Mysore Crime: ಮೈಸೂರಿನಲ್ಲಿ ಭೀಕರ ದುರಂತ ಮಾಸುವ ಮುನ್ನವೇ ಸಾಲು ಸಾಲು ಅವಘಡಗಳು; ಟಾಟಾ ಏಸ್ ಡಿಕ್ಕಿಯಾಗಿ ಬೈಕ್ ಸವಾರ ಸಾವು
Jun 01, 2023 12:17 PM IST
ಮೈಸೂರು ಜಿಲ್ಲೆಯಲ್ಲಿ ಸಾಲು ಸಾಲು ಅವಘಡಗಳು ಸಂಭವಿಸುತ್ತಿವೆ.
ತಾನು ಪ್ರೀತಿಸಿದ ಯುವತಿಗೆ ಮೆಸೇಜ್ ಮಾಡಿದ ಎಂಬ ಕ್ಷುಲ್ಲಕ ಕಾರಣದಿಂದ ಸ್ನೇಹಿತನಿಗೆ ಚಾಕುವಿನಿಂದ ಇರಿದಿರುವ ಘಟನೆ ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೈಸೂರು: ಮೈಸೂರು ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ ಕಾರು ಹಾಗೂ ಬಸ್ ನಡುವೆ ನಡೆದ ಭೀಕರ ಅಪಘಾತದ ಬೆನ್ನಲ್ಲೇ ಇಂದು (ಜೂನ್ 1, ಗುರುವಾರ) ಹಾಗೂ ನಿನ್ನೆ (ಮೇ 31, ಬುಧವಾರ) ಸಾಲಾಗಿ ಇನ್ನಷ್ಟು ಅವಘಡಗಳು ಸಂಭವಿಸಿವೆ. ಒಂದೆಡೆ ಅಗ್ನಿ ಅವಘಡ ಸಂಭವಿಸಿದರೆ ಇನ್ನೊಂದೆಡೆ ಅಪಘಾತ, ಮತ್ತೊಂದೆಡೆ ಸ್ನೇಹಿತನಿಗೆ ಓರ್ವ ಚಾಕುವಿನಿಂದ ಇರಿದ ಘಟನೆ ನಡೆದಿದೆ.
ದ್ವಿಚಕ್ರ ವಾಹನ ಹಾಗೂ ಗೂಡ್ಸ್ ಗಾಡಿ ಡಿಕ್ಕಿ; ಸಾವರ ಸಾವು
ಹುಣಸೂರು ತಾಲೂಕಿನ ಬಿಳಿಗೆರೆ ಬಳಿ ಟಾಟಾ ಏಸ್ ಗೂಡ್ಸ್ ವಾಹನ ಬೈಕ್‌ಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಸುಹೇಬ್(24) ಮೃತ ವ್ಯಕ್ತಿ. ಆತನ ಹಿಂಬದಿ ಸವಾರ ಜುನೇದ್‌ಗೆ ಗಾಯಗಳಾಗಿದ್ದು, ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ನೇಹಿತನಿಗೆ ಚಾಕುವಿನಿಂದ ಇರಿದ ಯುವಕ
ತಾನು ಪ್ರೀತಿಸಿದ ಯುವತಿಗೆ ತನ್ನ ರೂಂಮೇಟ್ ಯುವಕ ಮೆಸೇಜ್ ಮಾಡಿದ ಎಂಬ ಕ್ಷುಲ್ಲಕ ಕಾರಣದಿಂದ ಆತನಿಗೆ ಚಾಕುವಿನಿಂದ ಇರಿದಿರುವ ಘಟನೆ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶಿವಕುಮಾರ್ ಎಂಬ ಯುವಕ ಹಲ್ಲೆಗೊಳಗಾದ ಯುವಕ. ಆತನಿಗೆ ತೀವ್ರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆತನ ರೂಂಮೇಟ್ ಹಾಗೂ ಸ್ನೇಹಿತ ಶ್ರೇಯಸ್ ಚಾಕು ಇರಿದ ಆರೋಪಿ. ಶ್ರೇಯಸ್ ಹಾಗೂ ಶಿವಕುಮಾರ್ ಇಬ್ಬರೂ ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಜನತಾನಗರದಲ್ಲಿ ಒಂದೇ ರೂಮಿನಲ್ಲಿ ಬಾಡಿಗೆಗೆ ಇದ್ದರು.
