Mysore Pak: ಟೇಸ್ಟ್ ಅಟ್ಲಾಸ್ ಸ್ಟ್ರೀಟ್ ಫುಡ್ ಸ್ವೀಟ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಮೈಸೂರು ಪಾಕ್; ಸಿಹಿ ತಿಂಡಿ ಹಿಂದಿನ ಕೌತುಕ ವಿಷಯ ಇಲ್ಲದೆ
Jul 22, 2023 01:32 PM IST
ಟೇಸ್ಟ್ ಅಟ್ಲಾಸ್ ಸ್ಟ್ರೀಟ್ ಫುಡ್ ಸ್ವೀಟ್ಸ್ ಪಟ್ಟಿಯಲ್ಲಿ ಮೈಸೂರು ಪಾಕ್ 14 ನೇ ಸ್ಥಾನ ಪಡೆದುಕೊಂಡಿದೆ. (HT PHOTO)
- ಮೈಸೂರು ಮಹಾರಾಜರ ಅಡುಗೆಮನೆಯಿಂದ ಗಡಿ ದಾಟಿ ವಿಶ್ವಪ್ರಸಿದ್ದಿ ಪಡೆದ ಮೈಸೂರು ಪಾಕ್ ಈಗ ಟೇಸ್ಟ್ ಅಟ್ಲಾಸ್ ಸ್ಟ್ರೀಟ್ ಫುಡ್ ಸ್ವೀಟ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಈ ಸಿಹಿ ತಿಂಡಿ ಹುಟ್ಟು ಪಡೆದಿದ್ದೇ ಒಂದು ಕೌತುಕ. ಮೈಸೂರು ಪಾಕ್‌ನ ಈ ಪ್ರಯಾಣದ ಹಾದಿ ಹೀಗಿದೆ.
ಇಡೀ ಕರ್ನಾಟಕ, ಕನ್ನಡಿಗರು ಸಂತಸ ಪಡುವ ಸುದ್ದಿ. ಆನ್ ಲೈನ್ ಟೂರ್ ಗೈಡ್ ಟೇಸ್ಟ್ ಅಟ್ಲಾಸ್ ಇತ್ತೀಚೆಗೆ ಜಗತ್ತಿನ 50 ಅತ್ಯುತ್ತಮ ಸ್ಟ್ರೀಟ್ ಫುಡ್ ಸ್ವೀಟ್ಸ್ ಪಟ್ಟಿ ಬಿಡುಗಡೆ ಮಾಡಿದ್ದು ಹೆಮ್ಮೆಯ ಮೈಸೂರು ಪಾಕ್ 14 ನೇ ಸ್ಥಾನ ಪಡೆದುಕೊಂಡಿದೆ. ಅನೇಕ ಕನ್ನಡಿಗರು ಈ ಸಂತಸದ ಸುದ್ದಿಯನ್ನು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ಅವರ ಖುಷಿಯಲ್ಲಿ ನಾವೂ ಭಾಗಿಯಾಗೋಣ ಬನ್ನಿ.
ಮೈಸೂರು ಪಾಕ್ ಗೆ 4.4 ರೇಟಿಂಗ್ ನೊಂದಿಗೆ 14ನೇ ಸ್ಥಾನ ದಕ್ಕಿಸಿಕೊಂಡಿದ್ದರೆ, 4.3 ರೇಟಿಂಗ್ ನೊಂದಿಗೆ ಕುಲ್ಫಿ 18ನೇ ಸ್ಥಾನ ಪಡೆದಿದೆ. ಫಲೂದಾ 3.2 ರೇಟಿಂಗ್ ನೊಂದಿಗೆ 32 ನೇ ಸ್ಥಾನದಲ್ಲಿದೆ. ಹೀಗೆ ಭಾರತದ ಮೂರು ಸಿಹಿತಿನಿಸುಗಳು ಜಾಗತಿಕ ಪಟ್ಟಿಯಲ್ಲಿ ಸ್ಥಾನ ಗಳಿಸಿರುವುದು ನಮ್ಮ ಸಂಭ್ರಮವನ್ನು ಹೆಚ್ಚಿಸಿವೆ. ಜೀವಮಾನದಲ್ಲಿ ಕೆಲವು ಸ್ವೀಟ್ಸ್ ತಿನ್ನದವರನ್ನು ಕಾಣಬಹುದು, ಆದರೆ ಮೈಸೂರು ಪಾಕ್ ಟೇಸ್ಟ್ ಮಾಡದವರನ್ನು ನಾನಂತೂ ಕಾಣೆ. ಕೇವಲ ಕನ್ನಡಿಗ ಅಥವಾ ಕರ್ನಾಟಕದಲ್ಲಿ ವಾಸಿಸುವ ರನ್ನು ಕುರಿತು ಹೇಳುತ್ತಿಲ್ಲ. ಇಡೀ ದೇಶವಾಸಿಗಳನ್ನು ಕುರಿತು ಹೇಳುತ್ತಿರುವೆ. ಅದು ಮೈಸೂರು ಪಾಕ್ ಮಹಿಮೆ.
