ಲೋಕಾಯುಕ್ತಕ್ಕೆ ದಾಖಲೆ ಸಲ್ಲಿಸಿದ ಸ್ನೇಹಮಯಿ ಕೃಷ್ಣ, ಸ್ಥಳ ಪರಿಶೀಲನೆ ಮುಕ್ತಾಯ; ಸಿದ್ದರಾಮಯ್ಯ ವಿರುದ್ಧ ನಿಲ್ಲುತ್ತಾ ತನಿಖೆ?
Oct 01, 2024 03:12 PM IST
ಲೋಕಾಯುಕ್ತಕ್ಕೆ ದಾಖಲೆ ಸಲ್ಲಿಸಿದ ಸ್ನೇಹಮಯಿ ಕೃಷ್ಣ, ಜಮೀನು ಸ್ಥಳ ಪರಿಶೀಲನೆ
- MUDA Land Scam: ಮುಡಾ ಪ್ರಕರಣಕ್ಕೆ ಸಂಬಂಧಿಸಿ ಜಮೀನಿನ ದಾಖಲೆಗಳನ್ನು ದೂರುದಾರ ಸ್ನೇಹಮಯಿ ಕೃಷ್ಣ ಅವರು ಲೋಕಾಯಕ್ತಕ್ಕೆ ಸಲ್ಲಿಸಿದ್ದಾರೆ. ಜೊತೆಗೆ ಜಮೀನಿನ ಮಹಜರು ಕೂಡ ಮುಗಿದಿದೆ.
ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನೀಡಲಾದ ಬದಲಿ 14 ಸೈಟ್ ವಾಪಸ್ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಪತ್ರ ಬರೆದ ಬೆನ್ನಲ್ಲೇ ಪ್ರಕರಣ ತೀವ್ರ ಸ್ವರೂಪ ಪಡೆದಿದೆ. ತನ್ನ ಪತ್ನಿಯ ನಿರ್ಧಾರವನ್ನು ಗೌರವಿಸುವುದಾಗಿ ಸಿಎಂ ಹೇಳಿದರೆ, ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಪಟ್ಟು ಹಿಡಿದಿದೆ. ಇದರ ನಡುವೆ ದೂರುದಾರ ಸ್ನೇಹಮಯಿ ಕೃಷ್ಣ ಅವರು ಲೋಕಾಯುಕ್ತಕ್ಕೆ ದಾಖಲೆ ಒದಗಿಸಿದ್ದಾರೆ. ಅಲ್ಲದೆ, ಜಮೀನು ಪರಿಶೀಲನೆಯನ್ನೂ ನಡೆಸಿದ್ದಾರೆ.
ತನಿಖೆ ಚುರುಕುಗೊಳಿಸಿದ ಲೋಕಾಯುಕ್ತ ಕಾರ್ಯಕರ್ತ ಸ್ನೇಹಮಯಿ ಕೃಷ್ಣಗೆ ನೋಟಿಸ್ ನೀಡಿತ್ತು. ಎಸ್ಪಿ ಉದೇಶ್ ಸೆಪ್ಟೆಂಬರ್ 30ರಂದು ಬೆಂಗಳೂರಿನಿಂದ ಮೈಸೂರಿಗೆ ಬಂದ ನಂತರ ನೋಟಿಸ್ ಜಾರಿ ಮಾಡಿದ್ದರು. ಅದರಂತೆ, ಇಂದು (ಅ.1) ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿದ ಸ್ನೇಹಮಯಿ ಕೃಷ್ಣ, ದಾಖಲೆಗಳನ್ನು ಒದಗಿಸಿದ್ದಾರೆ. ನಿನ್ನೆ ಸಂಜೆಯೂ ಲೋಕಾಯುಕ್ತಕ್ಕೆ ತೆರಳಿ ಆರೋಪಿಗಳ ವಿವರ ನೀಡಿದ್ದ ದೂರುದಾರ, ಕೃತ್ಯದ ಕುರಿತು ಮಾಹಿತಿ ನೀಡಿದ್ದರು.
ಇಂದು ಸ್ನೇಹಮಯಿ ಕೃಷ್ಣ ವಿಚಾರಣೆ ಆರಂಭಿಸಿದ ಲೋಕಾಯುಕ್ತ ಅಧಿಕಾರಿಗಳು, ಆತನೊಂದಿಗೆ ಸ್ಥಳ ಮಹಜರು ನಡೆಸಿದ್ದಾರೆ. ಕೆಸರೆ ಗ್ರಾಮದ ಸರ್ವೇ ನಂ 464ರ 3 ಎಕರೆ 16 ಗುಂಟೆ ಭೂಮಿ ಪರಿಶೀಲನೆ ನಡೆಸಿದರು. ಲೋಕಾಯುಕ್ತ ಎಸ್ಪಿ ಉದೇಶ್ ನೇತೃತ್ವದಲ್ಲಿ ಮಹಜರು ನಡೆಯಿತು. ಇವರೊಂದಿಗೆ ಮಹಜರು ಪ್ರಕ್ರಿಯೆಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸಹ ಭಾಗಿಯಾಗಿದ್ದರು. ಅವರಿಂದಲೂ ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದರು.
