Tiger attack: ಮೈಸೂರು ಜಿಲ್ಲೆಯಲ್ಲಿ ಹುಲಿ ದಾಳಿಗೆ ಮಹಿಳೆ ಬಲಿ: ತಿಂಗಳಲ್ಲಿ ನಾಲ್ಕನೇ ಸಾವು, ಹೆಚ್ಚಿದ ವ್ಯಾಘ್ರ ಉಪಟಳ
Nov 24, 2023 06:00 PM IST
ಹುಲಿ ದಾಳಿಯಿಂದ ಬಂಡೀಪುರ ಅರಣ್ಯದಂಚಿನಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ
- Bandipur Tiger Attack ಮೈಸೂರು ಜಿಲ್ಲೆ ನಂಜನಗೂಡು( Nanjangud) ತಾಲ್ಲೂಕಿನ ಅರಣ್ಯದಂಚಿನ ಗ್ರಾಮದಲ್ಲಿ ದನಮೇಯಿಸುತ್ತಿದ್ದ ಮಹಿಳೆ ಮೇಲೆ ಹುಲಿ ದಾಳಿ ಮಾಡಿ ಸಾಯಿಸಿರುವ ಘಟನೆ ನಡೆದಿದೆ.
ಮೈಸೂರು: ಮೈಸೂರು ಜಿಲ್ಲೆಯಲ್ಲಿ ವ್ಯಾಘ್ರ ಉಪಟಳ ಜೋರಾಗಿದೆ. ಜಿಲ್ಲೆಯಲ್ಲಿ ಹುಲಿ ದಾಳಿಗೆ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ನಂಜನಗೂಡು ತಾಲ್ಲೂಕು ಬಳ್ಳೂರು ಹುಂಡಿ ಗ್ರಾಮದ ವೆಂಕಟಯ್ಯ ಎಂಬುವವರ ಪತ್ನಿ ರತ್ನಮ್ಮ(50) ಹುಲಿ ಬಾಯಿಗೆ ಸಿಲುಕಿದವರು.
ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಹೆಡಿಯಾಲ ಸಮೀಪವಿರುವ ಬಳ್ಳೂರುಹುಂಡಿ ಗ್ರಾಮಕ್ಕೆ ಹೊಂದಿಕೊಂಡಂತಿರುವ ಮಹದೇವ ನಗರ ಗ್ರಾಮದ ನರ್ಸರಿ ಸಮೀಪದ ಬಳಿ ಹಾಡಹಗಲೇ ದುರ್ಘಟನೆ ನಡೆದಿದೆ.
ಕೆಲ ದಿನಗಳ ಹಿಂದೆ ಇದೇ ಸ್ಥಳದಲ್ಲಿ ವೀರಭದ್ರ ಭೋವಿ ಎಂಬ ದನ ಗಾಹಿ ಮೇಲೆ ದಾಳಿ ಹುಲಿ ಮಾಡಿತ್ತು. ಅಲ್ಲದೇ ಇನ್ನೊಬ್ಬ ವ್ಯಕ್ತಿಯನ್ನು ಕೊಂದು ಹಾಕಿತ್ತು. ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಸೇರಿದ ಎಚ್‌ಡಿಕೋಟೆ ತಾಲ್ಲೂಕಿನಲ್ಲಿ ಬಾಲಕನೊಬ್ಬನನ್ನು ಹುಲಿ ಸಾಯಿಸಿದ್ದರೆ, ಹುಣಸೂರು ತಾಲ್ಲೂಕಿನ ಹನಗೋಡು ಬಳಿ ರೈತನನ್ನು ಸಾಯಿಸಿತ್ತು. ತಿಂಗಳ ಅಂತರದಲ್ಲಿಯೇ ಜಿಲ್ಲೆಯೊಳಗೆ ನಾಲ್ವರು ಹುಲಿ ದಾಳಿಗೆ ಬಲಿಯಾದಂತಾಗಿದೆ.
