾಲ್ಲೂಕಿನ ಮೊತ್ತ ಹಾಡಿಯಲ್ಲಿ. ಅವರ ತಂದೆಯೂ ಮೊತ್ತ ಹಾಡಿಯಲ್ಲೇ ಇದ್ದುಕೊಂಡ ಕೂಲಿ ಮಾಡಿಕೊಂಡೇ ಒಂಬತ್ತು ಮಕ್ಕಳ ಸಂಸಾರ ನೀಗಿಸಬೇಕು. ಹತ್ತಿರದಲ್ಲಿ ಶಾಲೆಯೂ ಇಲ್ಲ. ಇಂತಹ ಸನ್ನಿವೇಶದಲ್ಲಿ ಸೋಮಣ್ಣ ಶಾಲೆಗೆ ಹೆಚ್ಚು ಹೋಗಲೇ ಇಲ್ಲ. ನಾಲ್ಕನೇ ತರಗತಿ ನಂತರ ಶಾಲೆ ಬಿಡುವ ಸನ್ನಿವೇಶವನ್ನು ಮನೆಯಲ್ಲಿನ ಬಡತನದ ವಾತಾವರಣ ಸೃಷ್ಟಿಸಿತು. ತಾವು ಕೂಲಿ ಕೆಲಸಕ್ಕೆ ಹೋಗಲು ಆರಂಭಿಸಿದರು ಸೋಮಣ್ಣ. ಅದೂ ಜೀತದಾಳು. ವರ್ಷದ ವೇತನವನ್ನು ಅಪ್ಪ ಪಡೆದು ಮಕ್ಕಳನ್ನು ಕೆಲಸಕ್ಕೆ ಇಟ್ಟಿದ್ದರು. ಮಕ್ಕಳಿಗೆ ಇದೇನೂ ಗೊತ್ತಿಲ್ಲ. ಕೆಲಸಕ್ಕೆ ಹೋಗಬೇಕಷ್ಟೇ. ಸಿಡಿಲು ಬಡಿದು ತಂದೆ ತೀರಿಕೊಂಡಾಗ ಜತೆಗಿದ್ದ ಸಹೋದರ, ಸಹೋದರಿಯರು ನಾನಾ ಕಾರಣಗಳಿಂದ ಮೃತಪಟ್ಟಾಗ ಮನೆಯ ಜವಾಬ್ದಾರಿಯನ್ನೂ ಹೊರಬೇಕಾಯಿತು. ಇದೇ ವೇಳೆ ಈ ಭಾಗದಲ್ಲಿ ಹೆಚ್ಚಿರುವ ಜೇನು ಕುರುಬರ ಪರವಾಗಿ ಸೋಮಣ್ಣ ಕೆಲಸ ಶುರು ಮಾಡಿದರು. ಅಂದರೆ ಕಾಡಿನಿಂದ ಹೊರ ಹಾಕಲ್ಪಟ್ಟವರಿಗೆ ಸೌಲಭ್ಯಗಳೇ ಇರಲಿಲ್ಲ. ಅವರಿಗೆ ಮನೆ, ಜಮೀನು, ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಸೋಮಣ್ಣ ಕೆಲಸ ಆರಂಭಿಸಿದರು. ದಲಿತ ಸಂಘರ್ಷ ಸಮಿತಿ ಹೋರಾಟಗಳಲ್ಲಿ ಗುರುತಿಸಿಕೊಂಡರು. ಇದರಿಂದ ಸೋಮಣ್ಣ ಹತ್ತಾರು ವಿಚಾರಗಳನ್ನು ತಿಳಿದುಕೊಳ್ಳಲು ಸಹಕಾರಿಯಾಯಿತು.