ಇಬ್ಬರೂ ಕೆಲ ವರ್ಷಗಳಿಂದ ಜೊತೆಯಿದ್ದ ಕಾರಣ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು. ಆದರೆ ಶ್ರೇಯಸ್ ಪ್ರೀತಿಸುತ್ತಿದ್ದ ಯುವತಿಗೆ ಶಿವಕುಮಾರ್ ಮೆಸೇಜ್ ಮಾಡಿದ್ದ. ತನ್ನ ಪ್ರೇಮಿಯ ಜೊತೆ ತನ್ನ ಸ್ನೇಹಿತ ಶಿವಕುಮಾರ್ ಸಂಪರ್ಕ ಬೆಳೆಸಿದ ಎಂಬ ಕಾರಣಕ್ಕೆ ಶ್ರೇಯಸ್‌ಗೆ ಸಿಟ್ಟು ಬಂದಿದೆ. ಆಕೆಯ ಜೊತೆ ಚಾಟ್ ಮಾಡುತ್ತಿದ್ದ ಎಂಬ ವಿಚಾರ ಶ್ರೇಯಸ್‌ಗೆ ಗೊತ್ತಾಗಿ ಇಬ್ಬರ ನಡುವೆ ಜಗಳ ನಡೆದಿದೆ.
ತನ್ನ ಲವರ್‌ಗೆ ಮೆಸೇಜ್ ಮಾಡದಂತೆ ಶ್ರೇಯಸ್ ಶಿವಕುಮಾರ್ ಎಚ್ಚರಿಕೆ ಸಹ ನೀಡಿದ್ದ ಎನ್ನಲಾಗಿದೆ. ಆದರೂ ಶಿವಕುಮಾರ್ ಆಗಾಗ ಯುವತಿಗೆ ಮೆಸೇಜ್ ಮಾಡುತ್ತಿದ್ದ. ಈ ವಿಚಾರವಾಗಿ ನಂಜನಗೂಡು ರಿಂಗ್ ರಸ್ತೆ ಬಳಿ ಇಬ್ಬರ ನಡುವೆ ಗಲಾಟೆಯಾಗಿದೆ. ಈ ವೇಳೆ ಶಿವಕುಮಾರ್‌ಗೆ ಚಾಕುವಿನಿಂದ ಶ್ರೇಯಸ್ ಇರಿದಿದ್ದಾನೆ ಎನ್ನಲಾಗಿದೆ. ಈಗ ಆತನನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಅಗ್ನಿ ಅವಘಡ: ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಪೀಠೋಪಕರಣಗಳ (ಫರ್ನಿಚರ್) ಅಂಗಡಿಯೊಂದಕ್ಕೆ ಬೆಂಕಿ ತಗುಲಿರುವ ಘಟನೆ ನಡೆದಿದ್ದು, ಇದರಿಂದಾಗಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ. ಅಜೀಂ ಎಂಬುವರಿಗೆ ಸೇರಿದ ಸಂಗಮ್ ಡೆಕೋರೇಷನ್ & ಫರ್ನಿಚರ್ ಎಂಬ ಅಂಗಡಿ ಇದಾಗಿದ್ದು, ಅಗ್ನಿ ದುರಂತಕ್ಕೆ ನಿಖರ ಕಾರಣ ಏನೆಂದು ಇನ್ನಷ್ಟೇ ತಿಳಿಯಬೇಕಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ. ಈ ಕುರಿತು ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.