ಮೈಸೂರು ಪಾಕ್ ಹುಟ್ಟು ಹೇಗಾಯಿತು?
1935ರ ಒಂದು ದಿನ, ಮೈಸೂರು ಅರಮನೆಯ ಪ್ರಧಾನ ಅಡುಗೆ ಭಟ್ಟರಾದ ಕಾಕಾಸುರ ಮಾದಪ್ಪ ಅವರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭೋಜನಕ್ಕೆ ಅಣಿಗೊಳಿಸಿರುತ್ತಾರೆ. ಆದರೆ ಅಂದು ಯಾವುದೇ ಸಿಹಿ ಇರುವುದಿಲ್ಲ. ಮಹಾರಾಜರ ಭೋಜನದಲ್ಲಿ ಸಿಹಿ ತಿಂಡಿ ಇಲ್ಲದೇ ಇರುವುದು ಅವರಿಗೆ ಸರಿ ಕಾಣುವುದಿಲ್ಲ. ಆಗ ಮಾದಪ್ಪನವರು ಒಂದು ಸಿಹಿ ತಯಾರಿಸುವ ಹಟಕ್ಕೆ ಬಿದ್ದು ಸೈ ಎನಿಸಿಕೊಳ್ಳುತ್ತಾರೆ.
ಯಾವುದೆ ಪೂರ್ವ ಸಿದ್ಧತೆ ಇಲ್ಲ. ಆದರೂ ಧೈರ್ಯ ಮಾಡಿ ಕೈಗೆ ಸಿಕ್ಕ ಕಡಲೆ ಹಿಟ್ಟು, ತುಪ್ಪ, ಸಕ್ಕರೆ ಈ ಮೂರೂ ಪದಾರ್ಥಗಳನ್ನೇ ಬಳಸಿ ಒಂದು ಸಿಹಿ ತಿನಿಸು ಸಿದ್ಧಪಡಿಸುತ್ತಾರೆ. ಅಳುಕಿನಿಂದಲೇ ಮಹಾರಾಜರಿಗೆ ಬಡಿಸುತ್ತಾರೆ. ಈ ಸಿಹಿಯನ್ನು ಚಪ್ಪರಿಸಿ ಸವಿದ ಮಹಾರಾಜರು ಯಾವುದು ಹೊಸ ರುಚಿ, ಇಷ್ಟು ಸ್ವಾದಿಷ್ಟವಾಗಿದೆ, ಇದರ ಹೆಸರೇನು? ಎಂದು ಕೇಳಿದಾಗ ಮಾದಪ್ಪನವರು ತಬ್ಬಿಬ್ಬಾಗುತ್ತಾರೆ. ಏನಾದರೂ ಒಂದು ಹೆಸರು ಹೇಳಲೇಬೇಕಲ್ಲ, ತಟ್ಟನೆ ಮೈಸೂರು ಪಾಕ್ ಎಂದು ಹೇಳುತ್ತಾರೆ. ಅವರು ಮಾಡಿದ ನಾಮಕರಣ ಶಾಶ್ವತವಾಗಿ ಉಳಿದುಕೊಳ್ಳುತ್ತದೆ.