ಫೆಡಿನಾ ತುಂಬಿತು ಶಕ್ತಿ

ಅದು 1986 . ಆಗ ಮೈಸೂರು ಭಾಗದಲ್ಲಿ ಫೆಡಿನಾ ಎನ್ನುವ ಗಿರಿಜನ ಶ್ರೇಯೋಭಿವೃದ್ದಿ ಸಂಸ್ಥೆ ಚಟುವಟಿಕೆ ಶುರು ಮಾಡಿತ್ತು. ಹುಣಸೂರು. ಕೊಡಗು ಭಾಗದಲ್ಲಿ ಕೆಲಸ ಮಾಡುತ್ತಿದ್ದ ಫೆಡಿನಾ ಸಂಸ್ಥೆಯೊಂದಿಗೆ ಸೋಮಣ್ಣ ಸೇರಿಕೊಂಡರು. ಗಿರಿಜನರ ಪರವಾಗಿ ಇನ್ನಷ್ಟು ತೊಡಗಿಸಿಕೊಳ್ಳಲು ಈ ಸಂಘಟನೆ ನೆರವಾಯಿತು. ಹಾಡಿಗಳಿಗೆ ನಿರಂತರವಾಗಿ ಭೇಟಿ ನೀಡುವುದು. ಅವರ ಅಹವಾಲುಗಳನ್ನು ಆಲಿಸಿಕೊಂಡು ಅಧಿಕಾರಿಗಳ ಗಮನಕ್ಕೆ ತಂದು ಕಲಸ ಮಾಡಿಸಿಕೊಡತೊಡಗಿದರು. ಗಿರಿಜನರನ್ನು ಮತದಾರರ ಪಟ್ಟಿಗೂ ಸೇರಿಸಿಸಲಿಲ್ಲ. ಪಡಿತರ ಕಾರ್ಡ್‌ ಕೂಡ ಬಹುತೇಕರಿಗೆ ಇರಲೇ ಇಲ್ಲ. ಹಾಡಿಗಳಲ್ಲೇ ಪಡಿತರ ಅಂಗಡಿ ತೆಗೆದು ಅವರಿಗೆ ಪ್ರತೀ ತಿಂಗಳು ಕಡ್ಡಾಯವಾಗಿ ಆಹಾರ ಸಿಗಬೇಕು ಎನ್ನುವ ಬೇಡಿಕೆಯೂ ಜಾರಿಯಾಯಿತು. ಅರಣ್ಯ ಇಲಾಖೆಯಲ್ಲಿ ಗಿರಿಜನರಿಗೆ ಉದ್ಯೋಗ ನೀಡಬೇಕು ಎನ್ನುವ ಬೇಡಿಕೆಯೂ ಬಹುಪಾಲು ಈಡೇರಿದೆ.

ಸರ್ಕಾರಗಳ ಕಣ್ತೆರೆಸುವ ಕೆಲಸ

ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಮೈಸೂರು ಜಿಲ್ಲೆ ಎಚ್‌.ಡಿ.ಕೋಟೆ ತಾಲ್ಲೂಕಿನ ಹೊಸಹಳ್ಳಿ ಹಾಡಿಯಲ್ಲಿ ಗಿರಿಜನರ ಚಟುವಟಿಕೆಗೆ ಸಂಬಂಧಿಸಿ ಸಂಪುಟ ಸಭೆ ನಡೆಸಲಾಗಿತ್ತು. ಈ ವೇಳೆಯೂ ಸೋಮಣ್ಣ ಸಹಿತ ಹಲವರು ನೀಡಿದ್ದ ಹತ್ತಾರು ಬೇಡಿಕೆಗಳನ್ನು ಸರ್ಕಾರ ಜಾರಿಗೊಳಿಸಿತ್ತು. ಇದರಿಂದ ಹಾಡಿಗಳಿಗೆ ಆಹಾರ, ಆರೋಗ್ಯ, ಶಿಕ್ಷಣದಂತಹ ಚಟುವಟಿಕೆಗಳು ಹೆಚ್ಚು ಆದವು. ಮುಖ್ಯವಾಗಿ ಕಾಡಿನಿಂದ ಬಂದವರಿಗೆ ಭೂಮಿಯನ್ನೇ ನೀಡಿರಲಿಲ್ಲ. ಅದಕ್ಕೂ ಹೆಚ್ಚಿನ ಒತ್ತು ಸಿಕ್ಕಿತು. ಎಚ್‌.ಡಿ.ಕೋಟೆ ತಾಲ್ಲೂಕು ಒಂದರಲ್ಲೇ ಸುಮಾರು 6 ಸಾವಿರ ಎಕರೆ ಭೂಮಿ ಗಿರಿಜನ ಕುಟುಂಬಗಳಿಗೆ ಹಂಚಿಕೆಯಾಗಿದೆ. ಬಹಳಷ್ಟು ಮಂದಿ ಕೃಷಿ ಮಾಡಿಕೊಂಡು ಬದುಕನ್ನು ನಡೆಸುತ್ತಿದ್ಧಾರೆ. ಉಪವಾಸದಲ್ಲೇ ಕಳೆದ ಅದೆಷ್ಟೋ ದಿನಗಳನ್ನು ಸೋಮಣ್ಣ ನೆನಪಿಸಿಕೊಂಡು ನಮ್ಮವರ ಬದುಕು ಹಸನಾದರೆ ಸಾಕು ಎಂದೇ ಈಗಲೂ ಸಿಕ್ಕವರಿಗೆಲ್ಲಾ ಹೇಳುತ್ತಲೇ ಇರುತ್ತಾರೆ.