ಪ್ರಸ್ತುತ ಕೆಸರೆಯಲ್ಲಿ ಸ್ಥಳ ಸರ್ವೇ ಕಾರ್ಯ ಅಧಿಕಾರಿಗಳು ಮುಗಿಸಿದರು. ಸರ್ವೆ, ಮುಡಾ ಅಧಿಕಾರಿಗಳ ಜೊತೆ ಸ್ನೇಹಮಯಿ ಕೃಷ್ಣ ಚರ್ಚಿಸಿದರು. ಕಬ್ಬಿಣದ ಚೈನ್ ಹಿಡಿದು ಭೂಮಿ ಅಳತೆ ಮಾಡಿದ ಅಧಿಕಾರಿಗಳು, ಚೆಕ್ ಬಂದಿ, ನಕ್ಷೆಯನ್ನು ಸಂಪೂರ್ಣ ಸ್ಕೆಚ್ ಮಾಡಿದರು. ಸರ್ವೆ ನಂಬರ್ 464 ಮಾತ್ರವಲ್ಲ, ಸಂಪೂರ್ಣ ಬೌಂಡರಿ ಸರ್ವೆಕಾರ್ಯ ಮುಗಿಸಿದರು. ಸರ್ವೆ ಮುಗಿಸಿದ ಬಳಿಕ ಪತ್ರಕ್ಕೆ ಲೋಕಾಯುಕ್ತರು ಸಹಿ ಪಡೆದರು. ಡಿಜಿಟಲ್ ಎಸ್ಟಿಮೇಟ್, ಆನ್ ಲೈನ್ ಎಸ್ಟಿಮೇಟ್ ಕುರಿತು ಮಾಹಿತಿ ಸಂಗ್ರಹಿಸಿದರು.
ಸಿದ್ದರಾಮಯ್ಯ ವಿರುದ್ಧ ತನಿಖೆ ನಿಲ್ಲುತ್ತಾ?
14 ಸೈಟ್ ವಾಪಸ್ ಕೊಡುವ ನಿರ್ಧಾರ ಪಡೆಯುವಂತೆ ಸಿಎಂ ಪತ್ನಿ ಪತ್ರ ಬರೆದ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆ ನಿಲ್ಲುವುದಿಲ್ಲ. ಅದರ ಪ್ರಕ್ರಿಯೆ ಮುಂದುವರೆಯುತ್ತದೆ. ಈಗಾಗಲೇ ಎಫ್ಐಆರ್ ದಾಖಲಾಗಿದ್ದು, ಅದರಂತೆ ತನಿಖೆ ನಡೆಯಲಿದೆ. ದೂರುದಾರ ಕೇಸ್ ವಾಪಸ್ ಪಡೆದರೆ ತನಿಖೆ ಕೈಬಿಡಬಹುದು. ರಾಜ್ಯಪಾಲರು ತನಿಖೆಗೆ ಆದೇಶಿಸುವ ಮೊದಲು ಈ ನಿರ್ಧಾರ ಕೈಗೊಂಡಿದ್ದರೆ ಇಂತಹ ಸಂದರ್ಭ ಎದುರಾಗುತ್ತಿರಲಿಲ್ಲ ಎಂಬುದು ರಾಜಕೀಯ ಪಕ್ಷಗಳ ವಾದ.
ಸಿದ್ದರಾಮಯ್ಯ ಪತ್ನಿ ಪತ್ರ
ಮುಡಾ ಬದಲಿ ನಿವೇಶನದ ಹಂಚಿಕೆಯ ಉರುಳು ಸಿದ್ದರಾಮಯ್ಯ ಅವರಿಗೆ ಗಟ್ಟಿಯಾಗಿ ಸುತ್ತಿಕೊಂಡು ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡ ಬೆನ್ನಲ್ಲೇ ಪತ್ನಿ ಪಾರ್ವತಿ ಅವರು 14 ಸೈಟ್ಗಳನ್ನು ವಾಪಾಸ್ ನೀಡುವುದಾಗಿ ಸೆಪ್ಟೆಂಬರ್ ರಾತ್ರಿ ಬರೆದರು. ಮೈಸೂರಿನ ಕೆಸರೆ ಗ್ರಾಮದ ಸರ್ವೇ ನಂ 464 ರಲ್ಲಿ 3 ಎಕರೆ 16 ಗುಂಟೆ ಜಮೀನನ್ನು ಮುಡಾ ಭೂಸ್ವಾಧೀನ ಇಲ್ಲದೆ ಉಪಯೋಗಿಸಿಕೊಂಡಿದ್ದಕ್ಕೆ ಪರಿಹಾರದ ಬದಲಾಗಿ ವಿಜಯನಗರ 3 ಮತ್ತು 4 ನೇ ಹಂತದಲ್ಲಿ ನನಗೆ ಮಂಜೂರು ಮಾಡಲಾದ 14 ನಿವೇಶನಗಳನ್ನು ಹಿಂದಿರುಗಿಸುವೆ ಎಂದು ಪಾರ್ವತಿ ಅವರು ಮುಡಾ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.