ದನ ಮೇಯಿಸುತ್ತಿದ್ದ ರತ್ನಮ್ಮ
ರತ್ನಮ್ಮ ತಮ್ಮ ಜಮೀನಿನಲ್ಲಿ ಜಾನುವಾರುಗಳನ್ನು ಮೇಯಿಸಲು ಕುಳಿತಿದ್ದರು. ಈ ವೇಳೆ ಏಕಾಏಕಿ ದಾಳಿ ಮಾಡಿದ ಹುಲಿ ಆಕೆಯನ್ನು ಎಳೆದುಕೊಂಡು ಹೋಗಿದೆ. ಆಕೆ ಕೂಗಿಕೊಂಡಿದ್ದು ಹುಲಿ ದಾಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಆಗಿಲ್ಲ. ಬಲವಾದ ಹೊಡೆತಕ್ಕೆ ಆಕೆಯ ಕುತ್ತಿಗೆ ಭಾಗಕ್ಕೆ ಬಲವಾದ ಏಟು ಬಿದ್ದಿದೆ. ನೆರೆಹೊರೆಯವರು ಕೂಗಿಕೊಂಡಾಗ ಎಳೆದುಕೊಂಡು ಹೋದ ಹುಲಿ ಸ್ವಲ್ಪ ದೂರದಲ್ಲಿಯೇ ದೇಹ ಬಿಟ್ಟು ಹೋಗಿದೆ.
ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ತಕ್ಷಣಕ್ಕೆ ಸ್ಥಳಕ್ಕೆ ಧಾವಿಸಿದ ಪರಮೇಶ್ವರ ಹಾಗೂ ಎ ಟಿ ನಾರಾಯಣ ಅವರು ಸಿಬ್ಬಂದಿಗಳೊಂದಿಗೆ ಹುಡುಕಾಟ ನಡೆಸಿದರು. ರತ್ನಮ್ಮ ದೇಹ ಅನತಿ ದೂರದಲ್ಲಿಯೇ ಪತ್ತೆಯಾಗಿದೆ. ಅರಣ್ಯಕ್ಕೆ ಸೇರಿದ ಪ್ರದೇಶದಲ್ಲಿಯೇ ದೇಹ ದೊರೆತಿದೆ. ದೇಹದ ಭಾಗವನ್ನು ಹುಲಿ ತಿಂದಿರುವುದು ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನರ ಆಕ್ರೋಶ
ವಿಷಯ ತಿಳಿದು ಬಳ್ಳೂರುಹುಂಡಿ ಗ್ರಾಮದ ನೂರಾರು ಮಂದಿ ಕಾಡಂಚಿನ ಭಾಗಕ್ಕೆ ಧಾವಿಸಿದರು. ರತ್ನಮ್ಮ ಅವರ ಕುಟುಂಬದವರೂ ಆಗಮಿಸಿದ್ದರು. ಈ ವೇಳೆ ಆಕ್ರೋಶಗೊಂಡ ಜನ ಅರಣ್ಯ ಇಲಾಖೆ ವಿರುದ್ದ ಆಕ್ರೋಶ ಹೊರ ಹಾಕಿದರು.
ಈ ಭಾಗದಲ್ಲಿ ಹುಲಿ ಕಾಟ ಮಿತಿ ಮೀರಿದೆ. ಜನ ಕೃಷಿ ಕೆಲಸಕ್ಕೆ ಹೋಗುವುದಿರಲಿ. ನಿತ್ಯ ಇಲ್ಲಿ ಅಡ್ಡಾಡುವುದೇ ಕಷ್ಟವಾಗಿದೆ. ಹುಲಿ ದಾಳಿ ಮಾಡುತ್ತಿರುವ ಬಗ್ಗೆ ಈಗಾಗಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಅರಣ್ಯ ಇಲಾಖೆಯವರು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಕೆಲ ದಿನಗಳ ಹಿಂದೆಯೇ ದಾಳಿಗಳಾಗಿ ಜನ ಸಾಯುತ್ತಿದ್ದರೂ ಅರಣ್ಯ ಇಲಾಖೆ ಏನು ಮಾಡುತ್ತಿದೆ ಎಂದು ಹಲವರು ಕಾರವಾಗಿಯೇ ಪ್ರಶ್ನಿಸಿದರು.