ಹೋರಾಟ ನಿಂತಿಲ್ಲ

ನಮ್ಮವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡುವ ಸೌಲಭ್ಯಗಳು ಸಾಕಷ್ಟಿವೆ. ಆದರೆ ಅವುಗಳು ಸರಿಯಾಗಿ ತಲುಪುತ್ತಿಲ್ಲ. ಕಾಡು ಉಳಿಸಿದವರು ನಾವು. ಆನಂತರ ಕಾಡಿನಿಂದ ಬಂದು ಈಗಲೂ ಅದೇ ಕಾಡಿನೊಂದಿಗೆ ಭಾವನಾತ್ಮಕ ಸಂಬಂಧವಿದೆ. ಅರಣ್ಯದಿಂದ ಹೊರ ಬಂದ ನಂತರ ಭೂಮಿ ಸಹಿತ ಸವಲತ್ತುಗಳನ್ನೇ ನಮಗೆ ನೀಡಿರಲಿಲ್ಲ. ಹೋರಾಟದಿಂದಲೇ ಹಲವಾರು ಸವಲತ್ತುಗಳನ್ನು ಪಡೆದಿದ್ದೇವೆ. ಪಡೆಯುತ್ತೇವೆ. ಇದು ಹೀಗೆಯೇ ಮುಂದುವರೆಯುವಂತದ್ದೇ ಎಂದು ಸೋಮಣ್ಣ ತಮ್ಮ ನಾಲ್ಕು ದಶಕದ ಹೋರಾಟ, ಸಂಘಟನೆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ಚಾ.ನಂಜುಂಡಮೂರ್ತಿ, ಸೋಗಹಳ್ಳಿ ಮೂರ್ತಿ ಅವರು ದಲಿತ ಸಂಘರ್ಷ ಸಮಿತಿ ಮೂಲಕ ಹೋರಾಟಕ್ಕೆ ಬಲ ತುಂಬಿದರು. ಫೆಡಿನಾದಲ್ಲಿ ಕೇರಳದ ಸಿದ್ದಾರ್ಥ, ನಂಜುಂಡಯ್ಯ, ಕ್ಷೀರಸಾಗರ ಸಹಿ ತ ಹಲವರ ಬೆಂಬಲವೂ ದೊರೆಯಿತು. ಫೆಡಿನಾ ನಂತರ ಫೆಡಿನಾ ವಿಕಾಸ ಸಂಸ್ಥೆಯಾಗಿ ಬದಲಾಯಿತು. ಕೆಲಸ ಮಾತ್ರ ಬದಲಾಗಲಿಲ್ಲ. ಗಿರಿಜನರ ಶ್ರೇಯೋಭಿವೃದ್ದಿಯ ಒಂದೇ ಗುರಿ, ಉದ್ದೇಶದೊಂದಿಗೆ ನಮ್ಮ ದಾರಿ ಸಾಗುತ್ತಲೇ ಇದೆ ಎನ್ನುವುದು ಸೋಮಣ್ಣ ನುಡಿ.