ಇದೇ ಕತೆಯನ್ನು ಮತ್ತೊಂದು ರೀತಿಯಲ್ಲೂ ಹೇಳುತ್ತಾರೆ. ಮಹಾರಾಜರ ಕುಟುಂಬಕ್ಕೆ ಬೇಕಾದ ಸಿಹಿ ತಿಂಡಿಯನ್ನು ತಯಾರಿಸುತ್ತಿದ್ದವರು ಕಾಕಾಸುರ ಮಾದಪ್ಪ. ಒಮ್ಮೆ ನಾಲ್ವಡಿ ಕೃಷ್ಣರಾಜ ಒಡೆಯರ್, ಹೊಸದಾದ ಸಿಹಿ ತಿಂಡಿಯನ್ನು ತಯಾರಿಸುವಂತೆ ಸೂಚನೆ ನೀಡುತ್ತಾರೆ. ಆಗ ಮಾದಪ್ಪ ಹೊಸ ಸಿಹಿ ತಿಂಡಿಯ ಸಂಶೋಧನೆಗೆ ಮುಂದಾಗುತ್ತಾರೆ. ಅಳೆದೂ ತೂಗಿ ಕಡಲೆ ಹಿಟ್ಟು, ಸಕ್ಕರೆ, ತುಪ್ಪ ಸೇರಿಸಿ ತಿಂಡಿಯೊಂದನ್ನು ತಯಾರಿಸಿ ಉಣ ಬಡಿಸುತ್ತಾರೆ. ಈ ಸಿಹಿಯನ್ನು ಚಪ್ಪರಿಸಿ ಸವಿದ ಮಹಾರಾಜರು ಸಿಹಿಯ ಹೆಸರು ಏನೆಂದು ಕೇಳುತ್ತಾರೆ. ಹೆಸರು ಗೊತ್ತಿಲ್ಲ ಹೊಸದಾಗಿ ತಯಾರಿಸಿದ್ದು ಎಂದು ಹೇಳುತ್ತಾರೆ. ಆಗ ಮಹಾರಾಜರು ನಳನ ಜೊತೆ ಪಾಕವೂ ಇದ್ದಂತೆ ಈ ಪಾಕದ ಜತೆ ಮೈಸೂರು ಇರಲಿ ಎಂದು ಮೈಸೂರು ಪಾಕ ಎಂದು ಹೆಸರಿಡುತ್ತಾರೆ. ಅಂದಿನಿಂದ ಅರಮನೆಯ ಭೋಜನ ಶಾಲೆಯಿಂದ ಈ ಸಿಹಿ ಎಲ್ಲ ಗಡಿಗಳನ್ನು ದಾಟಿ ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆಯುತ್ತದೆ.
ಎರಡೂ ಕಥಾನಕಗಳಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಆದರೆ ಮೈಸೂರು ಪಾಕ್ ನ ಘಮಲು ಮಾತ್ರ ಇದ್ದೇ ಇರುತ್ತದೆ.
ಮೈಸೂರು ಪಾಕ್ ಹೆಸರಿನಲ್ಲಿ ನಡೆದಿದ್ದ ಕುಚೋದ್ಯ
ಮೈಸೂರು ಪಾಕ್ ಹೆಸರಿನಲ್ಲಿ ನಾಲ್ಕು ವರ್ಷಗಳ ಹಿಂದೆ ಒಂದು ಕುಚೋದ್ಯ ನಡೆದಿದ್ದು ನಿಮಗೆ ನೆನಪಿರಬಹುದು. 2019ರಲ್ಲಿ ಮೈಸೂರು ಪಾಕ್ ನ ಮೂಲ ತಮಿಳುನಾಡು, ಅದಕ್ಕೆ ತಮಿಳುನಾಡು ಜಿಐ ಟ್ಯಾಗ್ ಪಡೆದುಕೊಂಡಿದೆ ಎಂದು ಸುದ್ದಿ ಹರಡಿತ್ತು. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮಿಳುನಾಡು ರಾಜ್ಯಕ್ಕೆ ಜಿಐ ಟ್ಯಾಗ್ ಕೊಡಿಸಿದ್ದಾರೆ ಎಂಬ ಸುದ್ದಿಯೂ ವೈರಲ್ ಆಗಿತ್ತು.