ವಿಷಯ ತಿಳಿದು ಬಂಡೀಪುರ ನಿರ್ದೇಶಕ ಡಾ.ಪಿ.ರಮೇಶ್ ಕುಮಾರ್, ಎಸಿಎಫ್ ಪರಮೇಶ್ ಹಾಗೂ ಸಿಬ್ಬಂದಿ ಧಾವಿಸಿದರು. ಸರ್ಕಾರದಿಂದ ಪರಿಹಾರ ನೀಡುವ ಭರವಸೆಯನ್ನು ನೀಡಿದರು. ಮೊದಲು ಹುಲಿ ಹಿಡಿಯಿರಿ, ಜನ ನೆಮ್ಮದಿಯಿಂದ ಇರಲು ಬಿಡಿ ಎಂದು ಜನ ರಮೇಶ್ ಕುಮಾರ್ ಅವರನ್ನು ಆಕ್ರೋಶದಿಂದಲೇ ಕೇಳಿದರು.
ಮೃತದ ದೇಹವನ್ನು ನಂಜನಗೂಡು ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಮರಣೋತ್ತರ ಪರೀಕ್ಷೆ ನಂತರ ಕುಟುಂಬಕ್ಕೆ ಹಸ್ತಾಂತರಿಸಲು ಅರಣ್ಯ ಇಲಾಖೆ ತಯಾರಿ ನಡೆಸಿದೆ.
ಈ ನಡುವೆ ಬಳ್ಳೂರು ಹುಂಡಿ ಭಾಗದಲ್ಲಿಉಪಟಳ ನೀಡುತ್ತಿರುವ ಹುಲಿ ಸೆರೆಗೆ ಅರಣ್ಯ ಇಲಾಖೆ ತಂಡ ರಚಿಸಿದೆ. ಈಗಾಗಲೇ ಈ ಭಾಗದಲ್ಲಿ ಬೋನುಗಳನ್ನು ಇರಿಸಿದ್ದು, ಹುಲಿ ಸೆರೆ ಹಿಡಿಯಲು ಸಿಬ್ಬಂದಿ ಕಾರ್ಯಾಚರಣೆ ನಡೆಸಲಿದ್ದಾರೆ.
ಹುಲಿ ಸಾವು
ಮತ್ತೊಂದೆಡೆ ಬಂಡೀಪುರ ರಾಷ್ಟ್ರೀಯ ಉದ್ಯಾನದ ಮದ್ದೂರು ವಲಯ ವ್ಯಾಪ್ತಿಯಲ್ಲಿ ಹುಲಿ ಮೃತಪಟ್ಟಿದೆ. ಮತ್ತೊಂದು ಹುಲಿಯೊಂದಿಗೆ ಕಾದಾಟದಿಂದ 5 ವರ್ಷದ ಹುಲಿ ಮೃತಟ್ಟಿರಬಹುದು ಎಂದು ಶಂಕಿಸಲಾಗಿದೆ.
ಹುಲಿ ಮದ್ದೂರು ಕಾಲೋನಿ ಬಳಿಯೇ ಕಾಣಿಸಿಕೊಂಡಿದ್ದರಿಂದ ಆತಂಕಗೊಂಡ ಜನ ಅಲ್ಲಿ ಭಾರೀ ಸಂಖ್ಯೆಯಲ್ಲಿಯೇ ಸೇರಿದ್ದರು. ಈ ವೇಳೆ ಸಿಬ್ಬಂದಿ ಹುಲಿ ಸೆರೆಗೆ ಪ್ರಯತ್ನಿಸಿದರೂ ಅದು ಬದುಕುಳಿಯಲಿಲ್ಲ.
ಮೈಸೂರು ಸಮೀಪವೇ ಹುಲಿ
ಮೈಸೂರಿನಿಂದ ಹತ್ತು ಕಿ.ಮಿ ದೂರದ ಬ್ಯಾತಹಳ್ಳಿ ಸಮೀಪದಲ್ಲಿ ಮೂರು ಹುಲಿ ಇರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಮೂರ್ನಾಲ್ಕು ದಿನದಿಂದ ಮೈಸೂರು ತಾಲ್ಲೂಕಿನ ಬ್ಯಾತಹಳ್ಳಿ ಕಡಕೊಳ ಬಳಿ ಹುಲಿಗಳು ಕಾಣಿಸಿಕೊಂಡಿದ್ದು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಅರಣ್ಯ ಸಿಬ್ಬಂದಿ ಹುಲಿ ಇರುವಿಕೆಯ ಪತ್ತೆಗೆ ಮುಂದಾಗಿದ್ದಾರೆ.
========
ಇದನ್ನೂ ಓದಿರಿ