ಚುನಾವಣೆ ಅಖಾಡಕ್ಕೂ

ಸಂಘಟನೆ, ತಮ್ಮ ಜನರಿಗೆ ಸಿಗಬೇಕಾಗ ಸವಲತ್ತು ಒದಗಿಸುತ್ತಲೇ ರಾಜಕೀಯದಲ್ಲೂ ಸೋಮಣ್ಣ ಗುರುತಿಸಿಕೊಂಡವರು. 1991ರಲ್ಲಿ ಹುಣಸೂರು ವಿಧಾನಸಭಾ ಕ್ಷೇತ್ರ, 2008ರಲ್ಲಿ ಎಚ್‌ಡಿಕೋಟೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದರು. ಗೆಲ್ಲಲು ಆಗಲಿಲ್ಲ. ಆದರೆ ತಮ್ಮ ಜನರ ದನಿಯಾಗುವ ಪ್ರಯತ್ನವನ್ನು ಮಾತ್ರ ಸೋಮಣ್ಣ ಬಿಟ್ಟಿಲ್ಲ. ಈಗಲೂ 65 ದಾಟಿದರೂ ಅದೇ ದನಿ.ಅದೇ ವಿಶ್ವಾಸ. ನಾಲ್ಕು ಮಕ್ಕಳು ಹೆಚ್ಚು ಓದಲಿಲ್ಲ. ತಮ್ಮ ಬದುಕು ಮಾತ್ರ ರೂಪಿಸಿಕೊಂಡಿದ್ದಾರೆ. ಅವರ ಮಕ್ಕಳು ಮಾತ್ರವಲ್ಲದೇ ಜೇನು, ಬೆಟ್ಟಕುರುಬರು, ಸೋಲಿಗರ ಅದೆಷ್ಟೋ ಕುಟುಂಬಗಳು ಹೀಗೆಯೇ ಕೃಷಿಗೆ ಸ್ವಂತ ಜಮೀನು ಹೊಂದಲು, ಮಕ್ಕಳು ಶಿಕ್ಷಣ ಪಡೆಯಲು ಸೋಮಣ್ಣ ಅವರ ಹೋರಾಟವೂ ದಾರಿಯಾಗಿದೆ.

ಪ್ರಶಸ್ತಿಗಿಂತ ಕಾಯಕವೇ ಮುಖ್ಯ

ನಾನು ಯಾವುದೇ ಪ್ರಶಸ್ತಿ ಅರಸಿ ಹೋದವನಲ್ಲ. ಸನ್ಮಾನಗಳು ಆಗಿವೆ. ಕರ್ನಾಟಕ ಸರ್ಕಾರ ವಾಲ್ಮೀಕಿ ಪ್ರಶಸ್ತಿ ನೀಡಿತ್ತು. ಈಗ ಪದ್ಮಶ್ರೀ ಪ್ರಶಸ್ತಿ ಕೊಟ್ಟಿದ್ದಾರೆ. ಪ್ರಶಸ್ತಿ ಬರಬಹುದು. ನಮ್ಮ ಜನರ ಜೀವನ ಇನ್ನೂ ಬದಲಾಗಬೇಕು. ಸರ್ಕಾರ ಗಿರಿಜನರ ಏಳಿಗೆಗೆ ರಚಿಸಿದ ಸಮಿತಿಗಳ ವರದಿ ಜಾರಿಯಾಗಬೇಕು. ಸೌಲಭ್ಯಗಳು ಸಿಗಬೇಕು. ನಮ್ಮವರು ಎಲ್ಲರಂತೆ ಬದುಕಿದರೆ ಅದೇ ನಿಜವಾದ ಪ್ರಶಸ್ತಿ ಖುಷಿ ಎನ್ನುವುದು ಸೋಮಣ್ಣ ನುಡಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