ಹೇಳಿ ಕೇಳಿ ಉಭಯ ರಾಜ್ಯಗಳ ನಡುವಿನ ಸಂಬಂಧ ಅಷ್ಟಕಷ್ಟೆ. ಕಾವೇರಿ ನೀರನ್ನು ಧಾರಾಳವಾಗಿ ಬಿಟ್ಟುಕೊಟ್ಟು ಅನುಭವಿಸುತ್ತಿದ್ದೇವೆ. ಮೈಸೂರು ಪಾಕ್ ಬಿಟ್ಟು ಕೊಡಲು ಸಾಧ್ಯವೇ ?
ಕನ್ನಡಿಗರು, ಕೇಂದ್ರ ಸರಕಾರ ಮತ್ತು ನಿರ್ಮಲಾ ಸೀತಾರಾಮನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಅದೊಂದು ಸುಳ್ಳು ಸುದ್ದಿ ಎಂದು ಸಾಬೀತಾಯಿತು. ಅಲ್ಲಿಗೆ ವಿವಾದ ತಣ್ಣಗಾಯಿತು.
ಮೈಸೂರು ಹೆಸರೇ ಮನಮೋಹಕ. ಒಂದು ರೀತಿಯಲ್ಲಿ ಅದೃಷ್ಟದ ಹೆಸರು. ಮೈಸೂರಿನ ಹೆಸರಿನಲ್ಲಿ ಇರುವುದೆಲ್ಲವೂ ಚಿನ್ನ ಮತ್ತು ಚೆನ್ನ.
ಮೈಸೂರು ವೀಳ್ಯೆದೆಲೆ , ಮೈಸೂರು ಸಿಲ್ಕ್ , ಮೈಸೂರು ಮಲ್ಲಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿವೆ. ಈ ಎಲ್ಲಾ ಉತ್ಪನ್ನಗಳು ಮೈಸೂರಿನಿಂದ ರಫ್ತಾಗುತ್ತಿವೆ. ಮೈಸೂರು ಪಾಕ್ ಅನ್ನು ಮೂರ್ನಾಲ್ಕು ರೀತಿಯಲ್ಲಿ ತಯಾರಿಸುತ್ತಾರೆ. ಸ್ಪರ್ಧೆ ಹೆಚ್ಚುತ್ತಿದ್ದಂತೆ ಮೈಸೂರು ಪಾಕ್ ಅನ್ನು ಯಾವುದೇ ಒಂದು ಬೇಕರಿಯಲ್ಲಿ ಮಾತ್ರ ಚೆನ್ನಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮೈಸೂರಿನ ಮಹಾಲಕ್ಷ್ಮಿ ಸ್ವೀಟ್ಸ್, ಗುರು ಸ್ವೀಟ್ಸ್ ನಿಂದ ಹಿಡಿದು ಬೆಂಗಳೂರು, ರಾಮನಗರ, ಕೋಲಾರ, ತುಮಕೂರು, ದಾವಣಗೆರೆ, ಕನಕಪುರ ಸೇರಿದಂತೆ ಅನೇಕ ನಗರ ಮತ್ತು ಪಟ್ಟಣಗಳಲ್ಲಿ ಒಬ್ಬರಿಗಿಂತ ಒಬ್ಬರು ಚೆನ್ನಾಗಿ ತಯಾರಿಸುತ್ತಾರೆ. ಕೆಎಂಎಫ್ ನ ನಂದಿನಿ ಮೈಸೂರು ಪಾಕ್ ವಿಶ್ವ ಖ್ಯಾತಿ ಪಡೆದಿದೆ.
ಟೇಸ್ಟ್ ಇದಮಿತ್ಥಂ ಎನ್ನುವ ಹಾಗಿರಬಾರದು. ಏಕತಾನತೆ ಕಾಡಬಾರದು. ವೆರೈಟಿ ಇದ್ದರೆ ತುಲನೆ ಮಾಡಬಹುದು ಅಲ್ಲವೇ ?